ತಪ್ಪಾಯ್ತು ತಿದ್ಕೋತೀವಿ
ಬೆಂಗಳೂರಿನ ಕೊಟ್ಟಿಗೆಪಾಳ್ಯದಿಂದ ರಾಮಚಂದ್ರ ಅವರು ಬರೆಯುತ್ತಾರೆ- 'ಜ.25ರಂದು ಪುಟ 5ರಲ್ಲಿ 'ಸಮಸ್ಯೆಯ ಮೂಲ ಹುಡುಕುವ ಬದಲು ಪರಿಹಾರ ಕಂಡುಕೊಳ್ಳೋಣ: ಸಂಸದ ಜನಾರ್ದನ ಸ್ವಾಮಿ' ಎಂಬ ಶೀರ್ಷಿಕೆಯ ಸುದ್ದಿಯ ಪಕ್ಕದಲ್ಲಿಯೇ ಸುದ್ದಿಗೆ ಸಂಬಂಧಿಸಿದ ಫೋಟೊ ಪ್ರಕಟಿಸಿದ್ದೀರಿ. ಅದರ ಅಡಿಬರಹದಲ್ಲಿ '6ನೇ ವಾರ್ಷಿಕೋತ್ಸವವನ್ನು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಸಂಸದ ಜನಾರ್ದನ ಸ್ವಾಮಿ, ಶಾಸಕ ರಘು ಇದ್ದರು' ಎಂದು ಬರೆಯಲಾಗಿದೆ. ಆದರೆ ಚಿತ್ರದಲ್ಲಿ ಸಂಸದ ಜನಾರ್ದನ ಸ್ವಾಮಿ ಮತ್ತು ಶಾಸಕ ರಘು ಇಬ್ಬರೂ ಇಲ್ಲ.'
'ಇಲ್ಲಿ ಇನ್ನೊಂದು ಸಂಗತಿಯನ್ನು ನಿಮ್ಮ ಗಮನಕ್ಕೆ ತರಬೇಕು. ಅದೇನೆಂದರೆ 'ಶ್ರೀ ಇಮ್ಮಡಿ ಸಿದ್ಧರಾಮೇಶ್ವರ' ಎಂದು ಬರೆಯಲಾಗಿದೆ. ಪತ್ರಿಕೆಗಳಲ್ಲಿ ಸಿದ್ಧರಾಮಯ್ಯ, ಸಿದ್ಧಯ್ಯ, ಸಿದ್ಧರಾಮೇಶ್ವರ, ಜನಾರ್ಧನ ಮುಂತಾದ ಬಳಕೆಗಳನ್ನು ಯಾವಾಗಲೂ ಗಮನಿಸುತ್ತಿರುತ್ತೇನೆ. 'ಸಿದ್ಧ' ಅಂದರೆ ತಯಾರಿದ್ದೇನೆ ಅನ್ನುತ್ತಾರಲ್ಲ ಅದು ಮಾತ್ರ ಮಹಾಪ್ರಾಣ. ಹೆಸರುಗಳಲ್ಲಿ 'ದ' ಅಲ್ಪಪ್ರಾಣ. ಯಾಕೋ ಪತ್ರಕರ್ತರಿಗೆ ಮಹಾಪ್ರಾಣದತ್ತಲೇ ಹೆಚ್ಚು ಆಸಕ್ತಿ.'
'ಇನ್ನು ಪುಟ 15ರಲ್ಲಿ 'ಶತಾಯುಷಿ ಫೌಜಾ ವಿದಾಯ' ಎಂಬ ಸುದ್ದಿಯ ಆರಂಭದಲ್ಲಿ 'ಹಾಕಾಂಗ್' ಎಂಬ ಬಳಕೆಯಿದೆ. ಇದೇನು? 'ಹಾಂಕಾಂಗ್' ಎಂಬುದನ್ನೇ ನಿಮ್ಮವರು 'ಹಾಕಾಂಗ್' ಎಂದು ಬರೆದಿದ್ದಾರಾ? ಅಥವಾ 'ಹಾಕಾಂಗ್' ಎಂಬ ಬೇರೆ ಊರು ಇದೆಯಾ?' ಎಂದಿದ್ದಾರೆ.
'ಹಾಕಾಂಗ್' ಎಂಬ ಊರು ಇದ್ದಂತಿಲ್ಲ. 'ಹಾಂಕಾಂಗ್' ಎಂಬುದನ್ನೇ ತಪ್ಪಾಗಿ ಬರೆಯಲಾಗಿದೆ. 'ಕನ್ನಡಪ್ರಭ'ದಲ್ಲಿ ಚಿತ್ರ ಮತ್ತು ಅಡಿಬರಹಕ್ಕೆ ಸಂಬಂಧಿಸಿದಂತೆ ಒಂದು ಪದ್ಧತಿ ಜಾರಿಯಲ್ಲಿತ್ತು. ಛಾಯಾಚಿತ್ರಗ್ರಾಹಕರು ಒಂದು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ 2-3 ಚಿತ್ರಗಳನ್ನು ತೆಗೆದುಕೊಂಡು ಬರುತ್ತಾರೆ. ಅವುಗಳನ್ನೆಲ್ಲ ಒಟ್ಟು ಸೇರಿಸಿ, ಒಂದು ಅಡಿಬರಹ ನೀಡುತ್ತಿದ್ದರು. ಆದರೆ ಎಲ್ಲ ಚಿತ್ರಕ್ಕೂ ಒಂದೇ ಅಡಿಬರಹ ಹೋಲುವುದಿಲ್ಲ. ರಾಮಚಂದ್ರ ಅವರು ಹೇಳಿರುವ ಚಿತ್ರದ ಅಡಿಬರಹದಲ್ಲಿ ತಪ್ಪಾಗಲು ಇದೇ ಕಾರಣ. ಈ ಪದ್ಧತಿಯನ್ನು ಫೆ.25ರಿಂದಲೇ ಬದಲಾಯಿಸಲಾಗಿದೆ. ಇನ್ನು ಮುಂದೆ ಇಂತಹ ತಪ್ಪು ಆಗಲಾರದು ಎಂದು ಆಶಿಸೋಣ. ಕುವೈತ್ನಿಂದ ಪ್ರವೀಣಕುಮಾರ ಶೆಟ್ಟಿ ಅವರು ಬರೆಯುತ್ತಾರೆ- 'ನನಗಂತೂ ಒಂದು ವಿಷಯ ಮನದಟ್ಟಾಯಿತು. ನಿಮ್ಮ ಪತ್ರಿಕಾ ತಂಡದವರೇ ನಿಮ್ಮ ಸುದ್ದಿಗಳ ಬಗ್ಗೆ ಗಮನಕೊಡುತ್ತಿಲ್ಲ. ಹಾಗಾಗಿ ಯಾವ ಹೋಟೆಲ್ ಮಾಲಿಕ ತನ್ನದೇ ಹೋಟೆಲ್ನಲ್ಲಿ ತಿಂಡಿ ತಿನ್ನುವುದಿಲ್ಲವೋ ಆ ಹೋಟೆಲ್ನಲ್ಲಿ ನಾವೂ ತಿನ್ನಬಾರದು ಎಂದು ನನ್ನ ಅಜ್ಜ ಹೇಳಿದ ಮಾತು ನೆನಪಾಯಿತು. ಫೆ.17ರ ಪತ್ರಿಕೆ ನೋಡಿ ನನಗೂ ಹಾಗೇ ಅನ್ನಿಸಿತು.'
'ಅಂದು ಮುಖಪುಟದಲ್ಲಿ 'ಯಾರು ಬೆಸ್ಟ್' ಎಂದು 'ಕನ್ನಡಪ್ರಭ' ಹೆಸರಿನ ಕೆಳಭಾಗದಲ್ಲಿಯೇ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ಜನಪ್ರಿಯತೆ ಕುರಿತು ನಡೆಸಲಾದ ಸಮೀಕ್ಷೆಯ ವಿವರ ಪ್ರಕಟಿಸಿದ್ದೀರಿ. ಆದರೆ 100ರಲ್ಲಿ 103 ಅಂಕಗಳಿಸಲು ಸಾಧ್ಯವೇ? ಎಂಬ ಅನುಮಾನ ಉಂಟಾಯಿತು. ಕಾರಣ 'ಪುರುಷರಲ್ಲಿ ಶೆ.61ರಷ್ಟು ಮಂದಿ ಮೋದಿಗೆ ಬೆಂಬಲ ಸೂಚಿಸಿದರೆ, ರಾಹುಲ್ ಗಾಂಧಿಗೆ ಶೆ.42ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ' ಎಂದು ಬರೆಯಲಾಗಿದೆ. ಪಕ್ಕದಲ್ಲಿರುವ ಗ್ರಾಫ್ನಲ್ಲಿಯೂ ಹಾಗೇ ಇದೆ. ಇದು ಹೇಗೆ ಸಾಧ್ಯ?' ಎಂದಿದ್ದಾರೆ. ಮೋದಿಗೆ ಶೇ.61ರಷ್ಟು ಪುರುಷರು ಬೆಂಬಲ ಸೂಚಿಸಿದ್ದರೆ, ರಾಹುಲ್ ಗಾಂಧಿಗೆ ಶೇ.39ರಷ್ಟು ಪುರುಷರು ಬೆಂಬಲ ಸೂಚಿಸಿದ್ದಾರೆ ಎಂದಾಗಬೇಕಿತ್ತು.
- ವಿಶ್ವೇಶ್ವರ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

