ಸಂಪಾದಕೀಯ

ಹೊಸ ರಾಜ್ಯಗಳಿಗೆ ಬೇಡಿಕೆ ರಾಜಕಾರಣದ ವೈಫಲ್ಯ

Published On :

ಕೇಂದ್ರದಲ್ಲಿ ಆಳುವ ಕೂಟದ ನಾಯಕ ಪಕ್ಷವಾದ ಕಾಂಗ್ರೆಸ್ ಪ್ರತ್ಯೇಕ ತೆಲಂಗಾಣ ರಾಜ್ಯ ನಿರ್ಮಾಣದ ಅವಶ್ಯಕತೆಯನ್ನು ಕಳೆದ ಶತಮಾನದಲ್ಲೇ ಮನಗಂಡಿತ್ತು. ಆದರೆ ಅದನ್ನು ಪೂರೈಸಲು ಪಕ್ಷ ಈಗ ಆರಿಸಿರುವ ಸಮಯ ಹಾಗೂ ರೀತಿ ಮೆಚ್ಚುವಂತಹದ್ದಲ್ಲ. ಲೋಕಸಭೆ ಚುನಾವಣೆಗೆ ಇನ್ನು ಎಂಟೊಂಬತ್ತು ತಿಂಗಳಿವೆ ಎನ್ನುವ ಸಂಧಿಗ್ಧ ಸಮಯದಲ್ಲಿ ಇಂತಹ ವಿವಾದಗ್ರಸ್ತ, ಜನರ ಭಾವನೆಗಳನ್ನು ಕೆರಳಿಸಬಲ್ಲ, ವಿಷಯವನ್ನು ದಿಢೀರನೆ ಪ್ರಸ್ತಾಪಿಸಿದ್ದರಿಂದಲೇ ತಣ್ಣಗಾಗಿದ್ದ ಇತರ ಕೆಲವು ಹೊಸ ರಾಜ್ಯಗಳ ಬೇಡಿಕೆ ಮತ್ತೆ ತಲೆ ಎತ್ತುವುದಕ್ಕೆ ಆಹ್ವಾನ ನೀಡಿದಂತೆ ಆಗಿದ್ದು.
ಪ್ರತ್ಯೇಕ ತೆಲಂಗಾಣದ ರಚನೆಯನ್ನು ಆಂಧ್ರದ ರಾಯಲ ಸೀಮೆ- ಕರಾವಳಿ ಪ್ರದೇಶದ ರಾಜಕಾರಣಿಗಳನ್ನು ಬಿಟ್ಟು ಬೇರೆ ಯಾರೂ ವಿರೋಧಿಸುವುದಿಲ್ಲ. ಆದರೆ ಅದೇ ಮಾತನ್ನು ಗೂರ್ಖಾಲ್ಯಾಂಡ್, ಪ್ರತ್ಯೇಕ ಜಮ್ಮು, ವಿದರ್ಭ, ಬೋಡೋಲ್ಯಾಂಡ್‌ಗಳಂತಹ ರಾಜ್ಯಗಳ ನಿರ್ಮಾಣದ ಬೇಡಿಕೆಯ ವಿಚಾರದಲ್ಲಿ ಹೇಳುವಂತಿಲ್ಲ. ದೇಶದ ಎಲ್ಲ ದೊಡ್ಡ ರಾಜ್ಯಗಳಲ್ಲೂ, ಒಂದಲ್ಲ ಒಂದು ಪ್ರದೇಶದಲ್ಲಿ, ಒಂದಲ್ಲ ಒಂದು ಕಾರಣಕ್ಕೆ ಪ್ರತ್ಯೇಕತೆಯ ಕೂಗು ಆಗಾಗ ಕೇಳಿಬರುವುದು ಆಯಾ ರಾಜ್ಯಗಳಲ್ಲಿನ ಆಳುವ ಪಕ್ಷಗಳು ರಾಜಕೀಯ ಅಥವಾ ಇತರ ಕಾರಣಗಳಿಗೆ ಯಾವುದಾದರೊಂದು ಭಾಗವನ್ನು ಕಡೆಗಾಣಿಸುತ್ತಿರುವ ದೂರಿನ ಆಧಾರದ ಮೇಲೇ. ತೆಲಂಗಾಣದ ವಿಚಾರದಲ್ಲೂ ಅಂತಹ ಟೀಕೆಯೂ ಕೇಳಿ ಬಂದಿತ್ತು. ಇಂತಹ ದೂರಿಗೆ ಅವಕಾಶ ಕೊಡುವ ಕೆಟ್ಟ ರಾಜಕಾರಣ ಖಂಡನೆಗೆ ಅರ್ಹ. ಎಲ್ಲ ರಾಜ್ಯಗಳಲ್ಲೂ ಜಾತಿಗಳ ಮೇಲಾಟ ಇದ್ದಿದ್ದೇ. ಕೆಲವು ರಾಜ್ಯಗಳಲ್ಲಿ ಒಂದು ಭಾಗದಲ್ಲಿ ಒಂದು ನಿರ್ದಿಷ್ಟ ಜಾತಿಯ ಸಂಖ್ಯಾಬಲ ಆಧರಿತ ರಾಜಕೀಯ ಶಕ್ತಿ ಹೆಚ್ಚಾಗಿದೆ ಎನ್ನುವ ಕಾರಣಕ್ಕೇ ಹೊಸ ರಾಜ್ಯವನ್ನೇ ರಚಿಸುವುದಕ್ಕೆ ಆಗುತ್ತೇನು?
ನಿಜ. ಹೊಸ ರಾಜ್ಯಗಳ ರಚನೆಯ ಬೇಡಿಕೆಯ ಹಿಂದೆ, ಕೆಲವು ನಿರ್ದಿಷ್ಟ ಜನಾಂಗಗಳಿಗೆ ಅವಕಾಶಗಳಿಂದ ವಂಚನೆಯಾಗಿರುವುದೇ ಕಾರಣವಿರಬಹುದು. ಆ ಪರಿಸ್ಥಿತಿ ಈಗಲೂ ಇದ್ದರೆ, ಇಷ್ಟು ದಿನ ಅದನ್ನು ಇರಲು ಬಿಟ್ಟಿದ್ದೇ ತಪ್ಪು. ಆ ರಾಜ್ಯಗಳನ್ನು ಆಳಿದ ರಾಜಕಾರಣಿಗಳನ್ನೇ ಇಂತಹ ಪರಿಸ್ಥಿತಿಗೆ ದೂರಬೇಕು. ಇನ್ನು ಕೇಂದ್ರ ಸರ್ಕಾರ ಉದ್ದೇಶಿತ ತೆಲಂಗಾಣದ ಸ್ವರೂಪವನ್ನೇ ಜನರಿಗೆ ತಿಳಿಸಿಲ್ಲ. ಅನಂತಪುರ- ಕರ್ನೂಲು ಜಿಲ್ಲೆಗಳು ತೆಲಂಗಾಣಕ್ಕೆ ಹೋಗುವುದು ಆ ಜನರಿಗೂ ಬೇಕಾಗಿಲ್ಲ. ತೆಲಂಗಾಣದ ಜನರಿಗೂ ಅದರ ಅಗತ್ಯವಿಲ್ಲ. ಈ ಪ್ರಸ್ತಾಪವನ್ನು ಮುಂದೆ ಇಟ್ಟಿದ್ದರ ಹಿಂದೆ ಏನೋ ರಾಜಕೀಯವಿದೆ. ಪ್ರಾಯಶಃ ಜಾತಿ ರಾಜಕೀಯವಿರಬಹುದು.
ಆಂಧ್ರದಲ್ಲಿ ಈಗ ಭುಗಿಲೆದ್ದಿರುವ ಕೇಂದ್ರ ಸರ್ಕಾರದ ವಿರುದ್ಧದ ಆಕ್ರೋಶದ ಆಂದೋಲನ ಕಾಲಕ್ರಮದಲ್ಲಿ ತಣ್ಣಗಾಗಲೇಬೇಕು. ಆಂದೋಲನವನ್ನು ದೀರ್ಘ ಕಾಲ ನಡೆಸುವುದಕ್ಕೆ ಬೇಕಾದ ಸಾಮೂಹಿಕ ಪ್ರಚೋದನೆ ಇಲ್ಲ. ಇದು ಆವೇಶದ ಆಂದೋಲನವಷ್ಟೇ. ಆಂಧ್ರದಲ್ಲಿ ಸಂಭಾವಿತ ರಾಜಕಾರಣಿಗಳು ಭವಿಷ್ಯದತ್ತ ಗಮನ ಹರಿಸಿ ನೂತನ ರಾಜಧಾನಿಯ ಆಯ್ಕೆಯ ಪ್ರಸ್ತಾಪ ಮಾಡುತ್ತಿದ್ದಾರೆ. 1937ರಲ್ಲಿ ರಾಯಲಸೀಮೆ- ಕರಾವಳಿ ಜಿಲ್ಲೆಗಳ ಮುಖಂಡರ ಸಭೆಯಲ್ಲಿ ಆಂಧ್ರದ ರಾಜಧಾನಿ ರಾಯಲ ಸೀಮೆಯಲ್ಲೇ ಇರಬೇಕೆನ್ನುವ ಒಪ್ಪಂದವಾಗಿತ್ತು. ಆಗ ಹೈದರಾಬಾದ್‌ನ ಪ್ರಶ್ನೆ ಇರಲಿಲ್ಲ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದ  ಪುನಾರಚನೆಯ ಅವಶ್ಯಕತೆಯನ್ನು ಆಂಧ್ರ- ತೆಲಂಗಾಣಗಳ ನಡುವೆ ಸಮಸ್ಯೆಗೆ ಗಂಟು ಹಾಕುವುದರಲ್ಲಿ ಅರ್ಥವಿಲ್ಲ. 72 ಜಿಲ್ಲೆಗಳಿಂದ 80 ಲೋಕಸಭೆ ಸದಸ್ಯರನ್ನು ಆರಿಸುವ ರಾಜ್ಯದ ಸ್ವರೂಪದ ಬದಲಾವಣೆ ಲಘುವಾದ ವಿಚಾರವಲ್ಲ. ಅಲ್ಲೂ ಜಾತಿ ರಾಜಕೀಯದ ನೆರಳು ಬಿದ್ದಿರುವಂತಿದೆ. ಈಗ ನಮ್ಮ ರಾಜಕಾರಣಿಗಳು, ಇತರ ಸಾರ್ವಜನಿಕ ಮುಖಂಡರು ಪ್ರಬುದ್ಧತೆಯನ್ನು ಪ್ರದರ್ಶಿಸಬೇಕಾಗಿದೆ. ಜಗಳಕ್ಕೆ ಕಾರಣ ಹುಡುಕುವುದು ಸುಲಭ. ಅದನ್ನು ಶಮನಗೊಳಿಸುವುದು ಕಷ್ಟ ಎನ್ನುವುದನ್ನು ಮರೆಯಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.