ಬಂಟ್ವಾಳ: ಇಲ್ಲಿನ ಪುರಸಭೆಯ ಮುಖ್ಯಾಧಿಕಾರಿಯಾಗಿ ಲೀನಾಬ್ರಿಟ್ಟೋ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಇಲ್ಲಿನ ಮುಖ್ಯಾಧಿಕಾರಿ ಆರ್.ವಿ. ಜತ್ತನ್ನ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಅಮಾನತುಗೊಂಡಿದ್ದರು. ಬಳಿಕ ನಿಯೋಜನೆ ಆಧಾರದಲ್ಲಿ ಮುಖ್ಯಾಧಿಕಾರಿ ಜವಾಬ್ದಾರಿ ನಿಭಾಯಿಸಿದ್ದ ಎ.ವಿ. ಗಣೇಶ್ ಇತ್ತೀಚೆಗೆ ನಿವೃತ್ತಗೊಂಡಿದ್ದರಿಂದ ಕಳೆದ ಎರಡೂವರೆ ತಿಂಗಳಿನಿಂದ ಇಲ್ಲಿನ ಮುಖ್ಯಾಧಿಕಾರಿ ಹುದ್ದೆ ಖಾಲಿ ಬಿದ್ದಿತ್ತು.
ಪ್ರಭಾರವಾಗಿ ಇಲ್ಲಿನ ಶಹರ್ ರೋಜ್‌ಗಾರ್ ಯೋಜನಾಧಿಕಾರಿ ಮತ್ತಡಿ ಮುಖ್ಯಾಧಿಕಾರಿ ಹುದ್ದೆ ವಹಿಸಿಕೊಂಡಿದ್ದರು. ಈ ನಡುವೆ ಇಲ್ಲಿನ ಮುಖ್ಯಾಧಿಕಾರಿ ಹುದ್ದೆಗೆ ಹಲವು ರಾಜಕೀಯ ಲಾಬಿಗಳು ತೆರೆಮರೆಯಲ್ಲೇ ನಡೆದು ಅಂತಿಮವಾಗಿ ಇದೀಗ ಲೀನಾ ಬ್ರಿಟ್ಟೋ ಮುಖ್ಯಾಧಿಕಾರಿ ಹುದ್ದೆಗೆ ನೇಮಕಗೊಂಡಿದ್ದಾರೆ.
ಮಹಿಳಾಧಿಪತ್ಯ
ಲೀನಾಬ್ರಿಟ್ಟೋ ಅಧಿಕಾರ ವಹಿಸುವ ಮೂಲಕ ಬಂಟ್ವಾಳ ಪುರಸಭೆಯಲ್ಲಿ ಮಹಿಳಾಧಿಪತ್ಯ ನಿರ್ಮಾಣವಾದಂತಾಗಿದೆ. ಈಗಾಗಲೇ ಇಲ್ಲಿನ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳನ್ನು ಮಹಿಳಾ ಮಣಿಗಳು ಅಲಂಕರಿಸುತ್ತಿದ್ದಾರೆ. ಅಲ್ಲದೆ ಪುರಸಭೆಯ ಈ ಪ್ರಮುಖ ಹುದ್ದೆಯಲ್ಲಿ ಮಹಿಳೆಯರೇ ರಾರಾಜಿಸುತ್ತಿರುವುದು ಮಾತ್ರವಲ್ಲ, ಕೋಮು ಸಾಮರಸ್ಯ ಮೆರೆದಿರುವುದು ಇಲ್ಲಿನ ವಿಶೇಷ. ಅಧ್ಯಕ್ಷೆ ವಸಂತಿ ಚಂದಪ್ಪ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದರೆ, ಉಪಾಧ್ಯಕ್ಷೆ ಯಾಸ್ಮಿನ್ ಅಹಮದ್ ಮುಸ್ಲಿಂ ಧರ್ಮವನ್ನು ಪ್ರತಿನಿಧಿಸುತ್ತಿದ್ದು, ಇದೀಗ ಮುಖ್ಯಾಧಿಕಾರಿ ಹುದ್ದೆಗೆ ನೇಮಕಗೊಂಡಿರುವ ಲೀನಾ ಬ್ರಿಟ್ಟೋ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಮೂಲಕ ಮೂರು ಧರ್ಮಗಳ ಮಹಿಳಾ ಪ್ರತಿನಿಧಿಗಳು ಇಲ್ಲಿನ ಪುರಸಭೆಯ ಪ್ರಮುಖ ಹುದ್ದೆಯನ್ನು ಅಲಂಕರಿಸಿದಂತಾಗಿದೆ.
Advertisement