'ಪ್ಲೈಓವರ್ ನಿರ್ಮಿಸಿ, ಇಲ್ಲಾ ಪ್ರತಿಭಟನೆ ಎದುರಿಸಿ'
ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯಲ್ಲಿ ಉಡುಪಿಯ ಕರಾವಳಿ ಜಂಕ್ಷನ್ ಮತ್ತು ಬ್ರಹ್ಮಾವರ ಪೇಟೆಯಲ್ಲಿ ಫ್ಲೈಓವರ್ ನಿರ್ಮಿಸಬೇಕು ಎಂದು ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಆಗ್ರಹಿಸಿದ್ದಾರೆ.
ಬುಧವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್‌ಠಿಯಲ್ಲಿ ಮಾತನಾಡಿದ ಅವರು, ಈ ಫ್ಲೈಓವರ್ ನಿರ್ಮಾಣದ ಬಗ್ಗೆ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು 10 ದಿನಗಳೊಳಗೆ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಈ ಎರಡು ಪ್ರದೇಶದಲ್ಲಿ ಪ್ರಸ್ತುತ ನಿರ್ಮಿಸಲು ಉದ್ದೇಶಿಸಿರುವ ಅಂಡರ್ ಪಾಸ್ ಕಾಮಗಾರಿಗಳಿಗೆ ಜಿಲ್ಲಾ ಬಿಜೆಪಿ ಅವಕಾಶ ನೀಡದೇ ಭಾರಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾ.ಹೆ. 66ರ ಚತುಷ್ಪಥ ಯೋಜನೆ ಸಿದ್ಧವಾದಾಗ ಶಾಸಕರಾಗಿದ್ದ ತಮಗೆ ಹೆಜಮಾಡಿಯಿಂದ ಬೈಂದೂರುವರೆಗೆ ಒಟ್ಟು 5 ಫ್ಲೈಓವರ್ ನಿರ್ಮಾಣ ಮಾಡಲಾಗುವುದು ಎಂದು ವಿವರಿಸಲಾಗಿತ್ತು. ಆದರೆ, ಇದೀಗ ಈ ಫ್ಲೈಓವರ್‌ಗಳು ದುಬಾರಿಯಾಗುತ್ತವೆ ಎಂದು ಅವುಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಮತ್ತೇ ಈಗ ಕರಾವಳಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ಮತ್ತು ಬ್ರಹ್ಮಾವರದಲ್ಲಿ ಕ್ಯಾಟ್ಲ್ ಪಾಸ್ ನಿರ್ಮಾಣ ನಡೆಸುವುದಕ್ಕೆ ಸಿದ್ಧತೆಗಳನ್ನು ನಡೆಸಲಾಗಿದೆ. ಕರಾವಳಿ ಜಂಕ್ಷನ್ ಉಡುಪಿ ಮತ್ತು ಮಲ್ಪೆಯನ್ನು ಸೇರಿಸುವ ಸ್ಥಳವಾಗಿದ್ದು, ಇಲ್ಲಿ ಅಂಡರ್‌ಪಾಸ್ ನಿರ್ಮಿಸಿದರೆ ಮಲ್ಪೆಯಿಂದ ನೂರಾರು ಮೀನಿನ ಲಾರಿಗಳು, ಟೆಬ್ಮಾ ಶಿಪ್‌ಯಾರ್ಡ್‌ಗೆ ಹೋಗುವ ಭಾರಿ ಗಾತ್ರದ ಟ್ರಕ್‌ಗಳಿಗೆ ಭಾರಿ ತೊಂದರೆಯಾಗುತ್ತದೆ. ಆದ್ದರಿಂದ ಇಲ್ಲಿ ಅಂಡರ್ ಪಾಸ್ ಬದಲು ಫ್ಲೈ ಓವರ್ ನಿರ್ಮಿಸಬೇಕು ಎಂದರು.
ಅದೇ ರೀತಿ ಬ್ರಹ್ಮಾವರ ಪೇಟೆಯಲ್ಲಿ ಕ್ಯಾಟ್ಲ್ ಪಾಸ್ ಕೇವಲ ಪ್ರಾಣಿಗಳಿಗಷ್ಟೇ ಸಂಚಾರಕ್ಕೆ ಅನುಕೂಲವಾಗುವಂತೆ (8 ಅಡಿ ಅಗಲದ ದಾರಿ) ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ವಾಹನ ಸಂಚಾರಕ್ಕೆ ಅವಕಾಶ ಇಲ್ಲ. ಇದರಿಂದ ಬ್ರಹ್ಮಾವರದಲ್ಲಿ ರಾ.ಹೆ. ಇಕ್ಕೆಲಗಳಲ್ಲಿರುವ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಶಾಲೆ, ಕಾಲೇಜು ಮತ್ತು ನೂರಾರು ಅಂಗಡಿ ಹೊಟೇಲ್‌ಗಳಿವೆ. ರಾ.ಹೆ. ಅಗಲಗೊಂಡಾಗ ಅದನ್ನು ದಾಟುವುದಕ್ಕೆ ಬೈಪಾಸ್ ರಸ್ತೆ ಇಲ್ಲದೇ ಬ್ರಹ್ಮಾವರ ಪೇಟೆಯೇ ಇಬ್ಭಾಗವಾಗಲಿದೆ. ಎರಡೂ ಕಡೆಯ ಸಂಪರ್ಕ ಕಡಿಯಲಿದೆ. ರಸ್ತೆಯ ಒಂದು ಪಕ್ಕದಿಂದ ಇನ್ನೊಂದು ಪಕ್ಕಕ್ಕೆ ಹೋಗಬೇಕಾದರೆ ಕಿ.ಮೀ. ದೂರದಲ್ಲಿರುವ ಧರ್ಮಾವರಂವರೆಗೆ ಹೋಗಿ ಸುತ್ತು ಹಾಕಿ ಬರಬೇಕು. ಇದರಿಂದ ಜನರಿಗೆ, ವಾಹನಗಳಿಗೆ ಭಾರಿ ತೊಂದರೆಯಾಗಲಿದೆ. ಆದ್ದರಿಂದ ಕ್ಯಾಟ್ಲ್ ಪಾಸ್ ಬದಲಿಗೆ ಅಲ್ಲಿ ಕಡ್ಡಾಯವಾಗಿ ಫ್ಲೈ ಓವರ್ ನಿರ್ಮಿಸಬೇಕು ಎಂದರು.
ಈ ಬಗ್ಗೆ 10 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಬಿಜೆಪಿಯಿಂದ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕು, ಯಾವುದೇ ಕಾರಣಕ್ಕೂ ಈ 2 ಕಡೆಗಳಲ್ಲಿ ಜನರಿಗೆ ತೊಂದರೆಯಾಗುವ ಅಂಡರ್ ಪಾಸ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಯುವಮೋರ್ಚಾಧ್ಯಕ್ಷ ವಿಲಾಸ್ ನಾಯಕ್, ಬಿಜೆಪಿ ಗ್ರಾಮಾಂತರ ಮೋರ್ಚಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಮಾಜಿ ಅಧ್ಯಕ್ಷ ಹರಿಮಕ್ಕಿ ರತ್ನಾಕರ ಶೆಟ್ಟಿ, ಉಡುಪಿ ನಗರಾಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಸದಸ್ಯ ಹೆರ್ಗ ದಿನಕರ ಶೆಟ್ಟಿ ಇದ್ದರು.
ಆಸ್ಕರ್ ಅವರಿಂದ ದೊಡ್ಡ ನಿರೀಕ್ಷೆಯೇನೂ ಇಲ್ಲಾ, ಆದರೆ...
ಸುದ್ದಿಗೋಷ್ಠಿಯುದ್ದಕ್ಕೂ ಉಡುಪಿಯವರೇ ಆಗಿರುವ ಕೇಂದ್ರ ಭೂ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರನ್ನು ಗುರಿಯನ್ನಾಗಿಸಿದ ಮಾಜಿ ಶಾಸಕ ಭಟ್, ಆಸ್ಕರ್ ಅವರು ಇದುವರೆಗೆ ಅನೇಕ ಬಾರಿ ಉಡುಪಿಯ ಲೋಕಸಭಾ ಸದಸ್ಯ, ಕೇಂದ್ರ ಸರ್ಕಾರದಲ್ಲಿ ಅನೇಕ ಖಾತೆಗಳ ಮಂತ್ರಿಯಾಗಿದ್ದರೂ ಉಡುಪಿಗೆ ಏನೂ ಮಾಡಿಲ್ಲ. ಈಗಲೂ ಅವರಿಂದ ದೊಡ್ಡ ನಿರೀಕ್ಷೆಯೇನೂ ಇಲ್ಲ. ಆದರೆ, ಉಡುಪಿ ಮತ್ತು ಬ್ರಹ್ಮಾವರದಲ್ಲಿ ಫ್ಲೈಓವರ್ ನಿರ್ಮಿಸಿ ಜನರಿಗೆ ಅಷ್ಟಾದರೂ ಉಪಕಾರ ಮಾಡಲಿ, ತಮ್ಮದೇ ಭೂ ಸಾರಿಗೆ ಖಾತೆಗೆ ಸಂಬಂಧ ಪಟ್ಟ ವಿಷಯ ಇದಾಗಿರುವುದರಿಂದ ಅವರಿಗೆ ಇದು ಏನೂ ಕಷ್ಟದ ಕೆಲಸ ಅಲ್ಲ ಎಂದು ಭಟ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

