ಸಂಪಾದಕೀಯ

ಮೆಚ್ಚುವಂತಹ ಚಾಣಾಕ್ಷತೆ: ಸಿದ್ದರಾಮಯ್ಯ ಸಾಧನೆ

Published On :

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತುತ ವರ್ಷದ ಪರ್ಯಾಯ ಬಜೆಟ್ ಮಂಡಿಸಿದ್ದು ನಿಜವಾಗಲೂ ಅಸಾಮಾನ್ಯ ಪರಿಸ್ಥಿತಿಯಲ್ಲಿ. ಅವರಿಗೆ ಇನ್ನು ಉಳಿದಿರುವ ಎಂಟೇ ತಿಂಗಳ ಅವಧಿಯಲ್ಲಿ ಹಿಂದಿನ ಹಲವಾರು ಲೋಪ-ದೋಷಗಳನ್ನು ನಿವಾರಿಸಿಕೊಂಡು, ಭವಿಷ್ಯದಲ್ಲಿ ರಾಜ್ಯದ ಜನಕಲ್ಯಾಣ ಕಾರ್ಯಕ್ರಮಗಳು ಹಾಗೂ ಅಭ್ಯುದಯದ ವೇಗವನ್ನು ಕಾಪಾಡಿಕೊಳ್ಳಲು ಸಾಕಷ್ಟು ಮಾನಸಿಕ ಕಸರತ್ತನ್ನೇ ಮಾಡಿದ್ದಾರೆ. ಆ ಪ್ರಯತ್ನದಲ್ಲಿ ಸಫಲರಾಗಿದ್ದಾರೆ.
ಅವರ ಪಾಲಿಗೆ ಬಂದಿದ್ದು ಒಂದು ರೀತಿಯಲ್ಲಿ ಹಳಿ ತಪ್ಪಿದ ರೈಲಿನಂತಹ ವಿತ್ತೀಯ ಅವ್ಯವಸ್ಥೆಯೇ. ಹಿಂದಿನ ಸರ್ಕಾರಗಳು ತಮ್ಮದೇ ಆದ ರಾಜಕೀಯ ಗುರಿಯನ್ನು ಸಾಧಿಸಲು ಪ್ರಯತ್ನಿಸಿ ದಾರಿತಪ್ಪಿದ್ದ ಸ್ಥಿತಿ ಅದು.
ಸಿದ್ದರಾಮಯ್ಯ ಅವರ ಮುಂದೆ ಇದ್ದ ಸಮಸ್ಯೆ ಕೇವಲ ಹಣಕಾಸಿನ ಸಮತೋಲವನ್ನು ಸಾಧಿಸುವುದಲ್ಲ. ಚುನಾವಣೆಯಲ್ಲಿ ಜನ ದೊಡ್ಡ ರೀತಿಯಲ್ಲೇ ಆಸೆ-ಆಕಾಂಕ್ಷೆಗಳನ್ನು ಇಟ್ಟುಕೊಂಡು ಸಿದ್ದರಾಮಯ್ಯ ಹಾಗೂ ಅವರ ಪಕ್ಷಕ್ಕೆ ಸ್ಪಷ್ಟವಾದ ಜನಾದೇಶ ನೀಡಿದ್ದರ ಋಣವನ್ನು ತೀರಿಸಲೇಬೇಕಾಗಿತ್ತು. ನಿಜ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸರ್ವಜನ ಹಿತಸಾಧನೆಗೆ ಪ್ರಯತ್ನಿಸಬೇಕು. ಅದರ ಜತೆಯಲ್ಲೇ ಅವರ ಹೆಸರಿಗೆ ಅಂಟಿಕೊಂಡೇ ಬಂದಿರುವ ಅಹಿಂದ (ಅಲ್ಪಸಂಖ್ಯಾತ ಹಿಂದುಳಿದ ದಲಿತ ಜನಸಮುದಾಯಗಳ ಹಿತ) ಭಾವನೆಗಳನ್ನು ತೃಪ್ತಿಪಡಿಸುವ ಚಾಕಚಕ್ಯತೆಯನ್ನೂ ಅವರು ಪ್ರದರ್ಶಿಸಿದ್ದಾರೆ. ಅದರ ಹಿಂದೆ ಆಳವಾದ ಚಿಂತನೆಯ ಪರಿಶ್ರಮವಿದೆ.
ಮುಖ್ಯಮಂತ್ರಿ ಮಂಡಿಸಲಿರುವ ಬಜೆಟ್ನಲ್ಲಿ ಯಾವುದಾದರೂ ವಿಶಿಷ್ಟ ಹಿತರಕ್ಷಣೆಗೆ ಆದ್ಯತೆ ಸಿಕ್ಕಿದೆಯೇ ಎನ್ನುವುದನ್ನು ಪರಿಶೀಲಿಸಿದರೆ, ನಿಸ್ಸಂದೇಹವಾಗಿ ಶೋಷಿತ ಸಮಾಜಗಳಿಗೆ ಸೇರಿದವರ ಪ್ರಗತಿಯ ಯಾತ್ರೆಗೆ ಸಿಕ್ಕಿದೆ ಎನ್ನಬಹುದು.
ಆ ಜನವರ್ಗಗಳ ಸಂಘಟನೆಗಳಿಗೆ ವೈಯಕ್ತಿಕವಾಗಿ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಾದ ನೆರವನ್ನು ಈ ಬಜೆಟ್ನಲ್ಲಿ ಧಾರಾಳವಾಗಿ ನೀಡಲಾಗಿದೆ. ಉದಾಹರಣೆಗೆ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ಗಳಲ್ಲಿ ಪ್ರವೇಶ ಸಿಗದಿದ್ದರೆ, ಅವರಿಗೆ ನೇರವಾಗಿ ಹಣವನ್ನು ಕೊಡುವುದು. ಹೆಣ್ಣು ಮಕ್ಕಳು ಶಾಲೆಗೆ ಹಾಜರಾದರೆ ಉತ್ತೇಜನ ರೂಪದಲ್ಲಿ ಹಣ ಕೊಡುವುದು. ಮುಸ್ಲಿಮರ ಹೆಣ್ಣು ಮಕ್ಕಳಿಗೆ ಮದುವೆಗೆ ನೆರವು ಇಂತಹ ಯೋಜನೆಗಳು.
ಹಿಂದಿನ ಸರ್ಕಾರ ಬೆಳೆಸಿಕೊಂಡು ಬಂದಿದ್ದ ಮಠಮಾನ್ಯಗಳಿಗೆ ಬೇಷರತ್ ಕೊಡುಗೆಯನ್ನು ನೀಡುವುದಕ್ಕೆ ಬದಲಾಗಿ ಶೋಷಿತ ಸಮಾಜಗಳ ಸಂಘಟನೆಗಳಿಗೆ, ನಿರ್ದಿಷ್ಟವಾದ ಉದ್ದೇಶಕ್ಕೆ ಅಗತ್ಯವಾದಷ್ಟು ನೆರವು ನೀಡುವ ಪದ್ಧತಿಯನ್ನು ಜಾರಿಗೆ ತಂದಿದ್ದಾರೆ. ಇವೆರಡೂ ಹೊಚ್ಚ ಹೊಸ ಚಿಂತನೆಗಳೇ. ಈಗಿನ ಸನ್ನಿವೇಶದಲ್ಲಿ ಸರ್ಕಾರದ ಎಲ್ಲ ವಿಭಾಗಗಳಿಗೂ ಅನುದಾನವನ್ನು ಹೆಚ್ಚಿಸಿದ್ದರೂ, ಹಿಂದಿನವರು ಆಶ್ವಾಸನೆ ನೀಡಿ ಹಣವನ್ನು ಒದಗಿಸದೇ ಇದ್ದ ಯೋಜನೆಗಳಿಗೂ ಹಣವನ್ನು ಒದಗಿಸಿ, ನೂತನ ಸರ್ಕಾರದ ಹೊಸ ಜನ ಕಲ್ಯಾಣ ಯೋಜನೆಗಳಿಗೂ ಹಣ ಒದಗಿಸಿದ ಅನಂತರವೂ ರಾಜಸ್ವದ ಬಾಬಿನಲ್ಲಿ ಸುಮಾರು 596 ಕೋಟಿ ರುಪಾಯಿಗಳ ಉಳಿತಾಯವನ್ನೇ ತೋರಿಸಿದ್ದಾರೆ.
ಸಿದ್ದರಾಮಯ್ಯ ಅವರು ಶೋಷಿತ ಸಮಾಜದ ಸಾಂಸ್ಕೃತಿಕ ಕೇಂದ್ರಗಳಿಗೆ ಸರ್ಕಾರದ ಮಾನ್ಯತೆಯನ್ನು ಅಧಿಕೃತವಾಗಿ ಬಜೆಟ್ ಭಾಷಣದಲ್ಲೇ ನೀಡಿರುವುದು ಒಂದು ರೀತಿಯ ಕ್ರಾಂತಿಕಾರಿ ಹೆಜ್ಜೆಯೇ. ಈ ಪ್ರಕ್ರಿಯೆಯ ಪರಿಣಾಮ ಜನಸಾಮಾನ್ಯ ವರ್ಗಗಳ ಮನದಾಳವನ್ನು ಮುಟ್ಟಲು ಸಮಯ ಬೇಕಷ್ಟೇ. ಕಳೆದ ವರ್ಷ ರಾಜ್ಯದ ಪ್ರಗತಿಯ ವೇಗ ಕುಗ್ಗಿತ್ತು. ಆದಾಯವೂ ಕಡಿಮೆಯಾಗಿತ್ತು. ಆ ಅಂಕು-ಡೊಂಕುಗಳನ್ನು ಸರಿಪಡಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ರಾಜಕೀಯ ಮಾಡಿಲ್ಲ ಎಂದೇನೂ ಅಲ್ಲ. ಹಿಂದಿನ ಸರ್ಕಾರಗಳನ್ನು ಸಾಕಷ್ಟು ಹಳಿದಿದ್ದಾರೆ. ಆದರೆ ಬಳಸಿರುವ ಭಾಷೆ ಮೃದುವಾದದ್ದು. ಆಹಾರ ಭದ್ರತೆಯ ಕಾಯಿದೆಯನ್ನು ಜಾರಿಗೆ ತಂದಿದ್ದಕ್ಕಾಗಿ ಅವರ ಪಕ್ಷವೇ ನೇತೃತ್ವ ವಹಿಸಿರುವ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.
ಇದುವರೆಗೂ ಕರ್ನಾಟಕ ಸರ್ಕಾರ ವಿರೋಧಿಸಿಕೊಂಡು ಬಂದಿದ್ದ ವಸ್ತು- ಸೇವಾಸೌಲಭ್ಯಗಳ ರಾಷ್ಟ್ರೀಯ ತೆರಿಗೆಯ ನೀತಿಯನ್ನು ಸಮರ್ಥಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದವರು ಅದನ್ನು ಸಮರ್ಥಿಸಿಕೊಳ್ಳಬಹುದು.
ಸಾಲ ಸಿಗತ್ತೆ ಎನ್ನುವ ಕಾರಣಕ್ಕೇ ಸಾಲ ಮಾಡಬಾರದೆನ್ನುವ ಸೂತ್ರವನ್ನು ಪ್ರತಿಪಾದಿಸಿದ್ದಾರೆ. ಸಾಲದ ಹಣ ಉತ್ಪಾದನೆ - ಅಭ್ಯುದಯಕ್ಕೇ ಹೋಗಬೇಕು ಎಂದಿದ್ದಾರೆ. ಒಪ್ಪಲೇ ಬೇಕಾದ ಮಾತು. ತೆರಿಗೆ ನೀತಿಯಲ್ಲೂ ಹೆಚ್ಚು ಗೊಂದಲಕ್ಕೆ ಕೈ ಹಾಕಿಲ್ಲ. ಸಾರ್ವಜನಿಕರ ಬೇಡಿಕೆಗಳನ್ನು ಒಪ್ಪಿ ಡೀಸೆಲ್ ಮೇಲಿನ ತೆರಿಗೆಯನ್ನು ಇಳಿಸಿದ್ದಾರೆ. ಅಬ್ಕಾರಿ ತೆರಿಗೆಯಲ್ಲಿ ಗಮನಾರ್ಹವಾದ ಏರಿಕೆ ಕಂಡು ಬಂದರೂ, ಅದನ್ನು ಜನಸಾಮಾನ್ಯರು ವಿರೋಧಿಸಲಿಕ್ಕಿಲ್ಲ.
ದೊಡ್ಡ ಗಂಟಲಿನ ಬೆಂಗಳೂರಿನ ನಾಗರಿಕರಿಗೂ ಬಜೆಟ್ನಲ್ಲಿ ಹಲವಾರು ಕೊಡುಗೆಗಳಿವೆ. ಹೊಸ ತೆರಿಗೆಗಳ ಒಟ್ಟು ಹೊರೆ ಸುಮಾರು 1306 ಕೋಟಿ ರುಪಾಯಿಗಳು. ನಿಜ. ಸರ್ಕಾರದ ಸಾಲದ ಹೊರೆ ವಿಪರೀತವಾಗಿದೆ. ಆದರೆ ಅದು ನಿಯಮಗಳ ಚೌಕಟ್ಟಿನಲ್ಲೇ ಇದೆ. ವಿತ್ತೀಯ ಕೊರತೆಯೂ ಅಷ್ಟೇ. ಸರ್ಕಾರದ ಹಣದ ಜತೆಗೇ ಸರ್ಕಾರಿ ಮಂಡಳಿ, ನಿಗಮಗಳು ಸುಮಾರು 7000 ಕೋಟಿ ರುಪಾಯಿಗಳನ್ನು ಸಾಲದ ಮೂಲಕ ಎತ್ತಿ ಬೆಳವಣಿಗೆಗೆ ಬಂಡವಾಳವನ್ನು ಹೂಡಲಿವೆ. ಇಲ್ಲಿ ಅಂಕಿ-ಅಂಶಗಳಿಗಿಂತ ಹೊಸ ಚಿಂತನೆಗೇ ಹೆಚ್ಚು ಒತ್ತು ಸಿಕ್ಕಿರುವುದು ಸ್ವಾಗತಾರ್ಹ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.