ಬಾಪೂಜಿಗೆ ಕಣ್ಣೀರು ತರಿಸಿದ ಪ್ರಸಂಗ
ಠಕ್ಕರ್ ಬಾಪಾ ಗಾಂಧೀಜಿಯವರ ಹರಿಜನ್ ಸೇವಕ್ ಸಮಾಜದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ಭಿಲ್ ಸೇವಾ ಸಂಘದ ಸ್ಥಾಪಕರಾಗಿ ಆದಿವಾಸಿ ಜನರ ಉದ್ಧಾರಕ್ಕೆ ಕಂಕಣತೊಟ್ಟ ಮಹಾನ್ ದೇಶಭಕ್ತ. ಒಮ್ಮೆ ಠಕ್ಕರ್ ಬಾಪಾ ಮತ್ತು ಮಹಾತ್ಮ ಗಾಂಧೀಜಿ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಒರಿಸ್ಸಾಕ್ಕೆ ಹೋಗಿದ್ದರು. ಅವರನ್ನು ಸ್ವಾತಂತ್ರ್ಯ ಚಳುವಳಿಗೆ ಪ್ರೇರೇಪಿಸುವುದು, ಹೋರಾಟಕ್ಕಾಗಿ ಹಣ ಸಂಗ್ರಹ, ಅಹಿಂಸೆ ಮತ್ತು ಸತ್ಯದ ಕಡೆಗೆ ಪ್ರಚೋದಿಸುವುದು ಇವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಒಮ್ಮೆ ಅವರು ಹಳ್ಳಿಯೊಂದರಲ್ಲಿ ಸೇರಿದ ಗ್ರಾಮಸ್ಥರಿಗೆ ಸ್ವರಾಜ್ಯ ಕಲ್ಪನೆಯ ಬಗ್ಗೆ ತಿಳುವಳಿಕೆ ಮಾಡಿಕೊಟ್ಟು ಚಳವಳಿಗೆ ಉದಾರ ದಾನ ಮಾಡಬೇಕೆಂದು ಕರೆ ನೀಡಿದರು. ಅಲ್ಲಿ ಸೇರಿದ್ದ ಬಹುತೇಕ ಮಂದಿ ಆದಿವಾಸಿಗಳಾಗಿದ್ದು, ತುಂಬಾ ಬಡವರಾಗಿದ್ದರು. ಆದರೂ ಅವರು ತಮ್ಮಲ್ಲಿದ್ದ ಹಣ, ಒಡವೆಗಳನ್ನು ನೀಡಿ ತಮ್ಮ ರಾಷ್ಟ್ರಭಕ್ತಿಯನ್ನು ತೋರ್ಪಡಿಸಿದರು. ಆ ಸಭೆಯಲ್ಲಿದ್ದ ಒಬ್ಬ ಆದಿವಾಸಿಗೆ ತಾನೂ ಸಹ ಏನಾದರೂ ನೀಡಬೇಕೆಂಬ ಉತ್ಕಟ ಆಸೆ ಮೂಡಿಬಂತು. ಆದರೇನು? ಎಲುಬಿನ ಗೂಡಾಗಿದ್ದ ಅವನ ಬಳಿಯಲ್ಲಿ ಕೊಡಲೇನೂ ಇರಲಿಲ್ಲ. ಮನೆಗೆ ಓಡಿದವನೇ ಮನೆಯನ್ನೆಲ್ಲಾ ಶೋಧಿಸಿದಾಗ ಎಂದೋ ದೇವರ ಮುಂದೆ ಇಟ್ಟಿದ್ದ ಒಂದು ತಾಮ್ರದ ಕಾಸು ಕಣ್ಣಿಗೆ ಬಿತ್ತು. ಅದನ್ನು ಅಮೂಲ್ಯ ವಸ್ತುವೇನೋ ಎಂಬಂತೆ ಜೋಪಾನವಾಗಿ ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡು ವಾಪಸ್ಸು ಬಂದಾಗ ಆಗಲೇ ಗಾಂಧೀಜಿ ಅಲ್ಲಿಯೇ ಸಮೀಪದಲ್ಲಿದ್ದ ರೈಲು ನಿಲ್ದಾಣಕ್ಕೆ ತೆರಳಿದ್ದರು. ಆ ಆದಿವಾಸಿ ಓಡುತ್ತಾ ರೈಲು ನಿಲ್ದಾಣ ತಲುಪಿದಾಗ ಅಲ್ಲಿ ಗಾಂಧೀಜಿ ಒಂದು ಕಲ್ಲು ಬೆಂಚಿನ ಮೇಲೆ ರೈಲಿಗಾಗಿ ಕಾದು ಕುಳಿತಿದ್ದರು. ತುಂಡು ಪಂಚೆ, ಕೃಷಕಾಯದ ಆ ಆದಿವಾಸಿ ಬಂದವನೇ ನೇರವಾಗಿ ತನ್ನ ಸೊಂಟದಲ್ಲಿ ಸಿಕ್ಕಿಸಿಟ್ಟುಕೊಂಡಿದ್ದ ಒಂದು ಕಾಸನ್ನು ತೆಗೆದು ಬಾಪೂ ಅವರ ಪಾದದ ಮೇಲಿಟ್ಟು ಭಕ್ತಿಯಿಂದ ನಮಸ್ಕರಿಸಿ, ಒಪ್ಪಿಸಿಕೊಳ್ಳುವಂತೆ ವಿನಂತಿಸಿದ. ಈ ಕಾಸು ಏಕೆ ಎಂದು ಗಾಂಧೀಜಿ ಕೇಳಿದರು. ಆಗ ಆತ, 'ದೇವರ ದರ್ಶನಕ್ಕೆ ಹೋಗುವಾಗ ಬರಿಕೈಲಿ ಹೋಗಲಾದೀತೆ? ನನ್ನ ಬಳಿ ಈ ಕಾಸು ಹೊರತು ಬೇರೇನೂ ಇಲ್ಲ. ದಯಮಾಡಿ ಇದನ್ನು ತೆಗೆದುಕೊಂಡು ಹೋಗಿ, ಅವಶ್ಯಕತೆ ಇರುವ ನನಗಿಂತ ಬಡವನಾದ ಇನ್ನೊಬ್ಬನಿಗೆ ನೀಡಿರಿ' ಎಂದು ವಿನೀತವಾಗಿ ಹೇಳಿ ನಿಂತುಬಿಟ್ಟ. ಅದನ್ನು ಕೇಳಿ ಗಾಂಧೀಜಿಯವರ ಕಣ್ಣಾಲಿಗಳು ತುಂಬಿಬಂದವು. ಆ ಕಾಸನ್ನು ತೆಗೆದುಕೊಂಡು ಕಣ್ಣಿಗೊತ್ತಿಕೊಂಡು ತಮ್ಮ ಜೊತೆಯಲ್ಲಿ ಬಂದಿದ್ದ ಸಮಾಜ ಸೇವಕ ಗೋಪಬಂಧುವಿಗೆ ಹೇಳಿದರು, 'ನೋಡು ಇದು ನಿಜವಾದ ರಾಷ್ಟ್ರ ಭಕ್ತಿ ಮತ್ತು ಸಮಾಜ ಸೇವೆ.ಉಣ್ಣಲು ಗತಿಯಿಲ್ಲದ ಒಬ್ಬ ಬಡ ಆದಿವಾಸಿ ಬಂದು ತನಗಿಂತ ಬಡವನಿಗೆ ಸಹಾಯ ಮಾಡಲು ಬಯಸುತ್ತಾನೆ ಅಂದರೆ, ಭಾರತದ ಆತ್ಮವಿರುವುದು ಇಲ್ಲಿಯೇ.'
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

