ಸಂಪಾದಕೀಯ

ಮಹಾನ್ ಮಾನವತಾವಾದಿ ಕಪ್ಪು ಖಂಡದ ಪ್ರಖರ ಬೆಳಕು

Published On :

ಜಗತ್ತು ಕಂಡ ಮಹಾನ್ ಮಾನವತಾವಾದಿ, ಎಲ್ಲ ಬಗೆಯ ಶೋಷಣೆಯ ವಿರುದ್ಧದ ಹೋರಾಟಗಾರ ನೆಲ್ಸನ್ ಮಂಡೇಲಾ ನಿಜವಾದ ಅರ್ಥದಲ್ಲಿ ಗಾಂಧೀಜಿಯ ಅಚ್ಚುಮೆಚ್ಚಿನ, ಪ್ರಾಮಾಣಿಕ ಉತ್ತರಾಧಿಕಾರಿ.
ತನ್ನ ಜನ್ಮಭೂಮಿಯಲ್ಲಿ, ಜನ್ಮಸಿದ್ಧ ಹಕ್ಕಾದ ಸ್ವಾತಂತ್ರ್ಯ ಪ್ರೇಮವನ್ನು ಪ್ರತಿಪಾದಿಸಿದ್ದಕ್ಕಾಗಿ 27 ವರ್ಷಗಳ ಕಾಲ ಜೈಲಿನಲ್ಲಿ ಕಠಿಣ  ಶಿಕ್ಷೆಯನ್ನು ಅನುಭವಿಸಿದ್ದ ಮಹಾತ್ಯಾಗಿ, ದಕ್ಷಿಣ ಆಫ್ರಿಕಾವು ಬ್ರಿಟಿಷರ ದಾಸ್ಯದ ನೊಗವನ್ನು ಕಳಚಿ ಹಾಕಿ ಸರ್ವತಂತ್ರ ಸ್ವತಂತ್ರ ಜನತಾಂತ್ರಿಕ ರಾಷ್ಟ್ರವಾಗಿ ಹೊರಹೊಮ್ಮಿದಾಗ, ನೆಲ್ಸನ್ ಮಂಡೇಲಾ ಅವರ ಮೊದಲ ವರ್ಣೀಯ ಅಧ್ಯಕ್ಷ.
ಜೈಲಿನ ಕಠಿಣ ಶಿಕ್ಷೆಯ ಯಾತನೆ, ಕಪ್ಪು ವರ್ಣದ ಚರ್ಮದ ಕಾರಣದಿಂದಲೇ ಅಪಮಾನವನ್ನು, ತಾರತಮ್ಯ ತಾತ್ಸಾರವನ್ನು ಅನುಭವಿಸಿದ ನೆನಪುಗಳನ್ನು ಮೆಲುಕು ಹಾಕುತ್ತಾ ಸ್ವತಂತ್ರ ದಕ್ಷಿಣ ಆಫ್ರಿಕಾದ ಅಧ್ಯಕ್ಷನಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ ಸಂದರ್ಭದಲ್ಲಿ ಒಮ್ಮೆಯಾದರೂ ಹಿಂದಿನ ಶ್ವೇತವರ್ಣೀಯ ಆಳರಸರ ವಿರುದ್ಧ ಮಾತಾಡಲಿಲ್ಲ.
ಅಷ್ಟೇ ಅಲ್ಲ, ದಕ್ಷಿಣ ಆಫ್ರಿಕಾದಲ್ಲಿ ವರ್ಣ ಆಧರಿತ, ಜನ್ಮ ಆಧರಿತ, ಲಿಂಗಮೂಲದ ಯಾವುದೇ ರೀತಿಯ ಭೇದ ಭಾವ ಇರುವುದಿಲ್ಲವೆಂದು ಪ್ರಮಾಣ ವಚನದ ಅನಂತರದ ಕ್ಷಣದಲ್ಲೇ ಹೇಳಿದ್ದು ನಿಜವಾಗಲೂ ಅಸಾಮಾನ್ಯ ಮಾನವತಾ ವಾದದ ಪ್ರತಿಪಾದನೆ. ಜಗತ್ತಿನ ಎಲ್ಲ ಭಾಗದಲ್ಲೂ, ಈಗಲೂ ಶೋಷಣೆಯ ವಿರುದ್ಧದ ಹೋರಾಟಗಾರರಿಗೆಲ್ಲ ಆದರ್ಶ ಪುರುಷನಂತಿರುವ ಮಂಡೇಲಾ ಅವರು ನೆನಪೇ ಇನ್ನು ಮುಂದೆ ಸ್ಫೂರ್ತಿ. ಅಮೆರಿಕದ ಸಂಯುಕ್ತ ಸಂಸ್ಥಾನಗಳ ಮೊದಲ ವರ್ಣೀಯ ಅಧ್ಯಕ್ಷ ಬರಾಕ್ ಒಬಾಮಾ ಅವರೂ ತಮ್ಮ ಶೋಕ ಸಂದೇಶದಲ್ಲಿ ಮಂಡೇಲಾ ತಮ್ಮ ಆದರ್ಶ ಪುರುಷ ಎಂದಿದ್ದಾರೆ. ಜಗದ ಮೂಲೆ ಮೂಲೆಗಳಿಂದ ಗಣ್ಯರ, ಪ್ರತಿಷ್ಠಿತರ ಶೋಕಸಂದೇಶಗಳನ್ನು ಸ್ವೀಕರಿಸಲೆಂದೇ ಜೊಹಾನ್ಸ್ ಬರ್ಗ್‌ನಲ್ಲಿ ಒಂದು ವಿಶೇಷ ಕಾರ್ಯಾಲಯವನ್ನೇ ರೂಪಿಸಲಾಗಿದೆ. ಮಂಡೇಲಾ ಭಾರತದ ಆತ್ಮೀಯ ಅಭಿಮಾನಿಗಳಲ್ಲಿ ಒಬ್ಬರು. ಮಹಾತ್ಮಾ ಗಾಂಧಿ ದಕ್ಷಿಣ ಆಫ್ರಿಕಾದಲ್ಲೇ ತೋರಿಸಿ ಕೊಟ್ಟ ಸತ್ಯಾಗ್ರಹದ ಕಲ್ಪನೆಯನ್ನು ತಮ್ಮ ಪ್ರಯೋಗದಲ್ಲಿ ಅಳವಡಿಸಿಕೊಂಡವರು. ಅದಕ್ಕೇ ಅವರು ಭಾರತೀಯರಿಗೆ ತುಂಬ ಹತ್ತಿರವಾಗಿದ್ದು. ಕೇಂದ್ರ ಸರ್ಕಾರ ನೆಲ್ಸನ್ ಮಂಡೇಲಾ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಅರ್ಪಿಸಿ ತನ್ನನ್ನು ತಾನೇ ಗೌರವಿಸಿಕೊಂಡಿದೆ. ಮಂಡೇಲಾ ನಿಧನಕ್ಕೆ ಸಂತಾಪ ಸೂಚಿಸಿ, ಭಾರತದ ಸಂಸತ್ತು ಶುಕ್ರವಾರದ ಅಧಿವೇಶನವನ್ನೇ ಮುಂದಕ್ಕೆ ಹಾಕಿತ್ತು. ಭಾರತದಲ್ಲಿ ಐದು ದಿನಗಳ ರಾಷ್ಟ್ರೀಯ ಶೋಕಾಚರಣೆಯ ಅಧಿಕೃತ ಘೋಷಣೆಯೂ ಆಗಿದೆ.
ವಿಶ್ವಶಾಂತಿಗಾಗಿ ದುಡಿದವರಿಗೆ ನೀಡುವ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದ ಮಂಡೇಲಾ ವಕೀಲ ವೃತ್ತಿಯಲ್ಲಿ ಆಸಕ್ತಿ ಹೊಂದಿದ್ದರು. ದಕ್ಷಿಣ ಆಫ್ರಿಕಾದ ಆಳುವ ವರ್ಗಗಳ ಕಾನೂನು ಕಾಲೇಜಿನಲ್ಲೇ ಓದಿ ವಕೀಲರಾಗಿ 'ಸನ್ನದು' ಪಡೆದರೂ ವಕೀಲಿ ಮಾಡಿದ್ದು ಕಡಿಮೆ. ಸ್ವಾತಂತ್ರ್ಯಕ್ಕಾಗಿ ಹಲವು ವಿಧಗಳಲ್ಲಿ ಹೋರಾಡುತ್ತಿದ್ದ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ಸಿನ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ದುಡಿದು, ಅದರ ಪರಿಣಾಮವಾಗಿ ಜೈಲಿಗೂ ಹೋದರು. ಶ್ವಾಸಕೋಶದ ತೊಂದರೆಯಿಂದ ದೀರ್ಘಕಾಲ ಹಾಸಿಗೆ ಹಿಡಿದಿದ್ದ ನೆಲ್ಸನ್ ಮಂಡೇಲಾ ಗುರುವಾರ ನಿಧನರಾದಾಗ ಅವರಿಗೆ 95 ವರ್ಷ. ಒಮ್ಮೆ ಒಂದು ಬೃಹತ್ ಪ್ರದರ್ಶನದ ಕಾಲದಲ್ಲಿ ಪೊಲೀಸರ ಗೋಲಿಬಾರ್‌ನಲ್ಲಿ 69 ಮಂದಿ ಕಪ್ಪು ಪ್ರದರ್ಶಕರು ಬಲಿಯಾದಾಗ ಅವರು ಶಸ್ತ್ರಸಜ್ಜಿತ ಹೋರಾಟಕ್ಕೆ ಕರೆಕೊಡುವ ಯೋಚನೆಯನ್ನು ಮಾಡಿದ್ದರಂತೆ. ಆದರೆ ಅದು ಅಧಿಕೃತವಾಗಿ ಪ್ರಕಟವಾಗಲಿಲ್ಲ.
ಆದರೂ ಆ ಘಟನೆಯ ಅನಂತರ ಹಿಂಸಾ ಮಾರ್ಗವನ್ನು ತುಳಿಯಲು ಹಲವಾರು ಹೋರಾಟಗಾರ ಸಂಘಟನೆಗಳು ಮುಂದಾದವು. ಸ್ವಾತಂತ್ರ್ಯ ಸಂಗ್ರಾಮದ ನಿಯಂತ್ರಣ ಮಂಡೇಲಾರ ಕೈಯಿಂದ ಜಾರಿ ಹೋಗುವ ಸಂಭವವೂ ಕಂಡು ಬಂದಿತ್ತು. ಹಾಗೇನೂ ಆಗಲಿಲ್ಲ. ಗ್ರೇಟ್ ಬ್ರಿಟನ್‌ನ ಆಡಳಿತಗಾರರು ಕೊನೆಗೂ ದಕ್ಷಿಣ ಆಫ್ರಿಕಾಗೆ ಯಾವ ಷರತ್ತುಗಳೂ ಇಲ್ಲದೆ ಸ್ವಾತಂತ್ರ್ಯವನ್ನು ಕೊಡಲು ನಿರ್ಧರಿಸಿದಾಗ, ಮತ್ತೆ ಸ್ವತಂತ್ರ ಆಫ್ರಿಕಾದ ಸಂವಿಧಾನಾತ್ಮಕ ಸಂಸ್ಥೆಗಳನ್ನು ರೂಪಿಸುವ ಕೆಲಸವನ್ನೂ ಮೊದಲ ಅಧ್ಯಕ್ಷ ಮಂಡೇಲಾ ಅವರೇ ಮಾಡಬೇಕಾಯಿತು. ಮಂಡೇಲಾ ನೆನಪು ಚಿರಸ್ಥಾಯಿಯಾಗಿ ಉಳಿಯುವಂತಹದ್ದು. ಸ್ವಾತಂತ್ರ್ಯ ಎನ್ನುವ ಪದದ ಬಳಕೆಯಾದಾಗಲೆಲ್ಲ ನೆನಪಾಗುವ ಹೆಸರದು. ಅವರಂತಹ ಮಹಾನ್ ವ್ಯಕ್ತಿಗಳು ಆಗಾಗ ಕಾಣಿಸಿಕೊಳ್ಳುವುದಿಲ್ಲ. ಯಾವಾಗಲೋ ಮಿಂಚಿ ಭೌತಿಕವಾಗಿ ಮಾಯವಾಗಿ ಬಿಡುವವರು. ಮಂಡೇಲಾ ನೆನಪಿಗೆ ಸ್ಮಾರಕದ ಅಗತ್ಯವೇ ಇಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.