ಕುಸಿದ ಮೋರಿ ಸಂಚಾರಕ್ಕೆ ಸಂಚಕಾರ
ಬಂಟ್ವಾಳ: ಮಡಂತ್ಯಾರು- ಕಕ್ಕೆಪದವು ಸಂಪರ್ಕ ರಸ್ತೆಯಲ್ಲಿ ಅತಿ ತೂಕದ ಘನ ವಾಹನಗಳ ಸಂಚಾರದಿಂದಾಗಿ ಇಡೀ ರಸ್ತೆ ಹದಗೆಟ್ಟಿದ್ದು, ಪಾರೆಂಕಿ ಗ್ರಾಮದಲ್ಲಿ ಮೋರಿಯೊಂದು ಕುಸಿದು ಅಪಾಯಕಾರಿ ಸನ್ನಿವೇಶ ನಿರ್ಮಾಣಗೊಂಡಿದೆ. ಪೆದ್ಯಾರು ಎಂಬಲ್ಲಿ ಮೋರಿ ಕುಸಿದಿದ್ದು, ವಾಹನ ಚಾಲಕರು ಆತಂಕದಿಂದ ಸಂಚರಿಸುವಂತಾಗಿದೆ. ಇಲ್ಲಿನ ಅನೇಕ ಕಲ್ಲುಕ್ವಾರಿಗಳಿಗೆ ಸೇರಿದ ಘನ ವಾಹನಗಳಿಂದಾಗಿ ರಸ್ತೆ ಈ ದುಃಸ್ಥಿತಿಗೆ ಇಳಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಲ್ಲು ಸಾಗಾಟದ ದೊಡ್ಡ ಲಾರಿಯೊಂದು ಮೋರಿ ಮೇಲೆ ಸಂಚರಿಸುವಾಗ ವಾಹನಕ್ಕೆ ಸೈಡ್ ಕೊಡುವ ಭರದಲ್ಲಿ ರಸ್ತೆಯ ತೀರ ಅಂಚಿಗೆ ತೆರಳಿದ್ದು, ಮೋರಿ ಮಣ್ಣು ಸಹಿತ ಲಾರಿ ಕಂದಕ್ಕೆ ಉರುಳಿತ್ತು. ಇದೀಗ ಈ ಪ್ರದೇಶದಲ್ಲಿ ದೊಡ್ಡ ಕಂದಕವೇ ನಿರ್ಮಾಣವಾಗಿದ್ದು ಅಪಾಯಕಾರಿಯಾಗಿದೆ. ಸೋಮವಾರ ಬೆಳ್ತಂಗಡಿ ತಹಸೀಲ್ದಾರ್ ಪರಿಶೀಲನೆ ನಡೆಸಿದರು. ಅಪಾಯಕಾರಿ ಸ್ಥಿತಿಯನ್ನು ಅರಿತಿರುವ ಪೊಲೀಸರು ಈ ಕಂದಕದ ಸುತ್ತ ಬ್ಯಾನರ್ ಹಾಗೂ ಟೇಪ್ಗಳನ್ನು ಅಳವಡಿಸಿದ್ದಾರೆ. ಘನ ವಾಹನಗಳಿಂದ ರಸ್ತೆ ಹಾಳಾಗುವುದನ್ನು ತಡೆಗಟ್ಟಬೇಕು ಎಂದು ಮಡಂತ್ಯಾರು ಗ್ರಾ.ಪಂ. ಸದಸ್ಯ ದಿನೇಶ್ ಒತ್ತಾಯಿಸಿದ್ದಾರೆ. ತಪ್ಪಿದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಛಾವಣಿ ಸಂಪೂರ್ಣ ಕುಸಿತ
ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆಯೊಂದರ ಛಾವಣಿ ಸಂಪೂರ್ಣ ಕುಸಿದು ಬಿದ್ದ ಘಟನೆ ವಿಟ್ಲ ಸಮೀಪದ ಉಕ್ಕುಡ ದರ್ಬೆ ಎಂಬಲ್ಲಿ ಮಂಗಳವಾರ ಸಂಭವಿಸಿದೆ. ಉಕ್ಕುಡ ನೆಬಿಸಾ ಎಂಬವರಿಗೆ ಸೇರಿದ ಹೆಂಚಿನ ಮನೆ ಮಳೆಗೆ ಶಿಥಿಲಗೊಂಡಿದ್ದು, ಘಟನೆ ವೇಳೆ ನೆಬಿಸಾ ಅವರ ತಾಯಿ ಹಾಗೂ ಪುತ್ರಿ ಮನೆಯಲ್ಲಿದ್ದರು. ಆದರೆ ಪವಾಡಸದೃಶವಾಗಿ ಪಾರಾಗಿದ್ದಾರೆ. ನೆಬಿಸಾ, ಪತಿ ಬದ್ರುದ್ದೀನ್ ವಿಟ್ಲ ಪೇಟೆಗೆ ತೆರಳಿದ್ದರು. ಮೊದಲೇ ಬಡತನದಲ್ಲಿದ್ದ ಇವರಿಗೆ ಇದರಿಂದ ಮತ್ತಷ್ಟು ಆಘಾತವಾಗಿದೆ. ರು. 50 ಸಾವಿರ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

