ತುಮಕೂರು

ಆರ್ಯವೈಶ್ಯ ಜನಾಂಗ ಸಂಘಟಿತರಾಗಲಿ

Published On :

ಚೇಳೂರು: ಆರ್ಯವೈಶ್ಯ ಜನಾಂಗದವರು ಸಂಘಟಿತರಾದಾಗ ಮಾತ್ರ ಸರ್ಕಾರದ ಯೋಜನೆಗಳು ದೊರೆಯುತ್ತವೆ ಎಂದು ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಸಿವಿ ಪದ್ಮನಾಭಶ್ರೇಷ್ಟಿ ತಿಳಿಸಿದರು. ಚೇಳೂರಿನ ಆರ್ಯವೈಶ್ಯ ಮಂಡಳಿಯ ವತಿಯಿಂದ ಆಯೋಜಿಸಿದ್ದ ವಾಸವಿ ಜಯಂತಿಗೆ ಚಾಲನೆ ನೀಡಿ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ಬೆಳೆಸಬೇಕು. ಧಾರ್ಮಿಕ ಆಚರಣೆಗಳನ್ನು ಮಾಡುವುದರ ಜೊತೆಗೆ ಎಲ್ಲಾ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು, ಜನಾಂಗದ ಬಡವರನ್ನು ಗುರುತಿಸಿ ಅವರಿಗೆ ಅನುಕೂಲ ಮಾಡುವ ಪ್ರಯತ್ನ ಮಾಡಬೇಕಾಗಿದೆ ಎಂದರು. ಸಂಘದ ಉಪಾಧ್ಯಕ್ಷ ಎಚ್.ವಿ. ಶಾಂತರಾಜು ಸಿ.ಆರ್. ಗೋಪಾಲ್, ಸಿ.ವಿ. ವೆಂಕಟೇಶ್, ಸಿ.ಎಂ. ಸುಧಾಕರ್ ಶೆಟ್ಟಿ, ಸಿ.ಕೆ ಅಶೋಕ್ ಕುಮಾರ್, ಸಿ.ವಿ. ಅಶೋಕ್, ಸಿ.ಎಲ್. ಸತೀಶ್ಬಾಬು ಸಿ.ವಿ. ಲಕ್ಷ್ಮೀನಾರಾಯಣಶೆಟ್ಟಿ, ಪಿ. ರವಿಚಂದ್ರ ಹಾಗೂ ಮಹಿಳಾಮಂಡಳಿಯವರು ಇದ್ದರು.

ಶ್ರೀಶಂಕರ ಜಯಂತಿ: ಉಪನ್ಯಾಸ ಕಾರ್ಯಕ್ರಮ ಇಂದು
ತುಮಕೂರು: ಇಲ್ಲಿನ ಶ್ರೀ ಶಂಕರಾದ್ವೈತ ಸೇವಾ ಟ್ರಸ್ಟ್ 2014ನೇ ಸಾಲಿನ ಶ್ರೀಶಂಕರ ಜಯಂತಿ ಕಾರ್ಯಕ್ರಮದ ಅಂಗವಾಗಿ ನಗರದ ಹಲವಾರು ಬಡಾವಣೆಗಳಲ್ಲಿ ನಡೆಸುತ್ತಿರುವ ಶ್ರೀ ಶಾಂಕರ ವೇದಾಂತ ಪ್ರಸರಣಂ ಉಪನ್ಯಾಸ ಕಾರ್ಯಕ್ರಮಗಳು ಇದೆ ತಿಂಗಳು 5ರಿಂದ ನಡೆಯುತ್ತಿದ್ದು ಇದೇ ತಿಂಗಳ 11 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಭಾನುವಾರ ನಗರದ ಶಿವಮೂಕಾಂಬಿಕಾ ನಗರದ ಮೂಕಾಂಬಿಕಾ ದೇವಸ್ಥಾನದ ಹಿಂಭಾಗದ ನಗರಸಭೆಯ ಪಾರ್ಕ್ನಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಶಾಂಕರ ವೇದಾಂತದ ಬಗ್ಗೆ ವಿದ್ವಾನ್ ಡಾ. ಪಾದಭಟ್ಟರು ಪ್ರಧಾನ ಉಪನ್ಯಾಸ ನೀಡುವರು. ಹಿರಿಯ ವಿದ್ವಾಂಸರಾದ ನಿವೃತ್ತ ಪ್ರಾಂಶುಪಾಲ ಬಿ.ಎಲ್. ಕೃಷ್ಣಶರ್ಮ, ನಗರ ಪಾಲಿಕೆಯ ಸದಸ್ಯ ಎನ್.ಆರ್.ನಾಗರಾಜರಾವ್ ಮತ್ತು ನಗರಸಭೆಯ ಮಾಜಿ ಅಧ್ಯಕ್ಷ ಆರ್.ಎನ್. ಸತ್ಯನಾರಾಯಣ್ ರವರು ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮ ಭಾನುವಾರ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ.

ಹುಳಿಯಾರು ದುರ್ಗಮ್ಮನ ವೈಭವದ ಸಿಡಿ ಉತ್ಸವ
ಹುಳಿಯಾರು: ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ಸಿಡಿ ಕಾರ್ಯ ಹಾಗೂ ಓಕಳಿ ಸೇವೆ ಅಪಾರ ಜನಸ್ತೋಮದ  ನಡುವೆ ವಿಧಿವತ್ತಾಗಿ ಜರುಗಿತು. ಗ್ರಾಮದೇವತೆಗಳಾದ ದುರ್ಗಮ್ಮ, ಹುಳಿಯಾರಮ್ಮ, ಗೌಡಗೆರೆ ದುರ್ಗಮ್ಮ, ಹೊಸಹಳ್ಳಿ ಕೊಲ್ಲಾಪುರದಮ್ಮ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮೂಲ ದೇವತೆ ದುರ್ಗಮ್ಮನಿಗೆ ಪೂಜೆ ಸಲ್ಲಿಸಿ, ನಂತರ ಕೆಂಪು ಹಾಗೂ ಬಿಳಿ ಬಣ್ಣ ಹಚ್ಚಿ, ಮಾವಿನ ಸೊಪ್ಪುಕಟ್ಟಿ ಸಿಂಗರಿಸಿದ್ದ ಸಿಡಿ ಮರಕ್ಕೆ  ಪೂಜೆ ಸಲ್ಲಿಸಿ, ಸೋಮನ ಸಮ್ಮುಖದಲ್ಲಿ ಬಲಿ ನೀಡುವ ಮೂಲಕ ಉತ್ಸವ ಪ್ರಾರಂಭವಾಗಿ ಸಿಡಿ ಕಂಬದ ತುದಿಯಲ್ಲಿ ಭಕ್ತನೊಬ್ಬನನ್ನು ಕೆಳಮುಖವಾಗಿ ಕಟ್ಟಿ ಮತ್ತೊಂದು ತುದಿಗೆ ದೇವಾಲಯದ ಗೌಡರನ್ನು ಕುಳ್ಳಿರಿಸಿ ವಾದ್ಯ ಹಾಗೂ ಎಲ್ಲಾ ದೇವರೊಂದಿಗೆ ಸಿಡಿ ಕಂಬವನ್ನು ತಿರುಗಿಸುವ ದೃಶ್ಯ ರೋಮಾಂಚನಕಾರಿಯಾಗಿತ್ತು.

ಮೆರವಣಿಗೆ...
ಹುಳಿಯಾರು ದುರ್ಗಮ್ಮನ ಸಿಡಿ ಕಾರ್ಯದ ನಂತರ  ಹುಳಿಯಾರಮ್ಮ, ಗೌಡಗೆರೆ ದುರ್ಗಮ್ಮ, ಹೊಸಹಳ್ಳಿ ಕೊಲ್ಲಾಪುರದಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ, ಹೊಸಳ್ಳಿಪಾಳ್ಯದ ಅಂತರಗಟ್ಟೆಯಮ್ಮದೇವರನ್ನು ಮದಾಸಿಯಲ್ಲಿ ದೇವಾಲಯದಲ್ಲಿಗೆ ಕರೆದೊಯ್ಯಲಾಯಿತು.

ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗೆ ಆಕ್ರೋಶ
ಕುಣಿಗಲ್: ಶೌಚಾಲಯ ಸ್ವಚ್ಛಗೊಳಿಸುವ ಕೈಗಳಿಂದಲೆ ರೋಗಿಗಳ ತಪಾಸಣೆ ಮಾಡುವ ಸ್ಥಿತಿ ಬಂದಿದ್ದು, ಇದಕ್ಕೆ ಆರೋಗ್ಯ ವೈದ್ಯಾಧಿಕಾರಿಗಳ ಕ್ರಮವೇ ಕಾರಣ ಎಂದು ನಾಗರಿಕರು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರ ಬಳಿ ಆರೋಪಿಸಿದರು. ಶನಿವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಭೇಟಿ ನೀಡಿದಾಗ, ನಾಗರಿಕರಾದ ಶಿವರಾಮ, ಶ್ರೀನಿವಾಸ, ಬಾಬು ಇತರರು ಆಸ್ಪತ್ರೆಯ ಅಶುಚಿತ್ವದ ಬಗ್ಗೆ ದೂರಿದರು. ಆಸ್ಪತ್ರೆಯಲ್ಲಿ ಕ್ಲಿನಿಕಲ್ ಅಟೆಂಡರ್ ಹುದ್ದೆಗಳಿಗೆ 12 ಮಂದಿ ಸಿಬ್ಬಂದಿ ಯನ್ನು ನಾನ್ ಕ್ಲಿನಿಕಲ್ ಟೆಂಡರ್ ಮೊತ್ತ ಉಳಿಸುವ ಭರದಲ್ಲಿ ಆಸ್ಪತ್ರೆಯ ಶೌಚಾಲಯ ಮತ್ತು ವಾರ್ಡ್ಗಳ ಸ್ವಚ್ಛತೆ ಮಾಡಲು ಒತ್ತಡ ಹೇರಿದ್ದಾರೆಂದು ದೂರಿದರು.  ನಾಗರಿಕರ ಮನವಿ ಸ್ವೀಕರಿಸಿದ ಜಗದೀಶ್ ಶೀಘ್ರದಲ್ಲೆ ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬ್ರೆಡ್ ವಿತರಣೆ...
ತುಮಕೂರಿನ ವಾಸವಿ ಯುವಜನ ಸಂಘ, ಆರ್ಯವೈಶ್ಯ ಮಂಡಳಿ ವತಿಯಿಂದ ವಾಸವಿ ಮಹಲ್ನಲ್ಲಿ 45ನೇ ವರ್ಷದ ವಾಸವಿ ಜಯಂತಿ ಅಂಗವಾಗಿ ಜಿಲ್ಲಾಸ್ಪತ್ರೆಯಲ್ಲಿರುವ ರೋಗಿಗಳಿಗೆ ಬ್ರೆಡ್, ಹಣ್ಣುಗಳನ್ನು ವಿತರಿಸಲಾಯಿತು.ವಾಸವಿ ಯುವಜನಸಂಘದ ಅಧ್ಯಕ್ಷ ಬಿ. ಅಮರನಾಥ್, ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಈಶ್ವರಯ್ಯ,ಸಂಘದ ಪದಾಧಿಕಾರಿಗಳಾದ ಜಿ.ಕೆ. ಲೋಕೇಶ್, ಎಂ.ಕೆ. ಈಶ್ವರ್, ಎಚ್. ಗುರುಪ್ರಸಾದ್ ಇತರರು ಇದ್ದಾರೆ.

ಫಲಾನುಭವಿಗಳಿಗೆ ದೊರೆಯದ ಕೊಳವೆಬಾವಿ ಸಾಲ ಸೌಲಭ್ಯ
ತುಮಕೂರು: ಜಿಲ್ಲಾ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಮಂಜೂರಾದ ಕೊಳವೆಬಾವಿ, ಸಾಲಸೌಲಭ್ಯಗಳು ನೈಜ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂದು ಪಾವಗಡ ತಾಲೂಕು ಪ.ಜಾತಿ, ಪಂಗಡ ಹಿತರಕ್ಷಣಾ ವೇದಿಕೆ ಆರೋಪಿಸಿದೆ. ಕೊಳವೆ ಬಾವಿ, ಮಹಿಳಾ ಸ್ವಸಹಾಯ ಸಂಘಗಳಿಗೆ ಸಹಾಯಧನ, ನೇರ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಯೋಗ್ಯರನ್ನು ಆಯ್ಕೆ ಮಾಡುತ್ತಿಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಸಚಿವರು ತನಿಖೆ ನಡೆಸಬೇಕೆಂದು ಪಾವಗಡ ತಾಲೂಕು ಪ.ಜಾತಿ, ಪ.ಪಂಗಡ ಹಿತರಕ್ಷಣಾ ವೇದಿಕೆ ಅಧ್ಯಕ್ಷ ರಾಜೇಶ ನಾಯಕ್, ಸಂಚಾಲಕ ವೆಂಕಟರಮಣ ಹಾಗೂ ಕಾರ್ಯದರ್ಶಿ ತಿಮ್ಮನಾಯ್ಕ ತಿಳಿಸಿದ್ದಾರೆ. ಈಗಾಗಲೇ ನಿಗಮದಿಂದ ಸಾಲ ಸೌಲಭ್ಯ, ಕೊಳವೆಬಾವಿ ಪಡೆದ ಫಲಾನುಭವಿಗಳಿಗೆ ಮತ್ತೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಸರ್ಕಾರಿ ನೌಕರರಿಗೂ ಸರ್ಕಾರಿ ಸೌಲಭ್ಯಗಳನ್ನು ನಿಗಮದಿಂದ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಅಮಾನತು ಮಾಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

ನಾರಾಯಣಚಾರ್ಯ ವಿರುದ್ಧ ನಾಳೆ ಪ್ರತಿಭಟನೆ
ತುಮಕೂರು: ವಾಲ್ಮೀಕಿ ಯಾರು ಕೃತಿಯಲ್ಲಿ ಮಹರ್ಷಿ ವಾಲ್ಮೀಕಿ ಹುಟ್ಟಿನ ಮೂಲದ ಬಗ್ಗೆ ಅಸಂಬದ್ಧವಾಗಿ ಬರೆದಿರುವ ಲೇಖಕ ಕೆ.ಎಸ್. ನಾರಾಯಣಚಾರ್ಯ ವಿರುದ್ಧ ಇದೇ ತಿಂಗಳ 12 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ಜನಾಂಗದ ಮುಖಂಡರು ಅಂದು ಟೌನ್ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಮೆರವಣಿಗೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ವಾಲ್ಮೀಕ ಬಗ್ಗೆ ತ್ರೇತಾಯುಗದಿಂದ ಇಲ್ಲಿಯವರೆಗೂ ಅಪಸ್ವರ ಇರಲಿಲ್ಲ. ಈಗ ನಾರಾಯಣಚಾರ್ಯ ಅವರು ಅಪಸ್ವರ ಎತ್ತಿರುವುದು ಸರಿಯಲ್ಲ ಎಂದು ಹೆಚ್.ಸಿ. ಹನುಮಂತಯ್ಯ ಅಭಿಪ್ರಾಯಪಟ್ಟರು. ಆಟೋ ಪ್ರತಾಪ್ ಮಾತನಾಡಿ ನಾರಾಯಣಚಾರ್ಯ ಬರೆದಿರುವ ವಾಲ್ಮೀಕಿ ಯಾರು ಕೃತಿಯನ್ನು ಸರ್ಕಾರ ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ತು.ಬಿ. ಮಲ್ಲೇಶ್, ಪುರುಷೋತ್ತಮ್, ರಾಮಚಂದ್ರಪ್ಪ ಇತರರು ಇದ್ದರು.

ನಿಮಿಷಾಂಬ ದೇವಿ ಜಯಂತಿ ಅದ್ಧೂರಿ
ಮಧುಗಿರಿ: ಇಲ್ಲಿನ ಐತಿಹಾಸಿಕ ಶ್ರೀ ಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸೇವಾ ಟ್ರಸ್ಟ್ ಆಶ್ರಯದಲ್ಲಿ ಶ್ರೀ ನಿಮಿಷಾಂಬ ದೇವಿ ಜಯಂತಿ ಅದ್ಧೂರಿಯಾಗಿ ಆಚರಿಸಿದರು. ಲೋಕ ಕಲ್ಯಾಣಾರ್ಥಕವಾಗಿ ನವಗ್ರಹ ಪೂಜೆ, ಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಜನಾಂಗದವರು ಆಚರಿಸಿದರು. ಸೇವಾ ಟ್ರಸ್ಟ್ವತಿಯಿಂದ ಮಧುಗಿರಿ ಪುರಸಭೆ ಅಧ್ಯಕ್ಷ ಎನ್. ಗಂಗಣ್ಣ ಅವರನ್ನು ಗೌವರವಿಸಿದರು. ಟ್ರಸ್ಟ್ ಅಧ್ಯಕ್ಷ ಶಂಕರರಾಜು, ಕಾರ್ಯದರ್ಶಿ ಜಿ.ನಾರಾಯಣರಾಜು, ಉಪಾಧ್ಯಕ್ಷ ಎಂ.ಎಸ್.ಶ್ರೀಧರ್, ಛಾಯಾಗ್ರಾಹಕ ಮಧುಗಿರಿ ಸಿದ್ಧರಾಜು,ಪುರಸಭೆ ಸದಸ್ಯ ತಿಮ್ಮರಾಜು, ಮಾಜಿ ಸದಸ್ಯ ಶ್ರೀಧರ್, ನಿರ್ಮಿಲಾದೇವಿ, ಶಿಕ್ಷಕಿ ಶಾಂತಮ್ಮ ಇದ್ದರು.

ಹುಳಿಯೂರು ಬಸ್ ನಿಲ್ದಾಣದ ತುಂಬಾ ಮಳೆನೀರು
ಹುಳಿಯಾರು: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ಬಂದಾಗ ನೀರು ತುಂಬಿ ಪ್ರಯಾಣಿಕರಿಗೆ ತೊಂದರೆಯಾಗಿದೆ. ಬಸ್ ನಿಲ್ದಾಣದಲ್ಲಿ ಶೆಲ್ಟರ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ ವರ್ಷಗಳು ಉರುಳಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಿಮೆಂಟ್ ಪ್ಲಾಟ್ ಫಾರಂ ನಿರ್ಮಿಸಲು ಕಾಮಗಾರಿ ಪ್ರಾರಂಭಿಸಿ ಭರ್ತಿಗೆ ಮಣ್ಣು ಹೊಡೆಸಿದ್ದು ಚರಂಡಿ ವ್ಯವಸ್ಥೆ ಕೈಬಿಟ್ಟಿದ್ದಾರೆ. ಸದ್ಯ ಕೆಲಸ ಸ್ಥಗಿತಗೊಂಡಿದೆ. ಕಳೆದ ಎರಡು ದಿನಗಳಿಂದ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು ಬಸ್ ನಿಲ್ದಾಣದ ಫ್ಲಾಟ್ ಫಾರಂ ಪಕ್ಕ ಚರಂಡಿಯಿಲ್ಲದಿರುವುದರಿಂದ ನೀರು ಹರಿದು ಹೋಗುತ್ತಿಲ್ಲ.
ಶೀಘ್ರವೇ ಫ್ಲಾಟ್ಫಾರಂ ಪಕ್ಕದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಮಾಡಿಸುವ ಕಾರ್ಯವನ್ನು ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಕ್ಷೇತ್ರದ ಜನಪ್ರತಿನಿಧಿಗಳಾಗಲಿ ಮಾಡಿಸಬೇಕಿದ್ದು ಪ್ರಯಾಣಿಕರಿಗೆ ನಿತ್ಯ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ರಂಗಭೂಮಿ ಪ್ರಭಾವಶಾಲಿ ಮಾಧ್ಯಮ
ತುಮಕೂರು: ಕಲಾ ಮಾಧ್ಯಮಗಳಲ್ಲೆ ಅತ್ಯಂತ ಪ್ರಭಾವಶಾಲಿಯಾದ ಮಾಧ್ಯಮ ರಂಗಭೂಮಿ. ಇದು ಸಮಾಜದ ಅಂದಕಾರಕ್ಕೆ ಜ್ಞಾನದ ಬೆಳಕನ್ನು ನೀಡುವಲ್ಲಿ ಹೆಚ್ಚಿನ ಮಹತ್ವ ವಹಿಸುತ್ತದೆ ಎಂದು ತುರುವೇಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ರಾಜೇಶ್ವರಿ ಅಭಿಪ್ರಾಯಪಟ್ಟರು. ಸಮೀಪದ ಕಡಬ ಶ್ರೀವಾಸವಿ ದೇವಾಲಯದಲ್ಲಿ ಒಂದು ತಿಂಗಳ ರಂಗ ತರಬೇತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಗೋಪಾಲಕೃಷ್ಣಶೆಟ್ಟಿರವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಿರಂತರವಾಗಿ ರಂಗ ಕಾರ್ಯದಲ್ಲಿ ತೊಡಗಿಸಿಕೊಂಡ ಮಕ್ಕಳಿಗೆ ರಂಗ ಕಲೆಯ ವಿವಿಧ ಆಯಾಮಗಳನ್ನ ತರಬೇತಿ ನೀಡಿ ಮಕ್ಕಳಲ್ಲಿ ಸುಪ್ತವಾಗಿರು ಕಲೆಯನ್ನ ಹೊರತಂದು ಅಭಿವ್ಯಕ್ತಿಪಡಿಸುವಂತೆ ಮಾಡುವಲ್ಲಿ ಕುಸುಮ ಕಲಾಸಂಘ ಪಾತ್ರ ಮಹತ್ವವಾಗಿದೆ ಎಂದರು. ಅಧ್ಯಕ್ಷತೆಯನ್ನು ರಮಾದೇವಿ ವಹಿಸಿದ್ದರು. ರಮೇಶ್ಇದ್ದರು.

'ಕಾಲ ಮಿತಿ ಬಡ್ತಿಗಳಲ್ಲಿ ಆಗುತ್ತಿರುವ ತಾರತಮ್ಯ ನಿವಾರಿಸಿ'
ತುಮಕೂರು: ಕಾಲ ಮಿತಿ ಬಡ್ತಿಗಳಲ್ಲಿ ಆಗುತ್ತಿರುವ ತಾರತಮ್ಯ ನಿವಾರಿಸಬೇಕೆಂದು ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಕೆ.ಬಿ. ಯಲ್ಲಪ್ಪಗೌಡ ಆಗ್ರಹಿಸಿದ್ದಾರೆ. ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 10 ವರ್ಷ, 15, 20, 25, 30 ವರ್ಷ ಕಾಲಮಿತಿ ವೇತನ ಬಡ್ತಿ ನೀಡಬೇಕೆಂದು ಆಗ್ರಹಿಸಿದರು. ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ವೃಂದದಿಂದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಬಡ್ತಿ ಅನುಪಾತ ಶೇ. 75 ರಲ್ಲಿ ಬಡ್ತಿ ಪ್ರೌಢಶಾಲಾ ಶಿಕ್ಷಕರಿಗೆ ಕನಿಷ್ಟ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿದರು. 2014 ರ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಯದಲ್ಲಿ 2007 ರ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಯಲ್ಲಿನ ಆದ್ಯತಾ ಕ್ರಮದ ನಿಯಮ ಜಾರಿಗೊಳಿಸಬೇಕು ಎಂದರು. ಪ್ರಾಥಮಿಕದಿಂದ ಪ್ರೌಢಶಾಲೆಗೆ ಬಡ್ತಿ ನೀಡುವ ಸಂದರ್ಭದ ಕೌನ್ಸಲಿಂಗ್ ಸಮಯದ ಪ್ರಕ್ರಿಯೆಯಲ್ಲಿ ತಿಳಿಸಿ  ವಲಯವನ್ನು ಬಿಟ್ಟು ಬಿ ಮತ್ತು ಎ ವಲಯಗಳಿಗೆ ಕೌನ್ಸಲಿಂಗ್ ನೀಡಬೇಕೆಂದರು. ಪತ್ರಿಕಾಗೋಷ್ಠಿಯಲ್ಲಿ ಉಮೇಶ್, ಕೇಶವ, ಆದರ್ಶಕುಮಾರ್, ಶೋಭಾ ಇದ್ದರು.

ವಿವೇಕಾನಂದ ಕಾಲೇಜಿಗೆ ಶೇ.89 ಫಲಿತಾಂಶ
ತುರುವೇಕೆರೆ: ಇಲ್ಲಿನ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿಗೆ ಶೇ.89 ಫಲಿತಾಂಶ ಲಭಿಸಿದೆ. ಕಾಲೇಜಿನಲ್ಲಿ 373 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು ಇದರಲ್ಲಿ 327 ಮಂದಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 105 ಮಂದಿ ಪರೀಕ್ಷೆ ತೆಗೆದುಕೊಂಡಿದ್ದು 16 ಅತ್ಯುನ್ನತ ಶ್ರೇಣಿ, 51 ಪ್ರಥಮ ದರ್ಜೆ, 17 ದ್ವಿತೀಯ ಶ್ರೇಣಿ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 209 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 13 ಅತ್ಯುನ್ನತ ಶ್ರೇಣಿ, 148 ಪ್ರಥಮ ದರ್ಜೆ, 34 ದ್ವಿತೀಯ ದರ್ಜೆ ಗಳಿಸಿದ್ದಾರೆ. ಕಲಾ ವಿಭಾಗದಲ್ಲಿ 59 ಮಂದಿ ಪರೀಕ್ಷೆಗೆ ಕುಳಿತಿದ್ದು ಅವರಲ್ಲಿ 1 ಅತ್ಯುನ್ನತ ಶ್ರೇಣಿ, 18 ಪ್ರಥಮ ದರ್ಜೆ ಹಾಗೂ 8 ದ್ವಿತೀಯ ದರ್ಜೆ ಗಳಿಸಿದ್ದಾರೆ. ಒಟ್ಟಾರೆ 3 ವಿಭಾಗಗಳೂ ಸೇರಿ ಶೇ. 89 ಫಲಿತಾಂಶ ಲಭಿಸಿದೆ.

ಅಭಿನಂದನೆ...
ತುಮಕೂರು ನಗರದ ಪ.ಪೂ. ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರಿಯತೋಷ್ ಲೋಕೇಶ್, ದೀಪ್ತಿ ಆರ್. ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಉಪನಿರ್ದೇಶಕ ಜಯಪ್ರಕಾಶ್, ಸರ್ವೋದಯ ಕಾಲೇಜಿನ ಪ್ರಾಂಶುಪಾಲ ಕೆ.ವಿ. ಸುಬ್ಬರಾವ್, ವಿದ್ಯಾರ್ಥಿಗಳ ಪೋಷಕರಾದ ಕೆ.ಲೋಕೇಶ್, ಕವಿತಾಲೋಕೇಶ್, ಮಹದೇವಸ್ವಾಮಿ, ರವಿಕಲಾ, ವಿಜಯಲಕ್ಷ್ಮಿ ಇದ್ದರು.

ಪೌರಾಣಿಕ ನಾಟಕೋತ್ಸವ ಉದ್ಘಾಟನೆ
ಗುಬ್ಬಿ: ತಾಲೂಕಿನ ಚೇಳೂರು ಗ್ರಾಮದಲ್ಲಿ ಸೀಬಿನರಸಿಂಹಸ್ವಾಮಿ ಕಲಾ ಸಂಘ ಇರಕಸಂದ್ರ, ದೃಷ್ಟೇಶ್ವರ ನಾಟಕ ಮಂಡಳಿ ಚೇಳೂರು ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಶ್ರದಲ್ಲಿ ಏರ್ಪಡಿಸಿದ್ದ ಪೌರಾಣಿಕ ನಾಟಕೋತ್ಸವವನ್ನು ಡಾ.ಎಂ. ಗೋವಿಂದರಾಯ ಉದ್ಘಾಟಿಸಿದರು. ಆಧುನಿಕತೆ ಬೆಳೆದಂತೆ ಸನಾತನ ಸಾಂಸ್ಕತಿಕ ಕಲೆಗಳು ಕಣ್ಮರೆಯಾಗುತ್ತಿವೆ ಎಂದು ಡಾ.ಎಂ. ಗೋವಿಂದರಾಯ ಅಭಿಪ್ರಾಯಪಟ್ಟರು. ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ, ಯುವಜನತೆ ಸಿನಿಮಾ, ಟಿವಿ, ಧಾರವಾಹಿಗಳಿಗೆ ಮಾರುಹೋಗಿರುವುದರಿಂದ ನಾಟಕ ನೋಡಿ ಅನಂದಿಸುವ ಕಲಾವಿದರ ಸಂಖ್ಯೆ ಕ್ಷೀಣಿಸುತ್ತಿದೆ ಎಂದರು. ಸೀಬಿನರಸಿಂಹಸ್ವಾಮಿ ಕಲಾ ಸಂಘದ ಕಾರ್ಯದರ್ಶಿ ಎನ್. ಜಗನ್ನಾಥ್, ಜಿ.ಎನ್. ಬೆಟ್ಟಸ್ವಾಮಿ, ಕಲಾವಿದರಾದ ಸಿದ್ದಪ್ಪ, ಜಗನ್ನಾಥ್, ರಾಜಣ್ಣ, ಎಪಿಎಂಸಿ ಅಧ್ಯಕ್ಷ ಹಿತೇಶ್, ಹನುಮಂತರಾವ್, ನಾಗರಾಜು ಹಾರ್ಮೋನಿಯಂ ಮಾಸ್ಟರ್ ಸಿಬಿರಂಗಯ್ಯ ಇದ್ದರು.

ಶಾಸಕರ ಹುಟ್ಟುಹಬ್ಬ: ರೋಗಿಗಳಿಗೆ ಹಣ್ಣು ವಿತರಣೆ
ಕುಣಿಗಲ್: ಶಾಸಕ ಡಿ. ನಾಗರಾಜಯ್ಯನವರ 73ನೇ ಹುಟ್ಟುಹಬ್ಬವನ್ನು ಡಿ. ನಾಗರಾಜಯ್ಯ ಅಭಿಮಾನಿ ಬಳಗದ ವತಿಯಿಂದ ಪಟ್ಟಣದಲ್ಲಿ ಸರಳವಾಗಿ ಆಚರಿಸಲಾಯಿತು. ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಲ್. ಹರೀಶ್ ನೇತೃತ್ವದಲಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ  ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಮತ್ತು ನವಚೇತನ ಅಂಧಮಕ್ಕಳ ಪಾಠಶಾಲೆಯ ಮಕ್ಕಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಿಸಿದರು. ನಂತರ ಮಾತನಾಡಿದ ಕೆ.ಎಲ್. ಹರೀಶ್, ಮಾಜಿ ಸಚಿವ ಡಿ. ನಾಗರಾಜಯ್ಯ ಜಿಲ್ಲೆಯ ಹಿರಿಯ ಸಜ್ಜನ ರಾಜಕಾರಣಿಯಾಗಿದ್ದು, ತಾಲೂಕಿಗೆ ಹೇಮಾವತಿ ನೀರು ಹರಿಸುವುದು ಸೇರಿದಂತೆ ಹಲವು ಜನಪರ ಕಾರ್ಯಗಳನ್ನು ಕೈಗೊಂಡು ಜನಾನುರಾಗಿಯಾಗಿದ್ದಾರೆ ಎಂದರು. ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್, ಪುರಸಭೆ ಉಪಾಧ್ಯಕ್ಷೆ ವಿಜಿಯಮ್ಮ, ಸದಸ್ಯರಾದ ಆಯಿಶಾಬೀ, ಜಯಶೀಲಾ, ಸತೀಶ, ಅನ್ಸರ್ ಪಾಷ ಇದ್ದರು.

ಶಾಲೆಯಿಂದ ಹೊರಗುಳಿದ ಮಕ್ಕಳ ದಾಖಲು ಪ್ರಾರಂಭ
ಪಾವಗಡ: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮಕ್ಕಳು ಹಾಗೂ ಸ್ಥಳೀಯ ಸರ್ಕಾರೇತರ ಸಂಸ್ಥೆಗಳು ಜಾಗೃತಿ ಜಾಥ ಶಿಬಿರದಲ್ಲಿ ಭಾಗವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಬಿ.ಪಿ. ನಾಗರಾಜ್ ಮನವಿ ಮಾಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಪಾವಗಡ ವತಿಯಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ದಾಖಲಿಸಿಕೊಳ್ಳಲು ಈಗಾಗಲೇ ದಾಖಲಾತಿ ಪ್ರಕ್ರಿಯೆ ಪ್ರಾರಂಭಗೊಂಡಿದ್ದು ಪಲ್ಸ್ ಪೋಲಿಯೋ ಕಾರ್ಯಕ್ರಮದ ರೀತಿಯಲ್ಲಿ ಪ್ರಸಕ್ತ ಸಾಲಿನ ಮೇ 16ರಿಂದ 31ರವರೆವಿಗೆ ತಾಲೂಕಿನ ಪ್ರತಿ ಶಾಲೆಯಲ್ಲಿ ದಾಖಲಾತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಾಲೆಗೆ ಬರುವ ಮಕ್ಕಳ ಜಾಗೃತಿ ಜಾಥ ನಡೆಸುವಂತೆ ಶಾಲಾ ಶಿಕ್ಷಕರಿಗೆ ಕರೆ ನೀಡಿದ್ದಾರೆ. ಬಿಆರ್ಪಿ ಆರ್.ಎಂ. ನರಸಿಂಹ ಇದ್ದರು.

ಕೃಷಿ ಇಲಾಖೆಯ ಕೆ-ಕಿಸಾನ್ ಯೋಜನೆಗೆ ಚಾಲನೆ
ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿ ಮಲ್ಲೇಶಪುರದಲ್ಲಿ ಕೃಷಿ ಇಲಾಕೆಯ ಕೆ-ಕಿಸಾನ್ ಯೋಜನೆಗೆ ಸಹಾಯಕ ಕೃಷಿ ನಿರ್ದೇಶಕ ರಾಮಹನುಮಯ್ಯ ಚಾಲನೆ ನೀಡಿ ರೈತರು ಸದರಿ ಯೋಜನೆ ಸದುಪಯೋಗ ಪಡೆಯುವಂತೆ ಕೋರಿದರು. ಕೃಷಿ ಇಲಾಖೆಯಲ್ಲಿ ನೂತನವಾಗಿ ಕೆ-ಕಿಸಾನ್ ಯೋಜನೆಯನ್ನು ತಾಲೂಕಿನ ಕಸಬಾ ಹೋಬಳಿ ಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು ಈ ಯೋಜನೆಯಲ್ಲಿ ರೈತರ ದತ್ತಾಂಶಗಳನ್ನು ಸೃಜಿಸುವ ಕಾರ್ಯಕ್ರಮವಾಗಿ ಹಮ್ಮಿಕಕೊಳ್ಳಲಾಗಿದೆ ಎಂದ ತಿಳಿಸಿದರು. ಈಗಾಗಲೇ ಕೆ. ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಎಐಎಸ್ಎಸ್ ಸಾಫ್ಟ್ವೇರ್ನ್ನು ಕಸಬಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಅಳವಡಿಸಿದ್ದು ರೈತರು ತಮ್ಮ ಜಮೀನಿನ ಪಹಣಿ, ಗುರಿತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಗಳನ್ನು ನೀಡಲು ಕೋರಿದ್ದಾರೆ. ಮುಂದಿನ ದಿನಗಳಲ್ಲಿ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಪಡೆಯಲು ಕಡ್ಡಾಯವಾಗಿ ರೈತರು ನೋಂದಾಣಿಯನ್ನು ಮಾಡಿಸಬೇಕು. ಎಲ್ಲಾ ರೈತ ಭಾಂದವರು ಹೆಸರು ನೋಂದಾಯಿಸಿ ಕೊಳ್ಳುವಂತೆ ಮನವಿ ಮಾಡಿದರು.

ಯೋಜನೆಗೆ ಚಾಲನೆ...
ಕೊರಟಗೆರೆ ತಾಲೂಕಿನ ಕಸಬಾ ಹೋಬಳಿ ಮಲ್ಲೇಶಪುರದಲ್ಲಿ ಕೃಷಿ ಇಲಾಖೆ ಕೆ-ಕಿಸಾನ್ ಯೋಜನೆಗೆ ಸಹಾಯಕ ಕೃಷಿ ನಿರ್ದೇಶಕ ರಾಮಹನುಮಯ್ಯ ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.