ಮಾನವೀಯತೆಗೆ ಬೆಲೆಕೊಟ್ಟ ದೀಕ್ಷಿತರು
ಒಮ್ಮೆ ನಾಲ್ಮಡಿ ಕೃಷ್ಣರಾಜ ಒಡೆಯರು ಮೈಸೂರು ಮಹಾರಾಜರ ಆಸ್ಥಾನ ಪುರೋಹಿತರ ಸಲಹೆಯ ಮೇರೆಗೆ ಮೃತ್ಯು ಪರಿಹಾರಾರ್ಥವಾಗಿ ಶಾಂತಿ ಮತ್ತು ಹೋಮವನ್ನು ಮಾಡಿದರು. ಎಲ್ಲ ಹೋಮ ಕಾರ್ಯಗಳೂ ಮುಗಿದಮೇಲೆ ಒಂದು ಚೀಲ ಕರಿಎಳ್ಳು, ಚಿನ್ನದ ಮೃತ್ಯುವಿನ ವಿಗ್ರಹ ಹಾಗೂ ಒಂದು ಸಾವಿರ ರುಪಾಯಿ ದಕ್ಷಿಣೆಯನ್ನು ಯೋಗ್ಯ ಬ್ರಾಹ್ಮಣನಿಗೆ ದಾನ ಕೊಡಬೇಕಾಗಿತ್ತು. ಆದರೆ ದಾನಸ್ವೀಕರಿಸಲು ಬ್ರಾಹ್ಮಣರ್ಯಾರೂ ಸಿಗದೆ ಪರಿತಪಿಸುವಂತಾಯಿತು. ದಾನ ಕೊಡದೆ ಹೋಮದ ಫಲ ಸಿಗುವಂತಿರಲಿಲ್ಲ. ಹೀಗಾಗಿ ಮಹಾರಾಜರು ರಾಜ್ಯದ ಎಲ್ಲ ಭಾಗಗಳ ಅಮಲ್ದಾರರಿಗೆ ನಿರೂಪವೊಂದನ್ನು ಕಳುಹಿಸಿ, ದಾನ ಸ್ವೀಕರಿಸಬಲ್ಲ ಯೋಗ್ಯ ಬ್ರಾಹ್ಮಣನನ್ನು ಹುಡುಕಿಕೊಡಬೇಕೆಂದು ಕೇಳಿಕೊಂಡಿದ್ದರು. ರಾಮನಾಥಪುರದ ಅಮಲ್ದಾರರಾಗಿದ್ದ ಅಯ್ಯಂಗಾರರೊಬ್ಬರಿಗೆ ಹೇಗಾದರೂ ಮಾಡಿ ತಮ್ಮಕಡೆಯಿಂದ ಬ್ರಾಹ್ಮಣನನ್ನು ಕಳುಹಿಸಿಕೊಡಬೇಕೆಂಬ ಉತ್ಕಟಾಕಾಂಕ್ಷೆ ಇತ್ತು. ಅವರಿಗೆ ತಿಳಿದುಬಂದ ಸುದ್ದಿಯಂತೆ ಬರಗೂರಿನಲ್ಲೊಬ್ಬರು ದೀಕ್ಷಿತರಿದ್ದಾರೆಂದೂ, ಅವರು ಪ್ರತಿನಿತ್ಯ ಅಗ್ನಿಹೋತ್ರ ಮಾಡಿಕೊಂಡು ತಮ್ಮ ಪಾಡಿಗೆ ತಾವು ಇದ್ದಾರೆಂದೂ, ಅವರೊಪ್ಪಿದರೆ ಮಹಾರಾಜರ ಸಮಸ್ಯೆ ಬಗೆಹರಿಯುವುದೆಂದು ತಿಳಿದುಬಂತು. ಅಂತೆಯೇ ಅಮಲ್ದಾರರು ದೀಕ್ಷಿತರ ಮನೆಗೆ ಬರುವುದಕ್ಕೂ, ಅದೇತಾನೇ ವೈಶ್ವದೇವ ಮುಗಿಸಿ ಹೊರಬರುವುದಕ್ಕೂ ಸರಿಯಾಯಿತು. ಆಗ ದೀಕ್ಷಿತರು ಅಮಲ್ದಾರರನ್ನು ಭಕ್ತಿ ಗೌರವಗಳಿಂದ ಕರೆದು ಕೂಡಿಸಿ ಉಪಚರಿಸಿದರು. ಹಾಗೆಯೇ ಬಂದ ಉದ್ದೇಶವನ್ನೂ ತಿಳಿಯ ಬಯಸಿದರು. ಆಗ ಅಮಲ್ದಾರರು ಮಹಾರಾಜರ ನಿರೂಪವನ್ನು ತಿಳಿಸಿ, ದೀಕ್ಷಿತರು ದಾನಸ್ವೀಕರಿಸುವಂತೆ ವಿನಂತಿಸಿದರು. ಅದಕ್ಕೆ ದೀಕ್ಷಿತರ ಸಮ್ಮತಿಯೂ ದೊರೆತುದರಿಂದ, ಅಮಲ್ದಾರರು ಮಹಾರಾಜರಿಗೆ ಹೇಳಿ ಕಳುಹಿಸಿ, ಕರೆಯಿಸಿಕೊಂಡರು. ರಾಮನಾಥಪುರದ ಕಾವೇರಿಯ ಪುಷ್ಕರದ ಬಳಿ ಮಹಾಸ್ವಾಮಿಗಳ ಸವಾರಿ ಬಂತು. ಅಲ್ಲಿ ವಿಧಿಪೂರ್ವಕವಾಗಿ ದೀಕ್ಷಿತರಿಗೆ ಎಳ್ಳು, ಚಿನ್ನದ ವಿಗ್ರಹ ಮತ್ತು ಒಂದು ಸಾವಿರ ರುಪಾಯಿ ದಕ್ಷಿಣೆಯನ್ನಿಟ್ಟು ದೀರ್ಘ ದಂಡ ನಮಸ್ಕಾರ ಮಾಡಲಾಯಿತು. ಆಗ ದೀಕ್ಷಿತರು ಮಾಡಿದ್ದೇನು? ಎಳ್ಳಿನ ಮೂಟೆಯನ್ನು ನದಿಗೆ ಚೆಲ್ಲಿದರು. ಅದು ನದಿಯಲ್ಲಿನ ಜಲಚರದ ಪಾಲಾದವು. ಕೊಟ್ಟ ದಕ್ಷಿಣೆಯ ಎಲ್ಲ ಹಣವನ್ನೂ ಅಲ್ಲಿದ್ದ ಬಡಬಗ್ಗರಿಗೆ ಹಂಚಿದರು. ತಮಗೆ ಕೊಟ್ಟಿದ್ದ ಚಿನ್ನದ ವಿಗ್ರಹವನ್ನೂ ಸಹ ಮಾರಿ ಆ ಹಣವನ್ನು ದಾನಮಾಡಿ ನಡದೇಬಿಟ್ಟರು. ಒಮ್ಮೆಯಂತೂ ಅವರು ಒಬ್ಬ ಹರಿಜನ ಸ್ತ್ರೀ ಮರದ ಕೆಳಗೆ ಪ್ರಸವ ವೇದನೆಯಿಂದ ನರಳುತ್ತಿದ್ದಾಗ ಅವಳನ್ನು ಮನೆಗೆ ಕರೆತಂದು ದೇವರ ನೈವೇದ್ಯ ಮತ್ತು ತೀರ್ಥವನ್ನು ಕೊಟ್ಟು ಅವಳ ದಾಹ ಮತ್ತು ಹಸಿವನ್ನು ನೀಗಿಸಿ, ಸುಖಪ್ರಸವವಾಗಲು ಅನುವು ಮಾಡಿಕೊಟ್ಟಿದ್ದು ಆಗಿನ ಕಾಲದ ಸಂಪ್ರದಾಯಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದರು. ಮಾನವೀಯತೆಗೆ ಬೆಲೆಕೊಟ್ಟ ದೀಕ್ಷಿತರು ಜನರ ಕಣ್ಣಲ್ಲಿ ಪವಾಡ ಪುರುಷರಾಗಿದ್ದರು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

