ಸಂಪಾದಕೀಯ

ತೆರಿಗೆ ಪರಿಶೀಲನೆಗೊಳಪಡಲು ಭಯವೇಕೆ?

Published On :

ದೇಶದಲ್ಲಿ- ಅದರಲ್ಲೂ ಕರ್ನಾಟಕದಲ್ಲಿ ಮಠಗಳು ಮತ್ತಿತರ ಹಿಂದೂ ಧಾರ್ಮಿಕ ಸಂಘಟನೆಗಳು ವಿವಿಧ ಕ್ಷೇತ್ರಗಳಲ್ಲಿ- ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಗಣನೀಯ ಮತ್ತು ಪ್ರಶಂಸನೀಯ. ಇವುಗಳಿಲ್ಲದಿದ್ದರೆ ಹಲವಾರು ಪ್ರತಿಭೆಗಳು ಪ್ರೋತ್ಸಾಹವಿಲ್ಲದೆ ಕೊರಗುತ್ತಿದ್ದವು ಅಥವಾ ನಶಿಸಿಯೇ ಹೋಗುತ್ತಿದ್ದವು ಎನ್ನುವುದರಲ್ಲಿ ಸಂಶಯವಿಲ್ಲ. ಅಂತಹವುಗಳಿಗೆ ಸರ್ಕಾರವೂ ಸೇರಿದಂತೆ ದಾನಿಗಳೂ ಕೈ ಜೋಡಿಸಿದರೆ ಮಾತ್ರ ಈ ದೇಶದಲ್ಲಿ ಅಭಿವೃದ್ಧಿಯಾಗಲು ಸಾಧ್ಯ ಎಂಬುದು ಹಲವರ ಅನಿಸಿಕೆ. ಇಂತಹ ಕೇಂದ್ರಗಳ ವ್ಯವಹಾರಗಳು ಪಾರದರ್ಶಕವಾಗಿರಬೇಕೆಂಬುದು ಕೇವಲ ಕಾನೂನಿನಲ್ಲಿ ಮಾತ್ರವಲ್ಲ, ಸಾರ್ವಜನಿಕರ ದೃಷ್ಟಿಯಲ್ಲೂ ಸೂಕ್ತವಾದದ್ದು. ಈ ದೃಷ್ಟಿಯಿಂದ, ಆದಾಯ ತೆರಿಗೆ ಅಧಿಕಾರಿಗಳು ಮಾಡಿದ ಆದಿಚುಂಚನಗಿರಿ ಶಾಖಾ ಮಠದ ಶಿಕ್ಷಣ ಕಚೇರಿಗಳ ವ್ಯವಹಾರದ ಪರಿಶೀಲನೆ ಕುರಿತು ಪಕ್ಷ ಬೇಧ ಮರೆತು ರಾಜಕಾರಣಿಗಳು ಮತ್ತು ಹಲವು ಸಂಘಟನೆಗಳು ತಮ್ಮ ವಿರೋಧ ವ್ಯಕ್ತಪಡಿಸಿದ್ದು ಏಕೆಂದೇ ನನಗೆ ಅರ್ಥವಾಗಲಿಲ್ಲ. ದೃಶ್ಯ ಮಾಧ್ಯಮದಲ್ಲಿ ಒಬ್ಬ ಮಠಾಧಿಪತಿಗಳು ಪದೇ ಪದೇ ಹೇಳಿದ್ದು-"ನಮ್ಮ (ಮಠಗಳ) ವ್ಯವಹಾರಗಳೆಲ್ಲವೂ ಆದಾಯ ತೆರಿಗೆ ಇಲಾಖೆಗೆ ಕಾಲಕಾಲಕ್ಕೆ ಸಲ್ಲಿಕೆಯಾಗುತ್ತವೆ, ಹಾಗಿರುವಾಗ ಈಗ ದಾಳಿ ಮಾಡಿದ್ದರಲ್ಲಿ ಅರ್ಥವಿಲ್ಲ." ಅವುಗಳ ವ್ಯವಹಾರವೆಲ್ಲವೂ ಇಲಾಖೆಗೆ ವರದಿಯಾಗುತ್ತಿದ್ದರೆ ಈಗ ಅಧಿಕಾರಿಗಳು ಮಾಡುತ್ತಿರುವ ಪರಿಶೀಲನೆಗೆ ಯಾಕೆ ವಿರೋಧಿಸಬೇಕು? ಇದನ್ನೊಂದು ಪೂರ್ವಗ್ರಹ ಪೀಡಿತ ಎಂತಲೋ, ಉದ್ದೇಶಪೂರ್ವಕ ಎಂತಲೋ ಏಕೆ ಟೀಕಿಸಬೇಕು? ಅಧಿಕಾರಿಗಳಿಗೆ ತಮ್ಮಲ್ಲಿರುವ ಲೆಕ್ಕ ಪತ್ರಗಳನ್ನು ತೋರಿಸಿ ಸೂಕ್ತ ಸಮಜಾಯಿಷಿ ನೀಡಿದರೆ ಸಾಕಲ್ಲವೆ? ಬಹುಶಃ ಅವುಗಳಿಗೆ ನೀಡಿದ ದೇಣಿಗೆಗಳಲ್ಲಿ ಹಲವಾರು ಪ್ರಕರಣಗಳು ತೆರಿಗೆ ತಪ್ಪಿಸಿ ನೀಡಿದ್ದವುಗಳಾಗಿರಬಹುದು ಅಥವಾ ದೊಡ್ಡ ದೊಡ್ಡ ವ್ಯಕ್ತಿಗಳ ರಹಸ್ಯ ಬಹಿರಂಗವಾಗುತ್ತದೆಯೆನ್ನುವ ಭಯವೂ ಇದ್ದಿರಬಹುದೆ? ಇಲ್ಲದಿದ್ದರೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿರಲಿಲ್ಲ.
ಇನ್ನು ಮಾಧ್ಯಮದವರಲ್ಲೂ ಒಂದು ವಿನಂತಿ: ಆದಾಯ ತೆರಿಗೆ ಇಲಾಖೆಯವರಾಗಲಿ ಅಥವಾ ಇತರ ಯಾವುದೇ ಇಲಾಖೆಯ ಅಧಿಕಾರಿಗಳಾಗಲೀ ಇಂತಹ ತನಿಖೆ ನಡೆಸಿದಾಗಲೆಲ್ಲ ಇದನ್ನು ವರದಿ ಮಾಡುವಾಗ ದಾಳಿ ಎಂದು ಬರೆದರೆ ಅದೊಂದೇ ಕಾರಣಕ್ಕೆ ಪ್ರತಿಕ್ರಿಯೆಗೆ ಪ್ರಚೋದನೆ ನೀಡಿದಂತಾಗುತ್ತದೆ. ಅದರ ಬದಲಿಗೆ ಇದನ್ನೊಂದು ಪರಿಶೀಲನೆ ಎಂಬ ರೀತಿಯಲ್ಲಿ ವರದಿ ಮಾಡಿದರೆ ಅದಕ್ಕೆ ವಿಶೇಷ ಅರ್ಥ ಬರದಿರುವುದರಿಂದ ಇಂತಹ ಪ್ರತಿಭಟನೆಗಳೂ ಬರಲಿಕ್ಕಿಲ್ಲ.
-ಹೆಚ್.ಎಸ್. ಮಂಜಪ್ಪ, ಸೊರಬ

ವಿಕೋಪದ ನಂತರ ಕಂಡ ವಿಕೃತಿ
"ಇಂತಹ ಹುಳ ಬಿದ್ದಿರುವ ಅಕ್ಕಿಯನ್ನು ತಿನ್ನೋದಕ್ಕೆ ಆಗುತ್ತಾ? ಇಂತಹ ಬಟ್ಟೆಗಳನ್ನು ಹಾಕಿಕೊಳ್ಳೋದಕ್ಕೆ ಆಗುತ್ತಾ?" ಈ ಎರಡು ಪ್ರಶ್ನೆಗಳು ಉತ್ತರಾಖಂಡದಲ್ಲಿ ಪರಿಹಾರ ಕಾರ್ಯಾಚರಣೆ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ತೋರಿಸುತ್ತಿದೆ. ಘಟನೆ ನಡೆದು ಒಂದು ತಿಂಗಳಾದರೂ ಮಳೆ ಉಂಟು ಮಾಡಿರುವ ಅವ್ಯವಸ್ಥೆಯನ್ನು ಸರಿ ಮಾಡಲೂ ಇನ್ನೂ ಆಗಿಲ್ಲ. ಸರಿಯಾದ ಆಹಾರ, ಬಟ್ಟೆಬರೆ ನೀಡದೇ ಇರುವುದು ಸರಿಯೇ? ಜನರು ಮಾನ ಮುಚ್ಚಿಕೊಳ್ಳುವ ಬಟ್ಟೆ ಕೇಳುತ್ತಿದ್ದಾರೆ. ಆದರೆ ಇದನ್ನು ಸರ್ಕಾರ ಸರಿಯಾದ ರೀತಿಯಲ್ಲಿ ಪೂರೈಸುತ್ತಿಲ್ಲ ಹಾಗೂ ಪೂರೈಕೆಯಾಗುತ್ತಿರುವ ವಸ್ತುಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಜನರಿಗೆ ಕಳಪೆ ಗುಣಮಟ್ಟದ ಅಕ್ಕಿ ಹಾಗೂ ವಸ್ತುಗಳನ್ನು ನೀಡುತ್ತಿರುವುದು ಸರಿಯಲ್ಲ. ಜನರ ಪರಿಹಾರಕ್ಕಾಗಿ ನೀಡುತ್ತಿರುವ ವಸ್ತುಗಳನ್ನು ಗಮನಿಸಿ, ಅದರ ಕುಂದು ಕೊರತೆಗಳನ್ನು ಸರಿಪಡಿಸಿ ಕೊಡಬೇಕಾದದ್ದು ಮುಖ್ಯ. ಇದರಿಂದ ಜನರಿಗೆ ನಂಬಿಕೆ, ಗೌರವ ಬೆಳೆಯುತ್ತದೆ. ಇದು ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಳ್ಳುವುದರಿಂದ ಸಾಧ್ಯ. ಇವರ ಕಳಪೆ ಮಟ್ಟದ ವಸ್ತುಗಳ ಪೂರೈಕೆಯಿಂದ ಜನರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಳ್ಳುವ ದಿನ ದೂರ ಇಲ್ಲ. ಇದೇ ರೀತಿ ಮುಂದುವರಿದರೆ ಜನರ ಆಕ್ರೋಶ ಇನ್ನೂ ಹೆಚ್ಚುತ್ತದೆ. ಆದುದರಿಂದ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದದ್ದು ಅಗತ್ಯ.
-ಯಶಸ್ವಿನಿ ಟಿ., ಪುತ್ತೂರು

-ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.