ಸಂಪಾದಕೀಯ

ರಾಜ್ಯಗಳಿಗೆ ದೊರೆತ ವಿಜಯ

Published On :

ಭಯೋತ್ಪಾದನೆಯ ವಿರುದ್ಧ ಮಾಹಿತಿ ಸಂಗ್ರಹ ಹಾಗೂ ವಿಧ್ವಂಸಕ ಕೃತ್ಯಗಳನ್ನು ಕುರಿತಂತೆ ವಿಶೇಷ ಕಾರ್ಯಾಚರಣೆಗೆ ಬೇಹುಗಾರಿಕೆ ನಡೆಸಲು ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ಬ್ಯೂರೋಗೆ ಅಂಟಿಕೊಂಡಂತೆ ಒಂದು ಪ್ರತ್ಯೇಕ ದಳವನ್ನು ರಚಿಸಬೇಕೆನ್ನುವ ಸಲಹೆಯನ್ನು ಚಿದಂಬರಮ್ ಅವರು ಗೃಹಮಂತ್ರಿಯಾಗಿದ್ದಾಗಲೇ ನೀಡಿದ್ದರು. ಆ ಸಲಹೆ ಕಳೆದ ಮಾರ್ಚ್‌ನಿಂದಲೇ ಜಾರಿಗೆ ಬರಬೇಕಾಗಿತ್ತು.
 ಆದರೆ ಆ ಪ್ರತ್ಯೇಕ ದಳಕ್ಕೆ ಯಾರನ್ನು ಬೇಕಾದರೂ ಬಂಧಿಸುವ ಹಾಗೂ ತನಿಖೆಗೆ ಗುರಿಪಡಿಸುವ ಅಧಿಕಾರವನ್ನು ನೀಡಿದ್ದು ಕಾಯಿದೆ ಪಾಲನೆ ವ್ಯವಸ್ಥೆಯ ಹೊಣೆಗಾರಿಕೆಯನ್ನು ಸಂವಿಧಾನದ ವಿಧಿಯಂತೆ ಹೊಂದಿರುವ ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಕೇಂದ್ರದ ಪ್ರವೇಶವೆಂದು ಅನೇಕ ರಾಜ್ಯಗಳು ಪ್ರತಿಭಟಿಸಿದ್ದರಿಂದ ಆಗ ಭಯೋತ್ಪಾದಕ ವಿರೋಧಿ ಪ್ರತ್ಯೇಕ ದಳವನ್ನು ಅಸ್ತಿತ್ವದಲ್ಲಿ ತರುವುದನ್ನು ತಡೆಹಿಡಿಯಲಾಗಿತ್ತು.
ಭಾರತೀಯ ಜನತಾ ಪಾರ್ಟಿಯ ನಾಯಕರ ಪ್ರಕಾರ ಗುಪ್ತಚಾರ ದಳಗಳಿಗೆ ಇಂತಹ ಬಂಧನ- ತನಿಖೆಯ ಅಧಿಕಾರವನ್ನು ನೀಡುವುದು ಒಕ್ಕೂಟ ಜನತಂತ್ರದ ವ್ಯವಸ್ಥೆಗೇ ಅಪಚಾರ ಬಗೆದಂತೆ. ರಾಜ್ಯ ಸಭೆಯಲ್ಲಿ ಪ್ರತಿಪಕ್ಷದ ನಾಯಕ ಅರುಣ್ ಜೈಟ್ಲಿ ಆ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
ದೇಶದ ಹನ್ನೆರಡು ರಾಜ್ಯಗಳ ಮುಖ್ಯಮಂತ್ರಿಗಳು ಚಿದಂಬರಮ್ ಪ್ರಣೀತ  ವಿಶೇಷ ಭಯೋತ್ಪಾದನೆ ವಿರೋಧಿ ಘಟಕದ ಸಲಹೆಯನ್ನು ರಾಜ್ಯಗಳ ಸಂವಿಧಾನದತ್ತ ಅಧಿಕಾರದ ವಲಯದಲ್ಲಿ ಕೇಂದ್ರದ ಹಸ್ತಕ್ಷೇಪವೆಂದು ಆಕ್ಷೇಪಿಸಿದ್ದರು.
ನಿಜವಾಗಲೂ ಇದು ಆರೋಗ್ಯಕರವಾದ ಒಕ್ಕೂಟ ವ್ಯವಸ್ಥೆಯ ಕಲ್ಪನೆಯಲ್ಲ. ಒಂದೇ ರಾಷ್ಟ್ರದ ಅಂಗಗಳೆನ್ನುವಂತೆ, ಕೇಂದ್ರ ಹಾಗೂ ರಾಜ್ಯಗಳ ಸರ್ಕಾರಗಳು ಕೆಲಸ ಮಾಡಬೇಕಾದಾಗ ಪರಸ್ಪರ ಅಪನಂಬಿಕೆಯ ವಾತಾವರಣವಿರುವುದು ಒಳ್ಳೆಯದಲ್ಲ. ಆ ಕಲ್ಪನೆಯೇ ಒಕ್ಕೂಟ ವ್ಯವಸ್ಥೆಗೆ ಮಾರಕ.
ಆದರೆ ಇಂತಹ ಅಪನಂಬಿಕೆ ರಾಜ್ಯಗಳಲ್ಲಿ ಮೂಡಿದ್ದಾದರೂ ಯಾಕೆ? ಅದಕ್ಕೆ ಹೊಣೆಗಾರರು ಯಾರು? ಆ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತ ಹೊರಟವರಿಗೆ, ಕೇಂದ್ರದಲ್ಲಿ ದೀರ್ಘ ಕಾಲ ಎಡೆಬಿಡದೆ ಅಧಿಕಾರದ ಸೂತ್ರಗಳನ್ನು ಹಿಡಿದಿದ್ದ ಕಾಂಗ್ರೆಸ್ ಪಕ್ಷವು ಇಂಟೆಲಿಜೆನ್ಸ್ ಬ್ಯೂರೋ (ಗುಪ್ತಚಾರ ದಳ) ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಉದಾಹರಣೆಗಳು ಸಿಗುತ್ತವೆ.
ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕಾಗಿದ್ದ ಇಂಟೆಲಿಜೆನ್ಸ್ ಬ್ಯೂರೋ ರಾಜಕೀಯವಾಗಿ ದೆಹಲಿಯಲ್ಲಿ ಆಳುವ ಪಕ್ಷದ ಕೈಗೊಂಬೆಯಂತೆ, ಕೆಲಸ ಮಾಡಬಹುದೆನ್ನುವ ಅನುಮಾನ ರಾಜ್ಯಗಳಿಗೆ ಇದ್ದೇ ಇತ್ತು. ಈಗ ಚಿದಂಬರಮ್ ಅವರು ರೂಪಿಸಿದ್ದ ವ್ಯವಸ್ಥೆಯಲ್ಲಿ ಭಯೋತ್ಪಾದಕ ವಿರೋಧಿ ಪೊಲೀಸ್ ದಳವನ್ನು ಇಂಟೆಲಿಜೆನ್ಸ್ ಬ್ಯೂರೋ ನಿಯಂತ್ರಣದಿಂದ ತಪ್ಪಿಸದೇ ಹೋದರೆ, ಆ ವ್ಯವಸ್ಥೆಯನ್ನು ರಾಜ್ಯಗಳು ಒಪ್ಪುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ.
ಆದರೆ ಈಗಿನ ಗೃಹಮಂತ್ರಿ ಸುಶೀಲ ಕುಮಾರ ಶಿಂದೆ ಅವರಿಗೆ ಹೇಗಾದರೂ ಮಾಡಿ ವಿಶೇಷ ಭಯೋತ್ಪಾದಕ ವಿರೋಧಿ ದಳವನ್ನು ರಚಿಸಲೇ ಬೇಕೆನ್ನುವ ಅಭಿಪ್ರಾಯ ಮೂಡಿರುವುದರಿಂದ, ಆ ದಳವನ್ನು ಇಂಟೆಲಿಜೆನ್ಸ್ ಬ್ಯೂರೋಗೆ ಸಂಬಂಧವಿಲ್ಲದಂತೆ ಪ್ರತ್ಯೇಕ ಘಟಕವಾಗಿ ರೂಪಿಸಲು ಸಮ್ಮತಿಸಿದ್ದಾರೆ.
ಅಷ್ಟೇ ಅಲ್ಲ ವಿಶೇಷ ದಳ, ರಾಜ್ಯಗಳಲ್ಲಿ ಯಾವುದೇ ರೀತಿಯ ಕಾರ್ಯಾಚರಣೆಯನ್ನು ನಡೆಸಿದರೂ, ಅದನ್ನು ರಾಜ್ಯ ಸರ್ಕಾರಕ್ಕೆ ತಿಳಿಸಿದ ಅನಂತರವೇ ಆರಂಭಿಸುವ ಭರವಸೆಯನ್ನು ಸಂಬಂಧಪಟ್ಟ ದಾಖಲೆಗಳಲ್ಲಿ ಅಳವಡಿಸುವುದಾಗಿ ಸಚಿವರು ಒಪ್ಪಿದ್ದಾರೆಂದೂ ಅನಧಿಕೃತವಾಗಿ ತಿಳಿಸಲಾಗಿದೆ. ಈ ಪರಿವರ್ತನೆ ಸ್ವಾಗತಾರ್ಹ. ಇದು ರಾಜ್ಯ ಸರ್ಕಾರಗಳಿಗೆ ದೊರೆತ ಸಂಯುಕ್ತ ವಿಜಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.