ಉಡುಪಿ

ಎಂಎಸ್ಸಿ ಮಲ್ಪೆ ತಂಡಕ್ಕೆ ಪಂಚಗಂಗಾವಳಿ ಟ್ರೋಫಿ

Published On :

ಕುಂದಾಪುರ: ಗಂಗೊಳ್ಳಿಯ ಶ್ರೀ ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸ್ಥಳೀಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಜರುಗಿದ ಅಂತಾರಾಜ್ಯ ಹೊನಲು ಬೆಳಕಿನ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಮಲ್ಪೆಯ ಎಂಎಸ್ಸಿ ತಂಡ, ಉಡುಪಿಯ ಎ.ಕೆ. ಸ್ಪೋರ್ಟ್ಸ್ ತಂಡವನ್ನು ಸೋಲಿಸಿ ಪ್ರತಿಷ್ಠಿತ ಪಂಚಗಂಗಾವಳಿ ಟ್ರೋಫಿ ಮತ್ತು ರು. 2 ಲಕ್ಷ ನಗದನ್ನು ತನ್ನದಾಗಿಸಿಕೊಂಡಿದೆ.
ರನ್ನರ್ಸ್ ಅಪ್ ಎ.ಕೆ.ಸ್ಪೋರ್ಟ್ಸ್ ತಂಡ ರು. ಒಂದು ಲಕ್ಷ ನಗದು ಹಾಗೂ ಶಾಶ್ವತ ಫಲಕ ಪಡೆದುಕೊಂಡಿತು.
ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಉಡುಪಿಯ ಎ.ಕೆ. ಸ್ಪೋರ್ಟ್ಸ್ ತಂಡ ನಿಗದಿತ 8 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 39 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದಕ್ಕೆ ಉತ್ತರಿಸಿದ ಎಂಎಸ್ಸಿ ಮಲ್ಪೆ ತಂಡ ಇನ್ನೂ 2 ಬಾಲ್ ಉಳಿದಿರುವಂತೆಯೇ ಗೆಲುವಿನ ದಡ ಸೇರಿತು. ಉಪಾಂತ್ಯ ಪಂದ್ಯಗಳಲ್ಲಿ ಎ.ಕೆ. ಸ್ಪೋರ್ಟ್ಸ್ ತಂಡ ಜಾನ್ಸನ್ ಕುಂದಾಪುರ ತಂಡವನ್ನು ಹಾಗೂ ಎಂಎಸ್ಸಿ ಮಲ್ಪೆ ತಂಡವು ಉಡುಪಿ ಫ್ರೆಂಡ್ಸ್ ಉಡುಪಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.
ಎ.ಕೆ. ಸ್ಪೋರ್ಟ್ಸ್ ತಂಡದ ಅಪ್ಪು ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು, ಎಂಎಸ್ಸಿ ಮಲ್ಪೆ ತಂಡದ ಅರಿಫ್ ಮಕ್ಕಾ ಸರಣಿ ಶ್ರೇಷ್ಠ ಮತ್ತು ಜಾನ್ಸನ್ ಕುಂದಾಪುರ ತಂಡದ ಶಾಹೀದ್ ನಾಕುದಾ ಉತ್ತಮ ಬೌಲರ್ ಪ್ರಶಸ್ತಿ ಪಡೆದರು.
ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮತ್ಸ್ಯೋದ್ಯಮಿಗಳಾದ ಜಿ.ಟಿ. ಮಂಜುನಾಥ, ಅಬ್ದುಲ್ರೆಹಮಾನ್ ನಾಗೂರು, ರಮೇಶ್ ಎಚ್. ಕುಂದರ್ ಕೋಟ, ಉದ್ಯಮಿ ರಂಜಿತ್ ಕುಮಾರ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು.
 ಸಂಘದ ಅಧ್ಯಕ್ಷ ಚಂದ್ರಕಾಂತ ಖಾರ್ವಿ, ಕಾರ್ಯದರ್ಶಿ ಶ್ರೀನಿವಾಸ ಖಾರ್ವಿ, ಗಂಗಾಧರ ಖಾರ್ವಿ, ಗೌರವಾಧ್ಯಕ್ಷ ವಿಜಯ ಖಾರ್ವಿ, ಸತೀಶ ಎಂ.ಖಾರ್ವಿ ಮೊದಲಾದವರು ಇದ್ದರು.
ಉದ್ಘಾಟನೆ: ಮೂರು ದಿನಗಳ ಅಂತಾರಾಜ್ಯ ಹೊನಲು ಬೆಳಕಿನ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಗಂಗೊಳ್ಳಿಯ ಶ್ರೀವೀರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಜಿ.ಲಕ್ಷ್ಮೀನಾರಾಯಣ ಭಟ್ ಉದ್ಘಾಟಿಸಿದರು. ಉದ್ಯಮಿ ಎಚ್. ಗಣೇಶ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಉಡುಪಿ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಧುಕರ ಎಸ್., ಗಂಗೊಳ್ಳಿ ಪಿಎಂಎಸ್ಎಸ್ ಅಧ್ಯಕ್ಷ ಶೇಖರ ಚಾತ್ರಬೆಟ್ಟು, ಗಂಗೊಳ್ಳಿ ಸವಿತಾ ಸಮಾಜ ಅಧ್ಯಕ್ಷ ಮಂಜುನಾಥ ಭಂಡಾರಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.