ಉಡುಪಿ

ಎಳ್ಳಮಾವಾಸ್ಯೆ; ಲಕ್ಷಾಂತರ ಮಂದಿಯಿಂದ ಸಮುದ್ರ ಸ್ನಾನ

Published On :

ಉಡುಪಿ: ಜಿಲ್ಲಾದ್ಯಂತ ಸಮುದ್ರ ತೀರಗಳಲ್ಲಿ ಬುಧವಾರ ಎಳ್ಳಮಾವಾಸ್ಯೆ ಪ್ರಯುಕ್ತ ಸಮುದ್ರ ಸ್ನಾನ, ಗತಿಸಿದ ಹಿರಿಯರ ಸದ್ಗತಿಗೆ ಪಿಂಡಪ್ರದಾನ ನಡೆಯಿತು. ಇದರಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದರು.
 ಉಡುಪಿ ಜಿಲ್ಲೆಯ ಪಡುಬಿದ್ರಿ, ಕಾಪು, ಮಲ್ಪೆ, ಗಂಗೊಳ್ಳಿ, ಮರವಂತೆ ಸಮುದ್ರ ತೀರಗಳಲ್ಲಿ ಆಸ್ತಿಕ ಜನರು ಬುಧವಾರ ಮುಂಜಾನೆ ಚಳಿಯನ್ನೂ ಲೆಕ್ಕಿಸದೇ ಸಮುದ್ರಕ್ಕಿಳಿದು ಸ್ನಾನ ಮಾಡಿ, ಸ್ಥಳೀಯ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
 ಈ ಸ್ನಾನಕ್ಕೆ, ಮಾಡಿದ ಪಾಪಗಳನ್ನು ಕಳೆಯುವುದು ಧಾರ್ಮಿಕ ಕಾರಣವಾದರೆ, ಆ ನೆಪದಲ್ಲಿ, ಸಮುದ್ರದ ಉಪ್ಪು ನೀರಿಗೆ ಚರ್ಮ ರೋಗಾದಿಗಳನ್ನು ಕಳೆಯುವ ಔಷಧೀಯ ಗುಣ ಇರುವುದರಿಂದ ವರ್ಷಕ್ಕೊಮ್ಮೆಯಾದರೂ ಸಮುದ್ರ ಸ್ನಾನ ಮಾಡಿಸುವ ವೈಜ್ಞಾನಿಕ ಕಾರಣವೂ ಇದೆ.
ಉಡುಪಿ ಮಾತ್ರವಲ್ಲ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಂದ ಜನರು ಈ ಪವಿತ್ರ ಸಮುದ್ರ ಸ್ನಾನಕ್ಕಾಗಿ ಆಗಮಿಸುತ್ತಾರೆ. ದೂರದೂರಗಳಿಂದ ಜನರನ್ನು ಕರೆ ತರುವುದಕ್ಕೆ ಜಿಲ್ಲೆಯ ಖಾಸಗಿ ಬಸ್ಗಳ ಆಯೋಜನೆ ಕೂಡ ಇತ್ತು. ಮುಂಜಾನೆ ಇನ್ನೂ ಬೆಳಕಾಗುವ ಮೊದಲೇ ಸಮುದ್ರಸ್ನಾನ ಆರಂಭವಾತ್ತದೆ.
 ಗತಿಸಿದ ಹಿರಿಯರಿಗೆ ಪಿಂಡ ಪ್ರದಾನ, ತಿಲ ಹೋಮ ಇತ್ಯಾದಿಗಳನ್ನು ಕೂಡ ನಡೆಸುವ ಸಂಪ್ರದಾಯ ಕೂಡ ಇದ್ದು, ಮದುವೆಯಾಗದೇ ಮೃತಪಟ್ಟವರಿಗೆ ಇಲ್ಲಿ ಪ್ರೇತ ವಿವಾಹಗಳು ಕೂಡ ನಡೆಯುತ್ತವೆ.
ಬಿಗಿ ಬಂದೋಬಸ್ತ್: ಮುಖ್ಯವಾಗಿ ಲಕ್ಷಾಂತರ ಮಂದಿ ಭಾಗವಹಿಸುವ ಮಲ್ಪೆ ಸಮುದ್ರ ತೀರದಲ್ಲಿ ಜನರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ವಿಶೇಷ ವ್ಯವಸ್ಥೆಗಳನ್ನು ಮಾಡಿತ್ತು. ಸಮುದ್ರಕ್ಕೆ ಇಳಿಯವವರ ಮೇಲೆ ಕಣ್ಗಾವಲು ಇರಿಸುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
 ನುರಿತ ಈಜುಗಾರರ ತಂಡವನ್ನು ಕೂಡ ವ್ಯವಸ್ತೆ ಮಾಡಲಾಗಿತ್ತು, ಸಮುದ್ರದಲ್ಲಿ ಸ್ನಾನ ಮಾಡುವಾಗ ಸಂಭವಿಸಬಹುದಾದ ಮತ್ತು ಕಿಸೆಗಳ್ಳರ ಬಗ್ಗೆ ಧ್ವನಿವರ್ಧಕದಲ್ಲಿ ಬಾರಿಬಾರಿ ಎಚ್ಚರಿಸಲಾಗುತ್ತಿತ್ತು.
ಮಲ್ಪೆ ಅಭಿವೃದ್ಧಿ ಸಮಿತಿಯ ವತಿಯಿಂದ ಸ್ನಾನದ ನಂತರ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಪ್ರತ್ಯೇತ ತಾತ್ಕಾಲಿಕ ಕೋಣೆಗಳ ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಿದ್ದು ಶ್ಲಾಘನೆಗೆ ಕಾರಣವಾಯಿತು.
 ಮಲ್ಪೆ ಸಮುದ್ರ ತೀರದಲ್ಲಿ ಸ್ನಾನ ಮಾಡಿ ಅಲ್ಲಿಂದ ಸುಮಾರು ಅರ್ಧ ಕಿ.ಮೀ.ಗಳಷ್ಟು ದೂರದಲ್ಲಿರುವ ವಡಭಾಂಡೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವುದು ಮತ್ತು ಅಲ್ಲಿರುವ ಸಾಕ್ಷಿಕಲ್ಲನ್ನು ಮುಟ್ಟಿ ಪ್ರದಕ್ಷಿಣೆ ನಡೆಸುವುದು ಇಲ್ಲಿನ ಸಂಪ್ರದಾಯವಾಗಿದೆ. ಈ ಸಾಕ್ಷಿ ಕಲ್ಲು ಪವಿತ್ರ ಸ್ನಾನ ಮಾಡಿದ್ದಕ್ಕೆ ಸತ್ತ ಮೇಲೆ ಸಾಕ್ಷಿ ಹೇಳಿ ಪಾಪಗಳನ್ನು ಕಡಿಮೆಗೊಳಿಸುತ್ತದೆ ಎನ್ನುವ ನಂಬಿಕೆ ಇದೆ.
 ಸುಮಾರು 18 ವರ್ಷಗಳ ಹಿಂದೆ ಹೊಸವರ್ಷದ ಮೊದಲ ದಿನವೇ ಈ ಎಳ್ಳಮವಾಸ್ಯೆ ಬಂದಿತ್ತು. ಆ ವರ್ಷ ಅನೇಕ ಮಂದಿ ಭಕ್ತರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕೂಡ ನಡೆದಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.