ಸಂಪಾದಕೀಯ

ಹಕ್ಕುಚ್ಯುತಿ-ಪ್ರಜಾಪ್ರಭುತ್ವದ ಕಗ್ಗೊಲೆ

Published On :

ಸರ್ಕಾರಿ ಭೂಮಿ ಒತ್ತುವರಿ ತೆರವು ಹಾಗೂ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷರೂ ಆಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂದು ವಿಧಾನಮಂಡಲದ ಉಭಯ ಸದನದಲ್ಲಿ ಕೆಲ ಶಾಸಕರು ಒತ್ತಾಯಪಡಿಸಿರುವುದು ಖಂಡನಾರ್ಹ.
ಇತ್ತೀಚಿನ ವರ್ಷಗಳಲ್ಲಿ ಶಾಸಕರು, ಸಂಸದರು ಹಾಗೂ ಅವರ ಹಿಂಬಾಲಕ ಕಾಫಿ ಎಸ್ಟೇಟ್, ರಿಯಲ್ ಎಸ್ಟೇಟ್ ಉದ್ಯಮಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದು ನಾಡಿನ ದುರಂತ.
ಜನಪ್ರತಿನಿಧಿಗಳು ಹಾಗೂ ಅವರ ಹಿಂಬಾಲಕರು ಏನು ಬೇಕಾದರೂ ಮಾಡಿ ಜಯಿಸಿಕೊಳ್ಳಬಹುದೆಂಬ ಭ್ರಮಾಲೋಕದಲ್ಲಿದ್ದಾರೆ. ಅವರು ಗ್ರಾಮೀಣ, ಪಟ್ಟಣ, ನಗರ ಪ್ರದೇಶಗಳ ಸುತ್ತಮುತ್ತ ಇರುವ ಸರ್ಕಾರಿ ಜಮೀನು, ಕೆರೆಯಂಗಳ, ಗುಂಡು ತೋಪು, ಗೋಮಾಳ ಜಮೀನುಗಳನ್ನು ಒತ್ತುವರಿ ಮಾಡಿಕೊಂಡು ತೋಟ, ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಿ ಸುತ್ತ ಕಾಂಪೌಂಡ್ ನಿರ್ಮಿಸಿ ಬೀಗ ಜಡಿಯುವುದು ಸರ್ವೇ ಸಾಮಾನ್ಯವಾಗಿದೆ. ಇನ್ನು ಕೆಲವರು ಅಧಿಕಾರಿಗಳ ಮೇಲೆ ಒತ್ತಡ ತಂದು ಬೇನಾಮಿ ಹೆಸರಿನಲ್ಲಿ ಖಾತೆ ಪಹಣಿ ಮಾಡಿಕೊಂಡು ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ. ಎಷ್ಟೇ ದೊಡ್ಡವರಿದ್ದರೂ ಒತ್ತುವರಿದಾರರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯ. ಕಾರ್ಯಪಡೆಯ ಅಧ್ಯಕ್ಷರು ಕುಂಬಳ ಕಾಯಿ ಕಳ್ಳ  ಅಂದರೆ ಶಾಸಕರೇಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು? ಉಪ್ಪು ತಿಂದವರು ನೀರು ಕುಡಿಯುತ್ತಾರೆ ಬಿಡಿ! ಹಕ್ಕುಚ್ಯುತಿ ಬ್ರಹ್ಮಾಸ್ತ್ರದ ಮೂಲಕ ಸಂಗತಿಗಳನ್ನು ಬಹಿರಂಗಪಡಿಸುವವರನ್ನು ಬೆದರಿಸಲು ಯತ್ನಿಸಲಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಕಗ್ಗೊಲೆಯೇ ಅಲ್ಲವೇ? ಮುಖ್ಯಮಂತ್ರಿಗಳು ದಿಟ್ಟ ಕ್ರಮ ಕೈಗೊಳ್ಳಲಿ.
- ನೇರಲಗುಡ್ಡ ಶಿವಕುಮಾರ್, ಶಿರಾ

ಗ್ರಾಹಕರ ಮೇಲೆ ಗದಾಪ್ರಹಾರ
ಮತ್ತೊಮ್ಮೆ ಸರ್ಕಾರವು ಗ್ರಾಹಕರ ಮೇಲೆ ಗದಾಪ್ರಹಾರ ಮಾಡಲು ತಯಾರಾಗಿದೆ. ಈಗ್ಗೆ ಕೆಲವು ತಿಂಗಳ ಹಿಂದೆ ಸರ್ಕಾರವು ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿ ಅಂತ ತಾಳಿಕೊಳ್ಳಲಾಗದ ಏಟು ಕೊಟ್ಟಿತು. ಈಗ ಮತ್ತೊಮ್ಮೆ ಹಾಲಿನ ಬೆಲೆಯನ್ನು ಹೆಚ್ಚಿಸಿ ಗ್ರಾಹಕರಿಗೆ ಬರೆ ಹಾಕಲು ತಯಾರಿ ನಡೆಸುತ್ತಿದೆ. ಮಧ್ಯಮ ವರ್ಗದವರನ್ನು ಕೇಳುವವರಿಲ್ಲ. ಬಡತನ ರೇಖೆಗಿಂತ ಕೆಳಗಿರುವವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಸಾಮಗ್ರಿಯನ್ನು ಸರಕಾರವು ಒದಗಿಸುತ್ತದೆ. ಆದರೆ ಮಧ್ಯಮ ವರ್ಗದವರನ್ನು ಕೇಳುವವರಿಲ್ಲದ ತ್ರಿಶಂಕು ಸ್ಥಿತಿ. ಬೆಲೆ ಕಡಿಮೆಯಿದ್ದಾಗ ಒಂದು ಲೀಟರ್ ಹಾಲು ಉಪಯೋಗಿಸುತ್ತಿದ್ದ ಕುಟುಂಬ ಇವತ್ತು ಅರ್ಧ ಲೀಟರಿಗೆ ಇಳಿದರೆ ಸರ್ಕಾರದ ತಪ್ಪು ನೀತಿ ಮತ್ತು ಅಧಿಕಾರಿಗಳ ದುರಾಡಳಿತ. ಇವುಗಳಿಂದಾಗುವ ನಷ್ಟವನ್ನು ಜನರ ಮೇಲೆ ಹೇರುವುದು ಯಾವ ನ್ಯಾಯ. ಮಾನ್ಯ ಸಚಿವರು ಬೇರೆ ರಾಜ್ಯದಲ್ಲಿ ಇಲ್ಲಿಗಿಂತ ಹಾಲಿನ ದರ ಹೆಚ್ಚಿದೆ ಅಂತ ಸಮಜಾಯಿಷಿ ಕೊಡುತ್ತಾರೆ. ಆದರೆ ಕರ್ನಾಟಕದಲ್ಲಿ ಮನೆ ಬಾಡಿಗೆ, ಸಾರಿಗೆ, ಹಾಲು, ದಿನಸಿ ಸಾಮಾನು ಮುಂತಾದವುಗಳು ಬೇರೆ ರಾಜ್ಯಕ್ಕಿಂತ ಅತಿ ಹೆಚ್ಚಾಗಿದೆ. ಇದನ್ನು ಮಾನ್ಯ ಸಚಿವರು ಮೊದಲು ಆಲೋಚಿಸಲಿ. ಕರ್ನಾಟಕದಲ್ಲಿ ಜನರು ನೆಮ್ಮದಿಯ ಜೀವನ ನಡೆಸುವುದು ಕೇವಲ ಗಗನ ಕುಸುಮವಾಗಿದೆ.
-ಕೆ.ಎಸ್. ಸತ್ಯನಾರಾಯಣವೈದ್ಯ, ಬೆಂಗಳೂರು


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.