ಡಾ.ಎಂ.ಮೋಹನ್ ಆಳ್ವಗೆ ಕಾರಂತ ಹುಟ್ಟೂರು ಪ್ರಶಸ್ತಿ
ಉಡುಪಿ: ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯತಿ ವತಿಯಿಂದ ನೀಡಲಾಗುವ ಡಾ. ಕಾರಂತರ ಹುಟ್ಟೂರು ಪ್ರಶಸ್ತಿ- 2013ಕ್ಕೆ ನಾಡಿನ ಖ್ಯಾತ ಶಿಕ್ಷಣ ತಜ್ಞ, ಸಾಂಸ್ಕೃತಿಕ ಸಂಘಟಕ, ಮೂಡುಬಿದಿರೆ ಆಳ್ವಾಸ್ ಪ್ರತಿಷ್ಠಾನ ಅಧ್ಯಕ್ಷ ಮೋಹನ್ ಆಳ್ವ ಅವರನ್ನು ಆರಿಸಲಾಗಿದೆ.
ಪ್ರಶಸ್ತಿ ಪ್ರತಿಷ್ಠಾನ ಅಧ್ಯಕ್ಷ ಆನಂದ ಸಿ. ಕುಂದರ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ಪ್ರಕಟಿಸಿದರು. ತನ್ನೂರಲ್ಲಿ ಹುಟ್ಟಿದ ಶ್ರೇಷ್ಠ ವ್ಯಕ್ತಿಯ ಹೆಸರಿನಲ್ಲಿ ಪ್ರಶಸ್ತಿ ನೀಡುವ ದೇಶದ ಏಕೈಕ ಗ್ರಾಪಂ ಕೋಟತಟ್ಟು. ಇಲ್ಲಿ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಡಾ. ಕೋಟ ಶಿವರಾಮ ಕಾರಂತರ ಹೆಸರಿನಲ್ಲಿ 2005ರಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಇದುವರೆಗೆ ಲೋಕಾಯುಕ್ತ ವೆಂಕಟಾಚಲಯ್ಯ, ನಟಿ ಬಿ. ಜಯಶ್ರೀ, ನಿರ್ದೇಶಕ ಗಿರೀಶ್ ಕಾಸರವಳ್ಳಿ, ಪರಿಸರವಾದಿ ಸಾಲುಮರದ ತಿಮ್ಮಕ್ಕ ಮುಂತಾದ 8 ಮಂದಿಗೆ ನೀಡಲಾಗಿದೆ.
ಈ ಸಾಲಿನಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯು ಡಾ. ಮೋಹನ್ ಆಳ್ವ ಅವರನ್ನು ಆಯ್ಕೆ ಮಾಡಿದೆ ಎಂದು ಪ್ರಶಸ್ತಿ ಪ್ರತಿಷ್ಠಾನ ಅಧ್ಯಕ್ಷ ಆನಂದ ಸಿ. ಕುಂದರ್ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಶೋಭಾ, ಆಯ್ಕೆ ಸಮಿತಿ ಸದಸ್ಯ ವಿಠಲ ಗಾಂವ್ಕಾರ, ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಜಯರಾಮ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ಬಹುಮುಖಿ ಆಳ್ವ
ಡಾ. ಮೋಹನ್ ಆಳ್ವ ಎಂದಾಕ್ಷಣ ನೆನಪಾಗುವುದು ಅವರು ಪ್ರತಿವರ್ಷ ಸಂಘಟಿಸುವ ಆಳ್ವಾಸ್ ವಿರಾಸತ್ ಎಂಬ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಉತ್ಸವ. 1952ರಲ್ಲಿ ದ.ಕ. ಜಿಲ್ಲೆಯ ಮಿಜಾರು ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಅವರು, ವೈದ್ಯಕೀಯ ಶಿಕ್ಷಣ ಪಡೆದು ನಂತರ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜು ಸಹಿತ ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿದವರು. ಅವರು ಸ್ಥಾಪಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಡಿ 8500ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 1980ರಲ್ಲಿ ಆಕ್ಸ್ಫರ್ಡ್ ವಿವಿಯಿಂದ ಅತ್ಯುತ್ತಮ ಪ್ರತಿಭಾನ್ವಿತ ಯುವಕ ಪ್ರಶಸ್ತಿಯೊಂದಿಗೆ ಹತ್ತಾರು ಪ್ರಶಸ್ತಿಗಳನ್ನು ಪಡೆದಿರುವ ಡಾ. ಆಳ್ವ ಉತ್ತಮ ವಾಗ್ಮಿ, ನಟ, ನೃತ್ಯಪಟು, ಕಲಾವಿದ, ಕಲಾ ಪ್ರೋತ್ಸಾಹಕ, ಸಮಾಜಸೇವಕ, ಪ್ರಕೃತಿ ಪ್ರೇಮಿ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

