ತುಮಕೂರು

ಬೇಸಿಗೆಯ ಬಿಸಿಯೂಟ ಸಫಲ

Published On :

ಹುಳಿಯಾರು: ಸರ್ಕಾರದ ಆದೇಶದಂತೆ ಬೇಸಿಗೆ ರಜೆಯಲ್ಲೂ ಶಾಲಾ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟ ವಿಸ್ತರಿಸಿರುವುದರಿಂದ  ಜಿ.ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗಿ ಯೋಜನೆ ಸಫಲವಾಗಿದೆ. ಇಲ್ಲಿ ನಿತ್ಯ ನೂರಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹಾಜರಾಗಿ ಬಿಸಿಯೂಟ ಸವಿಯುತ್ತಿದ್ದಾರೆ.
ಬರದ ಹಿನ್ನೆಲೆಯಲ್ಲಿ ಬೇಸಿಗೆ ರಜೆಯಲ್ಲೂ  ಬಿಸಿಯೂಟ ನೀಡುವ ಯೋಜನೆ ಜಾರಿಯಲಿದ್ದರೂ ಎಷ್ಟೋ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಶೇ.40 ನ್ನು ದಾಟಿಲ್ಲ. ಆದರೆ ಈ ಶಾಲೆಯಲ್ಲಿ ಮಾತ್ರ  ಬಿಸಿಯೂಟದ ಮುಂದುವರಿಕೆಯಿಂದ ಹಾಜರಾತಿಯಲ್ಲಿ ಏರಿಕೆಯಾಗುತ್ತಲೇ ಇದೆ.  ಇದರಿಂದಾಗಿ ಗ್ರಾಮೀಣ ಭಾಗದ ಮಕ್ಕಳಿಗೆ  ಸಾಕಷ್ಟು ಅನುಕೂಲವಾಗಿ ಪರಿಣಮಿಸಿದೆ. ಶಿಕ್ಷಕರು,ಶಾಲಾಭಿವೃದ್ದಿ ಸಮಿತಿಯವರು ಮತ್ತು ಅಡುಗೆ ಸಿಬ್ಬಂದಿಯವರು ಈ ಬಗ್ಗೆ ಹೆಚ್ಚಿನ ಮುತುವರ್ಜಿವಹಿಸಿದ್ದಲ್ಲದೆ  ಗ್ರಾಮದ ಮನೆಮನೆಗೆ ತೆರಳಿ ಪೋಷಕರಲ್ಲಿ ಮಕ್ಕಳನ್ನು ಬಿಸಿಯೂಟಕ್ಕೆ ಕಳುಹಿಸುವಂತೆ ಕೋರಿಕೊಂಡಿದ್ದೇ ಈ ಶಾಲೆಯಲ್ಲಿ ಈ ಯೋಜನೆ ಹೆಚ್ಚು ಸಫಲವಾಗಲು ಕಾರಣ ಎನ್ನಲಾಗಿದೆ. ರಜಾ ದಿನ ಸೇರಿದಂತೆ ಭಾನುವಾರ ಸಹ ಬಿಸಿಯೂಟ ನೀಡಲಾಗುತ್ತಿದ್ದು, ಎಷ್ಟೇ ಮಕ್ಕಳು ಬಂದರೂ  ಬಂದಷ್ಟು ಮಕ್ಕಳಿಗೆ ಊಟ ನೀಡಲಾಗುತ್ತಿದೆ.
ಶಾಲೆಯಲ್ಲಿ  ಒಟ್ಟು 180  ಮಕ್ಕಳಿದ್ದಾರೆ. ಎಂದಿನ ಶಾಲಾ ಸಮಯಕ್ಕೆ  ಹಾಜರಾಗುವ ಮಕ್ಕಳು ಶಾಲೆಯಲ್ಲಿ  ಆಟೋಟಗಳಲ್ಲಿ ತೊಡಗಿಕೊಂಡು ಮಧ್ಯಾಹ್ನ  ಬಿಸಿಯೂಟ ಮಾಡಿಕೊಂಡು ಮನೆಗೆ ತೆರಳುತ್ತಾರೆ.
500ಕ್ಕೂ ಹೆಚ್ಚು ಕುಟುಂಬ: ಈ ಗ್ರಾಮದಲ್ಲಿ 500 ಕ್ಕೂ ಹೆಚ್ಚು ಕುಟುಂಬಗಳಿದ್ದು ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಇವರು ಬೆಳಿಗ್ಗೆಯೇ ಕೂಲಿ ಕೆಲಸಕ್ಕೆ ತೆರಳಿ ಸಂಜೆ ಹಿಂದಿರುಗುವುದರಿಂದ ಮಕ್ಕಳ ಪೋಷಣೆ ಕಷ್ಟದಾಯಕವಾಗಿದ್ದ ಇವರಿಗೆ ಈ ಯೋಜನೆಯಿಂದ ಅನುಕೂಲವಾಗಿದೆ. ಮಕ್ಕಳನ್ನು  ನೋಡಿಕೊಳ್ಳಲು ಒಬ್ಬರು ಸದಾ ಇರಬೇಕಾಗಿದ್ದ ಪರಿಸ್ಥಿಯಲ್ಲಿ  ಬಿಸಿಯೂಟ ಯೋಜನೆ ವರವಾಗಿ ಪರಿಣಮಿಸಿದೆ ಎಂದು ಕೆಲ ಪೋಷಕರು ಸಂತಸ ವ್ಯಕ್ತಪಡಿಸುತ್ತಾರೆ.  
ಶಾಲೆಗೆ ರಜಾ ನೀಡಿ  ಬಿಸಿಯೂಟ ಕಾರ್ಯಕ್ರಮ ಆರಂಭಿಸಿದಾಗ  ಮಕ್ಕಳ ಹಾಜರಾತಿ ಕಡಿಮೆಯಿತ್ತು. ರಜಕ್ಕೆ   ಬೇರೆ ಊರುಗಳಿಗೆ ತೆರಳಿದ್ದರಿಂದ ಅಲ್ಲದೆ ಜಾತ್ರೆ ಮತ್ತು ಉತ್ಸವದ ಸಮಯವಾದ್ದರಿಂದ ಹಾಜರಾತಿ ಕಡಿಮೆಯಿತ್ತು, ಆದರೆ ತಾವೇ ಖುದ್ದಾಗಿ ತೆರಳಿ ಪೋಷಕರ ಮನವೊಲಿಸಿದ್ದರಿಂದ ಈಗ ಮಕ್ಕಳ ಹಾಜರಾತಿ ಹೆಚ್ಚಿದೆ  ಎನ್ನುತ್ತಾರೆ ಮುಖ್ಯ ಶಿಕ್ಷಕ ಶಿವಯ್ಯ. ರಜಾ ದಿನಗಳಲ್ಲಿ ಮಕ್ಕಳು ಸಂಬಂಧಿಗಳ ಮನೆಗೆ, ಮದುವೆ ಸಮಾರಂಭಗಳಿಗೆ ತೆರಳಿರುವುದರಿಂದ ಕೆಲ ಮಕ್ಕಳು ಗೈರಾಗಿದ್ದಾರೆ. ಒಟ್ಟಾರೆ ಬಿಸಿಯೂಟ ಯೋಜನೆ ಬೇಸಿಗೆಯಲ್ಲಿಯೂ ವಿಸ್ತರಿಸಿರುವುದರಿಂದ  ನೀರೀಕ್ಷೆಗೂ ಮೀರಿ ಮಕ್ಕಳ ಹಾಜರಾತಿಯಲ್ಲಿ ಏರಿಕೆಯಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಕಳುಹಿಸಿದರೆ ಈ ಯೋಜನೆ ಮತ್ತಷ್ಟು ಯಶಸ್ವಿಯಾಗುತ್ತದೆ.


-ಡಿ.ಆರ್. ನರೇಂದ್ರಬಾಬು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.