ಇ-ಟೆಂಡರ್ ವಿರೋಧಿಸಿ ಕೊಬ್ಬರಿ ಖರೀದಿ ಸ್ಥಗಿತ
ತಿಪಟೂರು: ರಾಜ್ಯ ಸರ್ಕಾರ ಇ-ಟೆಂಡರ್ ಮೂಲಕ ಕೃಷಿ ಉತ್ಪನ್ನ ಮಾರಾಟ ಮಾಡುವ ವೇದಿಕೆಯನ್ನು ಪ್ರಾರಂಭಿಸಿದ್ದು, ತಿಪಟೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಮಾರಾಟ ಮಾಡಲು ಇ-ಟೆಂಡರ್ ಆನ್ಲೈನ್ ವೇದಿಕೆ ಪ್ರಾರಂಭಿಸಿರುವುದನ್ನು ಇಲ್ಲಿನ ವರ್ತಕರು ವಿರೋಧಿಸಿ ಇಂದಿನಿಂದಲೇ ಕೊಬ್ಬರಿ ಖರೀದಿ ಸ್ಥಗಿತಗೊಳಿಸುವುದಾಗಿ ಕೊಬ್ಬರಿ ವರ್ತಕ ಸಂಘದ ಅಧ್ಯಕ್ಷ ಬಿ.ಆರ್. ವಿಶ್ವನಾಥ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸಂಜೆ ವರ್ತಕ ಸಂಘ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ವಿಶ್ವನಾಥ್ ಮಾತನಾಡಿ ನಮ್ಮ ಮಾರುಕಟ್ಟೆಯಲ್ಲಿ ಕೊಬ್ಬರಿ ವ್ಯವಹಾರ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದು, ರೈತ ಮತ್ತು ವರ್ತಕರ ಸಂಬಂಧ ಚೆನ್ನಾಗಿದೆ. ಆದರೆ ಸರ್ಕಾರ ಇ-ಟೆಂಡರ್ ಮೂಲಕ ಕೊಬ್ಬರಿ ವ್ಯಾಪಾರವನ್ನು ಆನ್ಲೈನ್ನಲ್ಲಿ ಖರೀದಿ ಮಾಡುವ ಪದ್ಧತಿಯನ್ನು ದಿಢೀರ್ ಜಾರಿಗೆ ತಂದಿರುವುದು ಸರಿಯಲ್ಲ.ಅಲ್ಲದೆ ಇದನ್ನು ಪ್ರಾಯೋಗಿ ಕವಾಗಿ ತಿಪಟೂರು ಮತ್ತು ಅರಸೀಕೆರೆಯಲ್ಲಿ ತಂದಿದ್ದು, ಇದರಿಂದ ಇತರೆ ಮಾರುಕಟ್ಟೆಗಳಲ್ಲಿ ಕೊಬ್ಬರಿ ವ್ಯಾಪಾರ ಮಾಮೂಲಿಯಂತೆ ನಡೆಯುವುದರಿಂದ ತಿಪಟೂರಿಗೆ ಹೆಚ್ಚಿನ ಕೊಬ್ಬರಿ ಆವಕವಿರುವುದಿಲ್ಲ. ಅಲ್ಲದೆ ಎನ್ಸಿಡಿ ಎಕ್ಸ್ ನೇರವಾಗಿ ಕೊಬ್ಬರಿ ಖರೀದಿಗೆ ಟೆಂಡರ್ ಸಹ ಹಾಕುವುದಿಲ್ಲ.
ಎನ್ಸಿಡಿ ಎಕ್ಸ್ ಸಹಯೋಗದಲ್ಲಿ ಈಗಾಗಲೆ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ಇತರೆ ಕಡೆಗಳಲ್ಲಿ ಈ ಪದ್ಧತಿ ಜಾರಿಗೆ ತಂದಿದ್ದು ಅಲ್ಲೆಲ್ಲಾ ಎನ್ಸಿಡಿ ಎಕ್ಸ್ ಮೋಸ ಮಾಡಿರುವ ಸಾಕಷ್ಟು ಪ್ರಕರಣಗಳು ದಾಖಲಾಗಿವೆ.
ಟೆಂಡರ್ ಹಾಕುವಾಗ ಈ ಸಂಸ್ಥೆಗೆ ಶೇ5ರಷ್ಟು ಠೇವಣಿ ಇಡಬೇಕು.
ಅಲ್ಲದೆ ಖರೀದಿ ನಂತರ ಸಾವಿರಕ್ಕೆ 20 ರು. ರಂತೆ ಕಮೀಷನ್ ನೀಡಬೇಕು. ಟೆಂಡರ್ನಲ್ಲಿ ನ್ಯೂನತೆಯಾದಲ್ಲಿ ಠೇವಣಿ ಹಣ ಮುಟ್ಟು ಗೋಲಾಗುತ್ತದೆ. ರೈತ ಕೊಬ್ಬರಿಯನ್ನು ಗ್ರೇಡ್ ಮಾಡಿಯೇ ಟೆಂಡರ್ಗೆ ಇಡಬೇಕು. ಟೆಂಡರ್ ಮುಗಿದ ತಕ್ಷಣವೇ ರೈತನ ಹೆಸರಿನ ಬ್ಯಾಂಕ್ ಖಾತೆಗೆ ಹಣ ತುಂಬಬೇಕು.
ಹೀಗೆ ಇ-ಟೆಂಡರ್ ಪದ್ಧತಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಆದರೆ ನಾವು ಇ-ಟೆಂಡರ್ ಪದ್ಧತಿಗೆ ಬದಲಾದರೂ, ಆನ್ಲೈನ್ ಖರೀದಿ ವ್ಯವಸ್ಥೆಗೆ ಬದಲಾಗಲು ಸಾಧ್ಯವೇ ಇಲ್ಲ. ಈ ಪದ್ದತಿಯಲ್ಲಿ ಕೊಬ್ಬರಿ ಖರೀದಿ ಮಾಡಲು ಸಾಕಷ್ಟು ತೊಂದರೆಗಳಿವೆ. ಕೂಡಲೇ ಸರ್ಕಾರ ಹೊಸ ವ್ಯವಸ್ಥೆಯಲ್ಲಿ ವರ್ತಕರಿಗೆ ಏನೇನು ತೊಂದರೆಗಳಿವೆ ಎಂಬುದನ್ನು ತಿಳಿದುಕೊಂಡು ಸರಿಪಡಿಸಬೇಕು. ಅಲ್ಲಿವರೆಗೂ ಕೊಬ್ಬರಿ ವ್ಯಾಪಾರ ಸ್ಥಗಿತಗೊಳಿಸುತ್ತೇವೆಂದು ಸ್ಪಷ್ಟಪಡಿಸಿದರು.
ಇ-ಟೆಂಡರ್ ಪದ್ಧತಿಯನ್ನು ರೈತರು ವಿರೋಧಿಸದೆ ಇದ್ದರೂ, ವರ್ತಕರು ವಿರೋಧಿಸುವುದೇಕೆ ಸರ್ಕಾರ ಕೃಷಿ ಉತ್ಪನ್ನಗಳನ್ನು ಮಧ್ಯವರ್ತಿಗಳ ಕಾಟವಿಲ್ಲದಂತೆ ಮತ್ತು ಸ್ಪರ್ಧಾತ್ಮಕ ಬೆಲೆ ಸಿಗಲೆಂದು ಜಾರಿಗೆ ತಂದಿದ್ದು ಇದನ್ನು ವರ್ತಕರು ಸಣ್ಣಪುಟ್ಟ ಕಾರಣಗಳಿಗಾಗಿ ಸಾರಾಸಗಟಾಗಿ ವಿರೋಧಿಸುವುದೇಕೆ. ನ್ಯೂನತೆಗಳಿದ್ದಲ್ಲಿ ಸರ್ಕಾರದ ಮಟ್ಟದಲ್ಲಿ ಮಾತನಾಡುವುದು ಬಿಟ್ಟು, ಖರೀದಿಯನ್ನು ಸ್ಥಗಿತಗೊಳಿಸಿದಲ್ಲಿ ರೈತರಿಗೆ ತೊಂದರೆಯಾಗುವುದಿಲ್ಲವೇ ಎಂದು ಪತ್ರಿಕೆ ಕೇಳಿದ ಪ್ರಶ್ನೆಗೆ ವರ್ತಕ ಸಂಘ ಸರಿಯಾದ ಸಮರ್ಥನೆ ನೀಡಲು ಸಾಧ್ಯವಾಗಲಿಲ್ಲ.
ಜಿ.ಕೆ. ನಟರಾಜ್, ಕೃಷ್ಣಪ್ರಸಾದ್, ಗುರುಬಸಪ್ಪ, ರಾಕೇಶ್, ಜಯಣ್ಣ, ಉಮಾಶಂಕರ್, ಮಲ್ಲಿಕಾರ್ಜುನ, ಜೇಯೇಶ್,ಕಾಂತರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

