ಸಂಪಾದಕೀಯ

ಜಾಣ ಬುದ್ಧಿಜೀವಿಗಳು

Published On :

ಹೌದು, ಬೋಧಗಯಾ ಮಹಾಬೋಧಿ ಬುದ್ಧ ಮಂದಿರದಲ್ಲಿ ಈಚೆಗೆ ಜರುಗಿದ ಬಾಂಬ್ ಸ್ಫೋಟದ ವಿಷಯದಲ್ಲಿ ನಮ್ಮ ಕರ್ನಾಟಕದ ಬುದ್ಧಿಜೀವಿಗಳೆಂದು ಖ್ಯಾತರಾದವರಲ್ಲಿ ಯಾರೂ ಸಹ ಸೊಲ್ಲೆತ್ತಿಲ್ಲದಿರುವುದು ಸೋಜಿಗವನ್ನುಂಟು ಮಾಡುತ್ತದೆ! ಬಹುಶಃ ಇವರುಗಳ್ಯಾರೂ ದೇಶದಲ್ಲಿ ಇಲ್ಲ; ಅಥವಾ, ಸ್ಫೋಟ ಕುರಿತ ಅಧಿಕೃತ ಸುದ್ದಿ ಇವರನ್ನು ತಲುಪಿಲ್ಲವೋ! ಅಥವಾ ಸ್ಫೋಟಕ್ಕೆ ಕಾರಣರಾದವರು ಯಾರು ಎಂದು ತಿಳಿದ ನಂತರವೇ ತಾವು ಬಾಯ್ದೆರೆಯಬೇಕು ಎಂದು ವ್ರತ ತೊಟ್ಟಿರಲೂ ಬಹುದು! ಅಥವಾ, ದಿಗ್ವಿಜಯಸಿಂಗ್ ಅವರು ಸುಮ್ಮನೆ ಊಹಿಸುವಂತೆ ಈ ಸ್ಫೋಟದ ಹಿಂದೆ ಕೋಮುವಾದಿಗಳೆಂದು ಇವರೆಲ್ಲ ಕರೆಯುತ್ತಿರುವವರ ಕೈಚಳಕ ಏನಾದರೂ ಇದ್ದೀತೆಂಬ ವಿಚಾರ ಇವರ ಮನಸ್ಸಿನಲ್ಲಿ ಮಿಂಚಿ ಮಾಯವಾಗದೆ ಅಲ್ಲೇ ಕುಳಿತಿರಬಹುದೇ? '10.7.2013ರ ಕ.ಪ್ರ.ದಲ್ಲಿ ಎಂ.ಜೆ. ಅಕ್ಬರ್ ಅವರ "ಮುಸ್ಲಿಮರಿಗೆ ಬೇಕಿರುವುದು ಇಫ್ತಾರ್ ಊಟವಲ್ಲ, ಉದ್ಯೋಗ" ಎಂಬ ಲೇಖನವಿದೆ. ಇದರಲ್ಲಿ ಕೆಲವು ಕುತೂಹಲವನ್ನುಂಟು ಮಾಡುವ ಸಂಗತಿಗಳಿವೆ. 2009ರಲ್ಲಿ ಉಪರಾಷ್ಟ್ರಪತಿಯವರು ನೆರವೇರಿಸಿದ ಇಫ್ತಾರ್ಕೂಟ ಮತ್ತು ಅನಂತರದಲ್ಲಿ ಈ ಆಹಾರಗೌರವವನ್ನು ವಿದೇಶಾಂಗ ವ್ಯವಹಾರಗಳ ಸಚಿವರು ಪಾಲಿಸಿದ ಪ್ರಸ್ತಾಪವಿದೆ. ಇವೆರಡೂ ಸರ್ಕಾರಿ ಖರ್ಚಿನಲ್ಲಾದುವೆಂದು ತಿಳಿಯುತ್ತದೆ. ಇದನ್ನು ತಪ್ಪೆಂದು ಭಾವಿಸದೆ ಇದೇ ರೀತಿಯಲ್ಲಿ ದೀಪಾವಳಿಯನ್ನೂ, ಕ್ರಿಸ್ಮಸ್ ಹಬ್ಬವನ್ನೂ ಆಚರಿಸಿದರೆ ಹೇಗೆ ಎಂಬ ಆಲೋಚನೆ ಸುಳಿದು ಹೋಗುತ್ತದೆ. ಬುದ್ಧಿಜೀವಿಗಳು ಇಂತಹ ಕೂಟಗಳ ಬಗ್ಗೆ (ಇಫ್ತಾರ್ ಕೂಟ ಮಾತ್ರ) ಏನೇನೂ ಹೇಳುವುದಿಲ್ಲ ಯಾಕೊ! ಇಂತಹ ವಿಚಾರಗಳಲ್ಲಿ ಮೌನ ಜಾಣತನ ಎಂಬ ಧೋರಣೆಯ ಜಾಣ ಬುದ್ಧಿಜೀವಿಗಳು!
-ಸಾಮಗ ದತ್ತಾತ್ರಿ, ಬೆಂಗಳೂರು

ತಂಬಾಕು ಹೆಸರಿನಲ್ಲಿ ಗುಟ್ಕಾ
ರಾಜ್ಯದಲ್ಲಿ ಗುಟ್ಕಾ ನಿಷೇಧ ಕಾನೂನಿನ ಬಣ್ಣ ಆಗಲೇ ಬಯಲಾಗುತ್ತಿದೆ. ಗುಟ್ಕಾ ನಿಷೇಧಿಸಿ ಎಂದು ಸರ್ಕಾರ ಆದೇಶ ಹೊರಡಿಸಿದರೆ, ರಂಗೋಲಿ ಕೆಳಗೆ ತೂರಿರುವ ಕಂಪನಿಗಳು ಪಾನ್ ಮಸಾಲಾ ಮತ್ತು ತಂಬಾಕನ್ನು ಪ್ರತ್ಯೇಕವಾಗಿ ಮಾರುವ ಮೂಲಕ ಚಟಗಾರರನ್ನು ತಣಿಸುತ್ತಿದೆ. ತಂಬಾಕು ಮಾರಾಟ ಗುಟ್ಕಾ ನಿಷೇಧದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಕಾರಣದಿಂದ ತಂಬಾಕು ಉತ್ಪನ್ನದ ಮುಖವಾಡ ಧರಿಸಿ ಗುಟ್ಕಾ ಮತ್ತೆ ಮಾರುಕಟ್ಟೆಗೆ ಆಕ್ರಮಿಸಿಕೊಳ್ಳುತ್ತಿದೆ. ಜನ ಹೊಗೆರಹಿತ ತಂಬಾಕು ಉತ್ಪನ್ನ ಬಳಸುತ್ತಿದ್ದು ಗುಟ್ಕಾ ನಿಷೇಧದ ಬಳಕೆ ಮಿಶ್ರಿತ ತಂಬಾಕು ಉತ್ಪನ್ನ ಮಾರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ತಂಬಾಕು ಪಾನ್ ಮಸಾಲ ಹೆಸರಿನಲ್ಲಿ ಮಾರಾಟ ಮಾಡುತ್ತಿರುವವರ ಉತ್ಪನ್ನಗಳನ್ನು ಪರೀಕ್ಷೆಗೆ ಒಳಪಡಿಸಿ ಸೂಕ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗುಟ್ಕಾ ನಿಷೇಧ ಆದೇಶ ಮಾತ್ರ ಸೀಮಿತವಾಗಲಿದೆ. ಈ ನೀತಿಯಡಿ ಗುಟ್ಕಾ ನಿಷೇಧಕ್ಕೆ ಕಡಿವಾಣ ಬರಲಿ.
-ರಂಜಿತ್ಕುಮಾರ್, ಪುತ್ತೂರು

ಕೆ.ಪಿ.ಎಸ್.ಸಿ. ಅಕ್ರಮದಿಂದ ರಕ್ಷಿಸಿ
ಕೆ.ಪಿ.ಎಸ್.ಸಿ. ಕರ್ಮಕಾಂಡಕ್ಕೆ ಕೊನೆಯೇ ಇಲ್ಲದಂತಾಗಿದೆ. ಕೆ.ಎ.ಎಸ್. ಆಯ್ಕೆ ಪ್ರಕ್ರಿಯೆ ಲಂಚಾವತಾರ ಜಗಜ್ಜಾಹೀರವಾಗಿ ಸಿ.ಓ.ಡಿ. ತನಿಖೆಗೆ ಒಳಪಟ್ಟಿದೆ. ಈಗ ಪಿ.ಡಿ.ಒ. ಆಯ್ಕೆ ಪ್ರಕ್ರಿಯೆಯಲ್ಲೂ ಅದು ಮುಂದುವರೆದಿದೆ. ಒಂದೇ ಕೊಠಡಿಯಲ್ಲಿನ 24 ಅಭ್ಯರ್ಥಿಗಳ ಪೈಕಿ 15ರಿಂದ 20 ಅಭ್ಯರ್ಥಿಗಳು ಆಯ್ಕೆಯಾಗಿರುವುದು, ಸರಣಿ ರೋಲ್ ನಂಬರ್ ಹೊಂದಿರುವ 12ರಿಂದ 15 ಅಭ್ಯರ್ಥಿಗಳು ಆಯ್ಕೆಯಾಗಿರುವುದು ಕೆಲವು ಉದಾಹರಣೆ ಮಾತ್ರ. ಈ ಬಗ್ಗೆ ಎಲ್ಲಾ ದಿನಪತ್ರಿಕೆಗಳಲ್ಲಿ ವರದಿ ಬಂದಿರುವುದು ಅದರ ವ್ಯಾಪಕತೆಯನ್ನು ತೋರಿಸುತ್ತದೆ. ಇಂತಹ ವಾಮಮಾರ್ಗದಿಂದ ಆಯ್ಕೆಯಾದವರಿಂದ ದಕ್ಷ ಸೇವೆ ನಿರೀಕ್ಷೆ ಸಾಧ್ಯವೇ? ಈ ಬಗ್ಗೆ ತನಿಖೆ ನಡೆಸಿ, ಹೊಸದಾಗಿ ಆಯ್ಕೆ ಪ್ರಕ್ರಿಯೆ ನಡೆಸಿ ಅರ್ಹರಿಗೆ ನ್ಯಾಯ ಒದಗಿಸಿ ಮತ್ತು ಈ ಆಯ್ಕೆ ಪ್ರಕ್ರಿಯೆ ಎರಡು ವರ್ಷಗಳಿಂದಲೂ ನಡೆಯುತ್ತಿದ್ದು, ಈ ಅವಧಿಯಲ್ಲಿ ಬೇರೆ ಹುದ್ದೆಗಳಿಗೆ ಆಯ್ಕೆಯಾದವರು ಪಿ.ಡಿ.ಒ.ಗೂ ಆಯ್ಕೆಯಾಗಿರುತ್ತಾರೆ. ಅಂತಹ ಅಭ್ಯರ್ಥಿಗಳು ಪಿ.ಡಿ.ಒ.ಗೆ ಹುದ್ದೆ ವರದಿ ಮಾಡಿಕೊಳ್ಳದಿದ್ದರೆ, ಆ ಹುದ್ದೆಯನ್ನು ರದ್ದು ಮಾಡದೆ ಆ ಸ್ಥಾನಗಳಿಗೆ ಮೆರಿಟ್ನಲ್ಲಿ ನಂತರದ ಸ್ಥಾನದಲ್ಲಿರುವವರನ್ನು ಪರಿಗಣಿಸಿ ಎರಡನೇ ಮತ್ತು ಮೂರನೇ ಪಟ್ಟಿಯನ್ನು ಪ್ರಕಟಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ. ಈ ಬಗ್ಗೆ ಕೆ.ಪಿ.ಎಸ್.ಸಿ. ಸ್ಪಷ್ಟೀಕರಣ ನೀಡಲಿ.
-ರಾಘವೇಂದ್ರ, ಮೈಸೂರು


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.