ಸಂಪಾದಕೀಯ

ತಪ್ಪಾಯ್ತು ತಿದ್ಕೋತೀವಿ

Published On :

ಎರಡು ದಿನದ ಹಿಂದಷ್ಟೇ ಕುವೆಂಪು ಅವರದ್ದು 'ಕುಪ್ಪಳ್ಳಿ'ಯೋ, 'ಕುಪ್ಪಳಿ'ಯೋ ಎಂಬ ಬಗ್ಗೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಇಷ್ಟೆಲ್ಲ ವರ್ಷಗಳ ನಂತರ ಅಂತಹ ಪ್ರಶ್ನೆಯೊಂದು ಹುಟ್ಟಿಕೊಂಡಿದ್ದು ಸೋಜಿಗ. ಚರ್ಚೆಯ ಮೂಲಕವಾದರೂ ಅದಕ್ಕೆ ಪರಿಹಾರ ಸಿಕ್ಕೀತು. ಅಂತಹದೇ ಸಂಗತಿಯೊಂದರ ಕುರಿತು ಮೈಸೂರಿನಿಂದ ಪಿ.ಜೆ. ರಾಘವೇಂದ್ರ ಅವರು ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ-
'ಫೆ.21ರಂದು 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಎನ್.ಜಿ. ವೇಣುಗೋಪಾಲ ಅವರು 'ದರ್ಶನ್ ತೂಗುದೀಪ್ ಎಂಬುದು ದರ್ಶನ್ ತೂಗುದೀಪ' ಎಂದಾಗಬೇಕು ಎಂದು ಬರೆದಿದ್ದಾರೆ. ನನ್ನ ಪ್ರಕಾರ ಅವೆರಡೂ ತಪ್ಪು. ಅದು 'ದರ್ಶನ್ ಶ್ರೀನಿವಾಸ್‌' ಆಗಬೇಕು. 'ತೂಗುದೀಪ' ಎಂಬುದು ಒಂದು ಚಲನಚಿತ್ರದ ಹೆಸರು. ದರ್ಶನ್ ತಂದೆಯ ಮನೋಜ್ಞನಟನೆಗಾಗಿ ಅವರ ಹೆಸರಿನೊಂದಿಗೆ ಆ ಚಿತ್ರದ ಹೆಸರು ವಿಲೀನವಾಗಿದೆ. ತಂದೆಯ ಹೆಸರು ಮಗನ ಹೆಸರಿನೊಂದಿಗೆ ಸೇರುವುದು ಸರಿ. ಆದರೆ ತಂದೆಯ ಸಾಧನೆಯೊಂದಿಗೆ ಮಗನ ಹೆಸರು ಸೇರಿಸುವುದು ಸರಿಯಲ್ಲ. ಹಾಗೆಯೇ 'ಟೈಗರ್ ಪ್ರಭಾಕರ್‌' ಅವರ ಪುತ್ರನನ್ನು 'ಟೈಗರ್ ವಿನೋದ್‌' ಎನ್ನಲಾಗದು. ಅಂತೆಯೇ ತೂಗುದೀಪ ಶ್ರೀನಿವಾಸ್ ಪುತ್ರನನ್ನು 'ದರ್ಶನ್ ತೂಗುದೀಪ' ಎನ್ನಲಾಗದು. ಅವರು 'ದರ್ಶನ್ ಶ್ರೀನಿವಾಸ್‌' ಮಾತ್ರ' ಎಂದಿದ್ದಾರೆ.
ಇದೇ ಸಂಗತಿಗೆ ಸಂಬಂಧಿಸಿದಂತೆ ಬೆಂಗಳೂರಿನ ಹೆಬ್ಬಾಳದಿಂದ ನಾರಾಯಣ ಆಚಾರ್ಯಾ ಅವರು ಬರೆಯುತ್ತಾರೆ- 'ಇದು ಮಾಧ್ಯಮದವರು ಇಟ್ಟ ಹೆಸರೋ? ಅಥವಾ ದರ್ಶನ್ ಅವರೇ ಇಟ್ಟುಕೊಂಡ ಹೆಸರೋ? ಹೆಸರಿಟ್ಟುಕೊಳ್ಳುವುದಕ್ಕೆ ಒಂದು ನಿಯಮವಿಲ್ಲವೇ? ಜಾತಿ, ಧರ್ಮ, ಕೆಲವೊಮ್ಮೆ ಅಡ್ಡಹೆಸರು, ಮನೆಯ ಹೆಸರು, ಮನೆತನದ ಹೆಸರುಗಳನ್ನು ತಮ್ಮ ಹೆಸರಿನ ಕೊನೆಯಲ್ಲಿ ಸೇರಿಸುವ ಪದ್ಧತಿಯಿದೆ. ಆದರೆ ತಂದೆಯ ಪ್ರಶಸ್ತಿ, ಅವರ ಸಾಧನೆಗಳನ್ನೂ ಮಕ್ಕಳು ಹೀಗೆ ಹೆಸರಿನೊಂದಿಗೆ ಸೇರಿಸಿಕೊಳ್ಳಬಹುದೇ? ಚಿತ್ರನಟ 'ದರ್ಶನ್‌' ಅವರು 'ತೂಗುದೀಪ' ಚಲನಚಿತ್ರದಲ್ಲಿ ನಟಿಸಿಲ್ಲ. ಆದರೂ ಅವರು 'ದರ್ಶನ್ ತೂಗುದೀಪ' ಆಗುವುದು ಹೇಗೆ?'
'ನಾಳೆ ಇದೇ ಮಾದರಿಯಲ್ಲಿ ಸಾಹಿತಿಗಳ ಮಕ್ಕಳೂ ಹೆಸರಿಟ್ಟುಕೊಳ್ಳಲು ಆರಂಭಿಸಿದರೆ ಏನು ಕತೆ? ಯಾಕೆಂದರೆ ಈಗ ಸಾಕಷ್ಟು ಸಾಹಿತಿಗಳು 'ನಾಡೋಜ' ಎಂಬುದನ್ನು ಹೆಸರಿನ ಆರಂಭದಲ್ಲಿ ಸೇರಿಸಿಕೊಳ್ಳುತ್ತಾರೆ. ಆಗ ಕತೆಯೇನು?' ಎಂದು ಪ್ರಶ್ನಿಸಿದ್ದಾರೆ.
ಸಾಹಿತಿಗಳ ಮಕ್ಕಳು ಇನ್ನೂ ಆ ಹಂತಕ್ಕೆ ಹೋಗಿಲ್ಲ. ನಮ್ಮ ಪುಣ್ಯ. ಚಿತ್ರರಂಗದಲ್ಲಿ ಹೆಸರು ಬಹಳ ಕೆಲಸ ಮಾಡುತ್ತದೆ. ಆರಂಭದಲ್ಲಿ 'ಐಡೆಂಟಿಟಿ' ಕೊಡುವುದೇ ಹೆಸರು. ಹೀಗಾಗಿಯೇ ದರ್ಶನ್ ಅವರು 'ತೂಗುದೀಪ'ವನ್ನು ಹೆಸರಿನ ನಂತರ ತೂಗುಹಾಕಿರಬೇಕು. ಆದರೆ ದರ್ಶನ್‌ಗೆ ಈಗ 'ಐಡೆಂಟಿಟಿ'ಗಾಗಿ 'ತೂಗುದೀಪ'ದ ಅಗತ್ಯವಿಲ್ಲ. ನಾವು ಕೂಡ ಸಾಕಷ್ಟು ಸಂದರ್ಭದಲ್ಲಿ 'ದರ್ಶನ್‌' ಎಂದಷ್ಟೇ ಬಳಸುತ್ತೇವೆ ಹೊರತು, 'ದರ್ಶನ್ ತೂಗುದೀಪ' ಎಂದು ಬಳಸುವುದಿಲ್ಲ. ಆದರೂ ಅವರ ಹೆಸರು ಹೇಗಿರಬೇಕೆಂದು ನಿರ್ಧರಿಸುವುದು ಹಕ್ಕು ಅವರಿಗೆ ಮಾತ್ರ ಇರುತ್ತದೆ ಎಂಬುದು ನನ್ನ ಭಾವನೆ.

- ವಿಶ್ವೇಶ್ವರ ಭಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.