ತೆಲಂಗಾಣದ ಉದಯ
ಭಾರತದ ರಾಜಕೀಯ ಭೂಪಟವನ್ನೇ ಬದಲಾಯಿಸುವ ಶಕ್ತಿ ಇರುವ ಆಂಧ್ರ ಪ್ರದೇಶದ ವಿಭಜನೆಗೆ ಕೇಂದ್ರದಲ್ಲಿ ಆಳುವ ಕೂಟದ ಸಮನ್ವಯ ಸಮಿತಿಯ ಅನುಮತಿ ಸಿಕ್ಕಿ ಅನಂತರ ಹೊಸ ತೆಲಂಗಾಣ ರಾಜ್ಯದ ಉದಯ ಖಚಿತವಾದಂತೆಯೇ ಆಗಿದೆ.
ಭಾಷಾವಾರು ರಾಜ್ಯಗಳ ನಿರ್ಮಾಣಕ್ಕಾಗಿ ಕಳೆದ ಶತಮಾನದಲ್ಲಿ ಪ್ರಧಾನವಾಗಿ ದಕ್ಷಿಣ- ಪಶ್ಚಿಮ ಭಾರತದಲ್ಲಿ ನಡೆದ ಹೋರಾಟಗಳ ಮುಂಚೂಣಿಯಲ್ಲಿ ಇದ್ದಿದ್ದು ಆಂಧ್ರಪ್ರದೇಶವೇ. ಭಾಷಾವಾರು ಆಧಾರದ ಮೇಲೆ ಸ್ವತಂತ್ರ ಭಾರತದಲ್ಲಿ ರಚನೆಯಾದ ಮೊಟ್ಟ ಮೊದಲ ರಾಜ್ಯ ಆಂಧ್ರ. ಪ್ರಖ್ಯಾತ ಗಾಂಧೀವಾದಿ ಪೊಟ್ಟಿ ಶ್ರೀರಾಮುಲು ಅವರು ಆಂಧ್ರ ರಾಜ್ಯದ ನಿರ್ಮಾಣಕ್ಕೆ ಒತ್ತಾಯ ಪಡಿಸಿ, ಆಮರಣಾಂತ ನಿರಶನ ಸತ್ಯಾಗ್ರಹ ನಡೆಸಿ, ನಿಧನರಾದ ಅನಂತರ ತೆಲುಗು ನಾಡಿನಲ್ಲಿ ನಡೆದ ಹಿಂಸಾಚಾರದ ಹಿನ್ನಲೆಯಲ್ಲಿ ವಿವಾದವಿಲ್ಲದ ತೆಲುಗು ಭಾಷಿಕರ ಪ್ರದೇಶಕ್ಕೆ ಆಂಧ್ರವೆಂದು ಹೆಸರಿಟ್ಟು ಅಂದಿನ ಮದರಾಸ್ ಪ್ರಾಂತದಿಂದ ಪಡೆದ ರಾಜ್ಯ ಆಂಧ್ರ. ಆಗ ಕರ್ನೂಲು ಅದರ ರಾಜಧಾನಿ.
ಅನಂತರ ನಿಜಾಮ ಆಡಳಿತದಲ್ಲಿದ್ದ ಹೈದರಾಬಾದ್ ಸಂಸ್ಥಾನದ ತೆಲುಗು ಭಾಷಿಕರ ಜಿಲ್ಲೆಗಳೂ ಸೇರಿದಂತೆ ಆಂಧ್ರ ಪ್ರದೇಶ ನಿರ್ಮಾಣವಾಗಿದ್ದು ಕರ್ನಾಟಕ, ಕೇರಳ ರಾಜ್ಯಗಳು ಉದಯವಾದಾಗಲೇ. ಆಗಲೇ ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಬೇಡಿಕೆ ಬಂದಿತ್ತು. ಆ ಬೇಡಿಕೆಯನ್ನು ಕೇಂದ್ರ ಸರ್ಕಾರ ಒಪ್ಪಿರಲಿಲ್ಲ. ಕಾಂಗ್ರೆಸ್ ಕೂಡಾ ಪ್ರತ್ಯೇಕ ತೆಲಂಗಾಣವನ್ನು ಒಪ್ಪಿರಲಿಲ್ಲ. ಆದರೂ 1999ರ ಅನಂತರ ಚಂದ್ರಶೇಖರರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿಯ ನೇತೃತ್ವದ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಸಾಧ್ಯವಾದರೆ, ಸಂಸತ್ತಿನ ಮುಂಗಾರು ಅಧಿವೇಶನದಲ್ಲೇ ತೆಲಂಗಾಣ ರಾಜ್ಯದ ರಚನೆಯ ವಿಧೇಯಕವನ್ನು ಮಂಡಿಸುವ ಯೋಚನೆ ಸಂಯುಕ್ತ ಪ್ರಗತಿಪರ ಕೂಟದ ಸರ್ಕಾರದ್ದು.
ಈ ನಿರ್ಧಾರಕ್ಕೆ ಆಂಧ್ರ ಪ್ರದೇಶದಲ್ಲಿ ಜನರ ಸರ್ವಾನುಮತವೇನೂ ಇಲ್ಲ. ರಾಯಲ ಸೀಮೆ ಹಾಗೂ ಕರಾವಳಿ ಆಂಧ್ರ ಸೀಮೆಯ ಜಿಲ್ಲೆಗಳ ಜನಪ್ರತಿನಿಧಿಗಳು ತೆಲುಗರ ಏಕೈಕ ರಾಜ್ಯದ ವಿಭಜನೆಯನ್ನು ವಿರೋಧಿಸಿದ್ದರು. ಕೃಷ್ಣಾ ಗೋದಾವರಿ, ಸೀಮೆಯಲ್ಲಿ ಈ ವಿಚಾರದಲ್ಲಿ ಹಿಂದೆ ರಾಜ್ಯದ ವಿಭಜನೆಯ ಪ್ರಸ್ತಾಪ ಬಂದಾಗ ದೊಡ್ಡ ರೀತಿಯಲ್ಲೇ ಜನಾಂದೋಲನ ನಡೆದಿತ್ತು. ಈಗಲೂ ಆ ಜನ ಬೀದಿಗೆ ಇಳಿಯುವುದು ಖಂಡಿತ. ಆಂಧ್ರ ಪ್ರದೇಶದ ಶಾಸಕರಲ್ಲಿ ಅನೇಕರು ತಮ್ಮ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಆಂಧ್ರದ ವಿಭಜನೆಯ ವಿರುದ್ಧ ಹೋರಾಟವನ್ನು ಆರಂಭಿಸುವುದಂತೂ ಖಚಿತ. ಒಂದು ಹಂತದಲ್ಲಿ ಮುಖ್ಯಮಂತ್ರಿ ಕಿರಣ ಕುಮಾರ ರೆಡ್ಡಿ ಅವರೇ ರಾಜಿನಾಮೆ ನೀಡುವುದಾಗಿ ಹೇಳಿದ್ದರು. ಈಗಿನ ನಿರ್ಧಾರ, ಸ್ಪಷ್ಟವಾಗಿ ಕಾಂಗ್ರೆಸ್ಸಿನ ರಾಜಕೀಯ ನಿರ್ಧಾರವೇ. ಅದನ್ನು ಜೀರ್ಣಿಸಿಕೊಳ್ಳುವುದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಹೊಣೆಗಾರಿಕೆಯೇ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

