ಉಡುಪಿ

ಕಾಣಿಯೂರು ಶ್ರೀಗಳಿಂದ ಅಕ್ಕಿ ಮುಹೂರ್ತ

Published On :

ಉಡುಪಿ: ಉಡುಪಿ ಶ್ರೀ ಕೃಷ್ಣನ ಪೂಜೆಯ ಪರ್ಯಾಯ ದೀಕ್ಷೆಯನ್ನು 2014 ಜ.18ರಂದು 2ನೇ ಬಾರಿ ಪಡೆಯಲಿರುವ ಇಲ್ಲಿನ ಅಷ್ಟಮಠಗಳಲ್ಲೊಂದಾದ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಅದಕ್ಕೆ ಪೂರ್ವಭಾವಿಯಾಗಿ ಗುರುವಾರ ಅಕ್ಕಿ ಮೂಹೂರ್ತವನ್ನು ನರೆವೇರಿಸಿದರು.
ಅನ್ನಬ್ರಹ್ಮನೆಂದೇ ಕರೆಯಲ್ಪಡುವ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ನಿತ್ಯ ಅನ್ನಸಂತರ್ಪಣೆಗೆ ಯಾವುದೇ ಕೊರತೆಯುಂಟಾಗಬಾರದು ಎನ್ನುವ ಆಶಯದೊಂದಿಗೆ, ಮುಂದಿನ 2 ವರ್ಷಗಳ ಪರ್ಯಾಯ ಕಾಲಕ್ಕೆ ಬೇಕಾಗುವ ಅಕ್ಕಿಯನ್ನು ಸಂಗ್ರಹಿಸುವ ಉದ್ದೇಶದಿಂದ ಈ ಮೂಹೂರ್ತವನ್ನು ನಡೆಸಲಾಗುತ್ತದೆ. ಕಾಣಿಯೂರು ಶ್ರೀಗಳು ಗುರುವಾರ ಬೆಳಗ್ಗೆ 8.45 ಗಂಟೆಗೆ ಒದಗಿದ ಮೀನ ಲಗ್ನ ಸುಮುಹೂರ್ತದಲ್ಲಿ ಅಕ್ಕಿ ಮುಡಿಗೆ ಪೂಜೆ ಸಲ್ಲಿಸುವ ಈ ಅಕ್ಕಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ಆರಂಭದಲ್ಲಿ ಕಾಣಿಯೂರು ಮಠದಲ್ಲಿ ಪಟ್ಟದ ದೇವರಾದ ಯೋಗಾನರಸಿಂಹ ದೇವರಿಗೆ ಶ್ರೀಗಳು ಪ್ರಾರ್ಥನೆ ಸಲ್ಲಿಸಿದರು.
ನಂತರ ಶ್ರೀಗಳು ಹಾಗೂ ಮಠದ ಅಧಿಕಾರಿ- ಅಭಿಮಾನಿಗಳು ರಥಬೀದಿಯಲ್ಲಿರುವ ಶ್ರೀ ಚಂದ್ರೇಶ್ವರ, ಶ್ರೀ ಅನಂತೇಶ್ವರ ದೇವರ ದರ್ಶನ ಪಡೆದರು.
ನಂತರ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರುಗಳಿಗೆ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಂದ ಸರ್ವಜ್ಞ ಪೀಠ, ಗುರುಗಳ ವೃಂದಾವನ, ಗೋಶಾಲೆಗೆ ಭೇಟಿ ನೀಡಿದರು.
ನಂತರ ಶ್ರೀಕೃಷ್ಣ ಮಠದ ಅನೆಯನ್ನು ಮುಂದಿರಿಸಿಕೊಂಡು, ಬಿರುದು, ಬಾವಲಿ, ವಾದ್ಯಘೋಷಗಳೊಂದಿಗೆ ರಥಬೀದಿಯಲ್ಲಿ ಭವ್ಯ ಮೆರವಣಿಗೆಯಲ್ಲಿ ಪಲ್ಲಕ್ಕಿಯಲ್ಲಿ ಅಕ್ಕಿ ಮುಡಿಯನ್ನು ಕಾಣಿಯೂರು ಮಠಕ್ಕೆ ತಂದು ಇತರ ಮಠಾಧೀಶರ ಉಪಸ್ಥಿತಿಯಲ್ಲಿ ಪೂಜೆ ಸಲ್ಲಿಸಲಾಯಿತು.  
ಶ್ರೀಗಳು ಅಷ್ಟ ಮಠಗಳು ಮತ್ತು ರಥಬೀದಿಯಲ್ಲಿರುವ ಇತರ ಮಠಗಳಿಗೆ, ದೇವಸ್ಥಾನಗಳಿಗೆ ಗೌರವಾರ್ಥವಾಗಿ ನವಧಾನ್ಯಾಧಿ ದಾನಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು, ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು, ಈಗ ಪರ್ಯಾಯ ಪೀಠದಲ್ಲಿರುವ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು. ಅವರೆಲ್ಲರಿಗೂ ಕಾಣಿಯೂರು ಮಠದ ವತಿಯಿಂದ ಗೌರವ, ಮಾಲಿಕೆ ಪೂಜೆ ನಡೆಸಲಾಯಿತು.
ಇದಾದ ನಂತರ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥರು ಕಾಣಿಯರು ಮಠಕ್ಕೆ ಭೇಟಿ ನೀಡಿ ಭಾವಿ ಪರ್ಯಾಯ ಮಠಾಧೀಶರಿಗೆ ತಮ್ಮ ಗೌರವ ಅಭಿನಂದನೆಗಳನ್ನು ಸಲ್ಲಿಸಿದರು.
ಮಠದ ದಿವಾನ ರಘುಪತಿ ಆಚಾರ್ಯ, ವ್ಯವಸ್ಥಾಪಕ ನಾಗರಾಜ ಆಚಾರ್ಯ, ವಿದ್ವಾಂಸ ಹರಿದಾಸ ಉಪಾಧ್ಯಾಯ, ಡಾ. ಪ್ರಭಂಜನ ಆಚಾರ್ಯ, ಸಗ್ರಿ ರಾಘವೇಂದ್ರ ಉಪಾಧ್ಯಾಯ, ಸುರೇಶ ಆಚಾರ್ಯ, ಶಾಸಕ ರಘುಪತಿ ಭಟ್, ಮಠದ ಗಣ್ಯಭಕ್ತರಾದ ಹರಿಕೃಷ್ಣ ಪುನರೂರು, ಪ್ರದೀಪ್ ಕಲ್ಕೂರ, ಭುವನಾಭಿರಾಮ ಉಡುಪ, ಪ್ರಮೋದ್ ಮಧ್ವರಾಜ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.