ತುಮಕೂರು

ಮೋದಿ ಹೆಸರಲ್ಲಿ ವೋಟು ಕೇಳುತ್ತಿರುವ ಅನಂತ್

Published On :

ತುಮಕೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ. ಪರಿಣಾಮ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರಲ್ಲಿ ಓಟು ಕೇಳುತ್ತಿದ್ದಾರೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಆಧಾರ್ ಯೋಜನೆ ಮುಖ್ಯಸ್ಥ ನಂದನ್ ನಿಲೇಕಣಿ ಲೇವಡಿ ಮಾಡಿದರು.
ಗುರುವಾರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೂಂದಿಗೆ ಮಾತನಾಡಿ, ಆಧಾರ್ ಕುರಿತಂತೆ ಅನಂತ್ ಕುಮಾರ್ ಮಾಡುತ್ತಿರುವ ಟೀಕೆಗಳಲ್ಲಿ ಯಾವುದೇ ಹುರುಳಿಲ್ಲ ಎಂದರು.
ಸಮರ್ಪಕ ಉತ್ತರವಿಲ್ಲ: ಈಗಾಗಲೇ ಸಂವಿಧಾನ ವಿರೋಧಿಯೆಂದು ತೀರ್ಮಾನವಾಗಿರುವ, ಸುಪ್ರೀಂಕೋರ್ಟ್ನಿಂದಲೂ ಛೀಮಾರಿಗೊಳಗಾಗಿರುವ ಆಧಾರ್ನ್ನು ವಿದೇಶಿ ಪ್ರಜೆಗಳಿಗೂ ನೀಡಿರುವುದಕ್ಕೆ ದಾಖಲೆಗಳಿವೆ. ದೇಶದ ಭದ್ರತೆಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಡಾಂತರಕಾರಿಯಾಗಿರುವ ಆಧಾರ್ ಭಾರತಕ್ಕೆ ಅಗತ್ಯವೇ ಸುಪ್ರೀಂಕೋರ್ಟ್ನಿಂದಲೂ ತಿರಸ್ಕರಿಸಲ್ಪಟ್ಟಿರುವ, ಆಧಾರ್ ಕಡ್ಡಾಯಗೊಳಿಸುವ ಹಠವೇಕೆ ಎಂಬ ಪ್ರಶ್ನೆಗಳಿಗೆ ನಿಲೇಕಣಿ ಸಮರ್ಪಕ ಉತ್ತರ ನೀಡಲಿಲ್ಲ.
ಖಾಸಗಿ ರಂಗದಲ್ಲಿ ಮೀಸಲಾತಿ: ಕಾಂಗ್ರೆಸ್ ಪಕ್ಷ ಖಾಸಗಿ ರಂಗದಲ್ಲಿ ಮೀಸಲಾತಿ ನೀಡುವ ಕುರಿತಂತೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ. ಈ ಕುರಿತು ತಮ್ಮ ನಿಲುವೇನು ಎಂಬ ಪ್ರಶ್ನೆಗೆ, ಖಾಸಗಿ ರಂಗದಲ್ಲಿ ಮೀಸಲಾತಿ ನೀಡಲು ಖಾಸಗಿ ಸಂಸ್ಥೆಗಳು ತಾವಾಗೇ ಮುಂದೆ ಬರಬೇಕು. ಸಮಾನ ಅವಕಾಶಗಳು ಎಲ್ಲರಿಗೂ ಸಿಗಬೇಕು ಎಂದರು.
ಯಾವ ಆಧಾರದಲ್ಲಿ ಮತ: ತಾವು ಜನತೆಯ ಸೇವೆ ಮಾಡಲು, ಬೆಂಗಳೂರನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ರಾಜಕಾರಣಕ್ಕೆ ಬಂದಿದ್ದೇನೆ. ಈ ಹಿಂದೆ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗಾಗಿ ಕೆಲಸ ಮಾಡಿರುವ ಅನುಭವವಿದೆಯೆಂದು ತಿಳಿಸಿದರು. ಭ್ರಷ್ಟಾಚಾರದ ಗಂಭೀರ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ಸೇರಿದ್ದೀರಲ್ಲ ಎಂಬ ಪ್ರಶ್ನೆಗೆ, ಇಂದು ಎಲ್ಲ ರಾಜಕೀಯ ಪಕ್ಷಗಳು ಭ್ರಷ್ಟಗೊಂಡಿವೆ. ಆದರೆ ತಮ್ಮನ್ನು ಗುರುತಿಸಿ, ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿದೆ ಎಂದರು. ಕಾಂಗ್ರೆಸ್ ಮುಖಂಡ ಸಚ್ಚಿದಾನಂದಮೂರ್ತಿ, ದಯಾನಂದ, ಮಹದೇವಯ್ಯ, ಎಸ್ಐಟಿ ನಿರ್ದೇಶಕ ಡಾ.ಎಂ.ಎನ್. ಚನ್ನಬಸಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.