ಕೊಬ್ಬರಿ ಸುಲಿಯುವವರ ಬದುಕು ಸಲೀಸಲ್ಲ
-ಡಿ.ಆರ್. ನರೇಂದ್ರಬಾಬು
ಹುಳಿಯಾರು: ವರ್ಷದಲ್ಲಿ ಕೇವಲ ಮೂರ್ನಾಲ್ಕು ತಿಂಗಳಷ್ಟೆ ಕೆಲಸವಿರುವ ಕೊಬ್ಬರಿ ಸುಲಿಯುವವರ ಬದುಕು ಸಂಕಷ್ಟಕ್ಕಿಡಾಗಿದ್ದು ಮಿಕ್ಕ ದಿನಗಳಲ್ಲಿ ಕೆಲಸವಿಲ್ಲದೆ ಅವಲಂಬಿತರನ್ನು ಸಾಕುವುದು ದುರ್ಬರವಾಗಿ ಪರಿಣಮಿಸಿದೆ.
ಕೊಬ್ಬರಿ ಸುಲಿಯುವುದು ಒಂದು ವೃತ್ತಿಯಾಗಿಲ್ಲದೆ ಪ್ರವೃತ್ತಿಯಾಗಿರುವುದರಿಂದ ಗ್ರಾಮಗಳಲ್ಲಿ ಕೊಬ್ಬರಿ ಸುಲಿಯುವವರ ಸಂಖ್ಯೆ ಕಡಿಮೆ ಎನ್ನಬಹುದು. ಊರುಗಳಲ್ಲಿ ಹೆಚ್ಚು ಅಂದ್ರೆ ನಾಲ್ಕೈದು ಮಂದಿ ಮಾತ್ರ ಇದನ್ನೆ ಕಸುಬನ್ನಾಗಿಸಿಕೊಂಡಿರ್ತಾರಾದ್ದರಿಂದ ಸಹಜವಾಗಿ ಇವರಿಗೆ ಬೇಡಿಕೆ ಹೆಚ್ಚಿರುತ್ತೆ. ಇದು ಕಷ್ಟದ ಕೆಲಸ ಅನ್ನೋ ಭಾವನೆಯಿಂದ ಈ ಕಾಯಕಕ್ಕೆ ಹುಡುಗರು ಮುಂದಾಗುತ್ತಿಲ್ಲ. ಹಾಗಾಗಿ ಹಳೆ ತಲಮಾರಿನವರನ್ನು ಬಿಟ್ಟರೆ ಹೊಸದಾಗಿ ಕೊಬ್ಬರಿ ಸುಲಿಯುವವರು ಸಿಗುತ್ತಿಲ್ಲ. ಇದರಿಂದಾಗಿ ಕೊಬ್ಬರಿ ಸುಲಿಯುವವರಿಗಾಗಿ ಪರದಾಡುವಂತಾಗಿದೆ.
ಹಳೆ ಮಾದರಿ : ಇತ್ತಿಚೆಗೆ ಕೃಷಿ ಕ್ಷೇತ್ರದಲ್ಲಿಯೂ ಹೊಸಹೊಸ ಆವಿಷ್ಕಾರಗಳು ಸಾಗಿದ್ದು ಎಲ್ಲಕ್ಕೂ ಯಂತ್ರಗಳು ಪದಾರ್ಪಣೆ ಮಾಡಿ ಎಲ್ಲ ಕೆಲಸವನ್ನು ಸುಗಮಗೊಳಿಸಿವೆ. ಆದರೆ ಕೊಬ್ಬರಿ ಸುಲಿಯುವುದಕ್ಕೆ ಮಾತ್ರ ಆಧುನಿಕತೆಯ ಕಾವು ತಟ್ಟಿಲ್ಲ. ಹಿಂದಿನ ಕಾಲದಿಂದ ಯಾವ ರೀತಿ ಚೂಪಾದ ಹಾರೆಯನ್ನು ಬಳಸಿ ಕೊಬ್ಬರಿ ಸುಳಿಯುತ್ತಿದ್ದರೋ ಅದೇ ರೀತಿ ಇಂದಿಗೂ ನಡೆಯುತ್ತಿದೆ. ಯಾಂತ್ರಿಕ ತಂತ್ರಜ್ಞಾನದಿಂದ ಸುಲಿಯಬಹುದೆನ್ನಲಾಗಿದ್ದರೂ ಇದಿನ್ನೂ ಗ್ರಾಮೀಣ ಪ್ರದೇಶಕ್ಕೆ ಬಳಸಲು ಸಹಕಾರಿಯಾಗಿಲ್ಲ.
ಬದುಕು ದುಸ್ಥರ: ಬಿಸಿಲು, ಧೂಳೆನ್ನದೆ ಕರೆಯುವವರ ಜಾಗಕ್ಕೆ ತೆರಳುವ ಇವರಿಗೆ ಚೂಪಾದ ಹಾರೆಯೆ ಏಕೈಕ ಸಾಧನ.ಮುಂಜಾನೆಯಿಂದ ಸಂಜೆವರೆಗೂ ಕೆಲಸಮಾಡುವ ಇವರು ದಿನವೊಂದಕ್ಕೆ ಸಾಧಾರಣವಾಗಿ 2 ರಿಂದ 3 ಸಾವಿರದವರೆಗೆ ಕೊಬ್ಬರಿ ಸುಲಿಯುತ್ತಾರೆ. ಸಾವಿರ ಕೊಬ್ಬರಿ ಸುಲಿದರೆ 300 ರು. ಕೂಲಿ ಇದೆ. ಚೂರು ಎಚ್ಚರ ತಪ್ಪಿದರೂ ಜೀವಕ್ಕೆ ಅಪಾಯವಿರುವ ಈ ವೃತ್ತಿಯಲ್ಲಿ ಮೊಟ್ಟೆಯ ಧೂಳಿನಿಂದ ಆರೋಗ್ಯಕ್ಕೂ ಕೂಡ ಹಾನಿಯಿದೆ.
ನುಸಿರೋಗ ತಗುಲಿ ಕೊಬ್ಬರಿ ಗಂಟುಗಂಟಾಗಿ ಸುಲಿಯುವುದು ಕಷ್ಟಕರವಾಗಿ ಪರಿಣಮಿಸಿದೆ ಎಂದು ಕಳೆದ 30 ವರ್ಷಗಳಿಂದ ಕೊಬ್ಬರಿ ಸುಲಿಯುವ ಕೆಲಸ ಮಾಡಿಕೊಂಡು ಬರುತ್ತಿರುವ ದೊಡ್ಡಬಿದರೆಯ ಕೆಂಚಪ್ಪ ತಿಳಿಸುತ್ತಾರೆ. ವರ್ಷದ ಬೇಸಿಗೆ ಸಮಯದಲ್ಲಿ ಕೊಬ್ಬರಿ ಸುಲಿಯುತ್ತೇವೆ, ಮಳೆಗಾಲದಲ್ಲಿ ವ್ಯವಸಾಯ ಮಾಡುತ್ತೇವೆ. ಅಂದಿನ ದುಡಿಮೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಈಗ ಸರಿಯಾಗಿ ಮಳೆಗಾಲವಾಗದೆ ಕೊಬ್ಬರಿ ಸುಲಿಯುವುದೊಂದೆ ಕಸುಬಾಗಿದೆ. ಬೇಸಿಗೆ ಬಿಟ್ಟರೆ ಉಳಿದಂತೆ ನಿರುದ್ಯೋಗಿಗಳಾಗುವ ನಮಗೆ ಬೇರೆ ಕೆಲಸವೂ ಗೊತ್ತಿಲ್ಲದೆ ಜೀವನ ಕಷ್ಟಕರವಾಗಿದೆ ಎನ್ನುತ್ತಾರೆ.
ಮಾರ್ಚ್ನಿಂದ ಜೂನ್ ತಿಂಗಳವರೆಗೆ ಕೈ ತುಂಬಾ ಕೆಲಸವಿರುವ ಇವರನ್ನು ಉಳಿದ ದಿನಗಳಲ್ಲಿ ಕೇಳುವವರೇ ಇರುವುದಿಲ್ಲ. ರೈತರುಗಳು ಒಂದೇ ಬಾರಿ ಕೊಬ್ಬರಿ ಸುಲಿಯಲು ಮುಂದಾಗುವುದರಿಂದ ಈ ದಿನಗಳಲ್ಲಿ ಕೊಬ್ಬರಿ ಸುಲಿಯುವವರೆ ಸಿಗದಂತಾಗಿ ಕಾದು ಕೂರುವ ಪರಿಸ್ಥಿತಿ ಕೂಡ ಉದ್ಭವವಾಗುತ್ತೆ.
ಹುಳಿಯಾರು ಹೋಬಳಿಯ ದೊಡ್ಡಬಿದರೆ, ಕೆಂಕೆರೆ, ಗೌಡಗೆರೆ, ನಂದಿಹಳ್ಳಿ, ಕೋಡಿಹಳ್ಳಿಗಳಲ್ಲಿ ಹೆಚ್ಚು ಜನ ಕೊಬ್ಬರಿ ಸುಲಿಯುವವರಿದ್ದಾರೆ. ಇವರನ್ನು ಬಿಟ್ಟರೆ ಉಳಿದ ಗ್ರಾಮಗಳಲ್ಲಿ ಕೆಲ ಮಂದಿ ಮಾತ್ರ ಇದ್ದು ಇವರೆಲ್ಲರೂ ಇಂದಿಗೂ ಸಹ ಕೊಬ್ಬರಿ ಸುಲಿದುಕೊಂಡೆ ಜೀವನ ಸಾಗಿಸುತ್ತಿದ್ದಾರೆ. ಹೋಬಳಿಯ ಸುತ್ತಮುತ್ತಲ ಊರುಗಳ ಜನ ಇವರನ್ನೆ ಕರೆದುಕೊಂಡು ಹೋಗಿ ಕೊಬ್ಬರಿ ಸುಲಿಸುವಂತಾಗಿದ್ದರೂ ಇವರ ಬದುಕು ಮಾತ್ರ ಸುಧಾರಣೆಗೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

