ಶ್ರೇಷ್ಠ ವಿದ್ವಾಂಸ (ದಿ) ಡಾ. ಕೆ.ವಿ. ರಮೇಶ್
ಈಚೆಗೆ (10.7.2013) ನಿಧನರಾದ ಮೈಸೂರಿನ ಡಾ. ಕೆ.ವಿ. ರಮೇಶ್ (ಜನನ 8.6.1935) ಭಾರತದ ಶ್ರೇಷ್ಠ ಶಾಸನ ಶಾಸ್ತ್ರಜ್ಞರು, ಇತಿಹಾಸಕಾರರೂ ಆಗಿದ್ದರು. (ದಿ) ಡಾ. ಜಿ.ಎಸ್. ಸಾಯಿ, (ದಿ) ಡಾ. ಬಾ.ರಾ. ಗೋಪಾಲ್, ಡಾ. ಶ್ರೀನಿವಾಸರಿತ್ತಿ ಮತ್ತು ಅವರ ಪ್ರಯತ್ನದಿಂದ ಊಟಿಯಲ್ಲಿದ್ದ ಭಾರತೀಯ ಸರ್ವೇಕ್ಷಣಾ ವಿಭಾಗದ ಶಾಸನಶಾಸ್ತ್ರ ಇಲಾಖೆಯು 1960ರ ದಶಕದಲ್ಲಿ ಮೈಸೂರಿಗೆ ಸ್ಥಳಾಂತರವಾಯಿತು. ಆಗಿನಿಂದ ಮೈಸೂರಿನಲ್ಲಿದ್ದ ನಾನೂ ಸೇರಿದಂತೆ ಹಲವರಿಗೆ ವಿಪರೀತ ಉಪಕಾರವಾಯಿತು ಮಾತ್ರವಲ್ಲ, ಕರ್ನಾಟಕಾಲಜಿ ಅಧ್ಯಯನಕ್ಕೆ ಒಂದು ಹೊಸ ಆಯಾಮ ಬಂದಿತು. ಭಾರತದ ಎಲ್ಲ ಲಿಪಿಗಳ ಇತಿಹಾಸ ಮತ್ತು ಪ್ರಚಲಿತ ರೂಪುಗಳ ಬಗ್ಗೆ ಅರಿವಿದ್ದ ಡಾ. ಕೆ.ವಿ. ರಮೇಶ್ ಸಾವಿರಾರು ಕನ್ನಡ, ಸಂಸ್ಕೃತ ಶಾಸನಗಳನ್ನು ಶೋಧಿಸಿ ಪ್ರಕಟಿಸಿದರು. ತಲಕಾಡು ಗಂಗರು ಮತ್ತು ತುಳುನಾಡಿನ ಶಾಸನಗಳನ್ನು ಪ್ರಕಟಿಸಿದ್ದಾರೆ. ತುಳುನಾಡಿನ ಇತಿಹಾಸ, ಬಾದಾಮಿ ಚಾಲುಕ್ಯರ ಇತಿಹಾಸಗಳನ್ನು ಕುರಿತಂತೆ ಅವರು ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಇಂತಹ ಕೃತಿಗಳಲ್ಲದೆ, ರಾಷ್ಟ್ರ ಮಟ್ಟದ ಅಂತಾರಾಷ್ಟ್ರೀಯ ಮಟ್ಟದ ವಿದ್ವತ್ ಗೋಷ್ಠಿಗಳಲ್ಲಿ ಶ್ರೇಷ್ಠ ಪ್ರಬಂಧಗಳನ್ನು (ಠಛಠಜ್ಠಡ)ಮಂಡಿಸಿ ಜ್ಞಾನದ ಅರಿವನ್ನು ಹೆಚ್ಚಿಸಿದ್ದಾರೆ. ಅಂತೆಯೇ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರ ಶೋಧಗಳು ಭಾರತದಾದ್ಯಂತ ವಿದ್ವಾಂಸರ ಮನ್ನಣೆ ಪಡೆದಿದೆ. ಎಪಿಗ್ರಫಿ ಅಥವಾ ಶಾಸನಶಾಸ್ತ್ರ, ಲಿಪಿ ಶಾಸ್ತ್ರಗಳಲ್ಲಿ ಅಪೂರ್ವ ಪರಿಣಿತಿಯನ್ನು ಪಡೆದಿದ್ದು ಅವರು ಕರ್ನಾಟಕದ ಚರಿತ್ರೆಗೆ, ಸಾಂಸ್ಕೃತಿಕ ಇತಿಹಾಸದ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶಾಶ್ವತ. ಅವರು ಮೈಸೂರಿನ ಭಾರತೀಯ ಶಾಸನ ಇಲಾಖೆಯ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದರು. ನಾನು ಆಗಾಗ್ಗೆ ಬೆಂಗಳೂರಿನಿಂದ ಮೈಸೂರಿನಲ್ಲಿದ್ದ ಅವರಿಗೆ ದೂರವಾಣಿ ಮಾಡಿ ನನ್ನ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದೆ. ಸರಳ ಸ್ನೇಹ ಜೀವಿಗಳಾದ ಅವರ ನಿಧನ ಅವರ ಕುಟುಂಬದವರಿಗಲ್ಲದೆ ಅವರ ಆತ್ಮೀಯರಿಗೂ ಸಹಿಸಲಾರದ ದುಃಖವನ್ನುಂಟು ಮಾಡಿದೆ. ಇಷ್ಟಂತೂ ನಿಜ: ಅವರು ಸಾರ್ಥಕ ಜೀವನದ ಒಂದು ಮಾದರಿಯನ್ನು ನೀಡಿದ ಒಬ್ಬ ಅಪೂರ್ವ ವ್ಯಕ್ತಿ; ವಿದ್ವತ್ತಿಗೆ ಅವರೊಂದು ನಿದರ್ಶನ.
- ಡಾ. ಎಂ. ಚಿದಾನಂದಮೂರ್ತಿ
ಸಾರ್ವತ್ರಿಕ ಪರೀಕ್ಷೆ ಬೇಕು
ಸುಮಾರು ವರ್ಷಗಳಿಂದ ಸರ್ಕಾರ ಹಿಂದೆ ಇದ್ದಂತಹ ಪರೀಕ್ಷಾ ಪದ್ಧತಿ ತೆಗೆದು ಹಾಕಿ ತನ್ನದೇ ಆದ ಹೊಸ ಪದ್ಧತಿ ತಂದಿದೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಓದು-ಬರಹದ ಶಕ್ತಿ ಕುಂದುತ್ತಿದೆ. ಏಕೆಂದರೆ 7ನೇ ತರಗತಿಗೆ ಸಾರ್ವತ್ರಿಕ ಪರೀಕ್ಷೆ ಇಲ್ಲ. 10ನೇ ತರಗತಿಗೂ ಇನ್ನು ಮುಂದೆ ಸಾ.ಪ. ಇರುವುದಿಲ್ಲ ಎಂಬ ಸುದ್ದಿ ಕೇಳಿ ಬರುತ್ತಿದೆ. ಪ್ರಥಮ ಪಿಯುಸಿ ಗೂ ಸಾ.ಪ. ಇಲ್ಲ. ತರಗತಿಗೆ ಎಂದೂ ಬಾರದವರು, ತೀರ ಕಡಿಮೆ ಅಂಕ ಪಡೆದವರು ಮುಂದಿನ ತರಗತಿಗೆ ನಿರಾಯಾಸವಾಗಿ ಹೋಗುತ್ತಿದ್ದಾರೆ. ಇಂತಹ ಪದ್ಧತಿಯಿಂದ ಸತ್ವಶೀಲ, ಪ್ರಾಮಾಣಿಕ, ದಕ್ಷ ವಿದ್ಯಾವಂತರನ್ನು- ಅಧಿಕಾರಿಗಳನ್ನು ಇನ್ನು ಮುಂದೆ ಕಾಣಲು ಸಾಧ್ಯವೆ?.
-ಚಿಕ್ಕಣ್ಣ, ಕೊರಟಗೆರೆ
ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ನಷ್ಟ
ಬೆಳಗಾವಿಯಲ್ಲಿ ನಿರ್ಮಾಣವಾದ ಸುವರ್ಣ ಸೌಧಕ್ಕೆ ಒಂದು ವರ್ಷ ಸಂದಿದ್ದರೂ ಇದೂವರೆಗೆ ಯಾವುದೇ ಕಚೇರಿಗಳು ಆರಂಭವಾಗಿಲ್ಲ. ಆದರೂ ಇದರ ನಿರ್ವಹಣೆಗೆ ಸರ್ಕಾರ 3 ಕೋಟಿಯಷ್ಟು ಹಣ ವ್ಯಯಿಸುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ಅನಗತ್ಯ ನಷ್ಟವನ್ನುಂಟು ಮಾಡುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಸೌಧವು ಇಂದು ದುಃಸ್ಥಿತಿಗೆ ತಲುಪಿದೆ. ಸರ್ಕಾರವೇ ಇದರತ್ತ ಗಮನ ಹರಿಸಿ ಸೌಧವನ್ನು ಸರಿಯಾಗಿ ಬಳಸುವುದು ಮತ್ತು ಕಚೇರಿಗಳನ್ನು ಅವಶ್ಯವಾಗಿ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಪಾಳು ಬಿದ್ದ ಸೌಧವಾಗಿಯೇ ಉಳಿದು ಬಿಡುವುದು. ಇದರ ಸದುಪಯೋಗ ಪಡೆದುಕೊಳ್ಳಬೇಕಿದೆ.
- ವಿದ್ಯಾಶ್ರೀ ಬಿ., ಪುತ್ತೂರು
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

