ಮಲ್ಲಿಕಾರ್ಜುನಪ್ಪನವರ ಭೂದಾನ ಸೇವೆ
1958ರ ಸಮಯ. ಭೂದಾನ ಚಳವಳಿ ಎಲ್ಲೆಡೆ ಪ್ರಚಲಿತವಾಗಿದ್ದ ಕಾಲ. ಶಿವಮೊಗ್ಗ ಜಿಲ್ಲೆಯಲ್ಲಿಯೂ ವಿನೋಬಾರವರ ಈ ಚಳವಳಿಗೆ ವ್ಯಾಪಕ ಬೆಂಬಲ ಸಿಕ್ಕಿತ್ತು. ಹಿರಿಯ ಸ್ವಾತಂತ್ರ್ಯ ಯೋಧ ಹೆಚ್.ಎಸ್.ದೊರೆಸ್ವಾಮಿ ಮತ್ತವರ ಗೆಳೆಯರು ಸರ್ವೋದಯ ಚಳವಳಿಯನ್ನು ಎಲ್ಲೆಡೆ ಪಸರಿಸಲು ಊರೂರು ತಿರುಗುತ್ತಿದ್ದರು. ಹಾಗೆಯೇ ಸೊರಬ ತಾಲೂಕಿಗೂ ಭೇಟಿ ನೀಡಿದರು. ತಾಲೂಕಿನ ಎಣ್ಣೆಕೊಪ್ಪದ ಮಲ್ಲಿಕಾರ್ಜುನಪ್ಪನವರು ಪ್ರಭಾವೀ ನಾಯಕರಾಗಿದ್ದರು. ಎರಡುಬಾರಿ ವಿಧಾನ ಸಭೆ ಸದಸ್ಯರಾಗಿ ಸೇವೆ ಸಲ್ಲಿಸಿ, ಮೂರನೆಯ ಬಾರಿ ಚುನಾವಣೆಗೆ ನಿಲ್ಲಲು ಕರೆಬಂದರೂ ತಿರಸ್ಕರಿಸಿದ ನಿಷ್ಠಾವಂತರಾಗಿದ್ದರು. ಅವರನ್ನು ಸರ್ವೋದಯ ಚಳವಳಿಗೆ ತೊಡಗಿಸಿಕೊಳ್ಳುವಂತೆ ವಿನಂತಿಸಿದಾಗ ಅವರು ಆ ಚಳವಳಿಯ ಬಗ್ಗೆ ತಮಗೇನೂ ತಿಳಿಯದೆಂದು ತಿಳಿಸಿ ಅವರೊಡನೆ ತಮ್ಮ ಪರವಾಗಿ ಒಬ್ಬನನ್ನು ಕಳುಹಿಸಿಕೊಟ್ಟರು. ತಾಲೂಕಿನಾದ್ಯಂತ ಯಾತ್ರೆಮಾಡಿ ಕೊನೆಗೆ ಮತ್ತೆ ಮಲ್ಲಿಕಾರ್ಜುನಪ್ಪನವರನ್ನು ಭೇಟಿಮಾಡಿದಾಗ ಎಷ್ಟು ಭೂಮಿ ದಾನವಾಗಿ ಬಂದಿತೆಂಬ ಮಾಹಿತಿಯನ್ನು ಪಡೆದು ಸಂತಸಗೊಂಡರು. ಸರ್ವೋದಯ ಪುಸ್ತಕಗಳನ್ನು ಕೊಂಡು ಓದಿ ಪ್ರಭಾವಿತರಾದರು. ಎರಡನೆಯ ಬಾರಿ ಮತ್ತೆ ಪಾದಯಾತ್ರೆ ಕೈಗೊಂಡಾಗ ಮಲ್ಲಿಕಾರ್ಜುನಪ್ಪನವರು ದೊರೆಸ್ವಾಮಿಯವರ ಜೊತೆಗೆ ಪಾದಯಾತ್ರೆ ಕೈಗೊಂಡರೂ, ಎಲ್ಲಿಯೂ ಭಾಷಣ ಮಾಡಲಿಲ್ಲ. ಕೇವಲ ಮೂಕ ಪ್ರೇಕ್ಷಕರಾಗಿ ಎಲ್ಲವನ್ನೂ ಒಂದೆಡೆ ಕುಳಿತು ವೀಕ್ಷಿಸಿದರು. ಅವರ ಉದ್ದೇಶ ಸರ್ವೋದಯ ಕಾರ್ಯಕರ್ತರ ಭಾಷಣ ಎಷ್ಟು ಜನರ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ಸೂಕ್ಷ್ಮವಾಗಿ ತಿಳಿಯುವುದೇ ಆಗಿತ್ತು. ಹೋದೆಡೆಯಲ್ಲೆಲ್ಲಾ ಜನ ಅದ್ಧೂರಿಯಿಂದ ಸ್ವಾಗತಿಸಿ, ಆತಿಥ್ಯ ನೀಡಿ, ಭಾಷಣ ಏರ್ಪಡಿಸಿ ಚಳವಳಿಯ ಬಗ್ಗೆ ಆಸಕ್ತಿ ತೋರಿದರು. ಅನೇಕರು ತಾವೇ ಮುಂದೆ ಬಂದು ತಮ್ಮ ಜಮೀನಿನ ಕೆಲವು ಭಾಗವನ್ನು ದಾನವಾಗಿ ನೀಡಿದ್ದೂ ಉಂಟು. ಸೊರಬ ತಾಲೂಕನ್ನು ಬಿಟ್ಟು ತೆರಳುವ ದಿನ. ಸರ್ವೋದಯದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿದ್ದ ಮಲ್ಲಿಕಾರ್ಜುನಪ್ಪನವರು ಆಗಮಿಸಿದ್ದ ಎಲ್ಲಾ ಕಾರ್ಯಕರ್ತರನ್ನು ಆನವಟ್ಟಿಗೆ ಕರೆತಂದು ತಮ್ಮ ಕೃಷಿ ಭೂಮಿಯನ್ನೆಲ್ಲಾ ತೋರಿಸಿದರು. ಕೊನೆಗೆ ತಮ್ಮ ಬಳಿಯಿದ್ದ ಜಮೀನಿನ ನಕಾಶೆಯನ್ನು ಬಿಚ್ಚಿಟ್ಟು, ಅದರಲ್ಲಿ ಒಂದುನೂರು ಎಕರೆ ಜಮೀನನ್ನು ಭೂದಾನಕ್ಕೆ ಬಿಟ್ಟುಕೊಡುವುದಾಗಿ ತಿಳಿಸಿದರಲ್ಲದೆ, ಅದಕ್ಕೆ ತಕ್ಕ ಕಾಗದ ಪತ್ರಗಳನ್ನು ಮಾಡಿಕೊಟ್ಟು ಎಲ್ಲರಿಗೂ ಮಾದರಿಯಾದರು. ನಂತರ ಕರ್ನಾಟಕ ಸರ್ವೋದಯ ಮಂಡಳಿಯ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿದರು. ಹೀಗೆ ತಮ್ಮ ಜೀವನವನ್ನು ಪರಿವರ್ತಿಸಿಕೊಂಡು ತಮ್ಮನ್ನು ಸಮಾಜಕ್ಕೆ ಅರ್ಪಿಸಿಕೊಂಡು ಅಮರರಾದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

