ಸಡಗರ-ಸಂಭ್ರಮದ ಮಧ್ಯೆ ಗಾಂಭೀರ್ಯ ಸೊರಗಬಾರದು
ಕನ್ನಡ ಸಾಹಿತ್ಯ ಸಮ್ಮೇಳನ, ಅಕ್ಷರಶಃ ಮತ್ತು ವಸ್ತುಶಃ ಕನ್ನಡದ ಅಕ್ಷರ ಜಾತ್ರೆ ಎನ್ನುವ ಆಡು ಮಾತು ಇದೆ. ಕಳೆದ ಹಲವಾರು ವರ್ಷಗಳಲ್ಲಿ ಸರ್ಕಾರದ ಉದಾರ ನೆರವು ಹಾಗೂ ಕೆಲವು ಜನವರ್ಗಗಳಲ್ಲಿ ಮೂಡುತ್ತಿರುವ ಉತ್ಸಾಹದ ಹಿನ್ನೆಲೆಯಲ್ಲಿ ಅಕ್ಷರ ಜಾತ್ರೆಯಲ್ಲಿ, ಜಾತ್ರೆಯ ಗುಣಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದೂ ನಿಜ.
ಕಾಲಚಕ್ರದ ಉರುಳಲ್ಲಿ ಸಿಕ್ಕಿ ಬಿದ್ದು ಸಾಹಿತ್ಯ ಸಮ್ಮೇಳನಗಳಲ್ಲಿ ಗಂಭೀರ, ಸಾಹಿತ್ಯಾತ್ಮಕ ಅಧ್ಯಯನ ಆಧರಿತ, ಪಾಂಡಿತ್ಯವನ್ನು ಒಳಗೊಂಡ ವಿಚಾರ - ವಿನಿಮಯಕ್ಕಿಂತ, ಉತ್ಸಾಹ - ಸಡಗರ ಸಂಭ್ರಮವೇ ಹೆಚ್ಚಾಗುತ್ತಿರುವುದನ್ನು ಅನೇಕ ಸಾಹಿತ್ಯ ಪ್ರೇಮಿಗಳು ಗುರ್ತಿಸಿದ್ದಾರೆ. ಪ್ರತಿಯೊಂದು ಸಾಹಿತ್ಯ ಸಮ್ಮೇಳನದಲ್ಲೂ ಅತಿ ಮುಖ್ಯವಾದ ಭಾಗ ಸಮ್ಮೇಳನಾಧ್ಯಕ್ಷರ ಪ್ರಮುಖ ಭಾಷಣ. ಆ ಭಾಷಣವನ್ನು ಜನ ಎದುರು ನೋಡುತ್ತಾರೆ. ಅದು ಭವಿಷ್ಯದಲ್ಲಿ ದಾಖಲೆಯಲ್ಲಿ ಸೇರಿಕೊಳ್ಳುತ್ತದೆ.
ಹಿಂದಿನ ಅನೇಕ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳ ಮೌಲ್ಯ ಅಪಾರವಾದದ್ದು. ನಾಡು - ನುಡಿಯ ಹಿರಿಮೆಯನ್ನು, ಜ್ವಲಂತ ಸಾಮಾಜಿಕ ಸಮಸ್ಯೆಗಳನ್ನು, ಪ್ರಧಾನವಾಗಿ ಕನ್ನಡದ ಸ್ಥಾನಮಾನದ ಪ್ರಶ್ನೆಯನ್ನು, ಆ ಪಂಡಿತೋತ್ತಮರು ವಿಶ್ಲೇಷಿಸಿರುವ ರೀತಿ ಅಸಾಧಾರಣವಾದದ್ದು. ಅನೇಕರ ಅಧ್ಯಕ್ಷ ಭಾಷಣಗಳಿಗೆ ಆಕರ ಗ್ರಂಥಗಳ ಸ್ವರೂಪವೂ ಇದೆ. ಗಾತ್ರ ಚಿಕ್ಕದಾಗಿರಬಹುದು. ಆದರೆ ಬಿಜಾಪುರದಲ್ಲಿ ಶನಿವಾರ, ಫ,ಗು. ಹಳಕಟ್ಟಿ ಅವರ ಹೆಸರಿನಲ್ಲಿನ ಮಂಟಪದಲ್ಲಿ ಆರಂಭವಾದ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆರಂಭದ ಅಧಿವೇಶನ, ಸಭಾಧ್ಯಕ್ಷರ ಮೆರವಣಿಗೆ ಹಾಗೂ ಇತರ ಕಾರ್ಯಕ್ರಮಗಳಲ್ಲಿನ ಮೇರೆ ಮೀರಿದ ಉತ್ಸಾಹ, ಸಡಗರದಲ್ಲಿ ಸಾಹಿತ್ಯಾತ್ಮಕ ಕ್ರಿಯೆಯಾದ ಅಧ್ಯಕ್ಷರ ಭಾಷಣ ಸೊರಗಿತ್ತು. ಸಮ್ಮೇಳನಾಧ್ಯಕ್ಷ ಕೋ. ಚನ್ನಬಸಪ್ಪ ಅವರ ಭಾಷಣವಾಗಬೇಕಾಗಿದ್ದ ಸಮಯ ಬಂದಾಗ ವೇಳೆ ಮೀರಿತ್ತು. ಸಮ್ಮೇಳನಕ್ಕೆ ಬಂದವರಿಗೆ ಹಸಿವೆಯೂ ಆಗಿತ್ತು. ಸಿದ್ಧಪಡಿಸಿದ ಅಧ್ಯಕ್ಷ ಭಾಷಣದ ಪ್ರತಿಯನ್ನು ಕೈಬಿಟ್ಟು ಅಧ್ಯಕ್ಷರು "ಭಾಷಣದ" ಅಂಶಗಳನ್ನು ಆಧರಿಸಿ ಆಶುಭಾಷಣ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾಹಿತ್ಯ ಸಮ್ಮೇಳನಗಳ ಇತಿಹಾಸದಲ್ಲೇ ಹಿಂದೆಂದೂ ಹೀಗಾಗಿರಲಿಲ್ಲ.
ತುಂಬಾ ಹಿಂದೆ ಸಾಹಿತ್ಯದ ಆರಾಧಕರೇ ಹೆಚ್ಚಾಗಿ ಸಮ್ಮೇಳನಕ್ಕೆ ಬರುತ್ತಿದ್ದರಿಂದ ಅಧ್ಯಕ್ಷರ ಭಾಷಣದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳೇ ಇರುತ್ತಿತ್ತು. ಅನಂತರದ ದಿನಗಳಲ್ಲಿ ಸಾಹಿತಿಗಳು ದಂತಗೋಪುರಕ್ಕೇ ಸೀಮಿತವಾಗದೇ ನಾಡು-ನುಡಿಗಳ ಸಮಕಾಲಿನ ಸಮಸ್ಯೆಗಳನ್ನು ಅಧ್ಯಕ್ಷರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವುದು ಅನಿವಾರ್ಯವಾಯಿತು. ನೆಲ-ಜಲ ವಿವಾದಗಳು, ಜನಜೀವನದ ದುರ್ಭರ ಪರಿಸ್ಥಿತಿ, ಇತ್ತೀಚೆಗೆ ಭ್ರಷ್ಟಾಚಾರದಂತಹ ಅನೇಕ ವಿಚಾರಗಳು ಅಧ್ಯಕ್ಷರ ಭಾಷಣದಲ್ಲಿ ನುಸುಳಿದ್ದವು. ಈಗಿನ ಸಮ್ಮೇಳನಾಧ್ಯಕ್ಷ ಕೋ. ಚನ್ನಬಸಪ್ಪ ಅವರು ವಕೀಲರು, ನ್ಯಾಯಾಧೀಶರು, ಕನ್ನಡ ಪರ ಹೋರಾಟಗಾರರು, ಪ್ರತ್ಯಕ್ಷ ರಾಜಕೀಯದಲ್ಲಿದ್ದ ರಾಜಕಾರಣಿ ಹಾಗೂ ಸಮಾಜಸೇವಕ- ಸಾಹಿತಿ. ಹೀಗಾಗಿ ಅವರು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮಾಡಿದ "ಆಶುಭಾಷಣದಲ್ಲಿ ಕನ್ನಡ ಜನ ಸಮುದಾಯಗಳಿಗೆ ನೀಡಿದ ಸಂದೇಶದಲ್ಲಿ ಸಮಕಾಲೀನ ಸಮಸ್ಯೆಗಳಿಗೇ ಪ್ರಾಧಾನ್ಯವಿದ್ದಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.
ಅವರ ಭಾಷಣದಲ್ಲಿ ಪ್ರಧಾನವಾಗಿ ಗಮನ ಸೆಳೆದ ಅಂಶ ಎಂದರೆ ವಿಪರೀತ ಹೆಚ್ಚಾಗಿರುವಂತೆ ಕಂಡು ಬರುತ್ತಿರುವ ಜಾತಿ ದ್ವೇಷದ ದಳ್ಳುರಿ. ಜಾತಿ-ಮತ ದ್ವೇಷದ ಅಗ್ನಿಕುಂಡದ ಪ್ರಸ್ತಾಪವಿತ್ತು. ಗೋದ್ರೋತ್ತರ ಕಾಳ್ಗಿಚ್ಚಿನ ಪ್ರಸ್ತಾಪವೂ ಇತ್ತು. ಪರೋಕ್ಷವಾಗಿ ಕಾವೇರಿ ನೀರಿನ ವಿವಾದವೂ ಅಲ್ಲಿ ಇತ್ತು, ಎಲ್ಲ ಸಮಸ್ಯೆಗಳನ್ನೂ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಬಯಕೆ ಅವರದ್ದು. ಸನಾತನಿಗಳ ಅಗ್ನಿಕುಂಡ ಹಾಗೂ ಮತಾಂತರ ಕುರಿತ ಪ್ರಸ್ತಾಪವನ್ನು ಜೋರಾಗಿಯೇ ಮಾಡಿದರು.
ಭ್ರಷ್ಟಾಚಾರದ ಅರ್ಬುದ ರೋಗದ ವಿರುದ್ಧ ಆಕ್ರೋಶವಿತ್ತು. ಜಾತೀಯತೆಯ ವಿಷದ ವ್ಯಾಪಾರಿಗಳಿಂದ ದೂರವಿರಬೇಕೆನ್ನುವ ಕರೆ ಇತ್ತು. ಜನಾಂಗಗಳ ನಡುವೆ ಜಗಳವಾಡುವುದು ಸಾಧ್ಯವಿಲ್ಲ, ಅದು ನಿಸರ್ಗದ ನಿಯಮಕ್ಕೆ ವಿರುದ್ಧ. ಜಗಳ ನಡೆಯುವುದು ಆಸಕ್ತ ಹಿತಗಳ ನಡುವೆ. ಇದೇ ಸಂದರ್ಭದಲ್ಲೇ ಟಿಪ್ಪೂ ಹೆಸರಿನ ವಿಶ್ವವಿದ್ಯಾಲಯದ ಸ್ಥಾಪನೆಯ ವಿಚಾರವೂ ಇತ್ತು. ನಮ್ಮ ಸಂವಿಧಾನದ ಚೌಕಟ್ಟಿನಲ್ಲೇ ಕನ್ನಡ, ನಮ್ಮ ಮಕ್ಕಳಿಗೆ ಅನ್ನ ಕೊಡುವ ಉದ್ಯೋಗವನ್ನು ಒದಗಿಸುವ ಭಾಷೆಯಾಗಬೇಕೆನ್ನುವ ಮಾತು ಈಗಾಗಲೇ ಕೇಳಿ ಬಂದಿದೆ. ಈಗಲೂ ಅದೇ ಮಾತು. ರಾಜ್ಯದ ನಗರಗಳಲ್ಲಿ ಕನ್ನಡದ ಸ್ಥಾನ-ಮಾನ ಸೊರಗಿದೆ. ಕನ್ನಡ ಉಳಿದಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಎನ್ನುವ ನೋವೂ ಪ್ರಕಟವಾಗಿತ್ತು. ಪ್ರಚಲಿತ ಜ್ವಲಂತ ಸಮಸ್ಯೆಗಳೆನಿಸಿದ, ಉದ್ಯಮಿಗಳಿಗೆ "ಭೂದಾನ", ನೈತಿಕ ಪತನ, ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳೂ ತಮ್ಮ ಸ್ಥಾನ ಪಡೆದವು. ಕನ್ನಡ-ಕರ್ನಾಟಕ- ಕನ್ನಡಿಗರ ಭಾವನಾತ್ಮಕ ವೈಭವದ ಪ್ರಸ್ತಾಪವಂತೂ ಹೇರಳವಾಗಿತ್ತು.
ನಿಜ. ಬರಹಗಾರರು ರಾಜಕೀಯದಿಂದ ದೂರವಿರಬೇಕಾಗಿಲ್ಲ. ಆದರೆ ರಾಜಕೀಯವೇ ಅವರ ಜೀವನವಾಗಬೇಕಾಗಿಲ್ಲ. ಅಧ್ಯಕ್ಷರ ಭಾಷಣದಲ್ಲಿ ಕನ್ನಡ ಶಾಲೆಗಳನ್ನು ಉಳಿಸಬೇಕೆನ್ನುವ ಘೋಷವಾಕ್ಯವನ್ನು ಸೇರಿಸಲಾಗಿತ್ತು. ಸಾಹಿತ್ಯ ಸಮ್ಮೇಳನಕ್ಕೆ ಮಾರ್ಗದರ್ಶಿ ಸೂತ್ರದಂತೆ ಇರಬೇಕಾದ ಅಧ್ಯಕ್ಷರ ಭಾಷಣ ಗೊಂದಲದಲ್ಲಿ ಮುಳುಗಿ ಹೋಗಿದ್ದು ನಿಜಕ್ಕೂ ವಿಷಾದನೀಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

