ಕೋಮು ಹಿಂಸೆ ವಿರೋಧಿ ಕೇಂದ್ರ ಮಸೂದೆಗೆ ವಿರೋಧ
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಕೇಂದ್ರ ಸರ್ಕಾರ ಕೋಮು ಹಿಂಸೆ, ವಿರೋಧಿ ವಿಧೇಯಕವನ್ನು ಮಂಡಿಸುವ ನಿರ್ಧಾರವನ್ನು ಪ್ರಕಟಿಸಿದ ಕೂಡಲೇ ಪ್ರತಿಪಕ್ಷಗಳು ಹಾಗೂ ಹಲವಾರು ಕಾಂಗ್ರೆಸ್ಸೇತರ ಸರ್ಕಾರಗಳಿರುವ ರಾಜ್ಯಗಳ ಪ್ರತಿನಿಧಿಗಳು ವಿಧೇಯಕದ "ಉದ್ದೇಶವನ್ನೇ ಪ್ರಶ್ನಿಸಿದ್ದಾರೆ".
ಸೋಮವಾರ ದೆಹಲಿಯಲ್ಲಿ ನಡೆದ ರಾಜ್ಯಗಳ ಗೃಹ ಕಾರ್ಯದರ್ಶಿಗಳು, ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅನೇಕ ರಾಜ್ಯಗಳ ಪ್ರತಿನಿಧಿಗಳು ಕೋಮು ಹಿಂಸೆಯನ್ನು ಯಾವ ರೂಪದಲ್ಲೂ ಯಾವ ರಾಜ್ಯದಲ್ಲೂ ಸಹಿಸುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿ, ಆದರೆ ಕೋಮು ಹಿಂಸೆಯ ವಿರೋಧಿ ಕ್ರಮದ ನೆಪದಲ್ಲಿ ಸಂವಿಧಾನದತ್ತ ರಾಜ್ಯ ಸರ್ಕಾರಗಳ ಅಧಿಕಾರದ ವಲಯದಲ್ಲಿ ಕೇಂದ್ರ ಸರ್ಕಾರದ ಪ್ರವೇಶದ ಪ್ರಯತ್ನವನ್ನಷ್ಟೇ ರಾಜ್ಯಗಳು ವಿರೋಧಿಸುವುದು ಎಂದೂ ಸ್ಪಷ್ಟಪಡಿಸಿರುವುದು ಗಮನಾರ್ಹ.
ರಾಜ್ಯಗಳ ಈ "ಸಂಯುಕ್ತ ನಿಲವು" ಅರ್ಥವಾಗುವಂತಹದ್ದು, ಇದರಲ್ಲಿ ಹೊಸದೇನೂ ಇಲ್ಲ. ಹಿಂದಿನಿಂದಲೂ ರಾಜ್ಯಗಳು ಪ್ರತಿಪಾದನೆ ಮಾಡಿರುವ ಸಂವಿಧಾನದಲ್ಲಿ ಕಾಯಿದೆ ಪಾಲನೆಯ ಕರ್ತವ್ಯ ಹಾಗೂ ಅಧಿಕಾರವನ್ನು ಕೇಂದ್ರಕ್ಕೆ ಮೊಟಕುಗೊಳಿಸುವ ಹಕ್ಕಿಲ್ಲ ಎನ್ನುವ ನಿಲವನ್ನೇ ಈಗಲೂ ಪ್ರತಿಪಾದಿಸಿವೆ. ಅದು ನ್ಯಾಯವಾದ ನಿಲವು. ಇಂತಹ ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ರಾಜ್ಯಸಭೆಯಲ್ಲಿ 2009 ರಲ್ಲೇ ಅದನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಕಳುಹಿಸಿ ಕೊಡಲಾಗಿತ್ತು. ಅನಂತರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಆ ವಿಧೇಯಕವನ್ನು ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿರುವ ರಾಷ್ಟ್ರೀಯ ಸಲಹಾ ಸಮಿತಿ ಪರಿಷ್ಕರಿಸಿ, ಕೆಲವು ಬದಲಾವಣೆಗಳೊಂದಿಗೆ ಒಂದು ಪರ್ಯಾಯ ವಿಧೇಯಕವನ್ನು ಸರ್ಕಾರದ ಪರಿಶೀಲನೆಗೆ 2011 ರಲ್ಲೇ ಕಳುಹಿಸಿತ್ತು. ಆ ವಿಧೇಯಕವನ್ನೇ ಹೆಚ್ಚು ಕಡಿಮೆ ಅದೇ ಸ್ವರೂಪದಲ್ಲಿ ಈಗ ಮನಮೋಹನ ಸಿಂಗ್ ಸರ್ಕಾರ ಮಂಡಿಸಲು ನಿರ್ಧರಿಸಿರುವುದು. ಈ ವಿಧೇಯಕದ ಪ್ರಮುಖವಾದ ಅಂಶ ಎಂದರೆ, ಕೋಮು ಗಲಭೆ, ಹಿಂಸಾಚಾರ ನಡೆದಾಗ ಕೇಂದ್ರ ಪಡೆಗಳನ್ನು ರವಾನಿಸಲು ರಾಜ್ಯ ಸರ್ಕಾರದ ಪೂರ್ವಾನುಮತಿ. ಅಥವಾ ಬೇಡಿಕೆಯ ಅಗತ್ಯವಿಲ್ಲ ಕೇಂದ್ರ ಪೊಲೀಸ್ ಅಧಿಕಾರಿಗಳೇ ಆ ಪಡೆಗಳನ್ನು ಯಾವ ರೀತಿ ಬಳಸಬೇಕೆಂದು ನಿರ್ಧರಿಸುತ್ತಾರೆ. ಇನ್ನೊಂದು ಅಂಶವನ್ನು ನೂತನ ವಿಧೇಯಕದಲ್ಲಿ ಅಳವಡಿಸಲಾಗಿದೆ. ಕೋಮು ಹಿಂಸೆಯ ಸಮಯದಲ್ಲಿ, ತಮ್ಮ ಕರ್ತವ್ಯವನ್ನು ಪಾಲಿಸದೇ, ಜವಾಬ್ದಾರಿಯಿಂದ ನುಸುಳಿಕೊಳ್ಳುವ ಅಧಿಕಾರಿಗಳನ್ನು ಶಿಕ್ಷಿಸಬೇಕು ಎನ್ನುವುದೇ ಈ ವಿಶೇಷ ಅಂಶ. ಆ ವಿಚಾರದಲ್ಲಿ ತನಿಖೆ ನಡೆಸುವ ಹಾಗೂ ತಪ್ಪಿತಸ್ಥರೆಂದು ಕಂಡು ಬಂದವರಿಗೆ ಶಿಕ್ಷೆ ಕೊಡಲು ವಿಶೇಷವಾದ ಅಧಿಕಾರವನ್ನು ಪಡೆದ "ಕಮಿಷನರ್"ಗಳನ್ನು ನೇಮಿಸುವ ಅಧಿಕಾರ ಕೇಂದ್ರಕ್ಕೆ ಕೊಡಲಾಗಿದೆ. ಕೆಲವು ದಿನಗಳ ಹಿಂದೆ ತಮಿಳುನಾಡಿನ ಅಣ್ಣಾ ಡಿಎಂಕೆ ಮುಖ್ಯಮಂತ್ರಿ ಜಯಲಲಿತಾ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪತ್ರ ಬರೆದು ಈ ವಿಧೇಯಕವನ್ನು ಈಗಿನ ಅಧಿವೇಶನದಲ್ಲಿ ಮಂಡಿಸಬಾರದೆಂದು ಹೇಳಿದ್ದಾರೆ. ಜಯಲಲಿತಾ ಅವರ ಪ್ರಕಾರ ಇಂತಹ ವಿಧೇಯಕವನ್ನು ರಾಜ್ಯದ ಅಧಿಕಾರವನ್ನು ಕೇಂದ್ರ ಕಸಿದುಕೊಳ್ಳಲು ರೂಪಿಸಿದ್ದು, ಇದು ಜನತಾಂತ್ರಿಕ ವ್ಯವಸ್ಥೆಯ ವಿರೋಧಿ ಎಂದೇ ಭಾವಿಸಬೇಕು ಎಂದೂ ಖಾರವಾಗಿಯೇ ಹೇಳಿದ್ದಾರೆ. ರಾಜ್ಯ ಸರ್ಕಾರದ ಅಧಿಕಾರವನ್ನು ವಿಶೇಷ ಅಧಿಕಾರವನ್ನು ಪಡೆದ ಕಮೀಷನರ್ಗಳಿಗೆ ವಹಿಸುವುದು ಸರಿಯಲ್ಲ. ಭಾರತೀಯ ಜನತಾ ಪಾರ್ಟಿಯೂ ಈ ವಿಧೇಯಕವನ್ನು ವಿರೋಧಿಸಿರುವುದರಿಂದ, ಅದು ರಾಜ್ಯ ಸಭೆಯ ಒಪ್ಪಿಗೆ ಪಡೆಯುವುದು ಕಷ್ಟ. ನಿಜಕ್ಕೂ ಇದೊಂದು ಸೂಕ್ಷ್ಮವಾದ ವಿಚಾರ. ಕೇಂದ್ರ ಸರ್ಕಾರ ವಿಧೇಯಕವನ್ನು ಮಂಡಿಸುವ ಮುನ್ನ ಎಲ್ಲ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನು ಕರೆದು ಪ್ರಾಂಜಲ ಮನಸ್ಸಿನಿಂದ ವಿಚಾರ ವಿನಿಮಯ ನಡೆಸುವುದು ಸೂಕ್ತ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

