ವಿದೇಶೀಯನಾದರೇನು ಮಾನವೀಯ ಭಾವನೆ ಒಂದೇ ಅಲ್ಲವೆ?
ಇದೊಂದು ಮನಮಿಡಿಯುವ ಪ್ರಸಂಗ. ಡಾಮಿನಿಕ್ ಲೀಪಿಯರ್ ಎಂಬ ಫ್ರೆಂಚ್ ಸಾಹಿತಿಯೊಬ್ಬನ ಜೀವನಗಾಥೆ. ತನ್ನ ಹದಿನೇಳನೆಯ ವಯಸ್ಸಿನಲ್ಲಿ ಕೇವಲ 30 ಡಾಲರ್ ಹಣ ಇಟ್ಟುಕೊಂಡು ಪ್ಯಾರಿಸ್ ತೊರೆದು ಅಮೆರಿಕಕ್ಕೆ ಬಂದ ಲೀಪಿಯರ್ ಹಡಗೊಂದರಲ್ಲಿ ಕೆಲಸಮಾಡಿ ಸುಮಾರು 30 ಸಾವಿರ ಮೈಲಿಗಳಷ್ಟು ತಿರುಗಾಡಿದ. ನಂತರ ತನ್ನ ಅನುಭವಗಳನ್ನು 'ಎ ಡಾಲರ್ ಫಾರ್ ಥೌಸಂಡ್ ಮೈಲ್ಸ್' ಎಂಬ ಪುಸ್ತಕ ಬರೆದು ದಾಖಲಿಸಿದ. ಅದು ಅದ್ಭುತ ಯಶಸ್ಸು ಗಳಿಸಿತಲ್ಲದೆ ಪುಸ್ತಕದ ಲಕ್ಷಾಂತರ ಪ್ರತಿಗಳು ಖರ್ಚಾಗಿ ಹಣ ಮತ್ತು ಹೆಸರನ್ನು ತಂದುಕೊಟ್ಟಿತು. ನಂತರ ಈಸ್ ಪ್ಯಾರಿಸ್ ಬರ್ನಿಂಗ್, ಫ್ರೀಡಂ ಅಟ್ ಮಿಡ್ನೈಟ್, ಓ ಜೆರೂಸಲಮ್ ಹೀಗೆ ಹಲವಾರು ಕೃತಿಗಳು ಮಾರಾಟದಲ್ಲಿ ದಾಖಲೆ ಮಾಡಿದವು. ಅವನಲ್ಲಿ ಸಾಕಷ್ಟು ಹಣ ಸಂಗ್ರಹವಾದ ಮೇಲೆ ಅದನ್ನು ಸಮಾಜಸೇವೆಗೆ ಮೀಸಲಿಡಬೇಕೆಂಬ ಆಕಾಂಕ್ಷೆ ಮೊಳಕೆಯೊಡೆಯಿತು. ಅದಕ್ಕೆ ಪೂರಕವಾದ ಘಟನೆಯೊಂದು ಅವನಿಗೆ ಪ್ರೇರೇಪಣೆ ನೀಡಿತು. ಒಮ್ಮೆ ಅವನು ಕಲ್ಕತ್ತಾಗೆ ಬಂದು ಅಲ್ಲಿಯ ಕೊಳೆಗೇರಿಯಲ್ಲಿ ಸುತ್ತುತ್ತಿರುವಾಗ ಒಬ್ಬ ಬಾಲಕಿ ಹಸಿವಿನಿಂದ ಕಂಗಾಲಾಗಿದ್ದುದು ಗಮನಕ್ಕೆ ಬಂತು. ಅವಳಿಗೆ ಬಿಸ್ಕೇಟೊಂದನ್ನು ನೀಡಿದಾಗ ಆ ಬಾಲಕಿ ಸಂತೋಷದಿಂದಲೇ ಸ್ವೀಕರಿಸಿದಳು. ಅಲ್ಲಿಯೇ ಇದ್ದ ಬಡಕಲು ನಾಯಿಯೊಂದು ಆ ಬಿಸ್ಕತ್ತನ್ನು ನೋಡಿ ಬಾಲ ಅಲ್ಲಾಡಿಸಿತು. ಆ ಬಾಲಕಿ ತನ್ನ ಬಿಸ್ಕತ್ತಿನ ಅರ್ಧಭಾಗವನ್ನು ಆ ನಾಯಿಗೆ ಹಾಕಿ ಉಳಿದ ಬಿಸ್ಕತ್ತನ್ನು ತಿಂದಳು. ಆ ದೃಶ್ಯ ಲೀಪಿಯರ್ಗೆ ಕಣ್ಣೀರು ತರಿಸಿತು. ಅಂದೇ ನಿರ್ಧರಿಸಿದ, ಇಂತಹವರಿಗಾಗಿ ಏನಾದರೂ ಮಾಡಬೇಕೆಂದು. ಈತನಿಗೆ ಪ್ರೋತ್ಸಾಹಿಸಿದ ಮದರ್ ಥೆರೇಸಾ ಸೇವೆಯ ಕಂಕಣವನ್ನು ತೊಡಿಸಿದಳು. ತನ್ನ ಪುಸ್ತಕದಿಂದ ಬಂದ ಹಣವನ್ನು ಇಂತಹ ಮಕ್ಕಳ ಜೀವನ ಸುಧಾರಿಸಲು ವಿನಿಯೋಗಿಸಿದ. ಕಲ್ಕತ್ತ ಕೊಳೆಗೇರಿಯ ಕುಷ್ಟರೋಗ ಪೀಡಿತ ಮಕ್ಕಳಿಗಾಗಿ ಈತನ ಸೇವೆ ಮೀಸಲಾಗಿತ್ತು. ಆಗ ಬರೆದ 'ಎ ಸಿಟಿ ಆಫ್ ಜಾಯ್' ಪುಸ್ತಕ ಮಾರಾಟದಿಂದ ಬಂದ ಹಣವನ್ನೂ ಇದೇ ಉದ್ದೇಶಕ್ಕಾಗಿ ಬಳಸಿದ. ನಂತರ ಅವನ ಪುಸ್ತಕಗಳನೇಕ ಚಲನಚಿತ್ರವಾಗಿ ಹೊರಬಂದು ಸಾಕಷ್ಟು ಪ್ರಖ್ಯಾತವಾದವು. ಮದರ್ ಥೆರೇಸಾ ಇವನ ಸೇವಾಕಾರ್ಯವನ್ನು ಮೆಚ್ಚಿ ತನ್ನ ಬಗ್ಗೆ ಒಂದು ಚಲನಚಿತ್ರ ತಯಾರಿಸಲು ಲೀಪಿಯರ್ಗೆ ಅನುಮತಿ ನೀಡಿದಳು. ಈತನ ಸೇವಾಕಾರ್ಯವನ್ನು ಗುರುತಿಸಿದ ಭಾರತ ಸರ್ಕಾರ 2008ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ರೀತಿ ಅಮೆರಿಕ ಸರ್ಕಾರ ಕೂಡ ಪ್ರತಿಷ್ಠಿತ ಕ್ರಿಸ್ಟೋಫರ್ ಪ್ರಶಸ್ತಿ ನೀಡಿ ಗೌರವಿಸಿದೆ. ಇಂದಿಗೂ ತಮ್ಮ ಸೇವಾಕಾರ್ಯವನ್ನು ಮುಂದುವರೆಸುತ್ತಿರುವ ಲೀಪಿಯರ್ ಇತರರಿಗೆ ಆದರ್ಶವಾಗಿದ್ದಾರೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

