ನರೇಂದ್ರ ಮೋದಿ: 2002 ಮುಗಿದ ಅಗ್ನಿ ಪರೀಕ್ಷೆ
2002ರ ಗುಜರಾತ್ ಹತ್ಯಾಕಾಂಡದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ದೊಂಬಿಕೋರರಿಗೆ ನೆರವಾಗುವ ರೀತಿಯಲ್ಲಿ ವರ್ತಿಸಿದ್ದರು ಎನ್ನುವ ಆರೋಪದ ತನಿಖೆಯ ಸ್ವರೂಪದಲ್ಲೇ ನಡೆದ, ಸುಪ್ರೀಮ್ ಕೋರ್ಟ್ ನಿರ್ದೇಶಿತ ಸಿಬಿಐ ವಿಶೇಷ ತನಿಖೆಯ ವರದಿಯನ್ನು ಅಹಮದಾಬಾದ್ ನ್ಯಾಯಾಲಯ ಗುರುವಾರ ಎತ್ತಿ ಹಿಡಿದಾಗ ಆ ವಿಚಾರದಲ್ಲಿ ನರೇಂದ್ರ ಮೋದಿ ಅವರ ಅಗ್ನಿ ಪರೀಕ್ಷೆ ಮುಗಿದಿತ್ತು.
ಇನ್ನು 2002ರ ಫೆಬ್ರವರಿ 27ರ ಗೋಧ್ರಾ ರೈಲು ನಿಲ್ದಾಣದಲ್ಲಿ ಅಯೋಧ್ಯೆಯ ಕರಸೇವೆಯಿಂದ ಹಿಂತಿರುಗುತ್ತಿದ್ದ ಕರಸೇವಕರಿದ್ದ ಸಬರಮತಿ ಎಕ್ಸ್ಪ್ರೆಸ್ಗೆ ಬೆಂಕಿ ಹಾಕಿದ ಪ್ರಕರಣದ ಅನಂತರ ಗುಜರಾತ್ನ ಎಲ್ಲ ಕಡೆ ನಡೆದ ಗಲಭೆಗಳಲ್ಲಿ ಸುಮಾರು ಎರಡು ಸಾವಿರ ಮಂದಿ ನಿಧನರಾದ ವರದಿಗಳು, ಪ್ರಕಟವಾಗಿದ್ದವು . ಸತ್ತವರಲ್ಲಿ ಮುಸ್ಲಿಮರ ಸಂಖ್ಯೆಯೇ ಹೆಚ್ಚಾಗಿದ್ದದ್ದು ಜಾಹಿರಾಗಿತ್ತು. ಹಲವು ಪ್ರಕರಣಗಳಲ್ಲಿ ಗುಂಪುಗಳ ಸಜೀವ ದಹನದ ವರದಿಗಳೂ ಪ್ರಕಟವಾದವು. ಇದಕ್ಕೆಲ್ಲ ನರೇಂದ್ರ ಮೋದಿ ಅವರ ಪರೋಕ್ಷ ನೆರವಿತ್ತು, ಅವರು ಪೊಲೀಸರಿಗೆ ಮೃದುವಾಗಿ ವರ್ತಿಸಲು ಅನಧಿಕೃತ ಆದೇಶ ನೀಡಿದ್ದರೆನ್ನುವ ಆರೋಪ ಕೇಳಿಬಂದಿತ್ತು. ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯೇ ಈ ಆರೋಪ ಮಾಡಿದ್ದರು.
ಸಮೂಹ ಸಜೀವ ದಹನದ ಒಂದು ಪ್ರಕರಣದಲ್ಲಿ ಮಾಜಿ ಸಂಸತ್ ಸದಸ್ಯ ಎಹ್ಸಾನ್ ಜಾಫ್ರಿ ಅವರೂ ಒಬ್ಬರು. ಈ ಪ್ರಕರಣದ ತನಿಖೆ - ವಿಚಾರಣೆ ಸರಿಯಾಗಿ ಆಗಿಲ್ಲ, ಇಲ್ಲಿ ಮೋದಿ ಪರೋಕ್ಷ ಪ್ರಭಾವ ಕೆಲಸ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಆ ಆರೋಪವನ್ನು ಆಧರಿಸಿ, ಸುಪ್ರೀಮ್ ಕೋರ್ಟ್ ಮೋದಿ ಅವರ ಪಾತ್ರ ಕುರಿತ ತನಿಖೆಗೆ ವಿಶೇಷ ಸಿಬಿಐ ದಳ ರಚಿಸಲು ಸೂಚನೆ ನೀಡಿತ್ತು. ಆ ವಿಶೇಷ ತನಿಖಾ ವರದಿಯಲ್ಲಿ ನರೇಂದ್ರ ಮೋದಿ ಅವರ ವಿರುದ್ಧದ ಆರೋಪಗಳನ್ನು ಬೆಂಬಲಿಸುವ ಸಾಕ್ಷ್ಯ-ಆಧಾರವಿಲ್ಲ ಎನ್ನುವ ಉಲ್ಲೇಖವಿದೆ. ಈ ವರದಿಯನ್ನು ಎಹ್ಸಾನ್ ಜಾಫ್ರಿಯವರ ಪತ್ನಿ ಒಪ್ಪಲಿಲ್ಲ. ಅವರು ಸೂಕ್ತ ಕ್ರಮವನ್ನು ಕೋರಿ ಅಹಮದಾಬಾದ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದಾಗ, ಅದನ್ನು ಹೈಕೋರ್ಟ್ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ತನಿಖೆಗೆ ಆದೇಶ ನೀಡಿತ್ತು. ಈಗ ಆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ "ವರದಿ" ಪ್ರಕಟವಾಗಿದ್ದು, ಅದರಲ್ಲಿ ಸಿಬಿಐ ವಿಶೇಷ ತನಿಖಾ ವರದಿಯನ್ನು ಎತ್ತಿ ಹಿಡಿಯಲಾಗಿದೆ.
2002ರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ, ನರೇಂದ್ರ ಮೋದಿ ಅವರ ವಿರುದ್ಧ ನ್ಯಾಯಾಲಯದಲ್ಲಿ ಇದ್ದ ಪ್ರಕರಣಗಳಲ್ಲಿ ಇದೇ ಕೊನೆಯದು. ಇಲ್ಲಿ ಪ್ರತಿಯೊಂದು ಪ್ರಕರಣವೂ ಒಂದು ರೀತಿಯಲ್ಲಿ ನರೇಂದ್ರ ಮೋದಿ ಅವರ ವೈಯಕ್ತಿಕ ಆಸಕ್ತಿಯ ಪರಿಣಾಮವೇ ಎನ್ನುವ ರೀತಿಯಲ್ಲೇ ತನಿಖೆ ನಡೆದಿದ್ದು, ಅಲ್ಲಿಗೆ 2002ರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಎಲ್ಲ ಆರೋಪಗಳಿಂದಲೂ ಮುಕ್ತವಾಗಿದ್ದಾರೆ. ಸಹಜವಾಗಿಯೇ ಈ ಬೆಳವಣಿಗೆಯನ್ನು ನರೇಂದ್ರ ಮೋದಿ ಅವರ ಬೆಂಬಲಿಗರು, ಅಭಿಮಾನಿಗಳು ಹಾಗೂ ಬಿಜೆಪಿ ನಾಯಕರು ಸ್ವಾಗತಿಸಿ, ಮೋದಿ ಅವರನ್ನು ಹಾಡಿ ಹರಸಿದ್ದಾರೆ. ಆದರೆ ಗುರುವಾರವೇ ಕೇಂದ್ರ ಸಚಿವ ಸಂಪುಟ. ಗುಜರಾತ್ನಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ "ಇಚ್ಛೆಯಂತೆ" ಪೊಲೀಸರು ಒಬ್ಬ ಹೆಣ್ಣು ಮಗಳ ಚಲನವಲನಗಳ ಮೇಲೆ ಬೇಹುಗಾರಿಕೆ ನಡೆಸಿದ್ದರೆನ್ನುವ ಆರೋಪ ಕುರಿತು ನ್ಯಾಯಾಂಗ ತನಿಖೆಗೆ ಆಯೋಗವನ್ನು ರಚಿಸಲು ನಿರ್ಧರಿಸಿದ್ದು ವ್ಯಾಪಕ ಖಂಡನೆಗೆ ಗುರಿಯಾಗಿದೆ. ನಿಜ. ಇಂತಹ ಒಂದು ದೂರು ಈಗ ಅನೇಕ ವಾರಗಳಿಂದಲೂ ಕೇಳಿ ಬರುತ್ತಿದೆ. ಆ ದೂರಿನಲ್ಲಿ ಹೆಸರಿಸಲಾಗಿರುವ ಪ್ರಮುಖ ವ್ಯಕ್ತಿ ಗುಜರಾತ್ನ ಮಾಜಿ ಗೃಹ ಸಚಿವ ಅಮಿತ್ ಷಾ.
ಗುಜರಾತ್, ಹಿಮಾಚಲ ಪ್ರದೇಶ ಹಾಗೂ ದೆಹಲಿಯಲ್ಲಿ ಯಾವ ಅಧಿಕಾರಸ್ಥ ಸಂಸ್ಥೆಯ ಆದೇಶವೂ ಇಲ್ಲದೇ, ಇಂತಹ ಬೇಹುಗಾರಿಕೆ ಚಟುವಟಿಕೆ ನಡೆದಿರುವ ವಿಚಾರದಲ್ಲಿ ಗೃಹಮಂತ್ರಾಲಯ ಸಿದ್ಧಪಡಿಸಿರುವ ಟಿಪ್ಪಣಿಯೇ ಕೇಂದ್ರ ಸಚಿವ ಸಂಪುಟದ ನಿರ್ಧಾರಕ್ಕೆ ಪ್ರಚೋದನೆ ನೀಡಿದ್ದು. ಆ ಟಿಪ್ಪಣಿಗೆ ಆಧಾರ ಒಂದು ಅಂತರ್ಜಾಲ ಸಂಸ್ಥೆಯ ವರದಿ. ಈಗಾಗಲೇ ಗುಜರಾತ್ಗೆ ಸಂಬಂಧಿಸಿದ ಒಬ್ಬ ಮಹಿಳೆಯ ಚಲನವಲನದ ಮೇಲಿನ ಬೇಹುಗಾರಿಕೆ ಆರೋಪ ಕುರಿತಂತೆ ರಾಜ್ಯ ಸರ್ಕಾರವೇ ಒಂದು ತನಿಖಾ ಆಯೋಗವನ್ನು ನೇಮಿಸಿದೆ. ಆದರೂ ಕೇಂದ್ರ ಸರ್ಕಾರ ಗುಜರಾತ್ ಜತೆಗೆ ಹಿಮಾಚಲ ಪ್ರದೇಶ, ದೆಹಲಿಗಳನ್ನೂ ಸೇರಿಸಿ ಪ್ರತ್ಯೇಕ ಆಯೋಗವನ್ನು ರಚಿಸಿರುವ ಉದ್ದೇಶವೂ ಸ್ಪಷ್ಟ. ತನಿಖೆ ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ನಡೆಸಬೇಕು ಎನ್ನುವುದೇ ಆ ಉದ್ದೇಶ.
ಒಂದು ಅಂತರ್ಜಾಲ ಸುದ್ದಿ ಸಂಸ್ಥೆಯ ವರದಿಯಂತೆ, ಗುಜರಾತ್ನಲ್ಲಿ ಬೇಹುಗಾರಿಕೆಗೆ ಒಳಗಾಗಿದ್ದ ಮಹಿಳೆ ಬೆಂಗಳೂರಿನ ಒಬ್ಬ ಆರ್ಕಿಟೆಕ್ಟ್. ಆ ವಿಚಾರದಲ್ಲಿ ಗುಜರಾತ್ ಪೊಲೀಸರು ಕರ್ನಾಟಕ ಪೊಲೀಸರನ್ನು ಸಂಪರ್ಕಿಸಿದ್ದರು ಎಂದೂ ವರದಿ ತಿಳಿಸಿದೆ. ಕೇಂದ್ರ ಸಚಿವ ಸಂಪುಟದ ನಿರ್ಧಾರ ಸ್ಪಷ್ಟವಾಗಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ತೇಜೋವಧೆಯ ಪ್ರಯತ್ನವೇ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದನ್ನು ತಿರಸ್ಕರಿಸುವುದು ಯಾರಿಗಾದರೂ ಕಷ್ಟ. ಈ ಪ್ರಕರಣದ ಹೆಚ್ಚಿನ ವಿವರಗಳು ಪ್ರಕಟವಾದಂತೆ, ಕೇಂದ್ರ ಸರ್ಕಾರ ಪ್ರಜ್ಞಾವಂತರ ಸಮುದಾಯದ ಟೀಕೆಗಳನ್ನು ಎದುರಿಸಲೇ ಬೇಕಾಗುತ್ತದೆ. ಮೂರು ತಿಂಗಳಲ್ಲಿ ಯಾವ ಆಯೋಗವೂ ವರದಿ ನೀಡುವುದು ಕಷ್ಟ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

