ಲಾರಿ ಡಿಕ್ಕಿಯಾಗಿ ಪಾದಚಾರಿ ಸಾವು (ಅಪರಾಧ ಸುದ್ದಿಗಳು)
ಉಡುಪಿ: ಲಾರಿ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ನಗರದಲ್ಲಿ ಭಾನುವಾರ ಸಂಜೆ ನಡೆದಿದೆ. ರಾಘವೇಂದ್ರ ನಾಯಕ್ (39) ಮೃತರು. ಅವರು ಕೈವಲ್ಯ ಮಠದ ಸ್ವಾಮೀಜಿಗಳ ಕಾರ್ಯಕ್ರಮದ ನಿಮಿತ್ತ ಕಡಿಯಾಳಿಗೆ ಬಂದಿದ್ದು, ಸಂಜೆ 6 ಗಂಟೆಗೆ ಕಡಿಯಾಳಿಯಿಂದ ಕಲ್ಸಂಕದತ್ತ ಹೋಗುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದು ತಲೆಗೆ ತೀವ್ರ ತರಹದ ಗಾಯಗಳಾದವು. ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಜಗನ್ನಾಥ ಪ್ರಭು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಂಜಾ ಜಾಲ:
ಸೂತ್ರಧಾರಿ ಸೆರೆ
ಮಂಗಳೂರು: ಸುರತ್ಕಲ್ ಪರಿಸರದಲ್ಲಿ ಗಾಂಜಾ ಮಾರಾಟ ಜಾಲದ ಸೂತ್ರಧಾರಿ ಕಾಟಿಪಳ್ಳ ನಿವಾಸಿ ಕೇಶವನನ್ನು ಪೊಲೀಸರು ಬಂಧಿಸಿದ್ದಾರೆ. ಕಾಟಿಪಳ್ಳದಲ್ಲಿ 15 ದಿನಗಳ ಹಿಂದೆ ಪೊಲೀಸರು ಗಾಂಜಾ ವಶಪಡಿಸಿಕೊಂಡಿದ್ದು, ಸೂತ್ರಧಾರಿ ಕೇಶವ ತಪ್ಪಿಸಿಕೊಂಡಿದ್ದರು. ಈತ ಗಾಂಜಾ ಮಾತ್ರವಲ್ಲದೆ, ಇತರ ಮಾದಕ ವಸ್ತುಗಳನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈತನ ಗಾಂಜಾ ಪ್ರಕರಣ ವರದಿಯಾದ ಬಳಿಕ ಸಂಜೆ ಪತ್ರಿಕೆ ಸಿಬ್ಬಂದಿ ಮೇಲೆ ಹಲ್ಲೆಗಳು ನಡೆದಿತ್ತು.
ಸರ್ಕಾರಿ ಬಸ್ ಸಿಬ್ಬಂದಿಗೆ ಹಲ್ಲೆ ಪ್ರಕರಣ; 4 ಸೆರೆ
ವಿಟ್ಲ: ಮಾಣಿ ಜಂಕ್ಷನ್ ಬಳಿ ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಮಾಣಿ ಗ್ರಾಮದ ಬರಿಮಾರು ನಿವಾಸಿ ಪರಮೇಶ್ವರ (35), ಮಾಣಿ ನಿವಾಸಿ ದಯಾನಂದ (30), ಬುಡೋಳಿ ನಿವಾಸಿ ಹಣ್ಣಿ ಪೂಜಾರಿ (42), ಮಾಣಿ ನಿವಾಸಿ ಜಗದೀಶ (20) ಬಂಧಿತ ಆರೋಪಿಗಳು.
ಹಿನ್ನೆಲೆ: ಆರೋಪಿಗಳು ಫೆ.13ರಂದು ಬೆಳಗ್ಗೆ ಮಂಗಳೂರು ಕಡೆ ತೆರಳಲು ಮಾಣಿ ಜಂಕ್ಷನ್ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಸರ್ಕಾರಿ ಬಸ್ಸಿನ ನಿರ್ವಾಹಕ ಹಾಗೂ ಚಾಲಕ ಬಸ್ ಪಾಸ್ಗೆ ಅವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನಿರ್ವಾಹಕ ಕೃಷ್ಣಪ್ಪ ಹಾಗೂ ಚಾಲಕ ಸಂತೋಷ್ಗೆ ಗಂಭೀರವಾಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಪೊಲೀಸರು ಬಂಧಿಸಲಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ಬಸ್ಸು ಸಿಬ್ಬಂದಿ ಮುಷ್ಕರ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಇದರಿಂದ ಕಾರ್ಯಪ್ರವೃತ್ತರಾದ ವಿಟ್ಲ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಾಂಬಿಲ ಕೆರೆಯಲ್ಲಿ ಯುವಕನ ಶವ ಪತ್ತೆ
ಬಂಟ್ವಾಳ: ಇಲ್ಲಿನ ಕಾವಳ ಪಡೂರು ಗ್ರಾಮದ ಬಾಂಬಿಲದ ತೋಟದ ಕೆರೆಯಲ್ಲಿ ಯುವಕನೊಬ್ಬನ ಶವ ಸೋಮವಾರ ಪತ್ತೆಯಾಗಿದೆ.
ಸ್ಥಳೀಯ ಕಂಗಿತ್ತೂರು ನಿವಾಸಿ ಲಿಂಗಪ್ಪ ಎಂಬವರ ಪುತ್ರ ಸುರೇಶ(26) ಎಂಬವರ ಮೃತದೇಹ ಇದಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ತಮ್ಮ ಸಂಬಂಧಿಕರ ಅಂಗಡಿಯಲ್ಲಿ ನೌಕರಿಗಿದ್ದ ಈತನಿಗೆ ಶನಿವಾರ ವ್ಯವಹಾರಕ್ಕೆ ಸಂಬಂಧಿಸಿ ಮಾಲೀಕರು ಬೈದಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಊಹಿಸಲಾಗಿದೆ. ಶಿವರಾವ್ ಎಂಬವರಿಗೆ ಈ ಕೆರೆ ಸೇರಿದ್ದು ಅವರು ಬೆಳಿಗ್ಗೆ ತೋಟಕ್ಕೆ ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆ ಆರೋಪಿ ವೃದ್ಧಗೆ ದಂಡ
ಮಂಗಳೂರು: ಕಾವೂರು ಗಾಂಧಿನಗರದಲ್ಲಿ ಪಶುವೈದ್ಯರಿಗೆ ಕಲ್ಲಿನಿಂದ ಜಜ್ಜಿದ ಆರೋಪಿಗೆ ಮೂರನೇ ಜೆಎಂಎಫ್ಸಿ ಕೋರ್ಟ್ ದಂಡ ವಿಧಿಸಿ ತೀರ್ಪು ನೀಡಿದೆ. 2011ರ ಸೆ.28ರಂದು ಕಾವೂರು ಗಾಂಧಿನಗರದಲ್ಲಿ ಪಶುವೈದ್ಯ ಶಿವಾನಂದ ಎಂಬವರ ಮುಖಕ್ಕೆ ಚಂದ್ರಹಾಸ ಪೂಂಜ ಕಲ್ಲಿನಿಂದ ಜಜ್ಜಿ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಒಡ್ಡಿದ್ದ. ಈ ಕುರಿತು ಕಾವೂರು ಪೊಲೀಸರು ಪ್ರಕರಣ ದಾಖಲಿಸಿ, 3ನೇ ಜೆಎಂಎಫ್ಸಿ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಆರೋಪಿ ಚಂದ್ರಹಾಸ ಪೂಂಜಗೆ 78 ವರ್ಷ ಆಗಿರುವದನ್ನು ಪರಿಗಣಿಸಿ ಶಿಕ್ಷೆ ಪ್ರಮಾಣ ತಗ್ಗಿಸಲಾಯಿತು.
'ಒಂದು ವರ್ಷದವರೆಗೆ ಪರಿಸರದಲ್ಲಿ ಶಾಂತಿ, ಸನ್ನಡತೆಯಿಂದ ವಾಸಿಸುವುದಾಗಿ 10 ಸಾವಿರಕ್ಕೆ ಮುಚ್ಚಳಿಕೆ ಬರೆದುಕೊಡಬೇಕು. ಡಾ.ಶಿವಾನಂದ ಆವರಿಗೆ 2 ಸಾವಿರ ಪರಿಹಾರ ನೀಡಬೇಕು, 500 ದಂಡ ತೆರಬೇಕು' ಎಂದು ನ್ಯಾಯಾಧೀಶರಾದ ರೂಪಶ್ರೀ ತೀರ್ಪು ನೀಡಿದರು.
ಮದ್ಯವ್ಯಸನಿ ಸಾವು
ಕಾರ್ಕಳ: ಇಲ್ಲಿನ ದುರ್ಗಾ ಗ್ರಾಮದ ಮೇಲು ಮನೆ ಎಂಬಲ್ಲಿ ವ್ಯಕ್ತಿಯೊಬ್ಬರು ವಿಪರೀತ ಮದ್ಯಪಾನ ಮಾಡಿ ಮೃತಪಟ್ಟ ಘಟನೆ ನಡೆದಿದೆ. ಮೃತರು ಕೂಕ್ರ ಮೇರ (36), ಶನಿವಾರ ಬೆಳಗ್ಗೆ 8 ಗಂಟೆಗೆ ಕೂಲಿ ಕೆಲಸಕ್ಕೆ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ಅವರು ಭಾನುವಾರ ದುರ್ಗಾ ಗ್ರಾಮದ ಅರ್ಬಿ ಸುಬ್ರಾಯ ಪಾಠಕ್ ಎಂಬವರ ಹಾಡಿಯಲ್ಲಿ ದಾರಿಯ ಬದಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರಿಗೆ ವಿಪರೀತ ಶರಾಬು ಸೇವಿಸುವ ಚಟವಿದ್ದು ವಿಪರೀತ ಶರಾಬು ಸೇವಿಸಿ ಬರುವಾಗ ಬಿದ್ದವರು ಮೇಲೇಳಲಾಗದೆ ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ಎಂ. ಸುಕುಮಾರ್ ಎಂಬವರ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡುಗೆ ಮಾಡುವಾಗ ಬೆಂಕಿ ತಗುಲಿ ಸಾವು
ಮಂಗಳೂರು: ಅಡುಗೆ ಮಾಡುತ್ತಿರುವಾಗ ಸೀರೆಗೆ ಬೆಂಕಿ ಹತ್ತಿ ಗಂಭೀರ ಗಾಯಗೊಂಡಿದ್ದ ನಡುಗೋಡು ಶೇಡಿಗುಳಿ ನಿವಾಸಿ ಜಯಂತಿ (60) ಮೃತಪಟ್ಟಿದ್ದಾರೆ. ಜ.22ರಂದು ಬೆಳಗ್ಗೆ ಸೀರಿಗೆ ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಜಯಂತಿಯನ್ನು ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಭಾನುವಾರ ಮೃತಪಟ್ಟರು.
21ರಂದು ಪುತ್ತೂರಿನಲ್ಲಿ ಅಷ್ಟಾವಧಾನ
ಪುತ್ತೂರು: ಅತ್ಯಂತ ವಿಶಿಷ್ಟ ಹಾಗೂ ಅಪರೂಪವಾದ ಲಲಿತ ಕಲೆ ಅಷ್ಟಾವಧಾನ 21ರಂದು ಒಪ್ಪಣ್ಣ ನೆರೆಕೆರೆ ಪ್ರತಿಷ್ಠಾನ ವತಿಯಿಂದ ಪುತ್ತೂರು ಜೈನಭವನದಲ್ಲಿ ನಡೆಯಲಿದೆ. ಅಂತರ್ಜಾಲ ಮೂಲಕ ಸಾಹಿತ್ಯಾಸಕ್ತ ಬಳಗ ರಚಿಸಿಕೊಂಡು ಭಾಷಾ ಸಾಹಿತ್ಯದ ಬೆಳವಣಿಗೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಒಪ್ಪಣ್ಣ ಬಳಗ ಇದೀಗ ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿರುವ ಲಲಿತಕಲೆಗಳಾದ ಸಂಗೀತ, ನೃತ್ಯ , ಯಕ್ಷಗಾನ ಇತ್ಯಾದಿಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಪ್ರಯತ್ನ ಮಾಡುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಈಗ ಅಷ್ಟಾವಧಾನ ಕಾರ್ಯಕ್ರಮ ನಡೆಸಲು ಉದ್ದೇಶಿಸಿದೆ. ಶತಾವಧಾನಿ ಆರ್.ಗಣೇಶ್ ನಡೆಸಿಕೊಡಲಿದ್ದಾರೆ. 21ರಂದು ಪುತ್ತೂರಿನ ಜೈನ ಭವನದಲ್ಲಿ ಅಷ್ಟಾವಧಾನ ನಡೆಸಲು ಉದ್ದೇಶಿಸಲಾಗಿದೆ. ಒಪ್ಪಣ್ಣ ನೆರೆಕರೆ ಬಳಗದ ಗೌರವಾಧ್ಯಕ್ಷರಾಗಿ ಕೆ. ರಾಮ ಭಟ್ ಉರಿಮಜಲು, ಅಧ್ಯಕ್ಷರಾಗಿ ವಿ.ಬಿ.ಅರ್ತಿಕಜೆ, ಸಂಚಾಲಕರಾಗಿ ರಘುರಾಮ ಮುಳಿಯ, ಉಪಾಧ್ಯಕ್ಷರಾಗಿ ಈಶ್ವರ ಭಟ್, ಕೋಶಾಧಿಕಾರಿಯಾಗಿ ತೆಕ್ಕುಂಜ ಕುಮಾರಸ್ವಾಮಿ, ಕಾರ್ಯದರ್ಶಿಯಾಗಿ ಮಹೇಶ್ ಎಳ್ಯಡ್ಕ, ಅಷ್ಟಾವಧಾನ ಸಮಿತಿ ಅಧ್ಯಕ್ಷರಾಗಿ ಶ್ರೀಕೃಷ್ಣ ಶರ್ಮ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಭಟ್ ಗಬಲಡ್ಕ, ಕಾರ್ಯದರ್ಶಿಯಾಗಿ ರಾಮಚಂದ್ರ ಅಜ್ಜಕಾನ ಕಾರ್ಯೋನ್ಮುಖರಾಗಿದ್ದಾರೆ.
ಇಂದು ವಿದ್ಯುತ್ ಸ್ಥಗಿತ
ಪುತ್ತೂರು: ನೆಟ್ಲಮುಡ್ನೂರು-ಪುತ್ತೂರು ವಿದ್ಯುತ್ ಮಾರ್ಗದಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣೆ ಪ್ರಯುಕ್ತ ಮಂಗಳವಾರ ಪೂರ್ವಾಹ್ನ 10ರಿಂದ ಅಪರಾಹ್ನ 2ರ ವರೆಗೆ ಪುತ್ತೂರು ವಿದ್ಯುತ್ ಉಪಕೇಂದ್ರದಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಪುತ್ತೂರು ವಿದ್ಯುತ್ ಉಪಕೇಂದ್ರ ವ್ಯಾಪ್ತಿಯ ಪುತ್ತೂರು, ಸುಳ್ಯ ಮತ್ತು ಕಡಬ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ತಾಪಂ ಸಭೆ ಮುಂದೂಡಿಕೆ
ಪುತ್ತೂರು: ಚುನಾವಣಾ ನೀತಿಸಂಹಿತೆ ಹಿನ್ನೆಲೆಯಲ್ಲಿ ಫೆ.21ರಂದು ನಡೆಯಬೇಕಾಗಿದ್ದ ತಾ.ಪಂ. ಉಪಸಮಿತಿ ಸಭೆ ಹಾಗೂ 28ರಂದು ನಡೆಯಬೇಕಾಗಿದ್ದ ಸಾಮಾನ್ಯ ಸಭೆ ಮುಂದೂಡಲಾಗಿದೆ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

