ನಾಡಿನ ಗೌರವ ಉಳಿಸಿದ ಸಂಕಣ್ಣನಾಯಕ
ಕೆಳದಿ ನಾಯಕರಲ್ಲಿ ದೊಡ್ಡ ಸಂಕಣ್ಣನಾಯಕನು ಪ್ರಸಿದ್ಧ ದೊರೆಯಾಗಿದ್ದನು. ಗೋವೆಯನ್ನು ಗೆದ್ದು ವಿಜಯನಗರದ ಅರಸು ರಾಮರಾಯನಿಂದ ಭುಜಕೀರ್ತಿ ಎಂಬ ಬಿರುದನ್ನು ಪಡೆದ ಪರಾಕ್ರಮಿಯಾಗಿದ್ದನು. ಅಲ್ಲದೆ ಅದಕ್ಕಾಗಿ ಮಹಾದೇವಪುರವನ್ನು ಕೊಡುಗೆಯಾಗಿ ಪಡೆದನು. ಅವನು ಒಮ್ಮೆ ತೀರ್ಥಯಾತ್ರೆಗೆಂದು ಹಲವು ಕ್ಷೇತ್ರಗಳನ್ನು ಸಂದರ್ಶಿಸುವಾಗ ದೆಹಲಿಗೂ ಆಗಮಿಸಿದ್ದನು. ಅದು ಮೊಘಲ್ ಬಾದಶಾಹರು ಆಡಳಿತ ನಡೆಸುತ್ತಿದ್ದ ಕಾಲ. ದೆಹಲಿಯ ಹೆಬ್ಬಾಗಿಲಿನಲ್ಲಿ ಒಂದು ಕತ್ತಿಯನ್ನು ತೂಗು ಹಾಕಲಾಗಿತ್ತು. ಅದು ಅಂಕುಶ್ಖಾನ್ ಎಂಬ ವಜೀರನದಾಗಿತ್ತು. ಆಗಿನ ಕಾಲದಲ್ಲಿ ಅಂಕುಶ್ ಖಾನ್ನನ್ನು ಕತ್ತಿ ಕಾಳಗದಲ್ಲಿ ಸೋಲಿಸುವವರು ಯಾರೂ ಇರಲಿಲ್ಲ. ಅಷ್ಟು ಪರಿಣಿತನಾಗಿದ್ದ ಆತ ತನ್ನ ಜೊತೆಗೆ ಕತ್ತಿ ಕಾಳಗದಲ್ಲಿ ಭಾಗವಹಿಸುವವರು ಮಾತ್ರ ಆ ಕತ್ತಿಯನ್ನು ಬಿಚ್ಚಬೇಕೆಂದು ಸವಾಲೊಡ್ಡಿದ್ದ. ಇದು ದೊಡ್ಡ ಸಂಕಣ್ಣನಾಯಕನಿಗೆ ತಿಳಿದು, ಖಾನ್ನ ಅಹಂಕಾರವನ್ನು ಅಳಿಸಲು ಆ ಕತ್ತಿಯನ್ನು ತನ್ನ ಊಳಿಗದವನಿಂದ ಇಳಿಸಿದನು. ಈ ಸುದ್ದಿ ಬಾದಶಾಹನಿಗೆ ತಲುಪಿತು. ವಿಷಯ ತಿಳಿದ ಅಂಕುಶ್ ಖಾನ್ ಕೋಪಾವಿಷ್ಟನಾಗಿ ದೊಡ್ಡ ಸಂಕಣ್ಣನಾಯಕನನ್ನು ಕತ್ತಿವರಸೆಗೆ ಆಹ್ವಾನಿಸಿದನು. ಬಾದಶಾಹನ ಸಮ್ಮುಖದಲ್ಲಿ ವೀರರಿಬ್ಬರ ಕತ್ತಿವರಸೆಗೆ ದಿನಾಂಕವನ್ನು ನಿಗದಿಪಡಿಸಲಾಯಿತು. ನಗರದ ಜನರೆಲ್ಲ ಕುತೂಹಲಭರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕತ್ತಿವರಸೆಯನ್ನು ವೀಕ್ಷಿಸಲು ಆಗಮಿಸಿದ್ದರು. ಆಯುಧ ರಹಿತನಾಗಿದ್ದ ಸಂಕಣ್ಣನಾಯಕನಿಗೆ ಬಾದಶಹನು ತನ್ನ ಶಸ್ತ್ರಭಂಡಾರದಲ್ಲಿದ್ದ ಕತ್ತಿಯನ್ನು ತರಿಸಿಕೊಟ್ಟನು. ಸಂಕಣ್ಣನಾಯಕನು ಅದನೊಮ್ಮೆ ಬೀಸಿದ ಕೂಡಲೇ ಅದು ಮುರಿದು ಹೋಯಿತು. ಎಷ್ಟೇ ಕತ್ತಿಗಳನ್ನು ನೀಡಿದರೂ ಅವು ಹೆಚ್ಚು ಕಾಲ ಅವನ ಬಳಿ ಉಳಿಯಲಿಲ್ಲ. ಕೊನೆಗೆ ಬಾದಶಹನು ತನ್ನ ಒರೆಯಿಂದ ರಾಜಕತ್ತಿಯನ್ನು ತೆಗೆದು ಕೊಡಲಿಚ್ಚಿಸಿದನು. ಆದರೆ ರಾಜನ ಕತ್ತಿಗೆ ಚ್ಯುತಿ ಬರಬಾರದೆಂದು ಭಾವಿಸಿ, ತನ್ನ ಸೊಂಟದಲ್ಲಿ ಸುತ್ತಿಕೊಂಡಿದ್ದ ನಾಗಮರಿ ಕತ್ತಿಯನ್ನು ತೆಗೆದುಕೊಂಡು ಅಂಕುಶ್ಖಾನ್ನನ್ನು ಎದುರಿಸಿದನು. ಇಬ್ಬರೂ ಬಲಶಾಲಿಗಳೇ. ಶೌರ್ಯದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದರು. ಅಂತಿಮವಾಗಿ ಈ ಹೋರಾಟದಲ್ಲಿ ಸಂಕಣ್ಣನಾಯಕನ ಹರಿತವಾದ ಕತ್ತಿ ಖಾನನ ನಡುವನ್ನು ಸ್ಪರ್ಶಿಸಿತಷ್ಟೆ. ಖಾನ್ ಹಾಗೆಯೇ ಬೊಂಬೆಯಂತೆ ನಿಂತುಬಿಟ್ಟನು. ಇದೇನು ಅಷ್ಟೊಂದು ಘೋರವಾಗಿ ಹೋರಾಡುತ್ತಿದ್ದ ಖಾನ್ ಸುಮ್ಮನೆ ನಿಂತಿದ್ದೇಕೆ ಎಂದು ಅಚ್ಚರಿ ಪಡುತ್ತಿದ್ದಂತೆ, ಸಂಕಣ್ಣನಾಯಕ ತನ್ನ ಕತ್ತಿಯ ತುದಿಯನ್ನು ಖಾನ್ನ ಎದೆಗೆ ಮುಟ್ಟಿಸಿದ ಕೂಡಲೇ, ಸೊಂಟದ ಮೇಲಿನ ತುಂಡುದೇಹ ದಿಂಡಿನಂತೆ ಕೆಳಗುರುಳಿತು. ಬಾದಶಹನು ಸಂಕಣ್ಣನಾಯಕನ ಪೂರ್ವಾಪರವನ್ನೆಲ್ಲ ವಿಚಾರಿಸಿ, ಯೋಗ್ಯ ಸನ್ಮಾನ ಮಾಡಿ ರತ್ನಾಭರಣಗಳನ್ನು ನೀಡಿ ಸತ್ಕರಿಸಿದನು. ಹೀಗೆ ಕನ್ನಡ ನಾಡಿನ ಗೌರವಕ್ಕೆ ಕಳಶವಿಟ್ಟವನು ದೊಡ್ಡ ಸಂಕಣ್ಣನಾಯಕ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

