ಭಾರತದ ರತ್ನಗಳು
ಗುರುವಾರ ನ.28ರ ವಿಶ್ವೇಶ್ವರಭಟ್ ಮತ್ತು ಶನಿವಾರ ನ.30ರ ಪ್ರತಾಪಸಿಂಹರ 'ಭಾರತರತ್ನ'ದ ಬಗ್ಗೆ ಲೇಖನ ಓದಿ, ಅದಕ್ಕೂ ರಾಜಕಾರಣ ಮಾಡುವುದನ್ನು ತಿಳಿದು ಬಹಳ ಬೇಸರವಾಯಿತು. ಭಾರತಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಅಣು ವಿಜ್ಞಾನಿ ಭಾಭಾರ ಕೊಡುಗೆ ಅಪಾರವಾದುದು. ನಮ್ಮ ಯಜಮಾನರು ಭಾಭಾ ಅಣುಸಂಧಾನ ಕೇಂದ್ರ (BARC)ಯ ಉದ್ಯೋಗಿಯಾಗಿದ್ದರಿಂದ ಟ್ರಾಂಬೆ ಟೌನ್‌ಶಿಪ್ ಆದ ಅಣುಶಕ್ತಿ ನಗರದಲ್ಲಿ ಇಪ್ಪತ್ತೈದು ವರ್ಷಗಳ ಕಾಲವಿದ್ದು ಪ್ರಶಾಂತ ಹಾಗೂ ಅನುಕೂಲಕರವಾದ ಜೀವನದ ಸವಿಯನ್ನು ಸವಿಸಿದ್ದೇವೆ. ಹೋಮಿ ಭಾಭಾರ ಮೇಲೆ ಅಲ್ಲಿಯ ಉದ್ಯೋಗಿಗಳಿಗೆ ಅಪಾರಗೌರವ, ಅವರ ಆದರ್ಶಗಳನ್ನು ಅಕ್ಷರಶಃ ಈಗಲೂ ಪಾಲಿಸುತ್ತಾರೆ. Simple living, high thinking, ತಮ್ಮನ್ನು ತಾವು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವಿಕೆ, ನಿಸ್ವಾರ್ಥಸೇವಾ ಮನೋಭಾವ ಹೊಂದಿರುವ ಇಲ್ಲಿಯ ಉದ್ಯೋಗಿಗಳೆಲ್ಲಾ ಕರ್ಮಯೋಗಿಗಳೇ. ಹಗಲು, ರಾತ್ರಿಯೆನ್ನದೆ ಕೆಲಸ ಮಾಡುವುದೂ ಸಹ ಜಹಂಗೀರ್ ಭಾಭಾರವರು ಹಾಕಿಕೊಟ್ಟ ಮೇಲ್ಪಂಕ್ತಿಯೇ. ಈಗಲೂ ಸಹ ನಿಸ್ವಾರ್ಥ ಸೇವೆಯ ಪ್ರಭಾವ ಅಲ್ಲಿಯ ಉದ್ಯೋಗಿಗಳ ಮೇಲೆ ಬೀರಿದೆಯೆಂದರೆ, ಅದು ಅವರ ವ್ಯಕ್ತಿತ್ವ ಹೇಗಿತ್ತೆಂಬುದನ್ನು ತಿಳಿಸುತ್ತದೆ. ಇಂಥ ಅಮೂಲ್ಯ ರತ್ನದ ವಿಚಾರದಲ್ಲಿ 'ಭಾರತರತ್ನ' ದೊರಕಲು ರಾಜಕೀಯ ಮಾಡುತ್ತಾರೆನ್ನುವುದು ವಿಷಾದನೀಯ. ರಾಜಕೀಯ ಕ್ಷೇತ್ರದಲ್ಲಿ ಅಟಲ ಬಿಹಾರಿ ವಾಜಪೇಯಿಯವರಂಥ ರಾಜಕಾರಣಿ ಹಿಂದಿರಲಿಲ್ಲ, ಮುಂದೆ ಬರುವುದಿಲ್ಲವೆನ್ನಬಹುದು. ರಾಜಕೀಯ ಧುರೀಣ ವಾಜಪೇಯಿಯವರ ತೂಕದ ಮಾತು, ದೇಶದ ಹಿತ ಕಾಪಾಡಲು ಸ್ವಹಿತಾಸಕ್ತಿಯನ್ನು ಬದಿಗೊತ್ತಿ ಅವರು ತೆಗೆದುಕೊಳ್ಳುತ್ತಿದ್ದ ಕಟ್ಟುನಿಟ್ಟಿನ ನಿರ್ಧಾರ ಸ್ಮರಣೀಯ. 'ಭಾರತರತ್ನ' ದಂತ ಉನ್ನತ ಗೌರವ ನೀಡಲು ಇಂಥಹ ಅರ್ಹರಿಗೂ ರಾಜಕೀಯ ಮಾಡುತ್ತಾರೆಂದರೆ ರಾಜಕಾರಣಿಗಳ ಬಗ್ಗೆ ಬೇಸರ ಮೂಡಿಸುತ್ತದೆ. ವಿಜ್ಞಾನ, ರಾಜಕೀಯ ಕ್ಷೇತ್ರದ ಈ ಇಬ್ಬರೂ ಮಹಾನುಭಾವರಿಗೂ 'ಭಾರತರತ್ನ' ಸಿಗದಿದ್ದರೇನು, ಅವರು ಭಾರತದ ರತ್ನಗಳೇ.
-ವಿಜಯಲಕ್ಷ್ಮಿ, ಬೆಂಗಳೂರು
ಸಂಭಾಜಿ ಕ್ಷಮೆ ಕೇಳಬೇಕು
ಕನ್ನಡನಾಡಿನ ಬಗ್ಗೆ ಅವಹೇಳನಕಾರಿ ಮಾತನಾಡಿ ಕನ್ನಡಿಗರ ಸಹನೆ ಪರೀಕ್ಷಿಸಲು ಹೊರಟ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಮೊದಲು ಕನ್ನಡಿಗರ ಕ್ಷಮೆ ಕೇಳಬೇಕು. ಸರ್ಕಾರದ ಶವಯಾತ್ರೆ ನಡೆಸುತ್ತೇವೆ ಎಂಬ ಅವರ ದುರಹಂಕಾರದ ನುಡಿ ಅವರ ಒಣಪ್ರತಿಷ್ಠೆಯನ್ನು ತೋರಿಸುತ್ತದೆ. ಜನಪ್ರತಿನಿಧಿಯಾದ ಅವರು ಈ ನಾಡುನುಡಿ ಸೇವೆಯನ್ನು ಸೇವಕನಂತೆ ಮಾಡಬೇಕು ಎಂಬ ಹೊಣೆಗಾರಿಕೆಯನ್ನು ಮರೆತಂತಿದೆ. ಅವರ ವರ್ತನೆ ನೋಡಿದರೆ ಅವರಿಗೆ ಕರ್ನಾಟಕದ ನೆಲ, ಜಲ, ನುಡಿಯಬಗ್ಗೆ ಸ್ವಲ್ಪವೂ ಅಭಿಮಾನವಿದ್ದಂತೆ ಕಾಣುವುದಿಲ್ಲ. ಜನಪ್ರತಿನಿಧಿ ಯಾರೇ ಇರಲಿ ಅಭಿಮಾನಶೂನ್ಯರಾದರೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗುವುದು ಒಳಿತು. ಈ ಸಂಭಾಜಿ ಪಾಟೀಲರ ಉದ್ಧಟತನ ಹೇಳಿಕೆಯಿಂದ ಸದನದ ಕಲಾಪದಲ್ಲಿ ಎಷ್ಟು ಸಮಯ ಹಾಳಾಯಿತು. ಅಲ್ಲಿ ಹಣ ವೆಚ್ಚವಾಗುತ್ತಿರುವುದು ಜನರ ತೆರಿಗೆ ದುಡ್ಡು ಎಂಬುದನ್ನು ಮೊದಲು ಅರಿಯಬೇಕು. ಎಲ್ಲ ಪಕ್ಷಗಳೂ, ಸಂಘ ಸಂಸ್ಥೆಗಳು ಹಾಗೂ ಕನ್ನಡಿಗರು ಸಂಭಾಜಿ ಪಾಟೀಲರ ವಿರುದ್ಧ ಕ್ರಮಕೈಗೊಳ್ಳುವಂತೆ ಒಕ್ಕೊರಲಿನಿಂದ ಒತ್ತಾಯಿಸಬೇಕು. ಸಂಭಾಜಿಯವರು ಮೊದಲು ಕನ್ನಡಿಗರ ಕ್ಷಮೆ ಕೇಳಬೇಕು.
-ಪದ್ಮಾ ಕೃಷ್ಣಮೂರ್ತಿ, ತುಮಕೂರು
ಕನ್ನಡದ ಅವಗಣನೆ
ದಿನಾಂಕ 19.11.2013ರಂದು ಸೆಂಟ್ರಲ್ ಕಾಲೇಜಿನ ಆವರಣದಲ್ಲಿ ನಡೆದ ಕೆನರಾ ಬ್ಯಾಂಕಿನ 108ನೇ ಸ್ಥಾಪಕರ ದಿನಾಚರಣೆಗೆ ಗ್ರಾಹಕರಲ್ಲೊಬ್ಬನಾಗಿ ಹೋಗಿದ್ದೆ. ಕಾರ್ಯಕ್ರಮ ಅದ್ಧೂರಿಯಾಗಿತ್ತು. ಕಾರ್ಯಕ್ರಮ ಮೊದಲಿನಿಂದ ಕೊನೆಯವರೆಗೂ ಇಂಗ್ಲಿಷಿನಲ್ಲಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಮುನಿಯಪ್ಪ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಎಲ್ಲರೂ ಇಂಗ್ಲಿಷಿನಲ್ಲಿ ಮಾತನಾಡಿದರು ಅಥವಾ ಸಿದ್ಧಪಡಿಸಿದ ಭಾಷಣ ಓದಿದರು. ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವ ತಿಂಗಳಿನಲ್ಲಿ, ಕನ್ನಡದ ಭಾಷೆ, ನುಡಿ ಎಲ್ಲೂ ನುಸುಳದಂತೆ ನೋಡಿಕೊಂಡ ಕೆನರಾಬ್ಯಾಂಕ್, ಕರ್ನಾಟಕದಲ್ಲಿ ಹುಟ್ಟಿದ್ದೋ ಅಲ್ಲವೋ ಎಂಬ ಅನುಮಾನ ಮೂಡಿತ್ತು. ಬ್ಯಾಂಕಿನ ಮೇಲಧಿಕಾರಿಗಳು ಯಾವ ರಾಜ್ಯದವರೇ ಆಗಲಿ ಕರ್ನಾಟಕದಲ್ಲಿ ಕಾರ್ಯಕ್ರಮ ನಡೆಯುವಾಗ ಕನ್ನಡ ಭಾಷೆಗೆ ಮನ್ನಣೆ ಕೊಡುವುದನ್ನು ಇನ್ನಾದರೂ ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಕೆನರಾ ಬ್ಯಾಂಕ್ ಕಲಿಯುತ್ತದೆಯೆಂದು ಅಪೇಕ್ಷಿಸೋಣವೆ?
-ಎ.ಆರ್. ಆನಂದ್, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

