ಪರೋಪಕಾರವೆಂದರೆ ಇದು
ನಾನು ಪಾಲ್ಗೊಂಡಿದ್ದ ಒಂದು ಸಮಾರಂಭದಲ್ಲಿ "ಸೇವೆಗೆ ಪ್ರಚಾರ ಬೇಕೆ?" ಎಂಬ ವಿಷಯದ ಬಗ್ಗೆ ಬಿಸಿಬಿಸಿ ಚರ್ಚೆಯಾಗುತ್ತಿತ್ತು. ಅಲ್ಪಸೇವೆಗೂ ಪತ್ರಿಕೆಗಳಲ್ಲಿ ಪ್ರಚಾರ ಪಡೆಯುವ ವ್ಯಕ್ತಿ ಮತ್ತು ಸಂಘಟನೆಗಳು, ಅಲ್ಪ ದೇಣಿಗೆ ನೀಡಿದರೂ ಸನ್ಮಾನ ಪಡೆಯಲು ಕಾತರಿಸುವ ಪ್ರಭೃತ್ತಿಗಳು, ಇತರರಿಗೆ ಸ್ಫೂರ್ತಿ ಬರಲೆಂದೇ ಪ್ರಚಾರ ಬೇಕು ಎಂದು ಪ್ರತಿಪಾದಿಸುವ ವಾದ, ಇವೆಲ್ಲವನ್ನೂ ಗಮನಿಸಿದಾಗ ನನಗೆ ನೆನಪಾದದ್ದು ಮಾಸ್ತಿಯವರು. ಕನ್ನಡದ ಆಸ್ತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ರವರು ಸುಮಾರು ಎಪ್ಪತ್ತೈದು ವರ್ಷ ಸಾಹಿತ್ಯ ಸೇವೆ ಮಾಡಿದವರು. ಸರ್ಕಾರದ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದವರು. ಇತರರ ಕಷ್ಟವನ್ನು ಕಂಡು ಅದು ತಮ್ಮದೇ ಎಂದು ಭಾವಿಸಿ, ಯಾರಿಗೂ ತಿಳಿಯದಂತೆ ನೆರವು ನೀಡುತ್ತಿದ್ದುದು ಅವರ ಶ್ರೇಷ್ಠ ಗುಣ.
ಬೇಂದ್ರೆಯವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದ 'ನರಬಲಿ' ಕವನವನ್ನು ಬರೆದು ಜೈಲಿಗೆ ಹೋಗಿ, ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಗುರಿಯಾಗಿದ್ದಾಗ ಮಾಸ್ತಿಯವರು ಅವರಿಗೆ ಹಣಕೊಟ್ಟು ನೆರವಾದರು. ಅದೊಂದು ಜೊತೆಗಾರನಾದ ಶ್ರೇಷ್ಠ ಕವಿಗೆ ನೀಡಿದ ಕಾಣಿಕೆ ಎಂಬ ವಿನೀತ ಭಾವನೆಯನ್ನು ತಾಳಿದ್ದರು. ಯಾರಾದರು ಯಾರದ್ದೇ ಕಷ್ಟದ ಬಗ್ಗೆ ಮಾಸ್ತಿಯವರಲ್ಲಿ ಪ್ರಸ್ತಾಪಿಸಿದರೆ, "ಅವರ ಸಹಾಯಕ್ಕೆ ಒಂದಿಷ್ಟು ಹಣ ಕೊಡಲೇ?" ಎಂದು ನೋಡಿಯೇ ಇರದಿದ್ದ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುತ್ತಿದ್ದರು. ತಮ್ಮ ಬಳಿ ಬಂದ ಜಿ.ಪಿ.ರಾಜರತ್ನಂ ಆರು ತಿಂಗಳ ಇಪ್ಪತೈದು ರುಪಾಯಿ ಸಂಬಳದ ಅಲ್ಪಾವಧಿ ಕೆಲಸ ಕೊಡಿಸಲು ಕೇಳಿಕೊಂಡಾಗ ತಾವೇ ತಮ್ಮ ಸಂಬಳದಿಂದ ಪ್ರತಿ ತಿಂಗಳು ಆ ಹಣವನ್ನು ನೀಡಿ ಕಾವ್ಯರಚನೆಗೆ ಪ್ರೋತ್ಸಾಹಿಸಿದ ಹಿರಿಯ ಜೀವ. ಒಮ್ಮೆ ಖಾಯಿಲೆಯಿಂದ ನರಳುತ್ತಿದ್ದ ಹಿರಿಯ ಸಾಹಿತಿಯ ಮನೆಗೆ ಹೋಗಿದ್ದಾಗ ಔಷಧಿ ಮತ್ತು ಹಣ್ಣುಗಳನ್ನು ಕೊಳ್ಳಲೂ ಅಸಮರ್ಥರಾಗಿರುವುದನ್ನು ಗಮನಿಸಿ ತಮ್ಮ ಜೊತೆ ಬಂದಿದ್ದ ಶೇಷಗಿರಿರಾಯರ ಕೈಗೆ ಹಣವಿದ್ದ ಒಂದು ಲಕೋಟೆಯನ್ನು ನೀಡಿ ಅವರ ಮನೆಯ ದೇವರ ಮನೆಯಲ್ಲಿಟ್ಟು ಬರಲು ಸೂಚಿಸಿದರು. ಸ್ವತಃ ಶೇಷಗಿರಿರಾಯರ ತಂದೆ ಮರಣಿಸಿದಾಗ ಅವರಿಗೆ ನೆರವಾಗಲು ತಮ್ಮ "ಜೀವನ" ಪತ್ರಿಕೆಗೆ ನೆರವಾಗಿ ತಿಂಗಳಿಗೆ ಐವತ್ತು ರುಪಾಯಿ ವೇತನ ಪಡೆಯಲು ಕೇಳಿಕೊಂಡರು. ಹೀಗೆ ಇತರರ ಆತ್ಮಾಭಿಮಾನಕ್ಕೆ ಕುಂದುಂಟಾಗದಂತೆ ನೆರವು ನೀಡುತ್ತಿದ್ದ ಪರಿ ಇತರ ಸಾಹಿತಿಗಳಿಗೆ ಮೇಲ್ಪಂಕ್ತಿಯಾಗಿದೆ. ಈ ಬಗ್ಗೆ ಅವರಲ್ಲಿ ಪ್ರಸ್ತಾಪ ಮಾಡಿದಾಗ ಅವರು ಹೇಳುತ್ತಿದ್ದುದಿಷ್ಟೆ, "ಬಡತನದಲ್ಲಿ ಬಾಳಿದ, ವಾರಾನ್ನ ಮಾಡಿಕೊಂಡು ಕಷ್ಟದಿಂದ ಓದಿದ ನನಗೆ ಅದರ ನೋವು ತಿಳಿದಿದೆ". ಹೀಗೆ ಹೇಳಿ ವಾತ್ಸಲ್ಯದಿಂದ ಮಾತನಾಡುತ್ತಿದ್ದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇಂದಿಗೂ ನಮಗೆ ಆದರ್ಶವಾಗಿದ್ದಾರೆ.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

