ಅಬ್ದುಲ್ ಕಲಾಂ ಮೋದಿ ಬೆಂಬಲಿಗರೇ- ಶ್ರೀಧರ ಶೆಟ್ಟಿ
ಹೆಬ್ರಿ: ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ನರೇಂದ್ರ ಮೋದಿ ಬೆಂಬಲಿಗರೇ...? ಹಿಗೋಂದು ಪ್ರಶ್ನೆ ಈಗ ಎದುರಾಗಿದೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿ ಪ್ರಧಾನಿ ಮಾಡುವಂತೆ ನಾಡಿನೆಲ್ಲೆಡೆ ಬ್ಯಾನರ್, ಕಟೌಟ್, ಫ್ಲೆಕ್ಸ್ ಹಾಕಲಾಗಿದ್ದು ಅದರಲ್ಲಿ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಚಿತ್ರವನ್ನೂ ಹಾಕಲಾಗಿದೆ. ಇದರಿಂದ ಕಲಾಂ ಮೋದಿ ಬೆಂಬಲಿಗರೇ ಎಂಬ ಪ್ರಶ್ನೆ ಮೂಡಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರ ಹೆಬ್ರಿಯ ಎಚ್.ಕೆ.ಶ್ರೀಧರ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರಪತಿಗಳು ಮತ್ತು ಮಾಜಿ ರಾಷ್ಟ್ರಪತಿಗಳು ಯಾವುದೇ ಪಕ್ಷದ ಆಸ್ತಿ ಅಲ್ಲ. ಪಕ್ಷದ ಮುಖವಾಣಿಯೂ ಆಗುವುದಿಲ್ಲ. ಕಲಾಂ ಬಿಜೆಪಿ ಆಸ್ತಿಯೇ ಮತ್ತು ಬಿಜೆಪಿಯ ಮುಖವಾಣಿಯೇ ಎಂಬ ಪ್ರಶ್ನೆಯೂ ಮೂಡಿದೆ ಎಂದು ಎಚ್.ಕೆ. ಶ್ರೀಧರ ಶೆಟ್ಟಿ ಪ್ರಶ್ನಿಸಿದ್ದಾರೆ.
ಪರ್ಯಾಯೋತ್ಸವ ಪೂರ್ವಭಾವಿ ಸಭೆ
ಉಡುಪಿ: ಜ.18ರಂದು ನಡೆಯುವ ಕಾಣಿಯೂರು ಮಠದ ಪರ್ಯಾಯ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ಪರ್ಯಾಯ ಮಹೋತ್ಸವದ ವಿವಿಧ ಸಮಿತಿಗಳ ಸಂಚಾಲಕರ ಸಭೆಯು ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಪಾಜಕ ಕ್ಷೇತ್ರದಲ್ಲಿ ನಡೆಯಿತು. ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಾಜಿ ರಾಘವೇಂದ್ರಾಚಾರ್ಯ, ಖಜಾಂಚಿ ರಮೇಶ್ ರಾವ್ ಬೀಡು, ನಾಗರಾಜಾಚಾರ್ಯ, ಜೊತೆ ಕಾರ್ಯದರ್ಶಿಗಳಾದ ಶ್ರೀಧರ ಭಟ್, ಲಕ್ಷ್ಮೀನಾರಾಯಣ ರಾವ್, ವಿವಿಧ ಸಮಿತಿ ಸಂಚಾಲಕರಾದ ಭುವನೇಂದ್ರ ಕಿದಿಯೂರು, ಮನೋಹರ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಸುಪ್ರಸಾದ ಶೆಟ್ಟಿ, ಯಶ್ಪಾಲ್ ಸುವರ್ಣ, ಕೃಷ್ಣ ಸಾಮಗ, ಪ್ರದೀಪ ಕಲ್ಕೂರ, ಡಾ. ರವಿಚಂದ್ರ ರಾವ್, ಎಂ.ಎಸ್. ವಿಷ್ಣು, ಭಾಸ್ಕರ ರಾವ್ ಕಿದಿಯೂರು, ಹರೀಶ್ ರಾಮ್, ಅನಂತ ನಾಯಕ್, ಗುರುದತ್, ವಾದಿರಾಜ್ ಇದ್ದರು.
ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಆಬಿದ್ ಅಲಿ
ಉಡುಪಿ: ಸಾಂಸ್ಕೃತಿಕ ಮತ್ತು ಸೇವಾ ಸಂಸ್ಥೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ನ ಅಧ್ಯಕ್ಷರಾಗಿ ಆಬಿದ್ ಆಲಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಆಸ್ಕರ್ ಫೆರ್ನಾಂಡೀಸ್, ಉಪಾಧ್ಯಕ್ಷರಾಗಿ ಪುಂಡರೀಶ ಕುಂದರ್ ಮತ್ತು ಮೇರಿ ಡಿಸೋಜ, ಪ್ರಧಾನ ಕಾರ್ಯದರ್ಶಿಯಾಗಿ ರಮೇಶ್ ಕುಮಾರ್, ಕಾರ್ಯದರ್ಶಿಗಳಾಗಿ ಅಭಿಷೇಕ್ ಯು. ಮತ್ತು ಲಕ್ಷ್ಮೀ ಎಸ್. ಅಮೀನ್, ಕೋಶಾಧಿಕಾರಿಯಾಗಿ ಶೇಖರ್ ಕೆ. ಕೋಟ್ಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಧರ ಗಣೇಶ, ಸಂಘಟನಾ ಕಾರ್ಯದರ್ಶಿಯಾಗಿ ತಿಲಕ್ ರಾಜ್ ಸಾಲ್ಯಾನ್ ಮತ್ತು ವಿಶ್ವನಾಥ ಎಸ್. ಪೂಜಾರಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಹಬೀಬ್ ಪಳ್ಳಿ, ನಿರ್ದೇಶಕರಾಗಿ ಯು.ಎ. ಅಜೀಜ್ ಹಾಜಿ ಅಬ್ದುಲ್ ಜಲೀಲ್ ಸಾಹೇಬ್, ಉದ್ಯಾವರ ನಾಗೇಶ್ ಕುಮಾರ್, ಮಹಮ್ಮದ್ ನಯಾಜ್, ಪದ್ಮನಾಭ ಕಾಮತ್, ಜಾರ್ಜ್ ಮಿನೇಜಸ್, ಚಂದ್ರವಾತಿ ಎಸ್. ಭಂಡಾರಿ, ಶರತ್ ಕುಮಾರ್ ಆಯ್ಕೆಯಾಗಿದ್ದಾರೆ.
ಇಂದು ನಮೋ ಬ್ರಿಗೇಡ್ ಹೆಬ್ರಿ ವಲಯ ಉದ್ಘಾಟನೆ
ಹೆಬ್ರಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಭಿಮಾನಿ ಬಳಗದ ನಮೋ ಬ್ರಿಗೇಡ್ನ ಹೆಬ್ರಿ ವಲಯದ ಉದ್ಘಾಟನೆ ನ.10ರಂದು ಸಂಜೆ 4 ಗಂಟೆಗೆ ಹೆಬ್ರಿ ಬಸ್ಸ್ಟ್ಯಾಂಡ್ ಆವರಣದಲ್ಲಿ ನಡೆಯಲಿದೆ. ಪುತ್ತೂರು ಸಂಸ್ಕಾರ ಭಾರತಿ ಸಂಚಾಲಕ ಕೃಷ್ಣ ಉಪಾಧ್ಯಾಯ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಭಾರತ್ ಸ್ವಾಭಿಮಾನ್ ಟ್ರಸ್ಟ್ನ ಉಡುಪಿ ಜಿಲ್ಲಾ ಸಂರಕ್ಷಕ ರಾಘವೇಂದ್ರ ಆಚಾರ್ಯ, ಕಾರ್ಕಳ ಅಕ್ಷರ ಬಳಗದ ಅಕ್ಷಯಾ ಗೋಖಲೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುದ್ರಾಡಿ, ಕಬ್ಬಿನಾಲೆ, ವರಂಗ, ಮುನಿಯಾಲು, ಅಜೆಕಾರು, ಸೋಮೇಶ್ವರ, ಸೀತಾನದಿ, ಶಿವಪುರ, ಪಾಡಿಗಾರ, ಪೆರ್ಡೂರು, ಸಂತೆಕಟ್ಟೆ, ಬೇಳಂಜೆ, ಕುಚ್ಚೂರು ಘಟಕದಿಂದ ಬೈಕ್ ರ್ಯಾಲಿ. ನಡೆಯಲಿದೆ. ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಹುತಾತ್ಮರಾದ ಸೇನಾನಿಯ ಕುಟುಂಬ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಕುಟುಂಬ ಹಾಗೂ ಸೇನೆಯಲ್ಲಿ ನಿವೃತ್ತಿ ಹೊಂದಿದವರಿಗೆ ಸನ್ಮಾನ ಸಮಾರಂಭ ನಡೆಯಲಿದೆ ಎಂದು ನಮೋ ಬ್ರಿಗೇಡ್ ಹೆಬ್ರಿ ಘಟಕದ ಪ್ರಕಟಣೆ ತಿಳಿಸಿದೆ.
ಗೋವುಗಳಿಗೆ ಲಸಿಕೆ
ಕೋಟ: ಇಲ್ಲಿನ ಗ್ರಾಪಂ ವ್ಯಾಪ್ತಿಯ ಮಣೂರು ಪಡುಕರೆಯಲ್ಲಿನ ಗೋವುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಕೋಟ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಅರುಣ್ ಕುಮಾರ್ ಶೆಟ್ಟಿ ನೀಡಿದರು. ಈ ಸಂದರ್ಭದಲ್ಲಿ ಕೋಟ ಗ್ರಾಪಂ ಅಧ್ಯಕ್ಷ ಎಂ. ಶಿವಪೂಜಾರಿ, ಪಂಚಾಯಿತಿ ಸದಸ್ಯ ಜೈರಾಮ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಸುಭಾಶ್ ಖಾರ್ವಿ, ಕೃಷಿಕರಾದ ಭಾಸ್ಕರ್ ಶೆಟ್ಟಿ, ನರಸಿಂಹ ಪೂಜಾರಿ, ಸತೀಶ್ ಪೂಜಾರಿ, ರಾಜು ದೇವಾಡಿಗ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

