ಜೆ.ಸಿ.ಪುರ ಗ್ರಾಪಂನಲ್ಲಿ ಖಾತ್ರಿ ಅವ್ಯವಹಾರ
-ಅಣೇಕಟ್ಟೆ ಸಿದ್ದರಾಮಣ್ಣ
ಚಿಕ್ಕನಾಯಕನಹಳ್ಳಿ: ಬೇಲಿಯೇ ಎದ್ದು ಹೊಲ ಮೇಯ್ದರೆ, ಹೊಲವನ್ನು ಕಾಯುವರಾರು ಎಂಬಂತೆ, ಸರ್ಕಾರದ ಯೋಜನೆಗಳನ್ನು ಕಾನೂನು ರೀತ್ಯ ಅನುಷ್ಠಾನಗೊಳಿಸಬೇಕಾದ ಅಧಿಕಾರಿಗಳೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿಯೋಜನೆಯಲ್ಲಿ ಅವ್ಯವಹಾರ ಎಸಗಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರವೆಸಗಿರುವುದು ತಾಲೂಕಿನ ಪ್ರಜ್ಞಾವಂತ ನಾಗರೀಕರಿರುವ ಜಯಚಾಮರಾಜಪುರ ಗ್ರಾಮದ ಗ್ರಾಮಪಂಚಾಯ್ತಿ ಆಡಳಿತದಿಂದಲೇ.
ಪ್ರಾರಂಭದಲ್ಲೇ ಯೋಜನೆ ಜಾರಿಗೆ ಕೇಂದ್ರಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಕೇಳಿದ ಜನಪ್ರತಿನಿಧಿಗಳು,ಇದು ಆಗುಹೋಗುವ ಕೆಲಸವಲ್ಲ. ಇದನ್ನು ಅನುಷ್ಠಾನಗೊಳಿಸಲು ಕಾನೂನಿನ ಅಡಚಣೆಯಾಗುತ್ತದೆ ಎಂದು ಮೂಗು ಮುರಿದರು. ನಂತರದ ದಿನಗಳಲ್ಲಿ ಯೋಜನೆಲ್ಲಿರುವ ನಗದು ಸುಲಭವಾಗಿ ಕೈಗೆಟಕುವ ಬಗ್ಗೆ ಜನಪ್ರತಿನಿಧಿಗಳಿಗೆ ಅರಿವಾದದ್ದೇ ತಡ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ನಿರ್ವಹಿಸಲು ನಾಮುಂದು ತಾಮುಂದು ಎಂದು ಮುಗಿಬಿದ್ದರು. ಅದರ ಪರಿಣಾಮವೇ ಇಂದು ತಾಲೂಕಿನಲ್ಲಿ ಖಾತ್ರಿಯೋಜನೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ ತುಂಬಿತುಳುಕುತ್ತಿದೆ. ಪರಿಸ್ಥಿತಿ ಹೀಗಿರುವಲ್ಲಿ ತಾಲೂಕಿನಲ್ಲಿ ಅತಿಹೆಚ್ಚು ಉದ್ಯೋಗ ಖಾತ್ರಿ ಕಾಮಗಾರಿ ಕೈಗೊಂಡಿರುವ ಗ್ರಾ.ಪಂ.ಎಂಬ ಖ್ಯಾ(ಕು)ತಿಗೆ ಒಳಗಾಗಿರುವ ಜೆ.ಸಿ.ಪುರ ಗ್ರಾಮಪಂಚಾಯ್ತಿಯಲ್ಲಿ ಸತ್ತವರು ಸಹ ಎದ್ದು ಬಂದು ಉದ್ಯೋಗ ಖಾತ್ರಿಯಲ್ಲಿ ಕೂಲಿ ಹಣ ಪಡೆದಿರುವ ಪವಾಡ ನಡೆದಿದೆ.
ಪವಾಡ: ಜೆ.ಸಿ.ಪುರ ಗ್ರಾ.ಪಂ.ವ್ಯಾಪ್ತಿಯ ತೂಬರೇಹಳ್ಳಿಯ ದಾಸಬೋವಿ ಎಂಬುವರ ಮಗ ನರಸಿಂಹಯ್ಯ ದಿ.13-1-2013ರಂದು ಮೃತಪಟ್ಟಿರುತ್ತಾರೆ. ಆದರೆ ಗ್ರಾ.ಪಂ.ನವರು ನರಸಿಂಹಯ್ಯನ ತಂದೆ ಹೆಸರನ್ನು ಗೋವಿಂದಪ್ಪ ಎಂದು ಬದಲಿಸಿ ಆತನ ಹೆಸರಿಗೆ ಬ್ಯಾಡರಹಳ್ಳಿ ಸರ್ವೆ ನಂಬರ್ 30-2ರಲ್ಲಿ ತೆಂಗಿನ ಅಣೆ ನಿರ್ಮಾಣ ಮಾಡಿ, ಮಾಸ್ಟರ್ ರೋಲ್ ಸಂ.2187ರಲ್ಲಿ 24 ದಿವಸ ಕೆಲಸ ಮಾಡಿರುವ ರೀತಿ ಎನ್.ಎಂ.ಆರ್. ಸೃಷ್ಟಿಸಿ ಸತ್ತ ವ್ಯಕ್ತಿಯನ್ನು ಕರೆತಂದು ಕೂಲಿ ಹಣ ನೀಡಿರುತ್ತಾರೆ.
ಅನ್ವಯಿಸದ ನಿಯಮ: ಯಾವುದೇ ಗ್ರಾ.ಪಂ. ಖಾತ್ರಿಯೋಜನೆ ಕೈಗೆತ್ತಿಕೊಳ್ಳುವಾಗ ತನ್ನ ವ್ಯಾಪ್ತಿಯಲ್ಲಿ ಬರುವ ಜಾಗದಲ್ಲಿ ಕಾಮಗಾರಿ ನಡೆಸಬೇಕೆಂಬುದು ಈ ಯೋಜನೆಯ ನಿಯಮ. ಆದರೆ ಇವರಿಗೆ ಯೋಜನೆ ನಿಯಮಗಳು ಅನ್ವಯಿಸುವುದಿಲ್ಲ. ಇದಕ್ಕೆ ಉದಾಹರಣೆ ದುಗಡೀಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಸ.ನಂ.25ರಲ್ಲಿ 8 ಲಕ್ಷ ಮತ್ತು ಸ.ನಂ.13ರಲ್ಲಿ 9.25 ಲಕ್ಷರು.ಗಳ ವೆಚ್ಚದ ತೆಂಗಿನ ಅಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ. ಸದರಿ ವ್ಯಾಪ್ತಿ ದುಗಡೀಹಳ್ಳಿ ಗ್ರಾ.ಪಂ.ಗೆ ಸೇರುತ್ತದೆಂದು ಅಲ್ಲಿನ ಕಾರ್ಯದರ್ಶಿ ದೃಢಪಡಿಸಿರುತ್ತಾರೆ. ಖಾತ್ರಿಯೋಜನೆಯಲ್ಲಿ ಸ್ಪಷ್ಟಪಡಿಸಿರುವಂತೆ ಒಂದು ಕುಟುಂಬಕ್ಕೆ ಸದರಿ ವರ್ಷದಲ್ಲಿ 100 ಮಾನವ ದಿನಗಳು ಮಾತ್ರ ಕೆಲಸ ನೀಡಬೇಕೆಂಬ ನಿಯಮವಿದೆ. ಆದರೆ ಅದನ್ನು ಮೀರಿ 1312 ದಿನಗಳು ಕೂಲಿಯನ್ನು ನೀಡಿರುತ್ತಾರೆ. ಗ್ರಾಮದಲ್ಲಿ ವಾಸವಿದ್ದು ,ನಿರುದ್ಯೋಗಿಯಾಗಿರುವವರಿಗೆ ಉದ್ಯೋಗ ನೀಡುವಂತೆ ಈ ಯೋಜನೆಯಲ್ಲಿ ತಿಳಿಸಿದ್ದರು. ದಾವಣಗೆರೆ ಮೆಡಿಕಲ್ ಕಾಲೇಜಿನ ಬೀರಲಿಂಗೇಶ್ವರ ಎಂಬ ವ್ಯಕ್ತಿಯ ಹೆಸರಿಗೆ ಎನ್ಎಂಆರ್ ತೆಗೆದು ಕೂಲಿ ಹಣ ನೀಡಿರುತ್ತಾರೆ.
ದುರುಪಯೋಗ: ಯಾವುದೇ ಉದ್ಯೋಗಖಾತ್ರಿ ಯೋಜನೆ ಕಾರ್ಡಿಗೆ ಒಂದೇ ಕುಟುಂಬದ ಹೆಸರುಗಳನ್ನು ಮಾತ್ರ ಸೇರಿಸ ಬೇಕು. ಆದರೆ ಇಲ್ಲಿ ಬೇರೆ ಕುಟುಂಬಗಳ ಹೆಸರುಗಳನ್ನು ತಮಗೆ ಬೇಕಾದ ಒಂದೇ ಕುಟುಂಬಕ್ಕೆ ಸೇರಿಸಿ ಖಾತ್ರಿ ಯೋಜನೆ ಹಣದುರುಪಯೋಗವಾಗಿದೆ. ಇಲ್ಲಿ ಸದರಿ ಕುಟುಂಬದ ಜಾಬ್ ಕಾರ್ಡ್ಗೂ, ಗ್ರಾಮಪಂಚಾಯ್ತಿಯಲ್ಲಿರುವ ಪುಸ್ತಕದ ದಾಖಲೆಗೂ ವ್ಯತ್ಯಾಸ ಕಂಡುಬಂದಿರುತ್ತದೆ. ನಂತರ ಅವುಗಳನ್ನು ಇತರೆ ಎಂಬ ಕಾರಣ ನೀಡಿ ರದ್ದುಗೊಳಿಸಿರುತ್ತಾರೆ.
ಜಿಲ್ಲಾ ಪಂಚಾಯ್ತಿ ಕನಿಷ್ಠ ತನಿಖೆ ಮಾಡುವ ಆಸಕ್ತಿ ತೋರದಿರುವುದನ್ನು ನೋಡಿದರೆ ಈ ಅವ್ಯವಹಾರದಲ್ಲಿ ಜಿಲ್ಲಾಪಂಚಾಯ್ತಿ ಪಾಲು ಇರುವ ಸಂಶಯ ಬರುತ್ತಿದೆ. ಇಲ್ಲದಿದ್ದರೆ ಮಾಧ್ಯಮಗಳಲ್ಲಿ ವರದಿಯಾದ ಮೇಲೆ ಕನಿಷ್ಠ ತನ್ನ ಜವಾಬ್ದಾರಿಯನ್ನರಿತು ತನಿಖೆ ಮಾಡಬೇಕಿತ್ತು. ಆದರೆ ಇದನ್ನು ನೋಡಿದರೆ ಗ್ರಾ.ಪಂ. ನೌಕರರು ಹೇಳುವಂತೆ ನಾವು ಮೇಲಿನವರಿಗೂ ಪಾಲು ನೀಡಬೇಕೆಂಬ ಅವರ ಹೇಳಿಕೆ ಸುಳ್ಳಲ್ಲವೆಂದು ನಂಬಬೇಕಾಗುತ್ತದೆ. ಇನ್ನಾದರೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸದರೆ ಗಾಂಧಿ ಹೆಸರಿನಲ್ಲಿರುವ ಯೋಜನೆಗೆ ಗೌರವ ಬರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

