ಆ ಕೋಲು ಅಧಿಕಾರದ ಲಾಂಛನ
ನ್ಯಾಯಮೂರ್ತಿ ನರಹರಿರಾಯರು ದಿವಾನ್ ಶೇಷಾದ್ರಿ ಅಯ್ಯರ್ ಅವರು ದಿವಾನರಾಗಿದ್ದಾಗ ಹೈಕೋರ್ಟ್ ನ್ಯಾಯಾಧೀಶರಾಗಿದ್ದರು...
ನ್ಯಾಯಮೂರ್ತಿ ನರಹರಿರಾಯರು ದಿವಾನ್ ಶೇಷಾದ್ರಿ ಅಯ್ಯರ್ ಅವರು ದಿವಾನರಾಗಿದ್ದಾಗ ಹೈಕೋರ್ಟ್ ನ್ಯಾಯಾಧೀಶರಾಗಿದ್ದರು. ಅವರು ತುಂಬಾ ಉದಾರಿಗಳೂ ಸಂಗೀತ ಮತ್ತು ಸಾಹಿತ್ಯ ಪ್ರಿಯರೂ ಆಗಿದ್ದರು. ಅವರ ಕರ್ತವ್ಯ ನಿಷ್ಠೆ ಮತ್ತು ನ್ಯಾಯ ತೀರ್ಮಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅವರ ಮನೆಯಲ್ಲಿ ಅನೇಕ ವಿದ್ಯಾರ್ಥಿಗಳು ಊಟಮಾಡಿಕೊಂಡು ಓದುತ್ತಿದ್ದರು. ಅವರಿಗೆ ಯಾವ ಹುಡುಗರ ಹೆಸರು, ವಿಳಾಸ ತಿಳಿದಿರುತ್ತಿರಲಿಲ್ಲ. ಹೀಗಾಗಿ ಅವರ ಮನೆಯೊಂದು ವಿದ್ಯಾರ್ಥಿನಿಲಯದಂತಿತ್ತು. ಎಲ್ಲರೊಡನೆಯೂ ಸೌಜನ್ಯದ ನಡವಳಿಕೆ ಅವರದು. ಅವರು ಯಾರನ್ನೇ ಆಗಲಿ ಏಕವಚನದಲ್ಲಿ ಮಾತನಾಡಿಸುತ್ತಿರಲಿಲ್ಲ. ಇದು ಅವರ ಸಜ್ಜನಿಕೆಯನ್ನು ತೋರಿಸುತ್ತಿತ್ತು.
ಆಗಿನ ಕಾಲಕ್ಕೆ ನಾಗರತ್ನಮ್ಮನವರು ಪ್ರಸಿದ್ಧ ಗಾಯಕರಾಗಿದ್ದುದಷ್ಟೇ ಅಲ್ಲ, ಅಪ್ರತಿಮ ಸುಂದರಿಯೂ ಆಗಿದ್ದರು. ಅವರ ಮೈಮಾಟ ಮತ್ತು ಸಂಗೀತಕ್ಕೆ ಮನಸೋತು ಅವರಿಗೆ ಮರುಳಾಗಿ ಸಂಗೀತ ಕೇಳಲು ದಿನಾಲೂ ನರಹರಿರಾಯರು ಅವರ ಮನೆಗೆ ಬರುತ್ತಿದ್ದರು. ಇದಕ್ಕೆ ತಮ್ಮ ಪತ್ನಿಯ ಸಮ್ಮತಿಯನ್ನೂ ಪಡೆದಿದ್ದರು. ನಗರ್ತರಪೇಟೆಯಲ್ಲಿದ್ದ ನಾಗರತ್ನಮ್ಮನವರ ಮನೆಗೆ ನರಹರಿರಾಯರು ಕೋರ್ಟ್ನಿಂದ ಮನೆಗೆ ಹಿಂತಿರುಗುವಾಗ ಭೇಟಿನೀಡುವ ಪದ್ಧತಿಯನ್ನು ಇಟ್ಟುಕೊಂಡಿದ್ದರು. ಆಳು ಅವರು ಮನೆಯಿಂದ ಹೊರ ಬರುವವರೆಗೂ ದಂಡ ಹಿಡಿದು ಕುದುರೆ ಸಾರೋಟಿನಲ್ಲಿ ಕೂರಬೇಕಾಗಿತ್ತು. ಆ ವಿಷಯ ದಿವಾನರ ಕಿವಿಗೂ ಬಿತ್ತು. ಒಬ್ಬ ಹೈಕೋರ್ಟ್ ನ್ಯಾಯಾಧೀಶರ ನಡವಳಿಕೆಗಿಂತ ಹೆಚ್ಚಾಗಿ ಅಧಿಕಾರ ದಂಡ ಆಕೆಯ ಮನೆಕಾಯುತ್ತದಲ್ಲಾ ಎಂಬ ಕೊರಗು ಅವರಿಗೆ. ಒಮ್ಮೆ ನರಹರಿರಾಯರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಶೇಷಾದ್ರಿ ಅಯ್ಯರ್ರವರು ಗೌರವದಿಂದಲೇ ಮಾತನಾಡಿಸಿ, ಹೀಗೆ ಹೇಳಿದರು, "ನೋಡಿ, ತಮ್ಮ ಖಾಸಗಿ ವಿಚಾರಕ್ಕೆ ತಲೆಹಾಕುತ್ತಿದ್ದೇನೆಂದು ದಯಮಾಡಿ ಭಾವಿಸಬಾರದು, ತಾವು ಪ್ರತಿನಿತ್ಯ ನಾಗರತ್ನಮ್ಮನವರ ಮನೆಗೆ ಹೋಗಿ ಬರುವತನಕ ನಿಮ್ಮ ಆಳು ಕೈಯಲ್ಲಿ ಬೆಳ್ಳಿ ಹಿಡಿಕೆಯ ಅಧಿಕಾರ ದಂಡವನ್ನು ಹಿಡಿದು ಸಾರೋಟಿನಲ್ಲಿ ಕುಳಿತಿರುತ್ತಾನೆ. ಆ ಕೋಲು ಅಧಿಕಾರದ ಲಾಂಛನ. ಇದರಿಂದ ಜನ ಏನಿದು ಜಡ್ಜ್ ಒಲಿದಿರುವ ಸ್ಥಳ ಎಂದು ಭ್ರಾಂತಿ ಪಟ್ಟಾರು. ಅದಕ್ಕಾಗಿ ತಾವು ನಾಗರತ್ನಮ್ಮನವರ ಮನೆ ಸಮೀಪಿಸಿದಂತೆ ಆ ದಂಡವನ್ನು ಕೆಳಗಿಡಲು ತಿಳಿಸಬಹುದಲ್ಲಾ?" ಎಂದರು. ಅದು ನರಹರಿರಾಯರಿಗೂ ಸಮ್ಮತವೆನ್ನಿಸಿತು. ದಿವಾನರು ನೀಡಿದ ಸಲಹೆಗೆ ಕೃತಜ್ಞತೆ ಅರ್ಪಿಸಿ ಅಲ್ಲಿಂದ ತೆರಳಿದರು. ನಂತರದ ದಿನಗಳಲ್ಲಿ ಹಾಗೆಯೇ ಮಾಡಿದರು ಕೂಡ. ನಂತರ ನರಹರಿರಾಯರು ನಾಗರತ್ನಮ್ಮನವರ ಬಿಡಾರವನ್ನು ಈಗ ನರಹರಿರಾಯರ ಗುಡ್ಡವೆಂದು ಕರೆಯುವ ಸ್ಥಳಕ್ಕೆ ಬದಲಾಯಿಸಿದರು. ಅದು ಆಗ ಊರ ಹೊರಗೆ ಕಾಡಿನಿಂದಾವೃತವಾಗಿ, ಪ್ರಕೃತಿ ಸೌಂದರ್ಯದಿಂದ ಕೂಡಿದ ರಮ್ಯಸ್ಥಳವಾಗಿತ್ತು. ಅದಕ್ಕೆ ರಾಯರು ಮೌಂಟನ್ ಆಫ್ ಜಾಯ್ (ಆನಂದ ಶೈಲ) ಎಂದು ಹೆಸರಿಟ್ಟಿದ್ದರು. ಅಲ್ಲೊಂದು ಮಂಟಪವನ್ನು ಕಟ್ಟಿಸಿ, ಅಲ್ಲಿದ್ದ ಶಿವದೇವಾಲಯದ ಜೀರ್ಣೋದ್ಧಾರವನ್ನೂ ಮಾಡಿದರು. ಆಗಾಗ್ಗೆ ಅಲ್ಲಿಗೆ ತಮ್ಮ ಮನೆಯವರನ್ನೂ ಕರೆದುಕೊಂಡುಹೋಗಿ ಸಂಗೀತವನ್ನು ಅಸ್ವಾದಿಸುತ್ತಿದ್ದರು.
(ಆಧಾರ- ಡಿ.ವಿ.ಜಿ.ಕೃತಿಶ್ರೇಣಿ- ನೆನಪಿನ ಚಿತ್ರಗಳು)
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

