ಸಂಪಾದಕೀಯ

ಕಾಂಗ್ರೆಸ್‌ನ ಜಾರ್ಖಂಡ್ ರಾಜಕೀಯ

Published On :

ಈಗ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿರುವ ಜಾರ್ಖಂಡ ರಾಜ್ಯದಲ್ಲಿ, ಈ ವ್ಯವಸ್ಥೆಯ ಮೊದಲ ಆರು ತಿಂಗಳು ಇನ್ನು ಹದಿನೈದು ದಿನಗಳಲ್ಲಿ ಮುಗಿಯಲಿದೆ. ಆ ವೇಳೆಗೆ ಪರ್ಯಾಯ ವ್ಯವಸ್ಥೆಯಾಗದಿದ್ದರೆ, ಮತ್ತೆ ರಾಷ್ಟ್ರಪತಿಯ ಆಡಳಿತವನ್ನು ವಿಸ್ತರಿಸಬೇಕು. ಪ್ರಕಟಿತ ವರದಿಗಳಂತೆ, ಅಲ್ಲಿ ಈಗ ಕಾಂಗ್ರೆಸ್ ಜಾರ್ಖಂಡ ಮುಕ್ತಿ ಮೋರ್ಚಾ ರಚಿಸುವ ಸರ್ಕಾರಕ್ಕೆ ಬೆಂಬಲ ನೀಡಿ, ಮೋರ್ಚಾ ಪ್ರಮುಖ ಶಿಬು ಸೊರೆನ್ ಪುತ್ರ ಹೇಮಂತ ಸೊರೆನ್ ಅವರಿಗೆ ಮುಖ್ಯಮಂತ್ರಿಯ ಪದವಿಯನ್ನು ದೊರಕಿಸಿ ಕೊಡಲು ಸಿದ್ಧವಾಗಿದೆ. ಈಗಾಗಲೇ ಸ್ಥಳೀಯ ಮಟ್ಟದಲ್ಲಿ ಒಪ್ಪಂದವಾಗಿದ್ದು, ಅದಕ್ಕೆ ಕಾಂಗ್ರೆಸ್ ವರಿಷ್ಠರ ಸಮ್ಮತಿಯನ್ನು ಇನ್ನು ಕೆಲವೇ ದಿನಗಳಲ್ಲಿ ದೆಹಲಿಯಿಂದಲೇ ಪ್ರಕಟಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ಕಾಂಗ್ರೆಸ್, ಸರ್ಕಾರದಲ್ಲಿ ಪಾಲುಗೊಳ್ಳುವುದಿಲ್ಲ. ಈ ವ್ಯವಸ್ಥೆ ಮುಂದಿನ ವರ್ಷದ ಲೋಕಸಭೆ ಚುನಾವಣೆಯವರೆಗೆ ಮಾತ್ರ.
ಇದರಿಂದ ಕಾಂಗ್ರೆಸ್ಸಿಗೆ ಬರುವ ಲಾಭವಾದರೂ ಏನು? ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ - ಜಾರ್ಖಂಡ ಮುಕ್ತಿ ಮೋರ್ಚಾ ಕೂಟ ಸ್ಪರ್ಧಿಸಲಿರುವ ಕ್ಷೇತ್ರಗಳಲ್ಲಿ ಅಧಿಕ ಸಂಖ್ಯೆ ಕಾಂಗ್ರೆಸ್ಸಿಗೇ ಸಿಗಬೇಕು. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ಸಿನ ಪಾಲಿಗೆ ಲೋಕಸಭೆಯ ಪ್ರತಿಯೊಂದು ಸ್ಥಾನವೂ ಮುಖ್ಯವಾದದ್ದೇ. ಲೋಕಸಭೆ ಚುನಾವಣೆಯ ಫಲಿತಾಂಶವನ್ನು ನೋಡಿಕೊಂಡು ಈಗ ರಚನೆಯಾಗಲಿರುವ ಕೂಟದ ಭವಿಷ್ಯವನ್ನು ನಿರ್ಧರಿಸಲಾಗುವುದು. ಜಾರ್ಖಂಡ ಖನಿಜ ನಿಕ್ಷೇಪವನ್ನು ಅಪಾರವಾಗಿ ಹೊಂದಿರುವ ರಾಜ್ಯ. ಅಲ್ಲಿನ ಸರ್ಕಾರದ ಅಧಿಕಾರದ ಸೂತ್ರ ಹಿಡಿದವರಲ್ಲಿ ಕೆಲವರು ಹಿಂದೆ ಬ್ರಹ್ಮಾಂಡ ಪ್ರಮಾಣದ ಆರೋಪಗಳನ್ನೇ ಎದುರಿಸಿದ್ದರು. ಒಬ್ಬ ಮುಖ್ಯಮಂತ್ರಿ ಜೈಲಿಗೂ ಹೋಗಿದ್ದರು. ಹಲವು ಲೋಕಸಭೆ ಸ್ಥಾನಗಳಿಗಾಗಿ ಕಾಂಗ್ರೆಸ್ಸಿನಂತಹ ದೊಡ್ಡ ಪಕ್ಷ ಇಂತಹ ಕೆಟ್ಟ ರಾಜಕೀಯಕ್ಕೆ ಇಳಿಯಬಾರದಾಗಿತ್ತು. ಲೋಕಸಭೆ ಚುನಾವಣೆಯ ಜತೆಯಲ್ಲೇ ಜಾರ್ಖಂಡ ವಿಧಾನಸಭೆ ಚುನಾವಣೆಯನ್ನೂ ನಡೆಸುವುದೇ ಸೂಕ್ತ, ಜನತಾಂತ್ರಿಕ ಮಾರ್ಗ. ವಿಧಾನಸಭೆಯನ್ನು ವಿಸರ್ಜಿಸಲೇಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.