ಯುವಕನೊಬ್ಬ ವಿದ್ಯಾಭ್ಯಾಸ ನಡೆಸಿ, ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು, ವಿವಾಹಿತನಾಗಿ ಇನ್ನೇನು ಸುಖದ ಜೀವನ ತನ್ನದಾಯಿತು ಎನ್ನುವಾಗ ಆತನನ್ನು ಕೆಲಸದಿಂದ ತೆಗೆದುಹಾಕಿದರೆ ಅವನ ಸ್ಥಿತಿ ಹೇಗಿರಬೇಡ? ಎಷ್ಟೋ ಜನರಿಗೆ ಇಂತಹ ಪರಿಸ್ಥಿತಿ ಭ್ರಮನಿರಸನ ಉಂಟು ಮಾಡಿ ಇಲ್ಲದ ಅನಾಹುತಕ್ಕೆ ಎಡೆಮಾಡಬಲ್ಲದು. ಆದರೆ ಅದನ್ನೇ ಒಂದು ಸವಾಲಾಗಿ ಸ್ವೀಕರಿಸಿ, ತಮ್ಮ ಕಾಲಮೇಲೆ ನಿಂತು ಯಶಸ್ವಿಯಾದವರೂ ಇದ್ದಾರೆ. ಅಂತಹವರ ಪಟ್ಟಿಯಲ್ಲಿ ಮಾರ್ಕ್ ಕ್ಯೂಬನ್ ಸಹ ಒಬ್ಬ.
ಮಾರ್ಕ್ ಕ್ಯೂಬನ್ ಅಮೆರಿಕದ ಪಿಟ್ಸ್ ಬರ್ಗ್‌ನವನು. ಚಿಕ್ಕ ಬಾಲಕನಾಗಿದ್ದಾಗಲೇ ಕಸದ ಚೀಲ ಮಾರುವುದು, ಸ್ಟಾಂಪ್‌ಗಳನ್ನು ಸಂಗ್ರಹಿಸಿ ಮಾರುವುದು ಮಾಡಿಕೊಂಡು ತುಂಬಾ ಕಷ್ಟದಿಂದ ವಿದ್ಯಾಭ್ಯಾಸ ಮುಂದುವರೆಸಿದ. ತನ್ನ ಶಿಕ್ಷಣ ಮುಗಿಸಿದ ಮೇಲೆ ಅವನು 'ಯುವರ್ ಬಿಸಿನೆಸ್ ಸಾಫ್ಟವೇರ್' ಎಂಬ ಕಂಪನಿಯಲ್ಲಿ ಸೇಲ್ಸ್‌ಮನ್ ಆಗಿ ಕೆಲಸಕ್ಕೆ ಸೇರಿಕೊಂಡ. ಅವನ ಕಾರ್ಯಕ್ಷಮತೆಯ ಬಗ್ಗೆ ಅಸಮಾಧಾನಗೊಂಡ ಅಧಿಕಾರಿಗಳು ಅವನನ್ನು ಕೆಲವೇ ತಿಂಗಳುಗಳಲ್ಲಿ ಕೆಲಸದಿಂದ ಕಿತ್ತು ಹಾಕಿದರು. ಅಷ್ಟರಲ್ಲಿ ಅವನಿಗೆ ವಿವಾಹವಾಗಿ ಇಬ್ಬರು ಮಕ್ಕಳೂ ಆಗಿದ್ದರು. ಆದರೆ ಧೃತಿಗೆಡದ ಕ್ಯೂಬನ್ ತಾನೇ ಏಕೆ ಒಂದು ಉದ್ಯಮವನ್ನು ಪ್ರಾರಂಭಿಸಬಾರದು ಎಂದಾಲೋಚಿಸಿ, 'ಮೈಕ್ರೋ ಸಲ್ಯೂಷನ್ಸ್' ಎಂಬ ಉದ್ದಿಮೆಯನ್ನು ಪ್ರಾರಂಭಿಸಿದ. ಅದನ್ನು 1990ರಲ್ಲಿ ಆರು ಮಿಲಿಯನ್ ಡಾಲರಿಗೆ ಮಾರಾಟ ಮಾಡಿ ಅಧಿಕ ಲಾಭ ಗಳಿಸಿದ. ನಂತರ 1995 ರಲ್ಲಿ ಮತ್ತೊಂದು ಉದ್ದಿಮೆಯನ್ನು ಪ್ರಾರಂಭಿಸಿ ಯಶಸ್ವಿಯಾದ. ಅದೀಗ 5.9 ಬಿಲಿಯನ್‌ನಷ್ಟು ವ್ಯವಹಾರ ನಡೆಸಿ ಅವನೊಬ್ಬ ಯಶಸ್ವಿ ಉದ್ಯಮಿಯೆಂದು ಗುರುತಿಸಲ್ಪಟ್ಟಿದ್ದಾನೆ. ಅವನ ಕಂಪನಿಯಲ್ಲೀಗ ಆರು ನೂರಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ. ಅವನ ಸಾಧನೆ ಗಿನ್ನಿಸ್ ಪುಸ್ತಕದಲ್ಲಿಯೂ ದಾಖಲಾಗಿದೆ. ಫೋರ್ಬ್ಸ್‌ನ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಕ್ಯೂಬನ್‌ನ ಹೆಸರೂ ಸಹ ಸೇರ್ಪಡೆಯಾಗಿದೆ. ಇವೆಲ್ಲಾ ಅವನ ವೈಯಕ್ತಿಕ ಸಾಧನೆಯೇ ಆಗಿದೆ. ಇದೀಗ ಬೃಹತ್ ಬಂಡವಾಳಗಾರನಾಗಿ, ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಅಸೋಷಿಯೇಷನ್ನಿನ ಮಾಲೀಕನಾಗಿ, ಚಲನಚಿತ್ರ ಹಂಚಿಕೆದಾರನಾಗಿ, ಹೆಚ್.ಡಿ.ಟಿ.ವಿ. ನೆಟ್ವರ್ಕ್‌ನ ಅಧ್ಯಕ್ಷನಾಗಿ, ಅನೇಕ ಚಿತ್ರಮಂದಿರಗಳ ಮಾಲೀಕನಾಗಿ ಪ್ರಖ್ಯಾತನಾಗಿದ್ದಾನೆ. ಉತ್ತಮ ದಾನಿಯೂ ಆದ ಮಾರ್ಕ್ ಹಲವಾರು ಸೇವಾಕಾರ್ಯಗಳಿಗೆ ಕೋಟ್ಯಂತರ ಹಣ ವಿನಿಯೋಗಿಸಿದ್ದಾನೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ