ತೆಂಕ ಎರ್ಮಾಳು: ಮೀನುಗಾರಿಕಾ ರಸ್ತೆ ದುರವಸ್ಥೆ
ಪಡುಬಿದ್ರಿ: ಇಲ್ಲಿನ ತೆಂಕಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುಪಿಸಿಎಲ್ ಉಷ್ಣವಿದ್ಯುತ್ ಸ್ಥಾವರದ ಪೈಪ್ಲೈನ್ ಬ್ರೇಕ್ ವಾಟರ್ ಸುತ್ತಮುತ್ತಲಿನ ಮೀನುಗಾರಿಕಾ ರಸ್ತೆಯು ಮಳೆಯಿಂದಾಗಿ ಸಂಪೂರ್ಣ ಹದಗೆಟ್ಟಿದ್ದು, ಜನರ- ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಈ ರಸ್ತೆಯ ದುರಸ್ತಿಯ ಬಗ್ಗೆ ಮೀನುಗಾರಿಕಾ ಇಲಾಖೆಯ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಯಪಿಸಿಎಲ್ ಬ್ರೇಕ್ ವಾಟರ್ನಿಂದಾಗಿ ಪರಿಸರದಲ್ಲಿ ಈ ಬಾರಿ ಎಂದೂ ಕಾಣದ ಕಡಲು ಕೊರೆತ ಸಂಭವಿಸಿದ್ದು, ಇಲ್ಲಿನ ನಿವಾಸಿಗಳ ನೂರಾರು ತೆಂಗಿನ ಮರಗಳು ಕಡಲೊಡಲನ್ನು ಸೇರಿದೆ. ಅಂತೆಯೇ ಹಲವಾರು ವಾಸದ ಮನೆಗಳೂ ಅಪಾಯಕ್ಕೆ ಸಿಲುಕಿವೆ, ಮೀನುಗಾರಿಕಾ ಇಲಾಖೆ ಸಮುದ್ರ ದಂಡೆಗೆ ಕಲ್ಲಗಳನ್ನೇನೂ ಹಾಕಿ ತಾತ್ಕಾಲಿಕವಾಗಿ ಕಡಲು ಕೊರೆತವನ್ನು ಶಮನಗೊಳಿಸಿದೆ. ಆದರೆ, ತೆಂಕ ಹಾಗೂ ಬಡಾ ಎರ್ಮಾಳನ್ನು ಸಂಪರ್ಕಿಸುವ ಮೀನುಗಾರಿಕಾ ರಸ್ತೆ ಸಂಪೂರ್ಣ ಕುಲಗೆಟ್ಟಿದ್ದು ಸ್ಥಳೀಯ ಜನರು ಪಡಬಾರದು ಪಾಡು ಪಡುತ್ತಿದ್ದಾರೆ.
ಈ ಪರಿಸರದಲ್ಲಿ ಸುಮಾರು 15 ಮನೆಗಳಿದ್ದು, ಅವುಗಳಲ್ಲಿ 4 ಮಂದಿ ತುಂಬು ಗರ್ಭಿಣಿಯರಿದ್ದು, ಯಾವುದೇ ಹೊತ್ತಿನಲ್ಲಿ ಅವರಿಗೆ ಹೆರಿಗೆ ನೋವು ಕಾಣಿಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸುವುದಕ್ಕೆ ಇದೊಂದು ರಸ್ತೆ ಅಪಾಯಕಾರಿಯಾಗಿದೆ. ಇಲ್ಲಿಯ ಮನೆಗಳಲ್ಲಿ ಯಾವುದೇ ವ್ಯಕ್ತಿ ಅಸೌಖ್ಯದಿಂದ ಬಳಲಿದರೂ, ಅವರನ್ನೂ ನಾಲ್ಕು ಜನರು ಎತ್ತಿಕೊಂಡು ಹೆದ್ದಾರಿ ತನಕ ಸಾಗಬೇಕಾದ ದಯನೀಯ ಬದುಕು ಇವರದ್ದಾಗಿದೆ. ಕಾರಣ ಈ ರಸ್ತೆಯಲ್ಲಿ ಆಟೋ ಅಥವಾ ಇತರ ಯಾವುದೇ ವಾಹನಗಳು ಬರುತ್ತಿಲ್ಲ.
ಈ ಬಗ್ಗೆ ತೆಂಕ ಗ್ರಾಮ ಪಂಚಾಯಿತಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರನ್ನು ಕೇಳಿದರೇ, ಈ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಆದರೆ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ರಸ್ತೆ ಇದು ಮೀನುಗಾರಿಕಾ ಇಲಾಖೆಯದ್ದಾಗಿದ್ದು, ಅವರೇ ಅದನ್ನು ದುರಸ್ತಿಗೊಳಿಸಬೇಕು. ಆದರೂ ನಾವು ಇದಕ್ಕೆ ಮಾನವೀಯತೆ ದೃಷ್ಟಿಯಿಂದ ರಸ್ತೆಗೆ ಕಲ್ಲಿನ ಹುಡಿ ಹಾಕಿದ್ದೇವೆ ಎನ್ನುತ್ತಾರೆ.
ಮೊದಲು ಡಾಂಬರು ಕೊಚ್ಚಿ ಹೋಗಿ ಮಣ್ಣಿನ ಗುಂಡಿ ರಸ್ತೆಯಲ್ಲಾದರೂ ನಡೆದುಕೊಂಡು ಹೋಗಬಹುದಿತ್ತು. ಈಗ ಗ್ರಾಮ ಪಂಚಾಯಿತಿನವರು ಕಲ್ಲಿನ ಹುಡಿ ತಂದು ಅಲ್ಲಲ್ಲಿ ರಾಶಿ ಹಾಕಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ನಡೆದುಕೊಂಡು ಹೋಗುವುದಕ್ಕೂ ಸಾಧ್ಯವಾಗುತ್ತಿಲ್ಲ. ಮಳೆ ಕಡಿಮೆಯಾಗುತ್ತಿರುವುದರಿಂದ ಮೀನುಗಾರಿಕಾ ಇಲಾಖೆ ತಕ್ಷಣ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡು, ಇಲ್ಲಿನ ಗರ್ಭಿಣಿ, ಅನಾರೋಗ್ಯ ಪೀಡಿತರಿಗಾದರೂ ಸಹಾಯ ಮಾಡಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

