ಸಂಪಾದಕೀಯ

ನವೆಂಬರ್- ಡಿಸೆಂಬರ್ ಲೋಕಸಭೆ ಚುನಾವಣೆ ವಿವಾದ

Published On :

ಸಂಸತ್ತಿನ ಬಜೆಟ್ ಅಧಿವೇಶನದ ಮೊದಲ ಕಂತು ಮುಗಿದು, ಎರಡನೇ ಕಂತು ಆರಂಭವಾಗುವ ಮುನ್ನ ದೆಹಲಿ ಹಾಗೂ ಕೆಲವು ದೊಡ್ಡ ರಾಜಕೀಯವಾಗಿ ಪ್ರಬಲವಾದ ರಾಜ್ಯಗಳ ರಾಜಧಾನಿಗಳಲ್ಲಿ ಚರ್ಚೆಗೆ ಗ್ರಾಸ ಒದಗಿಸಿರುವುದು ಲೋಕಸಭೆಗೆ ಅವಧಿಗೆ ಮುನ್ನ ಚುನಾವಣೆ ನಡೆಯುವ ಸಂಭವ.
 ಕರ್ನಾಟಕದಲ್ಲಿ ವಿಧಾನ ಸಭೆಯ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವುದರಿಂದ ಇಲ್ಲಿ ಆ ಬಿಸಿ ಇಲ್ಲ. ಆದರೆ ದೆಹಲಿ, ಲಖನೌ, ಪಟನಾ, ಹೈದರಾಬಾದ್, ಚೆನ್ನೈಗಳಲ್ಲಿ ಲೋಕಸಭೆಗೆ ಚುನಾವಣೆ ಬೇಗ ನಡೆಯಬಹುದಾದ ವಿಚಾರವೇ ರಾಜಕೀಯ ವಲಯಗಳನ್ನು ಕಾಡಿರುವುದು.
 ಈ ವಿವಾದ ಆರಂಭವಾಗಿದ್ದೇ ತಮಿಳುನಾಡಿನ ಡಿಎಂಕೆ ಆಳುವ ಕೂಟದಿಂದ ಹೊರಬಿದ್ದು, ತನ್ನ ಮಂತ್ರಿಗಳನ್ನು ಹಿಂದಕ್ಕೆ ಪಡೆದು, ಸಂಯುಕ್ತ ಪ್ರಗತಿಪರ ಕೂಟ ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ಕೊಡುವುದಿಲ್ಲವೆಂದು ಪ್ರಕಟಿಸಿದಾಗಲೇ. ಆ ಕ್ಷಣದಲ್ಲಿ ಸರ್ಕಾರಕ್ಕೆ ಧೈರ್ಯ ತುಂಬಿದ ಸಮಾಜವಾದಿ ಪಾರ್ಟಿಯ ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಅನಂತರದ ದಿನಗಳಲ್ಲಿ ಸರ್ಕಾರದ ಕುತ್ತಿಗೆ ಪಟ್ಟಿಯನ್ನು ಹಿಡಿಯುವ ಅವಕಾಶವನ್ನು ಸುಮ್ಮನೆ ಕೈಬಿಡಲು ಸಿದ್ಧವಿರಲಿಲ್ಲ. ಹಲವಾರು ಬೇಡಿಕೆಗಳನ್ನು ಕೇಂದ್ರದ ಮುಂದಿಟ್ಟಿವೆ.
 ಮಮತಾ ಬ್ಯಾನರ್ಜಿ ಅವರು ಕೂಟದಿಂದ ಹೊರಬಿದ್ದು, ಈಗ ಸರ್ಕಾರದ ವಿರೋಧಿಯಂತೆಯೇ ವರ್ತಿಸಿದರೂ ಸದ್ಯದಲ್ಲಿ ಚುನಾವಣೆ ಬೇಕೆಂದು ಹೇಳುತ್ತಿಲ್ಲ. ಇನ್ನಿತರ ಪಕ್ಷಗಳಲ್ಲಿ ಸಾಕಷ್ಟು ಗೊಂದಲವಿದೆ.
 ವಿತ್ತ ಮಂತ್ರಿ ಚಿದಂಬರಮ್ ಅವರು ಬಿಹಾರದ ಸಂಯುಕ್ತ ಜನತಾ ದಳದ ನಾಯಕ ನಿತೀಶ್ ಕುಮಾರ್ ಅವರಿಗೆ ಆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಹಾಗೂ ಹಣದ ಸೌಲಭ್ಯದ ನೆರವನ್ನು ನೀಡುವ ಭರವಸೆಯನ್ನು ನೀಡಿದ್ದರೂ, ಅದಕ್ಕೆ ಕಾಯಿದೆಯ ಸ್ವರೂಪ ಸಿಗುವವರೆಗೂ ನಿತೀಶ್ ಕುಮಾರ್ ನಿಲವು ಅಸ್ಪಷ್ಟವೇ.
 ಈ ಹಿನ್ನೆಲೆಯಲ್ಲಿ ಹಲವು ವಿದೇಶಗಳ ಪ್ರವಾಸವನ್ನು ಮುಗಿಸಿಕೊಂಡು ದೆಹಲಿಗೆ ಹಿಂತಿರುಗಿರುವ ವಿತ್ತಮಂತ್ರಿ ಚಿದಂಬರಮ್, ಅವರು ದೆಹಲಿಯ ಶನಿವಾರದ ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ವಲಯದ ವಾರ್ಷಿಕ ಗುರಿಗಳನ್ನೆಲ್ಲ ಮುಟ್ಟುವ ಭರವಸೆಯನ್ನು ನೀಡುವ ಜತೆಯಲ್ಲೇ ಹಲವು ವಿವಾದಗ್ರಸ್ತ ವಿತ್ತೀಯ ಸುಧಾರಣೆ ಕಾಯಿದೆಗಳನ್ನು ಸಂಸತ್ತಿನಲ್ಲಿ ಮಂಡಿಸುವ ಮಾತನ್ನು ಆಡಿ, ಇಷ್ಟೆಲ್ಲವನ್ನು ಕೇಳಿದ ಮೇಲೂ ಈಗಲೂ ಲೋಕಸಭೆ ಚುನಾವಣೆ 2014ರ ಮೇ ಗೆ ಮುಂಚೆ ನಡೆಯುವ ಸಂಭವದ ಸುದ್ದಿಯನ್ನು ನಂಬುತ್ತೀರಾ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದ್ದೂ ಆಗಿದೆ.
 ಚಿದಂಬರಮ್ ಅವರಿಗೆ ಬೇಕಾಗಿರಲಿ, ಬೇಡವಾಗಿರಲಿ, ಮಾಧ್ಯಮ ಪ್ರಪಂಚದ ಅನೇಕ ನಾಯಕರು ಅವರನ್ನು ಪ್ರಧಾನಿ ಸ್ಥಾನದ ಅಭ್ಯರ್ಥಿಗಳಲ್ಲಿ ಒಬ್ಬರೆಂದು ಬಣ್ಣಿಸಿದ್ದು, ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿದ್ದು ಆಗಿದೆ. ಪ್ರಧಾನಿ ಮನಮೋಹನ ಸಿಂಗ್ ಅವರೂ ಮೂರನೆಯ ಅವಧಿಯ ವಿಚಾರದಲ್ಲಿ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆಯೇ ಮಾತಾಡಿದ್ದಾರೆ. ರಾಹುಲ್ ಗಾಂಧಿ- ನರೇಂದ್ರ ಮೋದಿ ಅವರಿಬ್ಬರೂ ಉದ್ಯಮ ಪತಿಗಳ ಪ್ರಾತಿನಿಧಿಕ ಸಂಸ್ಥೆಯಾದ ಸಿಐಐನ ಸರ್ವಸದಸ್ಯರ ಸಭೆಯಲ್ಲಿ ಮಾತಾಡಿದ್ದನ್ನು ಮಾಧ್ಯಮ ಪ್ರಪಂಚ, ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಗಳೆಂದು ಭಾವಿಸಲಾಗಿರುವ ಇವರಿಬ್ಬರ ಭಾಷಣಗಳನ್ನು 2014ರ ಲೋಕಸಭೆ ಚುನಾವಣೆಯ ಪ್ರಣಾಳಿಕೆಗಳೇ ಎನ್ನುವಂತೆ ಭಾವಿಸಿ, ವರದಿ ಮಾಡಿ ಅದೇ ರೀತಿಯ ವಿಶ್ಲೇಷಣೆ, ಅನಿಸಿಕೆ, ಅಭಿಪ್ರಾಯಗಳನ್ನು ಪ್ರಕಟಿಸಿದ್ದಾಗಿದೆ. ಉತ್ತರ ಭಾರತದ ಹಲವು ಪತ್ರಿಕೆಗಳ ಶನಿವಾರದ ಸಂಚಿಕೆಯ ತುಂಬಾ ಇರುವುದು ಪ್ರತ್ಯಕ್ಷವಾಗಿ ರಾಹುಲ್ ಗಾಂಧಿ, ಪರೋಕ್ಷವಾಗಿ ನರೇಂದ್ರ ಮೋದಿ ಅವರ ಮಾತುಗಳೇ.
 ಈ ಹಿನ್ನೆಲೆಯಲ್ಲಿ ಈಗ ತಾನೇ ಬಿಜೆಪಿಯಿಂದ ಸಿಡಿದೆದ್ದು ನಿಂತು, ಕೆಜೆಪಿಯನ್ನು ಸ್ಥಾಪಿಸಿಕೊಂಡು, ಕರ್ನಾಟಕದಲ್ಲಿ ಬಿಜೆಪಿಯ ಪ್ರಥಮ ವಿರೋಧಿಯ ಸ್ಥಾನದಲ್ಲಿ ನಿಂತಿರುವ ಯಡಿಯೂರಪ್ಪ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ಒಕ್ಕೂಟದ ರಚನೆಗೆ ಪ್ರಯತ್ನಿಸುವುದಾಗಿ ಪ್ರಕಟಿಸಿದ್ದು ಒಂದು ರೀತಿಯಲ್ಲಿ ಸಾಮಯಿಕವೇ.  ಆದರೆ ಹಿಂದೆಯೂ ಇಂತಹ ಪ್ರಾದೇಶಿಕ ಪಕ್ಷಗಳ ರಾಷ್ಟ್ರೀಯ ಒಕ್ಕೂಟದ ರಚನೆಗೆ ಕರ್ನಾಟಕದಲ್ಲೇ ಪ್ರಯತ್ನ ನಡೆದಿತ್ತು ಎನ್ನುವುದನ್ನು ಯಡಿಯೂರಪ್ಪ ಮರೆತಂತಿದೆ. ಮೂರು ದಶಕಗಳ ಹಿಂದೆಯೇ ಬಿಜೆಪಿಯಿಂದ ಹೊರಬಿದ್ದು ಕನ್ನಡ ದೇಶ ಪಕ್ಷವನ್ನು ಸ್ಥಾಪಿಸಿದ್ದ ಎ.ಕೆ. ಸುಬ್ಬಯ್ಯ, ಅನಂತರ ಎರಡು ದಶಕಗಳ ಹಿಂದೆ ದೇವೇಗೌಡರು ಪ್ರಧಾನಿಯಾಗಿ, ರಾಮಕೃಷ್ಣ ಹೆಗಡೆ ಅವರನ್ನು ಜನತಾ ದಳದಿಂದ ಹೊರಗೆ ಹಾಕಿದಾಗ ಲೋಕಶಕ್ತಿ ಎನ್ನುವ ಪಕ್ಷವನ್ನು ಪ್ರಾರಂಭಿಸಿದ್ದ ಹೆಗಡೆ, ತಂತ್ರಗಾರಿಕೆಯ ಮೂಲಕ ಜನತಾ ಪಕ್ಷದ ಹೆಸರು, ಧ್ವಜ ಹಾಗೂ ಚುನಾವಣೆ ಸಂಕೇತವನ್ನು ಪಡೆದುಕೊಂಡು ತಮ್ಮ ಜೇಬಿನಲ್ಲಿಟ್ಟುಕೊಂಡಿರುವ ಡಾ. ಸುಬ್ರಹ್ಮಣ್ಯನ್ ಸ್ವಾಮಿ, ಕೃಷಿಕರ ಪ್ರಾದೇಶಿಕ ಪಕ್ಷಗಳನ್ನು ರೂಪಿಸಿಕೊಂಡಿದ್ದ ಮಹೇಂದ್ರ ಸಿಂಗ್ ಟಿಕಾಯತ್ (ಉತ್ತರ ಪ್ರದೇಶ), ಶರದ್ ಜೋಷಿ (ಮಹಾರಾಷ್ಟ್ರ) ಪ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಅವರೆಲ್ಲರೂ ಇಂತಹ ಪ್ರಾದೇಶಿಕ ಪಕ್ಷಗಳ ರಾಷ್ಟ್ರೀಯ ಒಕ್ಕೂಟಗಳ ರಚನೆಗೆ ಪ್ರಯತ್ನಿಸಿ ಕೈ ಸುಟ್ಟುಕೊಂಡವರೇ.
 ಪ್ರಾದೇಶಿಕ ಪಕ್ಷಗಳ ಅಸ್ತಿತ್ವವೇ ಪ್ರಾದೇಶಿಕ ಹಿತ ರಕ್ಷಣೆ. ಸಾಮಾನ್ಯವಾಗಿ ಇವಕ್ಕೆ ಜನಶಕ್ತಿಯ ಬುನಾದಿಯಾಗುವುದು ಜಾತಿಯೇ. ಕೆಲವು ಅಪವಾದಗಳಿರಬಹುದು, ಅಷ್ಟೇ. ಕರ್ನಾಟಕದ ಯಡಿಯೂರಪ್ಪ ಅವರು 2014ರ ಮೇ ಲೋಕಸಭೆಗೆ 2013ರ ಮೇ ತಿಂಗಳಲ್ಲಿ ಹೊಸ ಒಕ್ಕೂಟ ರಚನೆಯ ಪ್ರಯತ್ನ ನಡೆಸುವುದು ಮತ್ತೊಂದು ರಾಜಕೀಯ ಪ್ರಯತ್ನವಾಗಬಹುದಷ್ಟೇ. ಆ ಪ್ರಯತ್ನ ಹಿಂದಿನ ಪ್ರಯತ್ನಗಳಿಗಿಂತ ಯಾವ ರೀತಿಯಲ್ಲಿ ಭಿನ್ನ ಎನ್ನುವುದರ ವಿವರಗಳನ್ನು ಯಡಿಯೂರಪ್ಪ ಈ ಜೂನ್‌ನಲ್ಲಿ ಪ್ರಕಟಿಸಿದರೆ ಮುಂದಿನ ಹೆಜ್ಜೆ ಸಾಧ್ಯ. ಇಲ್ಲದಿದ್ದರೆ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.