ನರೇಂದ್ರ ಮೋದಿ- ರಾಹುಲ ಗಾಂಧಿ ಹೇಳಿಕೆಗಳದ್ದೇ ರಾಜಕೀಯ
ಕಳೆದ ವಾರದಲ್ಲಿ ಲೋಕಸಭೆ ಚುನಾವಣೆ ಸ್ಪಷ್ಟವಾಗಿ ಹಾಗೂ ನಿಖರವಾಗಿ ನರೇಂದ್ರ ಮೋದಿ- ರಾಹುಲ ಗಾಂಧಿ ನೇತೃತ್ವದ ಪಕ್ಷಗಳ ನಡುವಣ ಹೋರಾಟವಾಗುವ ಸೂಚನೆಗಳು ಅನುಮಾನಕ್ಕೆ ಆಸ್ಪದ ಕೊಡದ ರೀತಿಯಲ್ಲೇ ಕಂಡುಬರುತ್ತಿದೆ.
ನರೇಂದ್ರ ಮೋದಿ ಅವರನ್ನು ಬಿಜೆಪಿ ತನ್ನ ಪ್ರಧಾನಿ ಪೀಠದ ಅಭ್ಯರ್ಥಿ ಎಂದು ಪ್ರಕಟಿಸಿದ್ದಾಗಿದೆ. ಹಿಂದೆ ಹಲವಾರು ವಿಷಯಗಳಲ್ಲಿ ಮೋದಿ ಅವರ ಮಾತು- ವರ್ತನೆಯಿಂದ ದೂರವಾಗಿದ್ದ ಹಿರಿಯ ಬಿಜೆಪಿ ನಾಯಕ ಆಡ್ವಾಣಿ ಅವರೂ ಈಗ ಭಾವನಾತ್ಮಕವಾಗಿ ಹಾಗೂ ನಿಜ ರಾಜಕೀಯದಲ್ಲಿ ಮೋದಿಯವರ ಜತೆಯಲ್ಲೇ ನಡೆಯುತ್ತಿದ್ದಾರೆ. ಗುಜರಾತ್ನ ಗಾಂಧಿ ನಗರದಲ್ಲೇ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಮಾತನ್ನೂ ಅವರು ಆಡಿದ್ದಾರೆ.
ಪ್ರಧಾನಿ ಮನಮೋಹನ ಸಿಂಗ್ ಅವರೂ ಪ್ರಧಾನಿಯಾಗಿ ಮೂರನೆಯ ಅವಧಿಗೆ ಮುಂದುವರೆಯುವ ಉದ್ದೇಶ ಇಲ್ಲವೆಂದೂ, ರಾಹುಲ ಗಾಂಧಿ ಅವರಿಗೆ ಎಲ್ಲ ಬಗೆಯ ನೆರವು ನೀಡುವುದಾಗಿಯೂ ಹೇಳಿದ್ದಾಗಿದೆ. ಇದಕ್ಕಿಂತ ಲೋಕಸಭೆ ಚುನಾವಣೆಯಲ್ಲಿ ಅಲಂಕಾರಿಕವಾಗಿ ರಾಹುಲ ಗಾಂಧಿ- ನರೇಂದ್ರ ಮೋದಿ ಅವರೇ ಎದುರು- ಬದುರಾಗಿ ನಿಲ್ಲುವುದಕ್ಕೆ ಸಿದ್ಧ ಎನ್ನಲು ಬೇರೆ ಸಾಕ್ಷಿ ಯಾಕೆ ಬೇಕು? ಕಳೆದ ವಾರದಲ್ಲೇ ಈ ಇಬ್ಬರು ನಾಯಕರೂ ಅವರ ಹೊಸ ಅಸ್ತಿತ್ವವನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದೂ ಆಗಿದೆ.
ಹನ್ನೆರಡು ವರ್ಷಗಳ ಹಿಂದೆ ಗುಜರಾತಿನಲ್ಲಿ ಸಬರಮತೀ ಎಕ್ಸ್ಪ್ರೆಸ್ನ ಕರಸೇವಕರ ಬೋಗಿಗೆ ಬೆಂಕಿ ಬಿದ್ದು ಅನಂತರ ಗುಜರಾತ್ನ ಅನೇಕ ಕಡೆಗಳಲ್ಲಿನ ಕೋಮು ಗಲಭೆಗಳಲ್ಲಿ ಸುಮಾರು ಎರಡು ಸಹಸ್ರ ಜನರ ಹತ್ಯೆಯಾಯಿತೆನ್ನುವ ವರದಿಗಳ ಹಿನ್ನೆಲೆಯಲ್ಲಿ ಇದುವರೆಗೆ ತಮ್ಮ ವಿರುದ್ಧದ ಪಕ್ಷಪಾತ ನೀತಿಯ ಜಾರಿಯ ಆರೋಪ ಕುರಿತು ನರೇಂದ್ರ ಮೋದಿ ಒಂದು ಮಾತನ್ನೂ ಆಡಿರಲಿಲ್ಲ. ನಿಜ. ಅವರ ವಿರುದ್ಧವೇ ದೇಶ-ವಿದೇಶಗಳ ಸಂಘಟನೆಗಳು ಬಹುಮುಖದ ಆರೋಪಗಳನ್ನು ಮಾಡುತ್ತಿದ್ದ ಹಿನ್ನೆಲೆಯಲ್ಲಿ, ಸ್ಥಳೀಯ ನ್ಯಾಯಾಲಯದಲ್ಲಿನ ಕೇಸುಗಳಲ್ಲೇ ಮುಳುಗಿದ್ದ ಮೋದಿ ಅವರಿಗೆ ತಮ್ಮ ನಿಲವನ್ನು ಪ್ರತಿಪಾದಿಸುವ ಅವಕಾಶವೇ ಸಿಗಲಿಲ್ಲ.
ಆದರೆ ಈಗ ಗೋಧ್ರಾ (ಸಬರಮತೀ ಎಕ್ಸ್ಪ್ರೆಸ್ ಬೆಂಕಿ) ಹಾಗೂ ಗೋಧ್ರಾ ಘಟನೆಯ ಅನಂತರ ನಡೆದ ಗಲಭೆಗಳಲ್ಲಿ ನರೇಂದ್ರ ಮೋದಿ ಅವರಿಂದ ಪ್ರಭುತ್ವದ ಅಧಿಕಾರದ ದುರುಪಯೋಗವಾಗಿದೆ ಎನ್ನುವ ಆರೋಪಗಳೆಲ್ಲವೂ ನಿಕಾಲೆಯಾದಂತೆ ಆಗಿದೆ. ಕೊಟ್ಟ ಕೊನೆಯ ಅಗ್ನಿ ಪರೀಕ್ಷೆಯಂತಹ ಪ್ರಕರಣದಲ್ಲಿ ಅಹಮದಾಬಾದ್ನ ನ್ಯಾಯಾಲಯ ಅವರನ್ನು ದೋಷಮುಕ್ತ ಎಂದು ಸಾರುವುದನ್ನೇ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದಂತೆ ಕಂಡುಬಂದ ಮೋದಿ ಅವರು ಹನ್ನೆರಡು ವರ್ಷಗಳ ಕಾಲ ತಮ್ಮ ಮನಸ್ಸು- ಹೃದಯದಲ್ಲೇ ಅಡಗಿಸಿದ್ದ, ತಮ್ಮ ಅನುಭವಕ್ಕೇ ಸೀಮಿತವಾಗಿದ್ದ ನೋವು, ದುಃಖ, ದುಮ್ಮಾನಗಳನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ.
ತತ್ಕ್ಷಣದಲ್ಲೇ ಅವರ ಸಾಂಪ್ರದಾಯಿಕ ವಿರೋಧಿಗಳು ಇದು ಮೊಸಳೆ ಕಣ್ಣೀರು, ಲೋಕಸಭೆ ಚುನಾವಣೆ ಸಮಯದಲ್ಲಿ ಮುಸ್ಲಿಮರ ಸಹಾನುಭೂತಿ ಗಳಿಸುವ ಪ್ರಯತ್ನ ಎಂದು ಟೀಕಿಸಿ, ಲೇವಡಿ ಮಾಡಿದ್ದು ಸಹಜವೇ. ಮೋದಿ ಅವರು ತಮ್ಮ ಹೇಳಿಕೆಯಿಂದ ಹೊಸ ಅಸ್ತಿತ್ವದ ಪ್ರದರ್ಶನಕ್ಕೆ ಸಿದ್ಧವಾಗಿದ್ದಂತೂ ಸ್ಪಷ್ಟ. ಗುಜರಾತ್ ಹತ್ಯಾಕಾಂಡದಿಂದ ಅವರಿಗೆ ಮಾನಸಿಕವಾಗಿ ನೋವಾಗಿಲ್ಲ ಎನ್ನುವುದಕ್ಕೆ ಸಾಕ್ಷ್ಯ ಯಾರಿಗೂ ಸಿಗುವುದಿಲ್ಲ. ಆಗದೇ ಇರುವ ವಿಷಯಕ್ಕೆ ಸಾಕ್ಷ್ಯ ಎಲ್ಲಿರುತ್ತದೆ?
ಇದೇ ವಾರದಲ್ಲೇ ಕಾಂಗ್ರೆಸ್ಸಿನ ಲೋಕಸಭೆ ಚುನಾವಣೆ ಪ್ರಚಾರದ ರಥದಲ್ಲಿ ಕೂಡಲು ಸಿದ್ಧವಾಗಿರುವ ರಾಹುಲ ಗಾಂಧಿ ಅವರ ಹೊಸ ಶೈಲಿಯಲ್ಲಿ ಮುಂಬೈನ ಆದರ್ಶ್ ವಸತಿ ನಿರ್ಮಾಣ ಯೋಜನೆಯಲ್ಲಿ ನಡೆಯಿತೆನ್ನಲಾದ ಅವ್ಯವಹಾರಗಳ ತನಿಖಾ ಆಯೋಗ ವರದಿಯನ್ನು, ಮಹಾರಾಷ್ಟ್ರ ಸರ್ಕಾರದ ಸಚಿವ ಸಂಪುಟ, ಮೂರು ಅಂಶಗಳನ್ನು ಬಿಟ್ಟು, ಉಳಿದೆಲ್ಲ ಭಾಗವನ್ನು ಸಾರಾಸಗಟು ತಿರಸ್ಕರಿಸಿದ್ದು ತಮಗೆ ಸರಿ ಎಂದು ಕಂಡುಬಂದಿಲ್ಲವೆಂದು ಹೇಳಿರುವುದೂ ಸಾಕಷ್ಟು ವಾದ- ವಿವಾದಕ್ಕೆ ಅವಕಾಶವನ್ನು ಮಾಡಿಕೊಡುವುದು ಖಚಿತ. ಇಲ್ಲೂ ಅಷ್ಟೇ. ರಾಹುಲ ಗಾಂಧಿ, ಆದರ್ಶ್ ವಸತಿ ಯೋಜನೆಯ ತನಿಖಾ ವರದಿಯನ್ನು ಕುರಿತು ಸಾರ್ವಜನಿಕವಾಗಿ ಸಾಕಷ್ಟು ಟೀಕೆಗಳು ಬಂದಿದ್ದನ್ನು ಗಮನಿಸಿದ ಅನಂತರವೇ ತಮಗೆ ಸರ್ಕಾರದ ನಿರ್ಧಾರ ಸರಿಕಂಡಿಲ್ಲ ಎಂದು ಹೇಳಿರುವುದೂ ರಾಜಕೀಯವೇ.
ಹಿಂದೆ ಕ್ರಿಮಿನಲ್ ಶಿಕ್ಷೆಗೆ ಗುರಿಯಾಗಿದ್ದವರು ಚುನಾವಣೆಯಲ್ಲಿ ಸ್ಪರ್ಧಿಸಬಾರದೆನ್ನುವ ನಿಷೇಧವನ್ನು ರದ್ದುಪಡಿಸುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಯ ವಿಚಾರದಲ್ಲೂ ರಾಹುಲ್ ಹೀಗೇ ಮಾಡಿದ್ದರು. ಆ ಸುಗ್ರೀವಾಜ್ಞೆ ಈಗ ಜಾರಿಯಲ್ಲಿಲ್ಲ. ಅದೇ ರೀತಿ ಆದರ್ಶ್ ವಸತಿ ನಿರ್ಮಾಣ ಯೋಜನೆಯ ಅವ್ಯವಹಾರಗಳ ವಿಚಾರದಲ್ಲೂ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ಏರುಪೇರಾಗಲೂಬಹುದು.
ಇದೇ ರಾಹುಲ ಗಾಂಧಿ ಅವರ ಹೊಸ ಪ್ರವೃತ್ತಿ ಎನ್ನುವ ಮಾತೂ ಕೇಳಿಬರುತ್ತಿದೆ. ಈಗ ಕಾಂಗ್ರೆಸ್ ಪಕ್ಷದ ನೀತಿ ನಿರೂಪಣೆಯ ಸಂಬಂಧದಲ್ಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮೌನವಾಗಿದ್ದಾರೆ. ಆದರ್ಶ್ ವಸತಿ ನಿರ್ಮಾಣ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದರೆ, ಅದಕ್ಕೆ ಜವಾಬ್ದಾರಿಯನ್ನು ಹೊರಬೇಕಾದವರ ಮೇಲೆ ಕ್ರಮ ಜರುಗಿಸಲೂಬಹುದು. ಆದರೆ ಮಾಧ್ಯಮ ಪ್ರಪಂಚಕ್ಕೆ ಸೋನಿಯಾ ಗಾಂಧಿ ವಿರೋಧ ಪಕ್ಷಗಳ ರಾಜ್ಯ ಸರ್ಕಾರಗಳ ಭ್ರಷ್ಟಾಚಾರದ ಪ್ರಕರಣಗಳನ್ನು ಗಮನಿಸಿ ಎಂದಿರುವುದೂ ಗಮನಾರ್ಹ. ರಾಹುಲ ಗಾಂಧಿ ಈಚೆಗೆ ಅನೇಕ ಕಡೆಗಳಲ್ಲಿ ಇಂದಿರಾ ಗಾಂಧಿ ಅವರ ಕಾಲದ ಸರ್ಕಾರದ ನೀತಿ- ಧೋರಣೆಗಳನ್ನು ಹೊಗಳುತ್ತಿರುವುದೂ ಒಂದು ಪ್ರವೃತ್ತಿಯೇ. ಈ ಬೆಳವಣಿಗೆಗಳು ಮುಂಬರಲಿರುವ ದಿನಗಳಲ್ಲಿ ಬೀರಬಹುದಾದ ಪರಿಣಾಮವನ್ನು ಜನ ಸೂಕ್ಷ್ಮವಾಗಿ ಗಮನಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

