ವೃತ್ತಿ ಶಿಕ್ಷಣ ಆಯ್ಕೆ ವಿವಾದ
ಮೆಡಿಕಲ್, ಎಂಜಿನಿಯರಿಂಗ್ ಹಾಗೂ ಡೆಂಟಲ್ ವೃತ್ತಿ ಶಿಕ್ಷಣ ಕಾಲೇಜುಗಳಿಗೆ ವಿದ್ಯಾರ್ಥಿಗಳ ಪ್ರವೇಶದ ನಿಯಮಗಳನ್ನು ಹೆಚ್ಚು ಸ್ಫುಟಗೊಳಿಸಲು 2006ರಲ್ಲಿ ರೂಪಿಸಲಾದ ಕಾಯಿದೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದಕ್ಕೆ ಎರಡು ಬಗೆಯ ಪ್ರತಿಕ್ರಿಯೆ ಪ್ರಕಟವಾಗಿ ಒಂದು ರೀತಿಯಲ್ಲಿ ವಿವಾದ ಸೃಷ್ಟಿಯಾಗಿದೆ.
ಸುಪ್ರೀಮ್ ಕೋರ್ಟಿನ ಆದೇಶದಂತೆ ಸಿದ್ಧಪಡಿಸಿರುವ ಹೊಸ ಕಾಯಿದೆಯಲ್ಲಿನ ಅತಿ ಮುಖ್ಯ ಅಂಶ ಎಂದರೆ, ಸರ್ಕಾರದ ನೆರವನ್ನು ಪಡೆಯದೇ ಇರುವ ಸ್ವತಂತ್ರ ಶಿಕ್ಷಣ ಸಂಸ್ಥೆಗಳಲ್ಲಿನ ಶುಲ್ಕ ಆ ಸಂಸ್ಥೆಯ ಗುಣಮಟ್ಟವನ್ನೇ ಅವಲಂಬಿಸಿರುವುದು. ಆ ಸಂಸ್ಥೆಗಳಿಗೆ ವಿದ್ಯಾರ್ಥಿಗಳ ಪ್ರವೇಶದಲ್ಲಿ ಸರ್ಕಾರದ ಪಾತ್ರ ಏನೂ ಇಲ್ಲ.
ಇದುವರೆಗೆ ಜಾರಿಯಲ್ಲಿದ್ದ ವ್ಯವಸ್ಥೆಯಲ್ಲಿ ಸರ್ಕಾರಿ ಹಾಗೂ ಸರ್ಕಾರದ ನೆರವು ಪಡೆದ ಸಂಸ್ಥೆಗಳ ಪ್ರವೇಶಕ್ಕೆ ಒಂದು ಪರೀಕ್ಷೆ, ಸರ್ಕಾರದ ನೆರವಿಲ್ಲದೇ ನಡೆಯುವ ಸಂಸ್ಥೆಗಳ ಪ್ರವೇಶಕ್ಕೆ ಇನ್ನೊಂದು ಪ್ರವೇಶ ಪರೀಕ್ಷೆಯ ವ್ಯವಸ್ಥೆ ಇತ್ತು. ಅಲ್ಪಸಂಖ್ಯಾತರ ಸಂಸ್ಥೆಗಳಿಗೆ ಮತ್ತೊಂದು ಪರೀಕ್ಷೆಯ ಬೇಡಿಕೆಯೂ ಇತ್ತು. ಹೊಸ ಪದ್ಧತಿಯಲ್ಲಿ ಸರ್ಕಾರದ ಪರವಾಗಿ ಸಂಬಂಧಪಟ್ಟ ಪ್ರಾಧಿಕಾರ ನಡೆಸುವ ಪರೀಕ್ಷೆ ಹಾಗೂ ಸ್ವತಂತ್ರ ಸಂಸ್ಥೆಗಳು ನಡೆಸುವ ಪರೀಕ್ಷೆಗಳೆರಡೇ ಇರುವುದು. ಮೂರನೆಯ ಪರೀಕ್ಷೆಗೆ ಅವಕಾಶವಿಲ್ಲ. ಎಲ್ಲ ವೃತ್ತಿ ಶಿಕ್ಷಣ ಕಾಲೇಜುಗಳಲ್ಲಿ ಅರ್ಧದಷ್ಟು ಸಂಖ್ಯೆಯ ಸ್ಥಾನಗಳನ್ನು ಪರಿಶಿಷ್ಟ ಜಾತಿ ಪಂಗಡಗಳು, ಇತರೆ ಹಿಂದುಳಿದ ಜಾತಿ ಪಂಗಡಗಳಿಗೆ ಹಾಗೂ ಶೇಕಡಾ 15ರಷ್ಟು ಸ್ಥಾನಗಳನ್ನು ಅನಿವಾಸಿ ಭಾರತೀಯರಿಗೆ ಒದಗಿಸಬೇಕು. ಪರಿಶಿಷ್ಟ ಜಾತಿ ಪಂಗಡಗಳ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸುವುದರಿಂದ ಅವರಿಗೆ ಶುಲ್ಕದ ಹೊರೆಯ ಪ್ರಶ್ನೆಯೇ ಇರುವುದಿಲ್ಲ. ಇತರ ವಿದ್ಯಾರ್ಥಿಗಳು ಕಾಲೇಜುಗಳ ಗುಣಮಟ್ಟಕ್ಕೆ ಅನುಗುಣವಾಗಿ ನಿಗದಿಪಡಿಸುವ ಶುಲ್ಕ ಕೊಡಬೇಕು. ಕಾಲೇಜುಗಳು ಪ್ರಕಟಿಸುವ ಶುಲ್ಕದ ವಿವರಗಳನ್ನು ಪರಿಶೀಲಿಸಿ, ಅಂತಿಮವಾಗಿ ಶುಲ್ಕವನ್ನು ನಿಗದಿಪಡಿಸಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿ ಇರುತ್ತದೆ. ಈಗ ಹೊರರಾಜ್ಯಗಳಿಂದ ಇಲ್ಲಿಗೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವುದರಿಂದ, ಕಳಪೆ ಮಟ್ಟದ ಕಾಲೇಜುಗಳಿಗೆ ಬೇಡಿಕೆ ತಾನೇ ತಾನಾಗಿ ಕಡಿಮೆಯಾಗುತ್ತದೆ. ಅದೊಂದು ಉತ್ತಮ ಬೆಳವಣಿಗೆಯೇ. ಹೊಸ ವ್ಯವಸ್ಥೆ ತರಬಹುದಾದ ಸಮಸ್ಯೆಗಳನ್ನು ಕಾಲಕಾಲಕ್ಕೆ ನಿಭಾಯಿಸಲು ಒಂದು ಸಂಸ್ಥೆಯ ಅಗತ್ಯ ಕಂಡುಬಂದರೂ ಬರಬಹುದು. ಅದು ಭವಿಷ್ಯದ ವಿಚಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

