ಉಡುಪಿ

ನೈಸ್ ಮಾಡಿ ಕರೆಸಿ ಯೋಗೀಶನ ಬಂಧಿಸಿದ ಪೊಲೀಸರು!

Published On :

ಕ.ಪ್ರ. ವಾರ್ತೆ, ಉಡುಪಿ, ಜೂ.27-
ಮಣಿಪಾಲದ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 3 ಮಂದಿ ಭಾಗಿಗಳಾಗಿದ್ದು, ಅತ್ಯಾಚಾರಕ್ಕೆ ಮೊದಲು ವಿದ್ಯಾರ್ಥಿನಿಯ ಅಪಹರಣಕ್ಕೆ ಆಟೋ ಬಳಸಲಾಗಿದೆ ಎಂಬ 2 ಮಾಹಿತಿಗಳನ್ನು ಬಿಟ್ಟರೆ ಪೊಲೀಸರಿಗೆ ಬೇರೆ ಯಾವುದೇ ಮಾಹಿತಿಯಾಗಲಿ, ಸುಳಿವುಗಳಾಗಲಿ ಇರಲಿಲ್ಲ.
ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ ತನಿಖೆಯ ಅಧಿಕಾರವನ್ನು ವಹಿಸಿಕೊಂಡು, ಶೂನ್ಯದಿಂದ ತನಿಖೆ ಆರಂಭಿಸಿದ್ದರು. ಅನುಭವಸ್ಥ ಹಿರಿಯ ಅಧಿಕಾರಿಗಳ, ಪರಿಣಿತರ, ಗುಪ್ತಚರರ, ತಂತ್ರಜ್ಞರ ಹತ್ತಾರು ತಂಡಗಳನ್ನು ರಚಿಸಿ, ಏನೆಲ್ಲ ಉಪಾಯಗಳನ್ನು ಹೂಡಿ ತಲೆಗೆ ಹುಳ ಬಿಟ್ಟು ಕೂತಿದ್ದ ಪೊಲೀಸ್ ಅಧಿಕಾರಿಗಳಿಗೆ ಮೊದಲ 3 ದಿನ ತನಿಖೆಯಲ್ಲಿ ಒಂದೇ ಒಂದು ಹೆಜ್ಜೆ ಪ್ರಗತಿ ಸಾಧಿಸಲಿಕ್ಕಾಗಿರಲಿಲ್ಲ. ಆದರೆ, 4ನೇ ದಿನ ಮಣಿಪಾಲ ಠಾಣೆಯ ರೌಡಿಶೀಟರುಗಳನ್ನು ಎಬ್ಬಿಸಿ ಕರೆತಂದು ವಿಚಾರಣೆ ನಡೆಸಿದರು. ಆದರೆ, ಒಬ್ಬ ರೌಡಿಶೀಟರ್ ಆಮ್ಲೇಟ್ ಯೋಗೀಶ ಮಾತ್ರ ಸಿಗಲಿಲ್ಲ, ಫೋನ್ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಇದು ಯಾಕೋ  ಪೊಲೀಸರಿಗೆ ಅಸಹಜ ಅನ್ನಿಸತೊಡಗಿತು. ಆತನ ಮೊಬೈಲ್‌ನ ಸಹಾಯದಿಂದ ಆತ ಮೈಸೂರಿನಲ್ಲಿರುವುದನ್ನು ಪತ್ತೆ ಮಾಡಲಾಯಿತು. ಆತನ ಫೋನ್‌ಕಾಲ್‌ಗಳ ಪಟ್ಟಿ ತೆಗೆದು, ಆತನ ಪರಿಚಯದ, ರಾಜಕೀಯ ಪಕ್ಷವೊಂದರ ಕಾರ್ಯಕರ್ತ ಸುಖೇಶ್ ಕುಂದರ್‌ನ ಸಹಾಯ ಪಡೆದು ಯೋಗೀಶನಿಗೆ ಕರೆ ಮಾಡಿಸಿದರು. ಕರೆ ಸ್ವೀಕರಿಸಿದ ಯೋಗೀಶನನ್ನು ಮಾತನಾಡಿಸುತ್ತಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ವಿವರಗಳನ್ನು ಕೇಳಲಾಯಿತು, ಆರಂಭದಲ್ಲಿ ನಿರಾಕರಿಸಿದನಾದರೂ, 'ಏನಾದರೂ ಗೊತ್ತಿದ್ದರೆ ಹೇಳು, ನಮ್ಮದೇ ಸರ್ಕಾರವಿದೆ. ಸೇಫ್ ಮಾಡೋಣ' ಎಂದು ಪುಸಲಾಯಿಸಲಾಯಿತು. ಅಲ್ಲಿಗೆ ಯೋಗೀಶ್ ಬಲೆಗೆ ಬಿದ್ದ.

ಬಲೆಗೆ ಬಿದ್ದ ಮಿಕ: ಗುರುವಾರ ಮುಂಜಾನೆ ಊರಿಗೆ ಬಂದಿಳಿದ ಯೋಗೀಶ್ ಮನೆಗೆ ಹೋದಾಗ, ಆತನ ಅಣ್ಣನನ್ನು ಪೊಲೀಸರು ಹಿಂದಿನ ದಿನ ಎತ್ತಿ ಹಾಕಿಕೊಂಡು ಹೋಗಿರುವುದು ಗೊತ್ತಾಯಿತು. ಅಲ್ಲಿಗೆ ತಾನು ಪೊಲೀಸರ ಬಲೆಗೆ ಬಿದ್ದಿದ್ದೇನೆ ಎನ್ನುವುದು ಖಚಿತವಾಯಿತು. ಇನ್ನು ತನಗೆ ಉಳಿಗಾಲ ಇಲ್ಲ ಎಂದು ಯೋಗೀಶ್ ಮನೆಯ ಹಿಂಬದಿಯ ಗುಡ್ಡದಲ್ಲಿ ಕೀಟನಾಶಕ ಕುಡಿದು, ಸುಖೇಶ್ ಕುಂದರ್‌ನಿಗೊಂದು, ಐಜಿಪಿ ರೆಡ್ಡಿ ಅವರಿಗೊಂದು ಕಾಲ್ ಮಾಡಿ ತನ್ನ ತಪ್ಪನ್ನು ಒಪ್ಪಿಕೊಂಡ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಫೋನ್ ಕಾಲ್ ಲಿಸ್ಟ್‌ನಲ್ಲಿ ಸಿಕ್ಕಿದ ನಂಬರ್‌ಗಳಲ್ಲಿ ಇತರ ಇಬ್ಬರು ಆರೋಪಿಗಳ ಸುಳಿವು ಕೂಡ ಪೊಲೀಸರಿಗೆ ಲಭ್ಯವಾಯಿತು. ದೊಡ್ಡದೊಂದು ಸಮಸ್ಯೆ ಈಗ ಬಗೆಹರಿದಿದೆ. ಈ ಮಧ್ಯೆ ಸುತ್ತಲಿನ ಒತ್ತಡಗಳ ನಡುವೆ 6 ದಿನಗಳ ಕಾಲ ಪೊಲೀಸರು ಹಗಲು ರಾತ್ರಿ ಎನ್ನದೇ ತಮ್ಮ ಇಲಾಖೆಯ ಪ್ರತಿಷ್ಠೆ ಪಣವಾಗಿಟ್ಟುಕೊಂಡು ತನಿಖೆ ನಡೆಸಿ, ಯಶಸ್ವಿಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.