ಅತಿಸಾರಬೇಧಿ ನಿಯಂತ್ರಣ ಮಾಹಿತಿ
ಮಡಿಕೇರಿ: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಶಿಶು ಮರಣ ತಡೆಯುವ ನಿಟ್ಟಿನಲ್ಲಿ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ.ಆರ್. ಶ್ರೀರಂಗಪ್ಪ ತಿಳಿಸಿದ್ದಾರೆ.
ನಗರದ ಮಹದೇವಪೇಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಡೆದ ಅತಿಸಾರ ಬೇಧಿ ನಿಯಂತ್ರಣ ಬಗ್ಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀರಂಗಪ್ಪ ಮಾತನಾಡಿದರು.
ಐದು ವರ್ಷ ಒಳಗಿನ ಮಕ್ಕಳ ಸಾವಿಗೆ ಅತಿಸಾರ ಬೇಧಿ ರೋಗಗಳು ಪ್ರಮುಖ ಕಾರಣವಾಗಿದ್ದು ಈ ಬಗ್ಗೆ ವಿಶೇಷ ಗಮನಹರಿಸಬೇಕಿದೆ. ಬೇಸಿಗೆ ಮತ್ತು ಪೂರ್ವ ಮುಂಗಾರಿನ ತಿಂಗಳಲ್ಲಿ ಬೇಧಿರೋಗಗಳು ಅಧಿಕವಾಗಿದ್ದು ಅಪೌಷ್ಟಿಕತೆಯಿರುವ ಮತ್ತು 2 ವರ್ಷಗಳೊಳಗಿನ ಮಕ್ಕಳಲ್ಲಿ ಹೆಚ್ಚು ಸಂಭವಿಸುತ್ತವೆ ಎಂದು ಹೇಳಿದ ಶ್ರೀರಂಗಪ್ಪ, ಬೇಧಿ ಪ್ರಕರಣಗಳು ಪುನರಾವರ್ತನೆಯಾದಾಗ, ಚೆನ್ನಾಗಿರುವ ಮಕ್ಕಳಲ್ಲೂ ತೂಕ ಕ್ಷೀಣಿಸಿ, ಅಪೌಷ್ಟಿಕತೆ ಉಂಟಾಗುತ್ತದೆ. ಹೀಗಾಗಿ ಬೇಧಿಗೆ ಮತ್ತು ಅಪೌಷ್ಟಿಕತೆಗೆ ನಿಕಟ ಸಂಬಂಧವಿದ್ದು, ವಯಸ್ಸಿಗನುಗುಣವಾದ ಶಿಶು ಮತ್ತು ಎಳೆ ಮಕ್ಕಳ ಆಹಾರ ಪದ್ಧತಿಗಳನ್ನು ಅನುಸರಿಸಿ ಅಪೌಷ್ಟಿಕತೆ ನಿವಾರಿಸಲು ಸೂಕ್ತ ಮಾರ್ಗೋಪಾಯವಾಗಿದೆ ಎಂದು ಮಾಹಿತಿ ನೀಡಿದರು.
ಡಾ. ಪಾರ್ವತಿ ಮಾತನಾಡಿ, ಓ.ಆರ್.ಎಸ್ ಮತ್ತು ಜಿಂಕ್ಗಳನ್ನು, ಸೂಕ್ತ ಆಹಾರ ಪದಾರ್ಥಗಳನ್ನು ಶಿಶುವಿಗೆ ನೀಡುವುದರಿಂದ ಬೇಧಿಯಿಂದ ಉಂಟಾಗುವ ಸಾವುಗಳನ್ನು ತಪ್ಪಿಸಬಹುದು. ಶುದ್ಧ ಕುಡಿಯುವ ನೀರು, ಪರಿಸರ ನೈರ್ಮಲ್ಯ, ಎದೆ ಹಾಲುಣಿಸುವಿಕೆ ಸೂಕ್ತ ಆಹಾರ ಸೇವನೆ ಮತ್ತು ಸ್ವಚ್ಛ ಕೈತೊಳೆಯುವಿಕೆಯಿಂದ ಭೇದಿ ತಡೆಗಟ್ಟಬಹುದು ಎಂದರು.
ಅತಿಸಾರಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ, ಜುಲೈ 28ರಿಂದ 8ನೇ ಆಗಸ್ಟ್ವರೆಗೆ, ಮಕ್ಕಳಲ್ಲಿ ಅತಿಸಾರ ಬೇಧಿಯಿಂದ ಸಾವುಗಳನ್ನು ತಪ್ಪಿಸಲು ಮತ್ತು ಅಪೌಷ್ಟಿಕತೆ ಕಡಿಮೆ ಮಾಡಲು ಒಂದಷ್ಟು ಕಾರ್ಯಕಲ್ಪಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳುವ ಕೆಲಸವಾಗಿದೆ. ಜಾಗೃತಿ ಮೂಡಿಸುವ ಮತ್ತು ಪ್ರತಿಪಾದಿಸುವ ಕ್ರಿಯೆಗಳು, ಬೇಧಿಯ ಚಿಕಿತ್ಸೆ ಮತ್ತು ನಿರ್ವಹಣೆ, ಓ.ಆರ್.ಎಸ್ ಜಿಂಕ್ ಕಾರ್ನರ್ ಸ್ಥಾಪನೆ. ಆಶಾ ಕಾರ್ಯಕರ್ತೆಯರಿಂದ ಓ.ಆರ್.ಎಸ್. ಪೊಟ್ಟಣಗಳನ್ನು ಹಂಚುವುದು ಹಾಗೂ ಶಿಶು ಮತ್ತು ಎಳೆ ಮಕ್ಕಳ ಆಹಾರ ಪದ್ಧತಿಗಳನ್ನು ಪ್ರಚಾರಗೊಳಿಸುವುದು ಇವು ಮುಖ್ಯ ಉದ್ದೇಶವಾಗಿದೆ ಎಂದರು.
ನಗರಸಭಾ ಸದಸ್ಯೆ ಅನಿತಾ ಪೂವಯ್ಯ, ವೈದ್ಯಾಧಿಕಾರಿ ಡಾ. ಸುರೀಕ ಶೆಟ್ಟಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಣ್ಣೇಗೌಡ, ಡಾ. ಸತೀಶ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

