ಅಮೂಲ್ಯವಾದ ಹಣ ಪೋಲುಮಾಡಬಾರದು
ಮಾಡಿದ ಸಂಪಾದನೆಯನ್ನು ಶೇಖರಣೆ ಮಾಡುವುದು ತಮ್ಮ ಸ್ವಂತಕ್ಕಾಗಿ ಮಾತ್ರ ಎಂದು ಪರಿಗಣಿಸದೆ ಅದನ್ನು ಸಮಾಜದ ಉನ್ನತಿಗಾಗಿ ವಿನಿಯೋಗಿಸಬೇಕು ಎಂದು ಭಾವಿಸಿದವರಲ್ಲಿ ಡಾ.ಪ್ರಫುಲ್ಲ ಚಂದ್ರರಾಯ್ ಸಹ ಒಬ್ಬರು. ಅವಿಭಾಜ್ಯ ಬಂಗಾಳದ, ಈಗ ಬಂಗ್ಲಾದೇಶಕ್ಕೆ ಸೇರಿದ ಖುಲ್ನಾ ಜಿಲ್ಲೆಯ ಒಂದು ಹಳ್ಳಿಯಲ್ಲಿ ಹುಟ್ಟಿದ ಪ್ರಫುಲ್ಲಚಂದ್ರರು ಎಡಿನ್‌ಬರೋ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪಡೆದು ಭಾರತಕ್ಕೆ ಹಿಂದಿರುಗಿ ಬಂದು ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಾಸಾಯನ ಶಾಸ್ತ್ರದ ಸಹ ಪ್ರಾಧ್ಯಾಪಕರಾಗಿ ಸೇರಿಕೊಂಡರು. ನಂತರ ಕಲ್ಕತ್ತ ವಿಶ್ವ ವಿದ್ಯಾನಿಲಯದ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ 1921 ರಲ್ಲಿ ನಿವೃತ್ತರಾದರು.
ಆದರೂ ನಂತರ ಕೆಲಕಾಲ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದುಂಟು. ಅವರಿಗೆ ರಾಸಾಯನ ಶಾಸ್ತ್ರದ ಬಗ್ಗೆ ಅಪಾರ ಪ್ರೀತಿ ಮತ್ತು ಒಲವು. ಹೀಗಾಗಿ ತಾವು ವೇತನವಾಗಿ ಪಡೆದು ಉಳಿತಾಯ ಮಾಡಿದ ಹಣವನ್ನೆಲ್ಲಾ ಕಲ್ಕತ್ತ ವಿಶ್ವವಿದ್ಯಾನಿಲಯಕ್ಕೆ ದಾನ ಮಾಡಿ ರಾಸಾಯನ ಶಾಸ್ತ್ರ ವಿಭಾಗದ ಅಭಿವೃದ್ಧಿಗೆ ವಿನಿಯೋಗಿಸಬೇಕೆಂದು ವಿನಂತಿಸಿದರು. ಕೊನೆಯವರೆಗೂ ಅವಿವಾಹಿತರಾಗಿಯೇ ಉಳಿದ ರಾಯ್ ಅವರದು ಸರಳ ಜೀವನವಾಗಿತ್ತು.
ಒಮ್ಮೆ ಅವರ ಶಿಷ್ಯನೊಬ್ಬನಿಗೆ ಬಾಳೆಹಣ್ಣು ತರಲು ಹೇಳಿದರು. ಅವನು ಅರ್ಧ ಆಣೆಗೆ ಒಂದರಂತೆ ಸಿಗುವ ಬಾಳೆಹಣ್ಣಿನ ಬದಲು ಒಂದಾಣೆಗೊಂದು ಸಿಗುವ ದುಬಾರಿ ಬಾಳೆಹಣ್ಣನ್ನು ತಂದುಕೊಟ್ಟ. ಅಮೂಲ್ಯವಾದ ಹಣವನ್ನು ಹೀಗೆ ಪೋಲು ಮಾಡಿದ್ದಕ್ಕೆ ಅವನ ಮೇಲೆ ರೇಗಿದರು ರಾಯ್. ಅದೇ ಸಮಯಕ್ಕೆ ಸಾಮಾಜಿಕ ಕಾರ್ಯಕರ್ತರೊಬ್ಬರು ಬಂದು ತಮ್ಮ ಅನಾಥಾಶ್ರಮಕ್ಕೆ ಸಹಾಯ ಮಾಡಬೇಕೆಂದು ಕೋರಿದರು. ಬಾಳೆ ಹಣ್ಣಿಗೆ ಅರ್ಧಾಣೆ ಜಾಸ್ತಿ ಕೊಟ್ಟಿದ್ದಕ್ಕೇ ರಂಪಮಾಡಿದ ಪ್ರಫುಲ್ಲಚಂದ್ರರು ಇವರಿಗೇನು ಕೊಟ್ಟಾರು ಎಂದು ಶಿಷ್ಯ ಯೋಚಿಸುತ್ತಿರುವಾಗಲೇ ತಮ್ಮ ಬ್ಯಾಂಕಿನ ಪಾಸ್ ಪುಸ್ತಕ ತರಿಸಿ ಅದರಲ್ಲಿ ಮೂರೂವರೆ ಸಾವಿರದಷ್ಟು ಹಣ ಇರುವುದನ್ನು ಕಂಡು ಅದರಲ್ಲಿ ಮೂರುಸಾವಿರ ರುಪಾಯಿಗಳಿಗೆ ಒಂದು ಚೆಕ್ ಬರೆದು ಕೊಟ್ಟರು. ಇದು ಅವರ ಶಿಷ್ಯನಿಗೆ ಅಚ್ಚರಿ ನೀಡುವ ಸಂಗತಿಯಾಗಿತ್ತು.
ಜೀವಿಸಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ವೆಚ್ಚ ಮಾಡುತ್ತಿದ್ದ, ಮತ್ತು ಅರ್ಧ ಆಣೆ ಜಾಸ್ತಿ ನೀಡಿದ್ದಕ್ಕೆ ನಿಂದಿಸಿದ ಪ್ರಫುಲ್ಲ ಚಂದ್ರರಾಯ್ ಅವರ ವರ್ತನೆ ಅವನಿಗೆ ದಿಗ್ಭ್ರಮೆ ಹಿಡಿಸಿತ್ತು. ಆಗ ಆ ಶಿಷ್ಯ ಕುತೂಹಲ ತಡೆಯಲಾರದೆ ಇಂತಹ ದಿಢೀರ್ ಬದಲಾವಣೆ ಹೇಗೆ ಸಾಧ್ಯ ಎಂದು ರಾಯ್ ಅವರನ್ನು ಪ್ರಶ್ನಿಸಿದ. ಆಗ ಅವರು ಅವನ ಮುಖವನ್ನೊಮ್ಮೆ ದೃಷ್ಟಿಸಿ ನೋಡಿ ಹೇಳಿದ್ದು ಒಂದೇ ಮಾತು. ಅದು ಎಲ್ಲರಿಗೂ ಅನ್ವಯವಾಗುವಂತಹುದು. ಅವರು ಹೇಳಿದರು, 'ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ.' ಇಂತಹ ಮನೋಧರ್ಮ ಇಂದು ಎಷ್ಟು ಜನಕ್ಕಿದೆ?
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

