ಆಟೋ, ಕ್ಯಾಬ್ಗಳಲ್ಲಿ ಚಾಲಕರ ಸಂಪೂರ್ಣ ವಿವರದ ಫಲಕ ಅನಾವರಣ
ಉಡುಪಿ: ಇನ್ನು ಮುಂದೆ ಉಡುಪಿಯ ಎಲ್ಲಾ ಆಟೋ ಮತ್ತು ಕ್ಯಾಬ್ಗಳಲ್ಲಿ ಚಾಲಕರ ಸಂಪೂರ್ಣ ವಿವರಗಳನ್ನೊಳಗೊಂಡ ಮತ್ತು ಚಾಲಕರ ಗುರುತಿಗಾಗಿ ವಿಶೇಷ ಸಂಖ್ಯೆ (ಯೂನಿಕ್ ನಂಬರ್)ಯ ಫಲಕವನ್ನು ಪ್ರದರ್ಶಿಸಲಾಗುತ್ತದೆ.
ಕೆಲವು ತಿಂಗಳ ಹಿಂದೆ ಮಣಿಪಾಲದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು 3 ಮಂದಿ ಅರೆಕಾಲಿಕ ಆಟೋ ಚಾಲಕರು ಅಪಹರಿಸಿ ಅಮಾನುಷವಾಗಿ ಅತ್ಯಾಚಾರಗೈದ ಘಟನೆಯ ಸಂದರ್ಭದಲ್ಲಿ ಇಂತಹ ವ್ಯವಸ್ಥೆಯೊಂದರ ಬಗ್ಗೆ ಚರ್ಚೆ ಆರಂಭವಾಗಿತ್ತು. ಅದರಂತೆ ಈಗ ಈ ವ್ಯವಸ್ಥೆ ಜಾರಿಗೆ ಬರುತ್ತಿದ್ದು, ಇದರಿಂದ ಕ್ಯಾಬ್ ಮತ್ತು ಆಟೋಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಮತ್ತು ಚಾಲಕರು ಇಬ್ಬರೂ ಸುರಕ್ಷಿತರಾಗಿರುತ್ತಾರೆ.
ಸದ್ಯ ಉಡುಪಿ ಜಿಲ್ಲೆಯಲ್ಲಿ ಈ ವ್ಯವಸ್ಥೆ ಜಾರಿಗೊಳ್ಳುತ್ತಿದೆ, ಶುಕ್ರವಾರ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಪ್ರತಾಪ್ ರೆಡ್ಡಿ ನ.1ರಂದು ಈ ವ್ಯವಸ್ಥೆಗೆ ಚಾಲನೆ ನೀಡಿದರು.
ಮುಂದೆ ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಈ ವ್ಯವಸ್ಥೆ ಜಾರಿಯಾಗಲಿದೆ. ಈ ನಾಲ್ಕೂ ಜಿಲ್ಲೆಗಳ ಆಟೋ ಮತ್ತು ಕ್ಯಾಬ್ ಚಾಲಕರು ಕಡ್ಡಾಯವಾಗಿ ಈ ವ್ಯಸ್ಥೆಯನ್ನು ಹೊಂದಬೇಕಿದೆ.
ಚಾಲಕರು ಡಿ.1ರೊಳಗೆ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿರುವ ಅರ್ಜಿ ನಮೂನೆಯನ್ನು ತುಂಬಿಸಿ, ಠಾಣಾಧಿಕಾರಿಯವರು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ಅರ್ಜಿದಾರ ಚಾಲಕರಿಗೆ ಈ ಯೂನಿಕ್ ನಂಬರ್ನ ಡಿಸ್ಪ್ಲೇ ಕಾರ್ಡ್ ನೀಡಲಾಗುತ್ತದೆ. ಈ ಯೋಜನೆ ಉಚಿತವಾಗಿದ್ದು ಜ.1ರಿಂದ ಜಿಲ್ಲಾದ್ಯಂತ ಕಡ್ಡಾಯವಾಗಿ ಜಾರಿಗೊಳ್ಳಲಿದೆ.
ಆಟೋ, ಕ್ಯಾಬ್ ಚಾಲಕರ ಈ ಮಾಹಿತಿಗಳನ್ನು ಸಾಫ್ಟ್ವೇರ್ ಮೂಲಕ್ ಕೇಂದ್ರೀಕೃತ ಟ್ರಾವೆಲ್ ಸೇಫ್ ರಿಜಿಸ್ಟ್ರಿಯಲ್ಲಿ ಸಂಗ್ರಹಿಸಿಡಲಾಗುವುದು. ಇದರಿಂದ ಅಗತ್ಯವಿದ್ದಾಗ ಪೊಲೀಸ್ ಇಲಾಖೆ ಯಾವುದೇ ಚಾಲಕನ ವಿವರಗಳನ್ನು ಕೂಡಲೇ ಪಡೆಯಲು ಸಾಧ್ಯವಾಗುತ್ತದೆ.
ಆಟೋದಲ್ಲಿ ಡಿಸ್ಪ್ಲೇ ಕಾರ್ಡ್ಗಳನ್ನು ಹಾಕುವುದರಿಂದ ಪ್ರಯಾಣಿಕರಿಗೂ ತಾವು ಸುರಕ್ಷಿತ ಎಂಬ ಭಾವನೆ ಬರುತ್ತದೆ. ಒಂದು ವೇಳೆ ಪ್ರಯಾಣಿಕರು ಆಟೋದಲ್ಲಿ ತಮ್ಮ ವಸ್ತುಗಳನ್ನು ಬಿಟ್ಟು ಬಂದರೆ ಅದನ್ನು ಮರಳಿ ಪಡೆಯಲು ಇಂಥ ಡಿಸ್ಪ್ಲೇ ಕಾರ್ಡ್ಗಳಲ್ಲಿರುವ ವಿವರಗಳಿಂದ ಸಹಾಯವಾಗುತ್ತದೆ. ಅರೆಕಾಲಿಕ ಚಾಲಕರಿಂದ ಪ್ರಯಾಣಿಕರಿಗೆ ಆಗುವ ತೊಂದರೆ, ಗೊಂದಲ ಘಟನೆಗಳನ್ನು ತಡೆಯಲು ಪೋಲಿಸರಿಗೆ, ಅಪಘಾತದ ಸಂದರ್ಭದಲ್ಲಿ ಚಾಲಕನ ಹೆಸರು, ವಿಳಾಸ, ದೂರವಾಣಿ, ರಕ್ತದ ಗುಂಪು ಇತ್ಯಾದಿ ಮಾಹಿತಿಯಿಂದ ಚಿಕಿತ್ಸೆ ನೀಡಲು ಸಾರ್ವಜನಿಕರಿಗೆ ಸಹಾಯವಾಗುತ್ತದೆ. ಈ ಕಾರ್ಡ್ ಹೊಂದಿರುವ ಚಾಲಕರು ಯಾವುದೇ ಪರಿಶೀಲನೆಯ ಸಂದರ್ಭದಲ್ಲಿ ತಮ್ಮ ಆಟೋಗೆ ಸಂಬಂಧಿಸಿದ ಇತರ ದಾಖಲೆಗಳನ್ನು ಹಾಜರುಪಡಿಸಬೇಕಾಗಿಲ್ಲ.
ಉದ್ಘಾಟನೆ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

