ಗಲ್ಲುಶಿಕ್ಷೆಗೆ ವಿರೋಧವೇಕೆ? (ಪತ್ರಗಳು)
ಉಗ್ರರಿಗೆ ನೆರವು ನೀಡಿದ್ದ ಅಫ್ಜಲ್ಗೆ ಕೊನೆಗೂ ಗಲ್ಲು ಶಿಕ್ಷೆಯಾಯಿತಲ್ಲಾ ಎಂದು ಇಡೀ ದೇಶವೇ ನಿಟ್ಟುಸಿರು ಬಿಟ್ಟಿದೆ. ಆದರೆ ಕೆಲ ಮಾನವಹಕ್ಕು ಸಂಘಟನೆಗಳು, ಜೈಪುರದಲ್ಲಿ ನಾಗರಿಕ ಹಕ್ಕುಗಳ ಸಂಘಟನೆಗಳು ಗಲ್ಲುಶಿಕ್ಷೆಗೆ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಅರ್ಥವಿದೆಯೇ? ಸಂಸತ್ ಭವನದೊಳಗೆ ನುಗ್ಗಿ 9 ಜನರ ಸಾವಿಗೆ ಕಾರಣರಾದ ಇಂತಹ ದುಷ್ಟರನ್ನು ಕೂರಿಸಿ ಆರತಿ ಎತ್ತಬೇಕೆ? ಇಂತಹ ದುಷ್ಟರಿಗೆ ಬದುಕುವ ಹಕ್ಕಾದರೂ ಎಲ್ಲಿದೆ? ಈತನಿಗೆ ಗಲ್ಲು ಶಿಕ್ಷೆ ನೀಡಿದ್ದು ಯಾವುದೇ ಪಾರ್ಟಿಯಲ್ಲ, ಯಾವುದೇ ಧರ್ಮದವರಲ್ಲ ಅಥವಾ ಯಾವುದೇ ಜಾತಿಯವರಲ್ಲ. ಕಾನೂನು ಪ್ರಕಾರ ಎಲ್ಲ ವಿಚಾರಣೆ ನಡೆಸಿ ಗಲ್ಲು ಶಿಕ್ಷೆ ಕೊಟ್ಟಿದ್ದು ಘನ ನ್ಯಾಯಾಲಯ. ಜೊತೆಗೆ ರಾಷ್ಟ್ರಪತಿಯಿಂದಲೂ ಕ್ಷಮಾದಾನ ಅರ್ಜಿ ತಿರಸ್ಕೃತಗೊಂಡು ಮಾಡಿದ ಕೃತ್ಯಕ್ಕೆ ತಕ್ಕ ಶಿಕ್ಷೆಯಾಗಿದೆ. ಇಂತಹವರನ್ನು ಸೆಕ್ಯುರಿಟಿಯೊಂದಿಗೆ ಜೈಲಿನಲ್ಲಿಟ್ಟು ಲಕ್ಷಗಟ್ಟಲೆ ಖರ್ಚು ಮಾಡಿ ಸಾಕುವುದು ರಾಷ್ಟ್ರಕ್ಕೆ ಹೊರೆಯಲ್ಲವೇ? ಇಂತಹವರನ್ನು ಹಾಗೇ ಬಿಟ್ಟರೆ ಇನ್ನಷ್ಟು ಉಗ್ರರು ಹುಟ್ಟಿಕೊಳ್ಳುತ್ತಾರೆ. ಇಂತಹ ದುಷ್ಟರ ಕುಟುಂಬದವರೂ ಸಹ ಮಾಡಿದ ಪಾಪ ಕೆಲಸಕ್ಕೆ ತಕ್ಕ ಶಿಕ್ಷೆಯಾಗಲಿ ಎಂದು ಹೇಳಬೇಕೇ ವಿನಃ ಅವರನ್ನು ಸಮರ್ಥಿಸಿಕೊಳ್ಳಬಾರದು. ಈ ಉಗ್ರರಿಂದ ಪ್ರಾಣ ಕಳೆದುಕೊಂಡ ಒಂಭತ್ತು ಕುಟುಂಬದವರ ಸ್ಥಿತಿಯ ಬಗ್ಗೆ ನಾವು ಯೋಚಿಸಬೇಕಲ್ಲವೇ? ಈಗಲಾದರೂ ಗಲ್ಲುಶಿಕ್ಷೆಯಾಯಿತಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕಿದೆ. ಗಲ್ಲು ಶಿಕ್ಷೆಗೆ ವಿರೋಧ ವ್ಯಕ್ತಪಡಿಸುವುದಕ್ಕೆ ಅರ್ಥವಿಲ್ಲ.
-ಪದ್ಮಾಕೃಷ್ಣಮೂರ್ತಿ, ತುಮಕೂರು
ಊಟದ ವ್ಯವಸ್ಥೆ ಇರಲಿ
ವಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟದ ಸಮಯದಲ್ಲಿ ನೂಗುನುಗ್ಗಲಾಗಿ ಅಸ್ತವ್ಯಸ್ತವಾದ ಕಾರಣ ಮುಂದಿನ 80ನೇ ಸಮ್ಮೇಳನದಲ್ಲಿ ಲಕ್ಷಾಂತರ ಸಾಹಿತ್ಯಾಸಕ್ತರಿಗೆ ಊಟದ ವ್ಯವಸ್ಥೆಯೇ ಬೇಡ ಎಂಬ ತೀರ್ಮಾನ ಸರಿಯಲ್ಲ. ಊಟದ ಸ್ಥಳದಲ್ಲಾದ ಗಲಾಟೆಗೆ ಸಂಘಟಕರೇ ಕಾರಣವಾಗುತ್ತಾರೆ. ಹಿಂದಿನ ಗಂಗಾವತಿ ಸಮ್ಮೇಳನದಲ್ಲಿ ಊಟದ ವ್ಯವಸ್ಥೆಯನ್ನು ಸಂಘಟಕರೇ ಬಹಳ ಅಚ್ಚುಕಟ್ಟಾಗಿ ಮಾಡಿದ ಪರಿಣಾಮ ಅಲ್ಲಿ ಯಾವುದೇ ಗಲಾಟೆಗೆ ಆಸ್ಪದವಿದ್ದಿಲ್ಲ. ಆಯೋಜಕರು ಹಿಂದಿನ ಸಮ್ಮೇಳನದ ಸಂಘಟಕರ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದರೆ ಊಟದ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿರಲಿಲ್ಲ. ಇನ್ನು ಹಿರಿಯ ಸಾಹಿತಿಗಳು ಬುತ್ತಿಕಟ್ಟಿಕೊಂಡು ಸಮ್ಮೇಳನಕ್ಕೆ ಬನ್ನಿ ಎಂದಿದ್ದಾರೆ. ದೂರದ ಬೀದರ್ನವರು ಕೊಡಗಿಗೆ ಬುತ್ತಿಕಟ್ಟಿಕೊಂಡು ಬರಲು ಸಾಧ್ಯವೇ? ಸ್ಥಳೀಯ ಸಂಸ್ಕೃತಿ, ಸೊಗಡಿನ ಪರಿಚಯದ ಒಂದು ಭಾಗದ ಊಟದ ವ್ಯವಸ್ಥೆಯಾಗಿರುತ್ತದೆ. ನಾಡಿನಲ್ಲಿ ಒಂದೊಂದು ಭಾಗದಲ್ಲಿ ವಿವಿಧ ರೀತಿಯ ಊಟೋಪಚಾರದ ಸಂಪ್ರದಾಯವಿದೆ. ದೂರದಿಂದ ಬಂದ ಜನರಿಗೆ ಸ್ಥಳೀಯ ಪದ್ಧತಿಯ ಊಟದ ಪರಿಚಯವೇ ಹೊರತು ಇದು ಸುಗ್ರಾಸ ಭೋಜನವಲ್ಲ.
-ಈ.ಜಿ. ರೆಡ್ಡಿ, ಬಳ್ಳಾರಿ ತಾ.
ಕಿಸೆಗಳ್ಳರಲ್ಲಿ ವಿನಂತಿ
ಬೀದರ್ ಸಾಹಿತ್ಯ ಸಮ್ಮೇಳನದಲ್ಲಿ/ವೇದಿಕೆ ಇಳಿದ ಕೆಲ ನಿಮಿಷದಲ್ಲಿ/ಆನಂದರಾಮ/ ಶಾಸ್ತ್ರಿ ಕಳೆದುಕೊಂಡರು/ನಾಲ್ಕೂವರೆ ಸಾವಿರ ರೂ./ಬಿಜಾಪುರ ಸಾಹಿತ್ಯ ಸಮ್ಮೇಳನದಲ್ಲಿ/ವೇದಿಕೆ ಏರುವಷ್ಟರಲ್ಲಿ/ಬರಗೂರು ರಾಮಚಂದ್ರಪ್ಪ/ಕಳೆದುಕೊಂಡರು/ ಒಂಭತ್ತೂವರೆ ಸಾವಿರ ರೂ./ಕಿಸೆಗಳ್ಳರು ಕರುಣೆ ತೋರಬಾರದೇ/ಬಡ ಸಾಹಿತಿಗಳ ಮೇಲಾದರೂ?
-ಎಚ್. ಆನಂದರಾಮ ಶಾಸ್ತ್ರಿ, ಬೆಂಗಳೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

