ಉಡುಪಿ

ಮತ ಹಕ್ಕಿಗಾಗಿ ನಿರಶನ ಆರಂಭಿಸಿದ ವೃದ್ಧ ದಂಪತಿ

Published On :

ಮಣಿಪಾಲ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ, ಅಧಿಕಾರಿಗಳ ತಪ್ಪಿನಿಂದಾಗಿ ಮತದಾನ ಅವಕಾಶ ನಿರಾಕರಿಸಲ್ಪಟ್ಟಿರುವ ಇಲ್ಲಿನ ಹೆರ್ಗ ಗ್ರಾಮದ ಕೋಟೆಯಾರ್ ವೃದ್ಧ ದಂಪತಿ ಶುಕ್ರವಾರ ಉಡುಪಿ ಜಿಲ್ಲಾ ಚುನಾವಣಾಧಿಕಾರಿ (ಜಿಲ್ಲಾಧಿಕಾರಿ) ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿ ಡಾ. ಮುದ್ದು ಮೋಹನ್ ಕೋಟೆಯಾರ್ ದಂಪತಿ ಮನವೊಲಿಸಲು ಯತ್ನಿಸಿದರೂ, ತಮಗೆ ಮತದಾನದ ಹಕ್ಕು ನೀಡುವಂತೆ ದಂಪತಿ ಪಟ್ಟು ಹಿಡಿದಿದ್ದು, ಜಿಲ್ಲಾಧಿಕಾರಿ ಯತ್ನ ವಿಫಲವಾಗಿದೆ.
ಪ್ರಕರಣ ಹಿನ್ನೆಲೆ: ಅನೇಕ ವರ್ಷಗಳ ಕಾಲ ಮುಂಬೈಯಲ್ಲಿ ವಾಸವಾಗಿದ್ದ ಅಪ್ಪು ಗೋಪಾಲ ಕೋಟೆಯಾರ್ (67) ಮತ್ತು ಸುನಂದಾ ಗೋಪಾಲ ಕೋಟೆಯಾರ್ (62) ಕಳೆದ 10 ವರ್ಷಗಳಿಂದ ಉಡುಪಿ ತಾಲೂಕಿನ ಹೆರ್ಗ ಎಂಬಲ್ಲಿ ವಾಸವಾಗಿದ್ದಾರೆ. ಅವರು ಮುಂಬೈಯಲ್ಲಿ ಪ್ರತಿ ಚುನಾವಣೆಯಲ್ಲಿಯೂ ಮತದಾನ ಮಾಡಿದ್ದು, ಊರಿಗೆ ಬರುವಾಗ ಅಲ್ಲಿನ ಮತದಾರರ ಪಟ್ಟಿಯಿಂದ ತಮ್ಮ ಹೆಸರು ರದ್ದುಗೊಳಿಸಿದ್ದಾರೆ. ಆದರೆ, ಕಳೆದ 10 ವರ್ಷಗಳಿಂದ ನಡೆದ ಪ್ರತಿ ಚುನಾವಣೆ ಸಂದರ್ಭ ಉಡುಪಿ ಜಿಲ್ಲೆಯ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.
ಡಿಸಿ ಅಸಹಾಯಕತೆ: ಸತ್ಯಾಗ್ರಹನಿರತ ಸ್ಥಳಕ್ಕೆ ಬಂದ ಜಿಲ್ಲಾ ಚುನಾವಣಾಧಿಕಾರಿ ಡಾ. ಮುದ್ದುಮೋಹನ್, ತಪ್ಪು ಮಾಡಿದ ತಹಸೀಲ್ದಾರ್‌ಗೆ ಕಾರಣ ಕೇಳಿ ನೋಟಿಸ್ ನೀಡಿದ್ದೇನೆ. ತನಿಖೆ ನಡೆಸುವುದಕ್ಕೆ ಹೇಳಿದ್ದೇನೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುತ್ತೇನೆ. ರಾಜ್ಯ ಚುನಾವಣಾ ಆಯೋಗದ ಗಮನಕ್ಕೂ ವಿಷಯ ತರಲಾಗಿದೆ, ಅಭ್ಯರ್ಥಿಗಳ ನಾಮಪತ್ರ ಹಿಂದಕ್ಕೆ ಪಡೆಯುವ ದಿನ ಕೊನೆಗೊಂಡ ಮೇಲೆ ಮತದಾರರ ಪಟ್ಟಿಗೆ ಯಾರದ್ದೇ ಹೆಸರನ್ನು ಸೇರಿಸುವುದಕ್ಕೆ ಅವಕಾಶ ಇಲ್ಲ ಎಂದು ಚುನಾವಣಾ ಆಯೋಗ ಹೇಳಿದೆ. ಆದ್ದರಿಂದ ಈ ಬಾರಿ ನಿಮ್ಮ ಹೆಸರನ್ನು ಸೇರಿಸಲಿಕ್ಕಾಗುವುದಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದರು. ಆದರೆ, ದಂಪತಿ ಇದರಿಂದ ತೃಪ್ತರಾಗಲಿಲ್ಲ. ಸತ್ಯಾಗ್ರಹ ಮುಂದುವರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.