ಆನಂದಿಬಾಯಿ ಮತ್ತು ಮತಾಂತರ
19ನೇ ಶತಮಾನದಲ್ಲಿ ಭಾರತದಲ್ಲಿ ಸ್ತ್ರೀಯರು ಉನ್ನತ ವ್ಯಾಸಂಗ ಮಾಡುವ ವಿಚಾರ ಕನಸಿನ ಮಾತಾಗಿತ್ತು. ಆದರೆ ಪತಿಯ ಪ್ರೋತ್ಸಾಹದಿಂದ ಅಮೆರಿಕಕ್ಕೆ ಹೋಗಿ ವ್ಯೆದ್ಯಕೀಯ ಶಿಕ್ಷಣ ಪಡೆದ ಮೊದಲ ಮಹಿಳಾ ವೈದ್ಯೆ ಎಂಬ ಅಭಿದಾನಕ್ಕೆ ಪಾತ್ರರಾದ ಡಾ.ಆನಂದಿಬಾಯಿ ಜೋಷಿಯವರ ಸಾಹಸ ಮರೆಯಲಾಗದಂತಹುದು.
ತಮ್ಮ ಒಂಭತ್ತನೇ ವಯಸ್ಸಿನಲ್ಲಿ ಆನಂದಿಬಾಯಿ ತಮಗಿಂತ ಇಪ್ಪತ್ತು ವರ್ಷ ಹೆಚ್ಚು ವಯಸ್ಸಾದ ಗೋಪಾಲರಾವ್ ಎಂಬ ಅಂಚೆ ಕಾರಕೂನನನ್ನು ವಿವಾಹವಾದರು. ಸ್ತ್ರೀ ಶಿಕ್ಷಣದ ಬಗ್ಗೆ ಅತೀವ ಕಾಳಜಿಯಿದ್ದ ಗೋಪಾಲರಾವ್ ಆನಂದಿಗೆ ಶಿಕ್ಷಣ ಕೊಡಿಸುವ ವ್ಯವಸ್ಥೆ ಮಾಡಿದರು. ಬೆಳಿಗ್ಗಿನಿಂದ ರಾತ್ರಿಯವರೆಗೂ ಮರಾಠಿ, ಸಂಸ್ಕೃತ ಮುಂತಾದ ಪುಸ್ತಕಗಳನ್ನು ಓದಿ ಅದರಲ್ಲಿರುವ ಅಂಶವನ್ನು ತಿಳಿಸಬೇಕಾಗಿತ್ತು. ಇಲ್ಲವಾದರೆ ಉಗ್ರ ಶಿಕ್ಷೆ ಅನುಭವಿಸಬೇಕಿತ್ತು. ಅದೆಷ್ಟು ಬಾರಿ ಮೈಮುರಿಯುವಂತೆ ಒದೆತಿಂದರೋ ಗೊತ್ತಿಲ್ಲ. 'ಇನ್ನೂ ಎಷ್ಟು ಓದಬೇಕು?' ಎಂದು ಕೇಳಿದಾಗ ಗೋಪಾಲರಾವ್ ಆನಂದಿಯನ್ನು ಸಮುದ್ರ ತೀರಕ್ಕೆ ಕರೆದೊಯ್ದು 'ಸಮುದ್ರದ ಇನ್ನೊಂದು ತೀರ ಹೇಗೆ ಕಾಣುವುದಿಲ್ಲವೋ, ವಿದ್ಯೆಗೂ ತೀರವಿಲ್ಲ' ಎಂದು ಮನದಟ್ಟು ಮಾಡಿಕೊಟ್ಟರು. ಗಣಿತ, ವಿಜ್ಞಾನ, ಇಂಗ್ಲಿಷ್, ಸಂಸ್ಕೃತ ಶಿಕ್ಷಣ ಪ್ರಾಂಭವಾಯಿತು. ಕೊಲ್ಹಾಪುರದ ಮಿಷನ್ ಶಾಲೆಗೆ ಸೇರಿದ ಕೆಲವೇ ದಿನಗಳಲ್ಲಿ ಕೊಲ್ಲಾಪುರ ಸಂಸ್ಥಾನದವರು ಆನಂದಿ ಕ್ರಿಶ್ಚಿಯನ್ ಮಿಷನರಿ ಶಾಲೆಗೆ ಸೇರಿರುವುದನ್ನು ವಿರೋಧಿಸಿದಾಗ ಅವರು ಆ ಶಾಲೆಯನ್ನು ತೊರೆಯಬೇಕಾಯಿತು. ಆದರೂ ನಿರಾಶರಾಗದ ಗೋಪಾಲರಾವ್ ಅಮೆರಿಕಾಕ್ಕೆ ಕಳಿಸಿ ಓದಿಸುವ ಬಗ್ಗೆ ಪಾದ್ರಿ ಕೊಹೆನ್ ಬಳಿ ಪ್ರಸ್ತಾಪಿಸಿದರು. ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದರೆ ಮಾತ್ರ ಅವರ ಆಸೆ ಕೈಗೂಡಬಹುದು ಎಂದು ಪಾದ್ರಿ ಅಭಿಪ್ರಾಯಪಟ್ಟರು. ಕೊನೆಗೆ ಭುಜ್‌ನ ಒಂದು ಶಾಲೆಯಲ್ಲಿ ಓದು ಮುಂದುವರೆಸಲು ನಿರ್ಧರಿಸಿದರು. ಅಲ್ಲಿದ್ದಾಗ ಅಮೆರಿಕದ ಥಿಮೊಡೊಸಿಯಾ ಕಾರ್ಪೆಂಟರ್ ಎಂಬಾಕೆ ಆನಂದಿಯ ಬಗ್ಗೆ ತಿಳಿದು ಅವಳಿಗೊಂದು ಪತ್ರ ಬರೆದು ಅಮೆರಿಕದಲ್ಲಿ ಓದಿಸಲು ನೆರವು ನೀಡುವುದಾಗಿ ತಿಳಿಸಿದಳು.
ನಂತರ ಕಲ್ಕತ್ತಕ್ಕೆ ವರ್ಗ ಮಾಡಿಸಿಕೊಂಡ ಗೋಪಾಲರಾವ್ ಅಲ್ಲಿಯೂ ಕಿರಿಕುಳದಿಂದಾಗಿ ನೆಮ್ಮದಿ ಪಡೆಯಲಿಲ್ಲ. ಕೊನೆಗೆ ಕಾರ್ಪೆಂಟರ್ ಅವರ ಸಲಹೆಯ ಮೇರೆಗೆ ಅಮೆರಿಕಾಕ್ಕೆ ತಲುಪಿದ ಆನಂದಿ ಪೆನ್ಸಿಲ್ವೇನಿಯಾ ಮಹಿಳಾ ಕಾಲೇಜು ಸೇರಿದಳು. ಅಲ್ಲಿ ಪ್ರಸೂತಿ ಶಾಸ್ತ್ರವನ್ನು ಕಲಿತು ಭಾರತಕ್ಕೆ (1886ರಲ್ಲಿ) ಬಂದಾಗ ಆಕೆಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಸ್ವತಃ ಕೊಲ್ಹಾಪುರದ ಮಹಾರಾಜರು ಆಕೆಯನ್ನು ಆಲ್ಬರ್ಟ್ ಎಡ್ವರ್ಡ್ ಆಸ್ಪತ್ರೆಗೆ ಮಹಿಳಾ ವೈದ್ಯೆಯನ್ನಾಗಿ ನೇಮಕ ಮಾಡಿದರು. ಆದರೆ ವಿಧಿಯಾಟ ಬೇರೆಯೇ ಇತ್ತು. ಆಕೆ ಮರುವರ್ಷವೇ, ಅಂದರೆ ತನ್ನ ಇಪ್ಪತ್ತೊಂದನೆಯ ವಯಸ್ಸಿಗೇ ಮೃತಪಟ್ಟಳು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

